ಕನ್ನಡ ಸುದ್ದಿ  /  Elections  /  Lok Sabha Elections 2024 Karnataka Also Witnessing Family Politics With Many Former Cms In Fray Rajeev Hegde Article Kub

ರಾಜೀವ ಹೆಗಡೆ ಲೇಖನ: ಪ್ರಜಾಪ್ರಭುತ್ವದ ಜಾತ್ರೆಯಲ್ಲಿ ಕುಟುಂಬ ಪ್ರೇಮಿಗಳ ಕುರುಡು ಉತ್ಸವ !

ಕುಟುಂಬ ರಾಜಕಾರಣದ ಕಬಂಧಬಾಹು ಯಾವುದೇ ಪಕ್ಷವನ್ನೂ ಬಿಟ್ಟಿಲ್ಲ. ಕುಟುಂಬವಿಲ್ಲದೇ ರಾಜಕಾರಣವಿಲ್ಲ ಎನ್ನುವಷ್ಟರ ಮಟ್ಟಿಗೆ. ಈ ಕುರಿತು ಲೇಖಕ ರಾಜೀವ್‌ ಹೆಗಡೆ ಕುಟುಂಬ ರಾಜಕಾರಣದ ಒಳನೋಟವನ್ನು ತೆರೆದಿಟ್ಟಿದ್ದಾರೆ.

ಕುಟುಂಬ ರಾಜಕಾರಣ.. ಸತೀಶ್‌ ಆಚಾರ್ಯ ಚಿತ್ರನೋಟ
ಕುಟುಂಬ ರಾಜಕಾರಣ.. ಸತೀಶ್‌ ಆಚಾರ್ಯ ಚಿತ್ರನೋಟ (Sathish Acharya)

ಪಕ್ಷ, ನಾಯಕರೆಂದು ಅದೆಷ್ಟೋ ಕಾರ್ಯಕರ್ತರು ಹಗಲಿರುಳು ದುಡಿಯುತ್ತಾರೆ. ಅಧಿಕಾರವಿಲ್ಲದಿದ್ದಾಗ ದೊಡ್ಡವರಿಗೆ ಮಣೆ ಹಾಕಿ ಸಾಮಾನ್ಯರಿಂದ ದುಡಿಸಿಕೊಳ್ಳುವುದು ಸಾಮಾನ್ಯ. ನಂತರ ಅಧಿಕಾರ ಸಿಕ್ಕ ಬಳಿಕ ದೊಡ್ಡವರಿಗೆ ಸಣ್ಣ ಕಾರ್ಯಕರ್ತರು ನೆನಪಾಗುವುದೇ ಇಲ್ಲ. ಪಕ್ಷ ಹಾಗೂ ಅಧಿಕಾರವನ್ನು ಕುಟುಂಬದ ವೃತ್ತಿಪರ ಉದ್ಯಮವಾಗಿಸಿಕೊಳ್ಳುವ ರಾಜಕಾರಣಿಗಳು ಪ್ರಜೆಗಳೇ ಪ್ರಭುಗಳು ಎಂದು ಸುಮ್ಮನೇ ನಾಟಕವಾಡುತ್ತಾರೆಯಷ್ಟೇ. ಪ್ರತಿಯೊಂದು ನಾಟಕ ಮಂಡಳಿಯ ಹಣೆಪಟ್ಟಿ ಹಾಗೂ ಟೋಪಿಗಳ ಬಣ್ಣವಷ್ಟೇ ಬದಲಾಗಿವೆ. ಒಳಗೊಳಗೆ ಎಲ್ಲರೂ ಮಾಡುವುದು ಅದೇ ಕೌಟುಂಬಿಕ ರಾಜಕೀಯ.

