ಕನ್ನಡ ಸುದ್ದಿ  /  Elections  /  Lok Sabha-elections  /  Lok Sabha Elections 2024 Political Analysis On Impact Of Bjp Jds Alliance Can Bjp Win All Constituencies Mrt

ಕರ್ನಾಟಕದಲ್ಲಿ ಏಕೆ ಎಲ್ಲ 28 ಸ್ಥಾನಗಳನ್ನು ಒಂದೇ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ; ಮೈತ್ರಿಯ ಫಲಿತಾಂಶ ಏನಾಗಬಹುದು -ವಿಶ್ಲೇಷಣೆ

Lok Sabha Elections 2024: ಕರ್ನಾಟಕದಲ್ಲಿ ಎಲ್ಲ ಲೋಕಸಭಾ ಸ್ಥಾನಗಳನ್ನು ಒಂದೇ ಪಕ್ಷವು ತನ್ನದಾಗಿಸಿಕೊಂಡಿದ್ದು ಈವರಗೆ ಒಮ್ಮೆ ಮಾತ್ರ. ಪ್ರತಿ ಲೋಕಸಭಾ ಚುನಾವಣೆಯಲ್ಲೂ ಪ್ರಾದೇಶಿಕ ಪಕ್ಷಗಳೊಂದಿಗಿನ ಸೀಟು ಹೊಂದಾಣಿಕೆಯಿಂದ ರಾಷ್ಟ್ರೀಯ ಪಕ್ಷಗಳಿಗೆ ಲಾಭವಾಗುತ್ತಿದೆ. ಈ ಬಾರಿ ಹೇಗಿದೆ ಪರಿಸ್ಥಿತಿ? (ಬರಹ: ಎಚ್.ಮಾರುತಿ)

ಬಿಜೆಪಿ, ಕಾಂಗ್ರೆಸ್, ಜೆಡಿಎಸ್; ಒಂದೇ ಪಕ್ಷ ಎಲ್ಲ ಸ್ಥಾನ ಗೆದ್ದ ಉದಾಹರಣೆ ಇಲ್ಲ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್; ಒಂದೇ ಪಕ್ಷ ಎಲ್ಲ ಸ್ಥಾನ ಗೆದ್ದ ಉದಾಹರಣೆ ಇಲ್ಲ.

ರಾಜಕೀಯ ವಿಶ್ಲೇಷಣೆ: ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಆಡಳಿತಾರೂಢ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದ್ದು, ಎಲ್ಲ 28 ಸ್ಥಾನಗಳನ್ನು ಗೆಲ್ಲುವುದಾಗಿ ಬೀಗುತ್ತಿವೆ. ಪ್ರಧಾನಿ ಮೋದಿ ಅವರಿಂದ ಹಿಡಿದು ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರ ವರೆಗೆ ಎಲ್ಲ ಮುಖಂಡರು 28 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ ಕಳೆದ 5 ದಶಕಗಳಲ್ಲಿ ಒಮ್ಮೆ ಮಾತ್ರ ಒಂದು ಪಕ್ಷ ಮಾತ್ರ ರಾಜ್ಯದ ಎಲ್ಲ ಲೋಕಸಭಾ ಸ್ಥಾನಗಳನ್ನು ಗೆದ್ದಿರುವುದು ವರದಿಯಾಗಿದೆ.

