ಟಿ20 ವಿಶ್ವಕಪ್‌ಗೆ ನೆಚ್ಚಿನ 15 ಸದಸ್ಯರ ಭಾರತ ತಂಡ ಕಟ್ಟಿದ ಸಂಜಯ್ ಮಾಂಜ್ರೇಕರ್; ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಔಟ್
Sanjay Manjrekar : ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅವರು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಿದ ತಮ್ಮ ನೆಚ್ಚಿನ 15 ಸದಸ್ಯರ ಟೀಮ್ ಇಂಡಿಯಾ ತಂಡವು ಅಚ್ಚರಿ ಮೂಡಿಸುವುದು ಖಚಿತ. ವಿರಾಟ್ ಕೊಹ್ಲಿ ಸೇರಿ ಪ್ರಮುಖರನ್ನೇ ಕೈಬಿಟ್ಟಿದ್ದಾರೆ.
ಜೂನ್ 1ರಿಂದ ಪ್ರಾರಂಭವಾಗುವ ಬಹುನಿರೀಕ್ಷಿತ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ (T20 World Cup 2024) ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ (Sanjay Manjrekar) ಅವರು ತಮ್ಮ ನೆಚ್ಚಿನ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಆದರೆ 2024ರ ಐಪಿಎಲ್ನಲ್ಲಿ (IPL 2024) ಉತ್ತಮ ಪ್ರದರ್ಶನ ತೋರುತ್ತಿರುವ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಕೈ ಬಿಟ್ಟಿದ್ದಾರೆ. ಕೊಹ್ಲಿ ಮಾತ್ರವಲ್ಲ, ಹಾರ್ದಿಕ್ ಪಾಂಡ್ಯ (Hardik Pandya), ಶುಭ್ಮನ್ ಗಿಲ್ (Shubman Gill), ರಿಂಕು ಸಿಂಗ್ಗೂ (Rinku singh) ಅವಕಾಶ ನೀಡಿಲ್ಲ.
ಸಂಜಯ್ ಮಾಂಜ್ರೇಕರ್ ತಾನು ಕಟ್ಟಿರುವ ವಿಶ್ವಕಪ್ ತಂಡದಲ್ಲಿ ಅಚ್ಚರಿ ಹೆಸರು ಸೇರ್ಪಡೆಯಾಗಿವೆ. ವಿರಾಟ್ ಅವರ ಮೂರನೇ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ಗೆ ಅವಕಾಶ ಕೊಟ್ಟಿದ್ದಾರೆ. ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಅಂಬಾಟಿ ರಾಯುಡು ಮತ್ತು ಮೊಹಮ್ಮದ್ ಕೈಫ್ ಸೇರಿದಂತೆ ಪ್ರಮುಖರು ವಿಶ್ವಕಪ್ನಲ್ಲಿ ಕೊಹ್ಲಿ ಆಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಜೂನ್ 1ರಿಂದ ಜೂನ್ 29ರ ತನಕ ನಡೆಯುವ ಈ ಟಿ20 ವಿಶ್ವಕಪ್‌ಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯ ವಹಿಸಲಿವೆ. 117 ಟಿ20ಐ ಪಂದ್ಯಗಳನ್ನು ಆಡಿರುವ ಕೊಹ್ಲಿ 4000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 50ಕ್ಕೂ ಹೆಚ್ಚು ಸರಾಸರಿ ಹೊಂದಿದ್ದರೂ ಕೊಹ್ಲಿಗೆ ಮಾಂಜ್ರೇಕರ್ ಟಿ20 ವಿಶ್ವಕಪ್ ಟಿಕೆಟ್ ಅವಕಾಶ ನೀಡದೇ ಇರುವುದು ಅಚ್ಚರಿ ಮೂಡಿಸಿದೆ.
ಭಾರತದ ಮಾಜಿ ಬ್ಯಾಟ್ಸ್ಮನ್ ಮತ್ತು ವೀಕ್ಷಕವಿವರಣೆಗಾರ ಕಮ್ ಪ್ರಸಾರಕ ಮಂಜ್ರೇಕರ್, ತಮ್ಮ 15 ಸದಸ್ಯರ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶುಭ್ಮನ್ ಗಿಲ್ ಅವರೊಂದಿಗೆ ಭಾರತೀಯ ಕ್ರಿಕೆಟ್ನಲ್ಲಿ ಅತಿದೊಡ್ಡ ಹೆಸರನ್ನು ಕೈಬಿಟ್ಟಿದ್ದಾರೆ. ಮೇ 1ರೊಳಗೆ ಟಿ20 ವಿಶ್ವಕಪ್‌ಗೆ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಆಯ್ಕೆ ಸಮಿತಿಯು 15 ಸದಸ್ಯರ ತಂಡ ಪ್ರಕಟಿಸಲಿದೆ. ಪ್ರಸಕ್ತ ಐಪಿಎಲ್ನಲ್ಲಿ ಅಬ್ಬರಿಸುತ್ತಿರುವ ಆಟಗಾರರಿಗೂ ಅವಕಾಶ ಪಡೆಯುವ ನಿರೀಕ್ಷೆ ಇದೆ.