ಕರ್ನಾಟಕಕ್ಕೆ ಸೀಮಿತವಾಗಿ ನೋಡುವುದಾದರೆ ಒಟ್ಟಾರೆ 28 ಲೋಕಸಭಾ ಕ್ಷೇತ್ರದ ಪ್ರಮುಖ ಮೂರು ಪಕ್ಷಗಳಲ್ಲಿ ಅರ್ಧದಷ್ಟು ಅಭ್ಯರ್ಥಿಗಳು ಮಾಜಿ ಸಿಎಂ, ಹಾಲಿ-ಮಾಜಿ ಪಕ್ಷ ಅಧ್ಯಕ್ಷರು, ಹಾಲಿ ಮಾಜಿ ಸಚಿವರು, ಹಾಲಿ ಮಾಜಿ ಸಂಸದರು ಹಾಗೂ ಶಾಸಕರ ಪುತ್ರರೇ ಆಗಿದ್ದಾರೆ. 28 ಕ್ಷೇತ್ರಗಳ ಪೈಕಿ ಬರೋಬ್ಬರಿ 28 ಅಭ್ಯರ್ಥಿಗಳು ಕೌಟುಂಬಿಕ ರಾಜಕೀಯ ಹಿನ್ನೆಲೆ ಇದ್ದವರೇ ಆಗಿದ್ದಾರೆ. ಅಂದರೆ ಪ್ರಜಾಪ್ರಭುತ್ವ ಎನ್ನುವುದನ್ನು ಅಕ್ಷರಶಃ ಕೈಗೊಂಬೆ ಮಾಡಿಕೊಂಡು ಕುಟುಂಬವೇ ಪ್ರಭು ಎಂದು ಸಾಬೀತು ಮಾಡುತ್ತಿದ್ದಾರೆ.

ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಐದಾರು ದಶಕ ರಾಜಕೀಯ ಮಾಡಿ, ಸಾಮಾಜಿಕ ನ್ಯಾಯ ಹೇಳುವ ವ್ಯಕ್ತಿಗೆ ತನ್ನ ಕ್ಷೇತ್ರದಲ್ಲಿ ಮಗ-ಅಳಿಯ ಬಿಟ್ಟು ಇನ್ಯಾರು ಕಾಣುವುದೇ ಇಲ್ಲ. ಇನ್ನೊಬ್ಬ ಮಾಜಿ ಸಿಎಂಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎರಡೂ ತನ್ನ ಸುಪುತ್ರರಿಗೇ ಬೇಕು. ಅಭಿವೃದ್ಧಿಯ ಗ್ಯಾರಂಟಿಯ ಮಾತುಗಳನ್ನಾಡುವ ಪಕ್ಷದ ಇನ್ನೋರ್ವ ಅಧ್ಯಕ್ಷರಿಗೆ ತನ್ನ ಸಹೋದರನನ್ನು ಸಂಸದ ಮಾಡದಿದ್ದರೆ ಸಾಮ್ರಾಜ್ಯಕ್ಕೆ ಅಪಾಯ ಆಗಬಹುದು ಎನ್ನುವ ಭಯ ಕಾಡುತ್ತದೆ.

ಮಾಜಿ ಪ್ರಧಾನಿಯ ಕುಟುಂಬದ ವಿಷಯಕ್ಕೆ ಬಂದರೆ, ಕುಟುಂಬ ಬಿಟ್ಟು ರಾಜಕೀಯ ಇಲ್ಲ ಎನ್ನುವುದು ಆ ಪಕ್ಷದ ಅಲಿಖಿತ ನಿಯಮವಾಗಿದೆ. ಹೀಗಾಗಿ ಕಾರ್ಯಕರ್ತರ ಬಗ್ಗೆ ಚರ್ಚಿಸುವುದು ಸಮಯ ವ್ಯರ್ಥ ಮಾಡಿದಂತೆ.

