ಭಗವದ್ಗೀತೆ: ಶ್ರೀಕೃಷ್ಣನಲ್ಲಿ ಜೀವಿಸುವ ವ್ಯಕ್ತಿ ಯಾವಾಗಲೂ ಪರಿಶುದ್ಧನಾಗಿರುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಶ್ರೀಕೃಷ್ಣನಲ್ಲಿ ಜೀವಿಸುವ ವ್ಯಕ್ತಿ ಯಾವಾಗಲೂ ಪರಿಶುದ್ಧನಾಗಿರುತ್ತಾನೆ ಎಂಬುದರ ಅರ್ಥ ಹೀಗಿದೆ.
ನೈವ ಕಿಞ್ಚಿತ್ ಕರೋಮೀತಿ ಯುಕ್ತೋ ಮನ್ಯೇತ ತತ್ತ್ವವಿತ್ |
ಪಶ್ಯಞ್ ಶೃಣ್ವನ್ ಸ್ಪೃಶಞ್ ಜಿಘ್ರನ್ನಶ್ನನ್ ಗಚ್ಛನ್ ಸ್ವಪನ್ ಶ್ವಸನ್ ||8||
ಪ್ರಲಪನ್ ವಿಸೃಜನ್ ಗೃಹ್ಣನ್ನುನ್ಮಿಷನ್ನಿಮಿಷನ್ನಪಿ |
ಇಂದ್ರಿಯಾಣಿನ್ದ್ರಿಯಾರ್ಥೇಷು ವರ್ತಂತ ಇತಿ ಧಾರಯನ್ ||9||
ದೈವೀಪ್ರಜ್ಞೆಯಲ್ಲಿರುವ ಮನುಷ್ಯನು ನೋಡುತ್ತಿರಬಹುದು, ಕೇಳುತ್ತಿರಬಹುದು, ಸ್ಪರ್ಶಿಸುತ್ತಿರಬಹುದು, ಆಘ್ರಾಣಿಸುತ್ತಿರಬಹುದು, ನಡೆಯುತ್ತಿರಬಹುದು, ನಿದ್ರೆಮಾಡುತ್ತಿರಬಹುದು, ಉಸಿರಾಡುತ್ತಿರಬಹುದು. ಆದರೆ ತಾನು ಏನನ್ನೂ ಮಾಡುತ್ತಿಲ್ಲ ಎಂದು ಅವನಿಗೆ ಒಳಗಿನ ಅರಿವು ಇರುತ್ತವೆ. ಏಕೆಂದರೆ ಮಾತನಾಡುವಾಗ, ವಿಸರ್ಜಿಸುವಾಗ, ಸ್ವೀಕರಿಸುವಾಗ, ಕಣ್ಣನ್ನು ತೆರೆಯುವಾಗ ಅಥವಾ ಮುಚ್ಚುವಾಗ ಇಂದ್ರಿಯಗಳನ್ನು ತಮ್ಮ ವಿಷಯಗಳಲ್ಲಿ ಪ್ರವರ್ತಿಸುತ್ತಿವೆ, ತಾನು ಅವುಗಳಿಂದ ದೂರ ಇದ್ದೇನೆ ಎಂದು ಅವನಿಗೆ ತಿಳಿದಿರುತ್ತದೆ.
ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು ತನ್ನ ಅಸ್ತಿತ್ವದಲ್ಲಿ ಪರಿಶುದ್ಧನಾಗಿರುತ್ತಾನೆ. ಪರಿಣಾಮವಾಗಿ ಕರ್ತೃ, ಕಾರ್ಯ, ಸನ್ನಿವೇಶ, ಪ್ರಯತ್ನ ಮತ್ತು ಅದೃಷ್ಟ, ಈ ಐದು ನಿಕಟ ಮತ್ತು ದೂರ ಕಾರಣಗಳನ್ನು ಅವಲಂಬಿಸುವ ಯಾವುದೇ ಕೆಲಸಕ್ಕೂ ಆತನಿಗೂ ಸಂಬಂಧವಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಅವನು ಕೃಷ್ಣನ ಪ್ರೀತಿಪೂರ್ವಕ ಅಲೌಕಿಕ ಸೇವೆಯಲ್ಲಿ ನಿರತನಾಗಿರುವುದು.
ಆತನು ತನ್ನ ದೇಹ ಮತ್ತು ಇಂದ್ರಿಯಗಳಿಂದ ಕೆಲಸ ಮಾಡುತ್ತಿರುವಂತೆ ಕಂಡರೂ ಆತನಿಗೆ ತನ್ನ ನಿಜವಾದ ಸ್ಥಿತಿಯ ಅರಿವಿರುತ್ತದೆ. ಆಧ್ಯಾತ್ಮಿಕ ಕರ್ತವ್ಯದಲ್ಲಿ ನಿರತನಾಗಿರುವುದೇ ಆ ಸ್ಥಿತಿ. ಐಹಿಕ ಪ್ರಜ್ಞೆಯಲ್ಲಿ ಇಂದ್ರಿಯಗಳು ಇಂದ್ರಿಯ ತೃಪ್ತಿಯನ್ನು ಪಡೆಯುವ ಯತ್ನದಲ್ಲಿ ತೊಡಗಿರುತ್ತವೆ, ಪಡೆಯುತ್ತವೆ. ಆದರೆ ಕೃಷ್ಣಪ್ರಜ್ಞೆಯಲ್ಲಿ ಇಂದ್ರಿಯಗಳು ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸುವುದರಲ್ಲಿ ನಿರತವಾಗಿರುತ್ತವೆ. ಆದುದರಿಂದ ಕೃಷ್ಣಪ್ರಜ್ಞೆಯಿರುವ ಮನುಷ್ಯನು ಇಂದ್ರಿಯಗಳ ವ್ಯಾಪಾರಗಳನ್ನು ತೊಡಗಿರುವಂತೆ ಕಂಡರೂ ಅವನು ಸದಾ ಮುಕ್ತನು.
ನೋಡುವುದು ಮತ್ತು ಕೇಳುವುದು ಇಂತಹ ಕ್ರಿಯೆಗಳು ಜ್ಞಾನೇಂದ್ರಿಯಗಳಿಗೆ ಸಂಬಂಧಪಟ್ಟವು. ನಡೆಯುವುದು, ಮಾತನಾಡುವುದು, ವಿಸರ್ಜನೆ ಮೊದಲಾದವು ಕರ್ಮೇಂದ್ರಿಯ ಕಾರ್ಯಗಳು. ಕೃಷ್ಣಪ್ರಜ್ಞೆ ಇರುವ ಮನುಷ್ಯನ ಮೇಲೆ ಇಂದ್ರಿಯಗಳ ಕಾರ್ಯಗಳು ಯಾವುದೇ ಪರಿಣಾಮವನ್ನು ಮಾಡುವುದಿಲ್ಲ. ತಾನು ಭಗವಂತನ ನಿರಂತರ ಸೇವಕನೆಂದು ಅವನಿಗೆ ಗೊತ್ತು. ಆದುದರಿಂದ ಭಗವಂತನ ಸೇವೆಯನ್ನು ಬಿಟ್ಟು ಬೇರೆ ಯಾವುದೇ ಕೆಲಸವನ್ನು ಅವನು ಮಾಡಲಾರ. (This copy first appeared in Hindustan Times Kannada website. To read more like this please logon to kannada.hindustantime.com).