ಸ್ಟಾರ್ಸ್ಪೋರ್ಟ್ಸ್ನೊಂದಿಗೆ ಮಾತನಾಡಿದ ಸಂಜಯ್ ಮಾಂಜ್ರೇಕರ್, ಟಿ20 ವಿಶ್ವಕಪ್ ತಂಡದಲ್ಲಿ ಯಾವೆಲ್ಲಾ ಆಟಗಾರರು ಅವಕಾಶ ಪಡೆಯುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಆಯ್ಕೆ ಮಾಡುವುದು ತುಂಬಾ ಕಷ್ಟವಾಗಿದೆ. ಏಕೆಂದರೆ ಸುತ್ತಲೂ ಕೆಲವು ಉತ್ತಮ ಮತ್ತು ಗಣಮಟ್ಟದ ಆಟಗಾರರೇ ಇದ್ದಾರೆ. ವಿಶೇಷವಾಗಿ ಐಪಿಎಲ್ನಲ್ಲಿ ಅನೇಕರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಾನು ಒಂದು ಉತ್ತಮ ಕಟ್ಟಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೆಎಲ್ ರಾಹುಲ್ ಬ್ಯಾಕಪ್ ವಿಕೆಟ್ ಕೀಪರ್
ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕ ಜೋಡಿ. 3ನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್, 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಸ್ಥಾನ ಪಡೆದಿದ್ದಾರೆ. ಅಬ್ಬರಿಸುತ್ತಿರುವ ರಿಷಭ್ ಪಂತ್ ಅವರು 5ನೇ ಸ್ತಾನದಲ್ಲಿ ಕಣಕ್ಕಿಳಿಯಬೇಕೆಂದು ತಿಳಿಸಿದ್ದಾರೆ. ಕೆಎಲ್ ರಾಹುಲ್ ಅವರನ್ನು ಎರಡನೇ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ. ಉದಯೋನ್ಮುಖ ಪ್ರತಿಭೆ ರಿಂಕು ಸಿಂಗ್ ಅವರಿಗೂ ಅವಕಾಶ ನೀಡಲಿಲ್ಲ.
ಕೇವಲ ಒಬ್ಬ ಆಲ್ರೌಂಡರ್ಗೆ ಮಣೆ ಹಾಕಿದ್ದಾರೆ. ಅದು ರವೀಂದ್ರ ಜಡೇಜಾಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ ಸಂಜಯ್ ಮಾಂಜ್ರೇಕರ್. ಮೂವರು ಸ್ಪಿನ್ನರ್ಗಳು, ಐವರು ವೇಗಿಗಳಿಗೆ ಮಣೆ ಹಾಕಿದ್ದಾರೆ. ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಕೃನಾಲ್ ಪಾಂಡ್ಯ ಅವರು ಸ್ಪಿನ್ನರ್ಗಳಾಗಿದ್ದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆವೇಶ್ ಖಾನ್, ಹರ್ಷಿತ್ ರಾಣಾ, ಮಯಾಂಕ್ ಯಾದವ್ಗೆ ತನ್ನ ತಂಡದಲ್ಲಿ ಚಾನ್ಸ್ ಕೊಟ್ಟಿದ್ದಾರೆ.
ಟಿ20 ವಿಶ್ವಕಪ್‌ಗೆ ಸಂಜಯ್ ಮಾಂಜ್ರೇಕರ್ ಭವಿಷ್ಯ ನುಡಿದಿರುವ ಭಾರತ ತಂಡ
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕೆಎಲ್ ರಾಹುಲ್, ಕೃನಾಲ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಕೃನಾಲ್ ಪಾಂಡ್ಯ, ಯುಜ್ವೇಂದ್ರ ಚಹಲ್, ಜಸ್ಪ್ರೀತ್ ಖಾನ್, ಆವೇಶ್ ಖಾನ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.