ಇವರನ್ನೆಲ್ಲ ಹೊರತುಪಡಿಸಿ, ರಾಜ್ಯದ ಜನತೆಗೆ ನಾವು ಯುವ ಅಭ್ಯರ್ಥಿಗಳನ್ನು ಕೊಟ್ಟಿದ್ದೇವೆ ಎಂದು ರಾಷ್ಟ್ರೀಯ ಪಕ್ಷ ಎದೆ ತಟ್ಟಿಕೊಂಡು ಹೇಳುತ್ತಿದೆ. ವಿಪರ್ಯಾಸವೆಂದರೆ ಅದೇ ಕ್ಷೇತ್ರಗಳಲ್ಲಿ ದಶಕಗಳ ಆಳ್ವಿಕೆ ನಡೆಸುತ್ತಿರುವ ಹಾಲಿ, ಮಾಜಿ ಶಾಸಕ, ಸಚಿವರ ಮಕ್ಕಳಿಗೆ ಟಿಕೆಟ್‌ ನೀಡಿ, ಪಕ್ಷ, ಕಾರ್ಯಕರ್ತರ ಸೇವೆ ಮಾಡುತ್ತಿದ್ದೇವೆ ಎಂದು ಬಿಟ್ಟಿ ಪೋಸ್‌ ನೀಡುತ್ತಿದ್ದಾರೆ. ಅದಕ್ಕೆ ಬಿಸಿರಕ್ತದ ಸೇರ್ಪಡೆ ಎನ್ನುವ ದೊಡ್ಡ ವ್ಯಾಖ್ಯಾನ ಬೇರೆ. ಏಕೆ ಸಿಎಂ, ಸಚಿವರು, ಶಾಸಕರ ಮಕ್ಕಳ ರಕ್ತ ಮಾತ್ರ ಬಿಸಿ ಆಗಿರುತ್ತದೆಯೇ? ಕಾರ್ಯಕರ್ತರ ರಕ್ತ ಬಿಸಿ ಆಗುವುದಿಲ್ಲವೇ?

ಕರ್ನಾಟಕದಲ್ಲಿ ಪ್ರಮುಖವಾಗಿರುವ ಮೂರೂ ಪಕ್ಷಗಳಲ್ಲಿ ಒಂದಕ್ಕೆ ಏಳೂವರೆ ದಶಕದ ಇತಿಹಾಸವಿದೆ. ಇನ್ನೆರಡು ಪಕ್ಷಕ್ಕೆ ಮೂರ್ನಾಲ್ಕು ದಶಕಗಳ ಇತಿಹಾಸವಿದೆ. ಇಷ್ಟಾಗಿಯೂ ಅಭ್ಯರ್ಥಿಗಳ ಹುಡುಕಾಟದ ಸಂದರ್ಭದಲ್ಲಿ ಮತ್ತದೇ ಸಾಮ್ರಾಜ್ಯಶಾಹಿ ಅಥವಾ ಅಧಿಕಾರಶಾಹಿ ಕುಟುಂಬದ ಮಕ್ಕಳೇ ಕಾಣಿಸುತ್ತಾರೆ ಎಂದರೆ ಈ ರಾಜಕಾರಣಿಗಳು ಹಾಗೂ ಪಕ್ಷಗಳು ಕಾರ್ಯಕರ್ತರನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತದೆ ಎನ್ನುವುದು ಗೊತ್ತಾಗುತ್ತದೆ.

ಈ ರಾಜಕಾರಣಿಗಳು ಜೈಲಿಗೆ ಹೋದಾಗ, ಪೊಲೀಸರ ಏಟು ತಿನ್ನುವ ಪ್ರಸಂಗ ಬಂದಾಗ, ಹಗಲಿರುಳು ಪ್ರತಿಭಟನೆ ಮಾಡುವಾಗ ಬಡ ಕಾರ್ಯಕರ್ತರು ಬೇಕು. ಇವರ ಎಲ್ಲ ರೀತಿಯ ಸೇವೆಗೂ ಬಡ ಕಾರ್ಯಕರ್ತರೇ ಬೇಕು. ಚುನಾವಣೆ ಮುಗಿದ ಮೇಲೆ ಇದೇ ಕಾರ್ಯಕರ್ತರನ್ನು ಮಾತನಾಡಿಸಲು ಕೂಡ ಸಮಯವಿರುವುದಿಲ್ಲ. ಆದರೆ ಟಿಕೆಟ್‌ ಹಂಚಿಕೆ ಮಾಡುವಾಗಲೂ ನೆನಪಾಗುವುದಿಲ್ಲ.

ಸೂಟ್‌ಕೇಸ್‌ ಬೇಕು ನಿಜ!

