Mysuru News: ಸಂಸದ ವಿ ಶ್ರೀನಿವಾಸಪ್ರಸಾದ್ ಬೆಂಬಲ ಪಡೆಯಲು ಕಾಂಗ್ರೆಸ್, ಬಿಜೆಪಿ ನಾಯಕರ ಕಸರತ್ತು-mysuru news senior leader srinivas prasad announced political retirement but congress bjp vowing him to get his support ,ಚುನಾವಣೆಗಳು ಸುದ್ದಿ
ಕನ್ನಡ ಸುದ್ದಿ  /  ಚುನಾವಣೆಗಳು  /  Mysuru News: ಸಂಸದ ವಿ ಶ್ರೀನಿವಾಸಪ್ರಸಾದ್ ಬೆಂಬಲ ಪಡೆಯಲು ಕಾಂಗ್ರೆಸ್, ಬಿಜೆಪಿ ನಾಯಕರ ಕಸರತ್ತು

Mysuru News: ಸಂಸದ ವಿ ಶ್ರೀನಿವಾಸಪ್ರಸಾದ್ ಬೆಂಬಲ ಪಡೆಯಲು ಕಾಂಗ್ರೆಸ್, ಬಿಜೆಪಿ ನಾಯಕರ ಕಸರತ್ತು

Mysore Politics ಸಕ್ರಿಯ ರಾಜಕಾರಣದಿಂದ ಹಿರಿಯ ರಾಜಕಾರಣಿ ಶ್ರೀನಿವಾಸಪ್ರಸಾದ್‌ ಹಿಂದೆ ಸರಿದಿರುವುದಾಗಿ ಹೇಳಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಅವರ ಬೆಂಬಲ ಪಡೆಯಲು ನಾಯಕರು ಪ್ರಯತ್ನಿಸುತ್ತಲೇ ಇದ್ಧಾರೆ. ಅವರ ಸಹೋದರ, ಅಳಿಯ ಸಹಿತ ಹಲವರು ಬಿಜೆಪಿ ತೊರೆದು ಕಾಂಗ್ರೆಸ್‌ ಕೂಡ ಸೇರಿದ್ದಾರೆ.ವರದಿ: ಪಿ.ರಂಗಸ್ವಾಮಿ, ಮೈಸೂರು

ಮೈಸೂರು ಭಾಗದಲ್ಲಿ ಶ್ರೀನಿವಾಸಪ್ರಸಾದ್‌ ರಾಜಕೀಯದ ಕೇಂದ್ರ ಬಿಂದು.
ಮೈಸೂರು ಭಾಗದಲ್ಲಿ ಶ್ರೀನಿವಾಸಪ್ರಸಾದ್‌ ರಾಜಕೀಯದ ಕೇಂದ್ರ ಬಿಂದು.

ಮೈಸೂರು: ಐದು ದಶಕಗಳ ಕಾಲ ರಾಜಕಾರಣ ಮಾಡಿ ಕಳೆದ ತಿಂಗಳು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್‌ ಅವರ ಬೆಂಬಲ ಪಡೆಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಿವೆ. ಮೈಸೂರಿನಲ್ಲಿ ಕಳೆದ ತಿಂಗಳು ನಡೆದ ಕಾರ್ಯಕ್ರಮದಲ್ಲಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದು ಕೃತಿಯೊಂದನ್ನು ಶ್ರೀನಿವಾಸಪ್ರಸಾದ್‌ ಬಿಡುಗಡೆ ಮಾಡಿದ್ದರು. ಇದೇ ವೇಳೆ ಲೋಕಸಭೆ ಚುನಾವಣೆಯೂ ಘೋಷಣೆಯಾಗಿದ್ದರಿಂದ ಅಭ್ಯರ್ಥಿಗಳು, ಅವರ ಬೆಂಬಲಿಗರು, ಹಿರಿಯ ರಾಜಕೀಯ ನೇತಾರರು ಅವರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ನಿವೃತ್ತಿ ನಂತರವೂ ರಾಜಕೀಯದಲ್ಲಿ ಅವರು ಕೇಂದ್ರ ಬಿಂದುವೇ ಆಗಿದ್ದಾರೆ.

