ಕನ್ನಡ ಸುದ್ದಿ  /  Cricket  /  Virat Kohli Fan Thrashed By Security For Hugging Rcb Star Rupesh Rajanna Urged To Take Action Against Stadium Staff Prs

ವಿರಾಟ್ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ; ಕ್ರಮಕ್ಕೆ ಆಗ್ರಹಿಸಿದ ರೂಪೇಶ್ ರಾಜಣ್ಣ

Virat Kohli: ಆರ್​​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯದ ಮಧ್ಯೆ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಪಾದ ಮುಟ್ಟಿ ನಮಸ್ಕರಿಸಿದ್ದ ಅಭಿಮಾನಿಗೆ ಮೈದಾನದ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವಿರಾಟ್ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ ಭದ್ರತಾ ಸಿಬಂದಿ
ವಿರಾಟ್ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ ಭದ್ರತಾ ಸಿಬಂದಿ

ತವರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರ ಕಾಲಿಗೆ ಬಿದ್ದಿದ್ದ ಅಭಿಮಾನಿಗೆ ಭದ್ರತಾ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಭಿಮಾನಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 25ರ ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ್ದ ಗುರಿ ಬೆನ್ನಟ್ಟುತ್ತಿದ್ದ ವೇಳೆ ವಿರಾಟ್ ಅಭಿಮಾನಿಯೊಬ್ಬ ವ್ಯಾಪಕ ಭದ್ರತೆಯ ನಡುವೆಯೂ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಅಭಿಮಾನಿ ಹಿಂದೆಯಿಂದ ಅವರನ್ನು ತಬ್ಬಿಕೊಂಡಿದ್ದ. ಅಲ್ಲದೆ ವಿರಾಟ್‌ ಬಳಿ ಬಂದ ಫ್ಯಾನ್, ಭಾರತದ ಸ್ಟಾರ್‌ ಆಟಗಾರನ ಪಾದಗಳನ್ನು ಸ್ಪರ್ಶಿಸಿ ತನ್ನ ಆಸೆ ಹಾಗೂ ಕನಸನ್ನು ನನಸು ಮಾಡಿಕೊಂಡಿದ್ದ.

ಅಭಿಮಾನಿ ಮೈದಾನಕ್ಕೆ ನುಗುತ್ತಿದ್ದಂತೆ ಓಡೋಡಿ ಬಂದ ಭದ್ರತಾ ಸಿಬ್ಬಂದಿ, ಕೊಹ್ಲಿಯನ್ನು ಅಪ್ಪಿಕೊಂಡ ನಂತರ ಆತನನ್ನು ಹೊರಕ್ಕೆ ಕರೆದೊಯ್ದರು. ಆದರೆ ಕರೆದೊಯ್ದ ಸಿಬ್ಬಂದಿ, ಅಭಿಮಾನಿಯನ್ನು ಮನಬಂದಂತೆ ಥಳಿಸಿದ್ದಾರೆ. ಕಾಲುಗಳಿಂದ ತುಳಿದಿದ್ದಾರೆ, ಒದ್ದಿದ್ದಾರೆ. ಅಭಿಮಾನಿ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಚರ್ಚೆಗಳು ಆರಂಭಗೊಂಡಿವೆ.

ರೂಪೇಶ್ ರಾಜಣ್ಣ ಆಕ್ರೋಶ

ಅದರಂತೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಥಳಿತಕ್ಕೆ ಒಳಗಾದ ಅಭಿಮಾನಿಗೆ ಬೆಂಬಲ ನೀಡಿದ್ದು, ಕ್ರಮಕ್ಕೆ ಆಗ್ರಹ ಮಾಡಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಸಮೇತ ಹಂಚಿಕೊಂಡು ಬೆಂಗಳೂರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಮೊನ್ನೆಯ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನದಿಂದ ವಿರಾಟ್ ಕೊಹ್ಲಿ ಕಾಲು ಹಿಡಿದ ಅಭಿಮಾನಿಯೊಬ್ಬನಿಗೆ ಈ ರೀತಿ ಕಾಲಲ್ಲಿ ತುಳಿಯೋದು ಎಷ್ಟು ಸರಿ. ತಪ್ಪು ಮಾಡಿದ್ರೆ ಕಾನೂನು ಕ್ರಮವಾಗಲಿ. ಆದ್ರೆ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ತುಳಿದು ಹೊಡೆಯೋದು ಎಷ್ಟು ಸರಿ ಎಂದು ಕೇಳಿದ್ದಾರೆ.

ಎಕ್ಸ್​ ಖಾತೆಯಲ್ಲಿ ಹೀಗೆ ಬರೆದಿರುವ ರೂಪೇಶ್ ರಾಜಣ್ಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ, ಬೆಂಗಳೂರು ನಗರ ಪೊಲೀಸರಿಗೆ ಮತ್ತು ನಗರದ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದು, ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮನುಷ್ಯತ್ವವೇ ಇಲ್ಲದ ಇವರಿಗೆ ಎಂದು ಬೇಸರ ಹೊರ ಹಾಕಿದ್ದಾರೆ. ತುಂಬಾ ಅಸಭ್ಯ, ಇದು ಪುನರಾವರ್ತನೆ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಕೊಹ್ಲಿ ಇನ್ನೂ ಪ್ರತಿಕ್ರಿಯಿಸಿಲ್ಲ

ಪಂಜಾಬ್ ಕಿಂಗ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, ತನ್ನ ಕಾಲಿಗೆರಗಿದ ಅಭಿಮಾನಿಗೆ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ವಿಡಿಯೋ ನೋಡಿದ ಅಭಿಮಾನಿಗಳು ಈ ಕುರಿತು ಕೊಹ್ಲಿ ಪ್ರತಿಕ್ರಿಯಿಸಿ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹಿಸಬೇಕು ಎಂದು ಕೇಳಿದ್ದಾರೆ. ನಿಮ್ಮನ್ನು ಈ ಮಟ್ಟಿಗೆ ಪ್ರೀತಿಸುವ ಅಭಿಮಾನಿಗಳ ಪರ ಮಾತನಾಡಬೇಕು. ಆ ಅಭಿಮಾನಿಗೆ ಸಾಂತ್ವನವಾದರೂ ಹೇಳಬೇಕು ಎಂದು ಅಭಿಮಾನಿಗಳು ಕೇಳಿದ್ದಾರೆ.

ಕೊಹ್ಲಿ ಭರ್ಜರಿ ಪ್ರದರ್ಶನ

ಪಂಜಾಬ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ಸಖತ್ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ಎರಡು ಜೀವದಾನ ಪಡೆದ ಕೊಹ್ಲಿ, ಸಿಕ್ಕ ಜೀವದಾನವನ್ನು ಸದ್ಬಳಕೆ ಮಾಡಿಕೊಂಡರು. 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ ಸಹಿತ 77 ರನ್ ಕಲೆ ಹಾಕಿದರು. ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು, ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು. ಸದ್ಯ ಅವರು ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಆರ್​ಸಿಬಿ ಆಡಿರುವ 2 ಪಂದ್ಯಗಳಲ್ಲಿ 1 ಸೋಲು, 1 ಗೆಲುವು ಸಾಧಿಸಿದೆ.

IPL_Entry_Point