Pradeep Sarkar Death: 'ಮರ್ದಾನಿ', 'ಹೆಲಿಕಾಪ್ಟರ್ ಇಲಾ' ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ಸರ್ಕಾರ್ ವಿಧಿವಶ
ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ನಿರ್ದೇಶಕ ಪ್ರದೀಪ್ ಸರ್ಕಾರ್, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
Pradeep Sarkar Death: ಹಿಂದಿ ಮತ್ತು ಬಂಗಾಳಿ ಚಿತ್ರಗಳ ಖ್ಯಾತ ನಿರ್ದೇಶಕ ಪ್ರದೀಪ್ ಸರ್ಕಾರ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಪ್ರದೀಪ್ ಸರ್ಕಾರ್, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರದೀಪ್ ಅವರು ನಿಯಮಿತವಾಗಿ ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದರು. ಗುರುವಾರ (ಮಾ. 23) ಮಧ್ಯಾಹ್ನ 2.30ರ ಸುಮಾರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ರಾತ್ರಿ 3 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ಸಂಜೆ 4 ಗಂಟೆಗೆ ಅಂತ್ಯಕ್ರಿಯೆ
ಪ್ರದೀಪ್ ಸರ್ಕಾರ್ ಅವರ ಅಂತ್ಯ ಕ್ರಿಯೆ ಇಂದು ಸಂಜೆ 4 ಗಂಟೆ ಸುಮಾರಿಗೆ ಮುಂಬೈನ ಸಾಂತಾಕ್ರೂಜ್ ಚಿತಾಗಾರದಲ್ಲಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಕೇವಲ ನಿರ್ದೇಶಕರಾಗಿ ಮಾತ್ರವಲ್ಲದೆ, ಸಿನಿಮಾ ನಿರ್ಮಾಣದಲ್ಲಿಯೂ ಪ್ರದೀಪ್ ಸರ್ಕಾರ್ ಮುಂದಿದ್ದರು.
ಹಿಟ್ ಸಿನಿಮಾಗಳ ನಿರ್ದೇಶಕ..
ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಜತೆ ಕೆಲಸ ಮಾಡಿದ ಅನುಭವ ಹೊಂದಿದ್ದ ಪ್ರದೀಪ್ ಸರ್ಕಾರ್, 2005ರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೊರಹೊಮ್ಮಿದರು. ವಿದ್ಯಾ ಬಾಲನ್, ಸಂಜಯ್ ದತ್ ಮತ್ತು ಸೈಫ್ ಅಲಿ ಖಾನ್ ತಾರಾಗಣದ 'ಪರಿಣೀತಾ' ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಪ್ರದೀಪ್ ಸರ್ಕಾರ್, ಅದಾದ ಬಳಿಕ ಸಾಲು ಸಾಲು ಸಿನಿಮಾಗಳನ್ನು ನಿರ್ದೇಶನ ಮಾಡಿದರು.
ರಾಣಿ ಮುಖರ್ಜಿ ಜತೆ 'ಲಗಾ ಚುನಾರಿ ಮೇ ದಾಗ್', 'ಮರ್ದಾನಿ' ಮತ್ತು 'ಲಫಾಂಗೆ ಪರಿಂದೇ', 'ಹೆಲಿಕಾಪ್ಟರ್ ಇಲಾ' ಚಿತ್ರಗಳನ್ನು ನಿರ್ದೇಶಿಸಿದರು. 'ದುರಂಗಾ' ಹೆಸರಿನ ವೆಬ್‌ಸಿರೀಸ್‌ಗೂ ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಿವಂಗತ ನಟಿ ಪ್ರಿಯಾ ರಾಜವಂಶ್ ಅವರ ಬಯೋಪಿಕ್ ಮಾಡಲು ಪ್ರದೀಪ್ ತಯಾರಿ ನಡೆಸುತ್ತಿದ್ದರು.
ಬಾಲಿವುಡ್ ಸಿನಿಮಂದಿಯ ಸಂತಾಪ...
ಪ್ರದೀಪ್ ಸರ್ಕಾರ್ ನಿಧನಕ್ಕೆ ಬಾಲಿವುಡ್ ಸಿನಿಮಾ ಮಂದಿ ಸಂತಾಪ ಸೂಚಿಸಿದ್ದಾರೆ. ಪ್ರದೀಪ್ ಸರ್ಕಾರ್ ಅವರ ಆಪ್ತ ಹನ್ಸಲ್ ಮೆಹ್ತಾ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಗೆಳೆಯನ ಸಾವಿಗೆ ಮರುಕ ವ್ಯಕ್ತಪಡಿಸಿದ್ದಾರೆ. ನಟ ಅಜಯ್ ದೇವಗನ್, ಮನೋಜ್ ಬಾಜಪೇಯಿ ಸೇರಿ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸಂಬಂಧಿ ಈ ಸುದ್ದಿಯನ್ನೂ ಓದಿ
Ajith Kumar Father Died: ತಮಿಳು ನಟ ಅಜಿತ್ ಕುಮಾರ್ ತಂದೆ ಪಿ. ಸುಬ್ರಮಣ್ಯಂ ನಿಧನ
Ajith Kumar Father Died: ಕಾಲಿವುಡ್‌ನ ಖ್ಯಾತ ನಟ ಅಜಿತ್‌ಕುಮಾರ್ ಅವರ ತಂದೆ ಪಿ. ಸುಬ್ರಮಣ್ಯಂ (86) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಮನೆಯಲ್ಲಿ ಶುಕ್ರವಾರ ನಿಧನರಾದರು. ಬೆಳಗ್ಗೆ 9.30ರ ಸುಮಾರಿಗೆ ಕುಟುಂಬದ ಸಮ್ಮುಖದಲ್ಲಿ ಬೆಸೆಂಟ್ ನಗರದ ಚಿತಾಗಾರದಲ್ಲಿ ಅಂತ್ಯಕ್ರಿಯೆಯೂ ನೆರವೇರಿದೆ. ಪೂರ್ತಿ ಓದಿಗೆ ಇಲ್ಲಿ ಕ್ಲಿಕ್ ಮಾಡಿ