ಸುದೀರ್ಘ ರಾಜಕಾರಣ

ಮೈಸೂರು ಭಾಗದಲ್ಲಿ ಶ್ರೀನಿವಾಸಪ್ರಸಾದ್‌ ಪ್ರಭಾವಿ ರಾಜಕಾರಣಿ. ಕರ್ನಾಟಕದಲ್ಲೂ ಐದು ದಶಕ ಕಾಲ ಕಾಂಗ್ರೆಸ್‌, ಜೆಡಿಎಸ್‌. ಬಿಜೆಪಿ, ಸಂಯುಕ್ತ ಜನತಾದಳ, ಸಮತಾಪಾರ್ಟಿಯಲ್ಲಿ ಕೆಲಸ ಮಾಡಿದವರು. ಆದರೆ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿಯೇ ಅವರ ರಾಜಕಾರಣ, ಮೈಸೂರು ನಗರದಲ್ಲಿ ಹುಟ್ಟಿ ಬೆಳೆದು ಇಲ್ಲಿಯೇ ನೆಲೆಸಿದ್ದರೂ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾಯಿತ ಪ್ರತಿನಿಧಿಯಾಗಿದ್ದವರು. ಆರು ಬಾರಿ ಸಂಸದರಾಗಿ, ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದವರು. ನಂಜನಗೂಡು ಶಾಸಕರಾಗಿ ನಂತರ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಮಂತ್ರಿಯಾಗಿದ್ದವರು. ಆನಂತರ ಸಿದ್ದರಾಮಯ್ಯ ಅವರೊಂದಿಗೆ ಭಿನ್ನಾಭಿಪ್ರಾಯ ಏರ್ಪಟ್ಟು ಬಿಜೆಪಿ ಸೇರಿದ್ದರು. ಅನಾರೋಗ್ಯದ ನಡುವೆಯೂ ಸಂಸದರಾಗಿ ಗೆದ್ದು ಐದು ವರ್ಷ ಪೂರೈಸಿದವರು. ಈ ಭಾಗದಲ್ಲಿ ಎಲ್ಲಾ ಪಕ್ಷಕ್ಕೂ ಶಕ್ತಿ ತುಂಬಿದವರು ಶ್ರೀನಿವಾಸಪ್ರಸಾದ್.‌ ಕಾಂಗ್ರೆಸ್‌, ಜಾ.ದಳ, ಬಿಜೆಪಿ ಮೂರು ಪಕ್ಷ ಅಧಿಕಾರ ಬರುವ ಹಿಂದೆ ಹಳೆ ಮೈಸೂರು ಭಾಗದಲ್ಲಿ ಅವರ ಶಕ್ತಿಯೂ ಕೆಲಸ ಮಾಡಿದೆ.

ಬಿಜೆಪಿ ಮೇಲೆ ಬೇಸರ

ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ ಬಿಜೆಪಿ ನಡೆಯ ಬಗ್ಗೆ ಸಂಸದ ವಿ ಶ್ರೀನಿವಾಸಪ್ರಸಾದ್ ಅಸಮಾಧಾನಗೊಂಡಿದ್ದಾರೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ವಿ ಶ್ರೀನಿವಾಸಪ್ರಸಾದ್ ಅವರನ್ನು ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಶ್ರೀನಿವಾಸಪ್ರಸಾದ್ ಅವರ ಅಳಿಯ ಡಾ ಮೋಹನ್ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿ ಎಸ್ ಯಡಿಯೂರಪ್ಪನವರ ಪರಮಾಪ್ತನಾಗಿರುವ ಮಾಜಿ ಶಾಸಕ ಎಸ್ ಬಾಲರಾಜ್ ಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಆದರೆ ಟಿಕೆಟ್ ಘೋಷಣೆಗೂ ಮುನ್ನಾ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಡೆಗಣಿಸಲಾಗಿದೆ ಎಂಬುದು ವಿ ಶ್ರೀನಿವಾಸಪ್ರಸಾದ್ ಸಿಟ್ಟಿಗೆ ಕಾರಣವಾಗಿದೆ. ಬಿಜೆಪಿ ನಡೆಯ ಬಗ್ಗೆ ಅಸಮಾಧಾನಗೊಂಡಿರುವಶ್ರೀನಿವಾಸಪ್ರಸಾದ್ ಅವರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.