1951 ರಿಂದ ಈವರೆಗೆ ನಡೆದಿರುವ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಅವಲೋಕಿಸಿದಾಗ 1971 ರಲ್ಲಿ ಕಾಂಗ್ರೆಸ್ ಎಲ್ಲ ಸ್ಥಾನಗಳಲ್ಲಿ ಗೆಲುವು ದಾಖಲಿಸಿರುವ ಉದಾಹರಣೆ ಇದೆ. ಆಗಲೂ ಎಲ್ಲ ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಿರಲಿಲ್ಲ. ದೇಶಾದ್ಯಂತ ಕಾಂಗ್ರೆಸ್ ಮತ್ತು ಅದರ ನಾಯಕಿ ಇಂದಿರಾಗಾಂಧಿ ಅವರಿಗೆ ಕಠಿಣ ಸವಾಲು ಎದುರಾಗಿತ್ತು. ಪಕ್ಷದೊಳಗೆ ಇದ್ದ ತಮಿಳುನಾಡಿನ ಕೆ.ಕಾಮರಾಜ್ ಮತ್ತು ಕರ್ನಾಟಕದ ಎಸ್.ನಿಜಲಿಂಗಪ್ಪ ಅವರ ಸಿಂಡಿಕೇಟ್ ಇಂದಿರಾಗಾಂಧಿ ಅವರನ್ನು ವಿರೋಧಿಸುತ್ತಿತ್ತು.

ಇಂದಿರಾ ಅವರನ್ನು ವಿರೋಧಿಸುವ ನಿರ್ಣಯವನ್ನು 1969ರಲ್ಲಿ ಕೈಗೊಂಡಿದ್ದು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿಯೇ ಎನ್ನುವುದು ಮತ್ತೊಂದು ಕುತೂಹಲಕಾರಿ ಅಂಶ. ಆದರೆ ಇಂದಿರಾಗಾಂಧಿ ಅವರ 'ಗರೀಬಿ ಹಠಾವೋ' ಘೋಷಣೆ ಕಾಂಗ್ರೆಸ್‌ಗೆ ದೇಶಾದ್ಯಂತ ಭರ್ಜರಿ ಗೆಲುವು ತಂದುಕೊಟ್ಟಿತ್ತು.

ನೆಲೆ ಕಾಣಲಿಲ್ಲ ಪ್ರಾಂತೀಯ ಪಕ್ಷಗಳು

ನೆರೆಯ ತಮಿಳುನಾಡು, ಅಂಧ್ರಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರಾಂತೀಯ ಪಕ್ಷ ನೆಲೆ ಕಂಡುಕೊಳ್ಳಲೇ ಇಲ್ಲ. ಹಾಗಾಗಿ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳೇ ವಿಜೃಂಭಿಸುತ್ತಿವೆ. ಒಮ್ಮೊಮ್ಮೆ ಇದು ರಾಜ್ಯದ ಅಭಿವೃದ್ದಿಗೆ ಹೊಡೆತವನ್ನೂ ನೀಡುತ್ತಿರುವುದು ಸುಳ್ಳಲ್ಲ. ರಾಷ್ಟ್ರೀಯ ಪಕ್ಷಗಳು ಭದ್ರವಾದ ನೆಲೆಯನ್ನು ಕಂಡುಕೊಂಡಿವೆಯೇ ಹೊರತು ಎಲ್ಲ ಸ್ಥಾನಗಳನ್ನು ಗೆಲ್ಲುವಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಿಲ್ಲ. ಕಾಂಗ್ರೆಸ್, ಜನತಾ ಪಕ್ಷ ಅಥವಾ ಬಿಜೆಪಿ 28 ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಾಗಿಲ್ಲ.

ಕಳೆದ 30 ವರ್ಷಗಳಲ್ಲಿ ನಡೆದಿರುವ 7 ಲೋಕಸಭಾ ಚುನಾವಣೆಗಳ ಪೈಕಿ 5 ರಲ್ಲಿ ಹೊಂದಾಣಿಕೆ ಮಾಡಿಕೊಂಡೇ ಚುನಾವಣೆ ಎದುರಿಸಲಾಗಿದೆ. ಹಾಗೆ ಹೊಂದಾಣಿಕೆ ಮಾಡಿಕೊಂಡಾಗಲೆಲ್ಲಾ ರಾಷ್ಟ್ರೀಯ ಪಕ್ಷಗಳೇ ಗೆಲುವಿನ ಸಿಂಹಪಾಲು ಪಡೆದಿವೆಯೇ ಹೊರತು ಪ್ರಾದೇಶಿಕ ಪಕ್ಷಗಳು ಅಲ್ಲ. ಈಗ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ 25 ಮತ್ತು ಜೆಡಿಎಸ್ 3 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ಹೊಂದಾಣಿಕೆ ಫಲಿತಾಂಶ