ಇಡೀ ದೇಶದಲ್ಲಿ ಅತಿಹೆಚ್ಚು ಚುನಾವಣೆ ಭ್ರಷ್ಟಾಚಾರ ಅಥವಾ ಅಕ್ರಮ ಆಗುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಇಲ್ಲಿ ಒಂದು ಜಿಲ್ಲೆಗೆ ಖರ್ಚಾಗುವ ಹಣದಲ್ಲಿ ಕೆಲವು ರಾಜ್ಯಗಳ ಚುನಾವಣೆ ನಡೆಸಬಹುದು ಎಂದು ರಾಜಕೀಯ ತಜ್ಞರೇ ವಿಶ್ಲೇಷಿಸುತ್ತಾರೆ. ಹೀಗಿರುವಾಗ ಆರ್ಥಿಕವಾಗಿ ಸಬಲರಾಗಿರುವರನ್ನೇ ಅಭ್ಯರ್ಥಿಯನ್ನಾಗಿಸಲು ಪಕ್ಷ ಆಲೋಚಿಸುವುದು ಸಾಮಾನ್ಯ ಆಗಿರಬಹುದು. ಆದರೆ ರಾಜ್ ಹಾಗೂ ಕೇಂದ್ರದಲ್ಲಿ ಅಧಿಕಾರ ಇರಿಸಿಕೊಂಡು ಸಾವಿರಾರು ಕೋಟಿ ರಾಜಕೀಯ ದೇಣಿಗೆ ಪಡೆಯುವ ಪಕ್ಷಗಳಿಗೂ ಸಾಮಾನ್ಯ ಕಾರ್ಯಕರ್ತರು ನೆನಪಾಗುವುದಿಲ್ಲ ಎಂದಾದರೆ, ಇದು ಯಾವ ಸೀಮೆಯ ಪ್ರಜಾಪ್ರಭುತ್ವ. ಪ್ರಜೆಗಳಿಗೆ ಅಧಿಕಾರ ಎನ್ನುವುದು ಮತದಾನ ಹಾಗೂ ಸವಲತ್ತಿಗೆ ಮಾತ್ರ ಸೀಮಿತವಾಗುವುದು ಏಕೆ? ಜನರ ಪ್ರತಿನಿಧಿಗಳು ಅಧಿಕಾರಿಶಾಹಿಗಳ ಮಕ್ಕಳೇ ಏಕೆ ವಹಿಸಿಕೊಳ್ಳಬೇಕು? ಸಾಮಾನ್ಯ ಜನರನ್ನೇ ಪ್ರತಿನಿಧಿಯಾಗಿಸುವ ಕೆಲಸವನ್ನು ಏಕೆ ಆರ್ಥಿಕವಾಗಿ ಸಬಲವಾಗಿರುವ ಪಕ್ಷಗಳು ಮಾಡಬಾರದು? ಕಾಂಗ್ರೆಸ್‌ ಪ್ರಕಾರ ಕರ್ನಾಟಕದಲ್ಲಿ ಅವರ ಸ್ಥಿತಿ ಬಲಿಷ್ಠವಾಗಿದೆ, ಬಿಜೆಪಿ ಪ್ರಕಾರ ದೇಶಕಂಡ ಅದ್ಭುತ ನಾಯಕ ಅರವ ಜೊತೆಗಿದ್ದಾರೆ. ಇಂತಹ ಉಚ್ಛ್ರಾಯ ಸ್ಥಿತಿಯಲ್ಲೂ ಕುಟುಂಬ ರಾಜಕೀಯ ಮರಕ್ಕೆ ಜೋತು ಬೀಳುವ ಅನಿವಾರ್ಯವೇಕೆ?

ಸಾಮಾಜಿಕ ನ್ಯಾಯವೆಂಬ ಗೊಂಬೆ!