ಈಗಾಗಲೇ ಶ್ರೀನಿವಾಸಪ್ರಸಾದ್ ತಂಗಿಯ ಪುತ್ರ ಧೀರಜ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೀಗ ಶ್ರೀನಿವಾಸಪ್ರಸಾದ್ ರ ಸಹೋದರ ಸೇರಿದಂತೆ ಹಲವಾರು ಮಂದಿ ಬೆಂಬಲಿಗರು ಕಾಂಗ್ರೆಸ್ ಜೊತೆ ಹಸ್ತ ಲಾಘವಕ್ಕೆ ಮುಂದಾಗಿದ್ದಾರೆ.

ಬಿಜೆಪಿ, ಜೆಡಿಎಸ್ ನ ಅಸಮಾಧಾನಿತ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದ್ದು, ಹಳೇ ಮೈಸೂರು ಭಾಗದಲ್ಲಿ ದಲಿತ ಸಮುದಾಯದ ಮತಗಳ ಕ್ರೋಢೀಕರಣಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ದಲಿತ ಸಮುದಾಯದ ಮತದಾರರು ನಿರ್ಣಾಯಕವಾಗಿದ್ದಾರೆ. ಒಂದು ವೇಳೆ ಸಂಸದ ವಿ ಶ್ರೀನಿವಾಸಪ್ರಸಾದ್ ಅವರ ಬೆಂಬಲ ಸಿಕ್ಕರೆ ಕೈಗೆ ಮತ್ತಷ್ಟು ಬಲ ಸಿಗುವ ಲೆಕ್ಕಾಚಾರ ನಡೆದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ನಾಯಕರ ಬಗ್ಗೆ ಇತ್ತೀಚೆಗೆ ಮೃದು ಧೋರಣೆ ತಳೆದಿರುವ ವಿ ಶ್ರೀನಿವಾಸಪ್ರಸಾದ್ ಅವರು ತಮ್ಮ ಕುಟುಂಬ ಸದಸ್ಯರು ಕಾಂಗ್ರೆಸ್ ಗೆ ಹೋಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಸಿದ್ದರಾಮಯ್ಯ ಸ್ನೇಹ

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಕೈ ವಶ ಮಾಡಿಕೊಳ್ಳಲು ರಣತಂತ್ರ ರೂಪಿಸುತ್ತಿದ್ದಾರೆ. ಇತ್ತೀಚೆಗೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ಬಳಿ ರೆಸಾರ್ಟ್ ನಲ್ಲಿ ಮೂರು ದಿನಗಳ ಕಾಲ ತಂಗಿದ್ದ ಸಿದ್ದರಾಮಯ್ಯ ಬಿಜೆಪಿ-ಜೆಡಿಎಸ್ ನ ಸ್ಥಳೀಯ ನಾಯಕರನ್ನು ಕಾಂಗ್ರೆಸ್ ಸೆಳೆಯುವ ಕಾರ್ಯದಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಮೂರು ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯನವರು, ಬಿಜೆಪಿ ಸಂಸದ ವಿ ಶ್ರೀನಿವಾಸಪ್ರಸಾದ್ ಅವರ ಸಂಬಂಧಿಕರು ಹಾಗು ಬೆಂಬಲಿಗರನ್ನು ಕಾಂಗ್ರೆಸ್ ಗೆ ಸೆಳೆಯಲು ಮುಂದಾಗಿದ್ದಾರೆ. ಈ ಮೂಲಕ ದಲಿತ ಸಮುದಾಯದ ಮತಗಳ ಕ್ರೋಢೀಕರಣಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾಜಕೀಯದಲ್ಲಿ ಯಾರೂ ಶಾಶ್ವತ ಸ್ನೇಹಿತರಲ್ಲ, ವೈರಿಗಳೂ ಅಲ್ಲ ಎನ್ನುವುದಕ್ಕೆ ಲೋಕಸಭೆ ಚುನಾವಣೆ ಹಾಗೂ ಪ್ರಸಾದ್‌ ಅವರ ಬೆಂಬಲಕ್ಕೆ ಪ್ರಯತ್ನಿಸುತ್ತಿರುವ ರಾಜಕೀಯ ನೇತಾರರೇ ಸಾಕ್ಷಿ !

(ವರದಿ:ಪಿ.ರಂಗಸ್ವಾಮಿ, ಮೈಸೂರು)

mysore-dasara_Entry_Point