ಕರ್ನಾಟಕದಲ್ಲಿ 1989ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಲೋಕಶಕ್ತಿ ಹೊಂದಾಣಿಕೆ ಮಾಡಿಕೊಂಡಿದ್ದವು. ಬಿಜೆಪಿ 18 ರಲ್ಲಿ ಸ್ಪರ್ಧಿಸಿ 13 ಸ್ಥಾನಗಳನ್ನು ಗೆದ್ದಿದ್ದರೆ 10 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕಿಳಿಸಿದ್ದ ಲೋಕಶಕ್ತಿ 3 ರಲ್ಲಿ ಗೆದ್ದಿತ್ತು. ಕಾಂಗ್ರೆಸ್ 9 ಮತ್ತು ಜನತಾದಳ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದವು. ಈ ವೇಳೆಗೆ ಲೋಕಶಕ್ತಿ ಜೆಡಿಯು ಪಕ್ಷದಲ್ಲಿ ವಿಲೀನವಾಗಿತ್ತು. ಜನತಾದಳವು ಜೆಡಿಯು ಮತ್ತು ಜೆಡಿಎಸ್ ಎಂದು ಹೋಳಾಗಿತ್ತು. 1999ರಲ್ಲಿ ನಡೆದ ಚುನಾವಣೆಯಲ್ಲೂ ಬಿಜೆಪಿ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದ್ದವು. ಬಿಜೆಪಿ ಸ್ಪರ್ಧಿಸಿದ್ದ 19 ಸ್ಥಾನಗಳಲ್ಲಿ 7 ರಲ್ಲಿ ಗೆದ್ದರೆ ಜೆಡಿಯು 9 ರಲ್ಲಿ ಸ್ಪರ್ಧಿಸಿತ್ತಾದರೂ ಶೂನ್ಯ ಸಾಧನೆ ಮಾಡಿತ್ತು.

2004 ರಲ್ಲೂ ಬಿಜೆಪಿ-ಜೆಡಿಯು ಹೊಂದಾಣಿಕೆ ಮುಂದುವರೆದಿತ್ತು. ಆಗ ಬಿಜೆಪಿ 18 ರಲ್ಲಿ ಗೆಲುವು ದಾಖಲಿಸಿದರೆ ಜೆಡಿಯು ಮತ್ತೆ ಸೊನ್ನೆ ಸುತ್ತಿತ್ತು. 2009 ಮತ್ತು 2024ರಲ್ಲಿ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೂ ಸ್ವತಂತ್ರವಾಗಿ ಸ್ಪರ್ಧಿಸಿದ್ದವು. 2009ರಲ್ಲಿ ಬಿಜೆಪಿ 19 ಮತ್ತು 2014ರಲ್ಲಿ 17 ಸೀಟುಗಳನ್ನು ಗೆದ್ದಿತ್ತು. 2019ರಲ್ಲಿ ಬಿಜೆಪಿ 28ರಲ್ಲಿ 25 ಸ್ಥಾನಗಳಲ್ಲಿ ದಾಖಲೆಯ ಗೆಲುವು ಸಾಧಿಸಿತ್ತು. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈಗ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿವೆಯಾದರೂ ಗೆಲುವು ಸುಲಭದ ತುತ್ತಲ್ಲ. ಯಾವುದೇ ಪಕ್ಷ 20 ಸ್ಥಾನಗಳನ್ನು ದಾಟುವುದಿಲ್ಲ ಎಂದು ಹೇಳಲಾಗುತ್ತಿದೆ. ಫಲಿತಾಂಶ ಏನಾಗುತ್ತದೆ ಎಂದು ತಿಳಿಯಲು ಜೂನ್ 4 ರ ವರೆಗೆ ಕಾಯಬೇಕಿದೆ.