ನಮ್ಮ ರಾಜಕಾರಣಿಗಳಿಗೆ ಅತಿ ಇಷ್ಟವಾದ ಶಬ್ದವೆಂದರೆ ಸಾಮಾಜಿಕ ನ್ಯಾಯ. ಮತ ಕೇಳುವಾಗ ಭಾಷಣದಲ್ಲಿ ಹತ್ತಾರು ಬಾರಿ ಸಾಮಾಜಿಕ ನ್ಯಾಯದ ಮಾತುಗಳನ್ನಾಡುತ್ತಾರೆ. ವಿಪರ್ಯಾಸವೆಂದರೆ ಆ ಮತಗಳಿಂದ ಗೆದ್ದ ಬಳಿಕ ಕೇವಲ ಕೌಟುಂಬಿಕ ನ್ಯಾಯದ ಮಾತುಗಳು ಬರುತ್ತವೆ. ಪಕ್ಷವೇ ತಾಯಿ-ತಂದೆ ಎನ್ನುವರೆಲ್ಲ ಅಧಿಕಾರ ಹೋದಾಗ, ಎಲ್ಲರನ್ನೂ ಎಡಗಾಲಿನಲ್ಲಿ ಒದ್ದುಕೊಂಡು ಹೋಗುತ್ತಾರೆ. ಇಲ್ಲವಾದಲ್ಲಿ ತಮಗಿರುವ ಅಧಕಾರ ಬಳಸಿ ಅದೆಷ್ಟೋ ಮಕ್ಕಳನ್ನೇ ನಾಯಕರನ್ನಾಗಿಸಲು ಹಗಲಿರುಳು ಶ್ರಮವಹಿಸುತ್ತಾರೆ. ಅಪ್ಪನ ಪರ ಪ್ರಚಾರ ಮಾಡಿದ್ದು, ಅಪ್ಪ ಅಧಿಕಾರದಲ್ಲಿದ್ದಾಗ ದುಡ್ಡಿನ ಮದದಲ್ಲಿ ಉಪ ಚುನಾವಣೆ ಗೆಲ್ಲಿಸಿದ್ದನ್ನೇ ದೊಡ್ಡದಾಗಿಸಿಕೊಂಡು ಮಾಧ್ಯಮಗಳಲ್ಲಿಯೂ ಜೋರು ಪ್ರಚಾರ ಪಡೆಯುತ್ತಾರೆ. ಅಪ್ಪ-ಅಮ್ಮ-ಮಾವ-ಗಂಡನ ಹೊರತಾದ ಐಡೆಂಟಿಟಿಯಿಲ್ಲದವರೆಲ್ಲ ನಾಳೆ ಲಕ್ಷಾಂತರ ಜನರನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಾರೆ ಎನ್ನುವುದೇ ನಮ್ಮ ಪ್ರಜಾಪ್ರಭುತ್ವದ ದೊಡ್ಡ ಹಾಸ್ಯಾಸ್ಪದ ವಿಚಾರ. ಒಂದು ಜಾತಿ, ಸಮುದಾಯ, ಸಿದ್ಧಾಂತದ ಹೆಸರಿನಲ್ಲಿ ದಶಕಗಳ ಕಾಲ ರಾಜಕೀಯ ಮಾಡಿಕೊಂಡು, ನಿವೃತ್ತಿ ಅಂಚಿನಲ್ಲಿ ತಾನು ಪ್ರತಿನಿಧಿಸುವ ವಲಯದಿಂದ ನಾಯಕನನ್ನು ಬೆಳೆಸಲಾಗದೇ ಮಕ್ಕಳಿಗೆ ಖುರ್ಚಿ ಕೊಡಿಸಲು ಬ್ಲ್ಯಾಕ್‌ಮೇಲ್‌ ಮಾಡುವುದು, ಕಣ್ಣೀರು ಹಾಕುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾದಂತಿದೆ. ಹಾಗಿದ್ದರೆ ಅದ್ಯಾವ ಧೈರ್ಯದಲ್ಲಿ ಸಾಮಾಜಿಕ ನ್ಯಾಯ, ಪಕ್ಷಕ್ಕಾಗಿ ಹಗಲಿರುಳು ಶ್ರಮ ಎಂದು ಬಡಾಯಿ ಕೊಚ್ಚಿಕೊಳ್ಳುತ್ತೀರಿ?

ರಾಜಕೀಯದ ದೃತರಾಷ್ಟ್ರರು!

ಮಹಾಭಾರತ ಯುದ್ಧ ನಡೆಯಲು ಕಾರಣವಾಗಿದ್ದೇ ದೃತರಾಷ್ಟ್ರ ಹಾಗೂ ಗಾಂಧಾರಿಯ ಪುತ್ರ ಪ್ರೇಮವಾಗಿತ್ತು. ಕರ್ನಾಟಕದ ಮಟ್ಟಿಗೆ ಲೆಕ್ಕ ಮಾಡಲಾಗದಷ್ಟು ದೃತರಾಷ್ಟ್ರರಿದ್ದಾರೆ. ಭಾರತದ ರಾಜಕೀಯದಲ್ಲಿ ಪುತ್ರ ಪ್ರೇಮದಿಂದ ಒಂದು ಐತಿಹಾಸಿಕ ರಾಷ್ಟ್ರೀಯ ಪಕ್ಷ ಹೇಗೆಲ್ಲ ನೆಲ ಕಚ್ಚುತ್ತಿದೆ ಎನ್ನುವುದನ್ನು ನಾವು ಹಗಲಿರುಳು ನೋಡುತ್ತಿದ್ದೇವೆ. ಅವರನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಟೀಕಿಸುವರೆಲ್ಲ ಇಲ್ಲಿ ಮಾತ್ರ ಅದೇ ದೃತರಾಷ್ಟ್ರ-ಗಾಂಧಾರಿಯ ಪಾತ್ರವನ್ನು ಮಾಡುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಪ್ರತಿಯೊಂದು ಪಕ್ಷದಲ್ಲಿಯೂ ಇದೇ ಸಮಸ್ಯೆಯಾಗಿದೆ. ಇಂದು ಬಂಡಾಯ ಎದ್ದಿರುವ ಬಹುತೇಕ ನಾಯಕರ ಸಮಸ್ಯೆಯೂ ಇದೇ ಆಗಿದೆ. ತನಗೆ ಅಥವಾ ತನ್ನ ಕುಟುಂಬಕ್ಕೆ ಟಿಕೆಟ್‌ ಕೊಟ್ಟಿಲ್ಲ ಎನ್ನುವುದೇ ಇವರ ಪ್ರಾಥಮಿಕ ಸಮಸ್ಯೆಯಾಗಿದೆ. ಆ ನಾಟಕಕ್ಕೆ ಸಾಕಷ್ಟು ಬಣ್ಣಬಣ್ಣದ ಮುಖವಾಡ ಹಾಕಿದ್ದಾರೆಯಷ್ಟೆ. ಇನ್ನೊಂದೆಡೆ ಇವರ ಮಕ್ಕಳಿಗೆ ಟಿಕೆಟ್‌ ಕೊಟ್ಟರೆ ತನ್ನ ಮಗನ ದರ್ಪ-ಅಹಂಕಾರವನ್ನು ಹೇಗೆ ಖುಷಿ ಪಡಿಸುವುದು ಎನ್ನುವುದು ಇನ್ನಷ್ಟು ನಾಯಕರ ಗೋಳಾಗಿದೆ.

ಒಟ್ಟಾರೆಯಾಗಿ ಪ್ರಜಾಪ್ರಭುತ್ವದ ಜಾತ್ರೆ ಎಂದು ಭಾಷಣ ಮಾಡಿಕೊಂಡು ಕುಟುಂಬದ ಉತ್ಸವ ಮಾಡಲು ಕರ್ನಾಟಕದ ʼಫ್ಯಾಮಿಲಿ ಮ್ಯಾನ್‌ʼಗಳು ಹೊರಟಿದ್ದಾರೆ. ಅವರಿಗೆ ಉಘೇ ಹೇಳುವ ಒಂದಿಷ್ಟು ಹೊಗಳುಭಟರು ಇನ್ನಷ್ಟು ಅಪಾಯಕಾರಿ.

ಕೊನೆಯದಾಗಿ: ಉದ್ದೇಶಪೂರ್ವಕವಾಗಿಯೇ ನಾನು ಯಾವುದೇ ರಾಜಕಾರಣಿ ಹೆಸರನ್ನು ಪ್ರಸ್ತಾಪಿಸಿಲ್ಲ. ವೈಯಕ್ತಿಕ ಕೆಸರೆರಚಾಟದಲ್ಲಿ ನನಗೆ ಆಸಕ್ತಿಯಿಲ್ಲ. ಪಟ್ಟಿಯನ್ನು ನೋಡಿ, ಲೇಖನ ಓದಿದಾಗ ಎಲ್ಲವೂ ಸ್ಪಷ್ಟವಾಗುತ್ತದೆ. ನನ್ನ ಉದ್ದೇಶವೆಂದರೆ ಪಕ್ಷಾತೀತವಾಗಿ ಜನರನ್ನು ಹೇಗೆ ದಾರಿ ತಪ್ಪಿಸುತ್ತಾರೆ ಎನ್ನುವುದನ್ನು ಹೇಳುವುದಷ್ಟೇ ಆಗಿದೆ.

-ರಾಜೀವ್‌ ಹೆಗಡೆ, ಲೇಖಕ.