ಕನ್ನಡ ಸುದ್ದಿ  /  ಮನರಂಜನೆ  /  ಕ್ಷಮಿಸಿ ನಾವು ಓಟ್‌ ಮಾಡೋದಿಲ್ಲ; ಆಲಿಯಾ ಭಟ್‌, ಕತ್ರಿನಾ ಕೈಫ್‌, ಸನ್ನಿ ಲಿಯೋನ್‌ ಸೇರಿದಂತೆ ಈ ಸೆಲೆಬ್ರಿಟಿಗಳಿಗೆ ಮತದಾನದ ಹಕ್ಕಿಲ್ಲ

ಕ್ಷಮಿಸಿ ನಾವು ಓಟ್‌ ಮಾಡೋದಿಲ್ಲ; ಆಲಿಯಾ ಭಟ್‌, ಕತ್ರಿನಾ ಕೈಫ್‌, ಸನ್ನಿ ಲಿಯೋನ್‌ ಸೇರಿದಂತೆ ಈ ಸೆಲೆಬ್ರಿಟಿಗಳಿಗೆ ಮತದಾನದ ಹಕ್ಕಿಲ್ಲ

ಲೋಕಸಭಾ ಚುನಾವಣೆಯ ಸಡಗರದಲ್ಲಿ ಭಾರತವಿದೆ. ಆದರೆ, ಆಲಿಯಾ ಭಟ್‌, ಕತ್ರಿನಾ ಕೈಫ್‌, ಜಾಕ್ವೆಲಿನ್‌ ಫೆರ್ನಾಂಡಿಸ್‌, ಸನ್ನಿ ಲಿಯೋನ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾರತದಲ್ಲಿ ಮತದಾನದ ಹಕ್ಕನ್ನು ಹೊಂದಿಲ್ಲ. ಅಂತಹ ಹಲವು ಸೆಲೆಬ್ರಿಟಿಗಳ ವಿವರ ಇಲ್ಲಿದೆ.

ಆಲಿಯಾ ಭಟ್‌, ಕತ್ರಿನಾ ಕೈಫ್‌, ಸನ್ನಿ ಲಿಯೋನ್‌ ಸೇರಿದಂತೆ ಈ ಸೆಲೆಬ್ರಿಟಿಗಳಿಗೆ ಮತದಾನದ ಹಕ್ಕಿಲ್ಲ
ಆಲಿಯಾ ಭಟ್‌, ಕತ್ರಿನಾ ಕೈಫ್‌, ಸನ್ನಿ ಲಿಯೋನ್‌ ಸೇರಿದಂತೆ ಈ ಸೆಲೆಬ್ರಿಟಿಗಳಿಗೆ ಮತದಾನದ ಹಕ್ಕಿಲ್ಲ

ಕರ್ನಾಟಕದ ವಿವಿಧೆಡೆ ಇಂದು ಮತದಾನದ ಹಬ್ಬ ನಡೆಯುತ್ತಿದೆ. ಭಾರತವು ಲೋಕಸಭಾ ಚುನಾವಣೆಯ ಕಾವಿನಲ್ಲಿದೆ. ಸೆಲೆಬ್ರಿಟಿಗಳು "ಓಟ್‌ ಮಾಡಿ, ರಜೆ ಎಂದು ಓಟ್‌ ಹಾಕದೆ ಟ್ರಿಪ್‌ ಹೋಗಬೇಡಿ" ಎಂದೆಲ್ಲ ಸಲಹೆ ನೀಡುತ್ತಾ ಇದ್ದಾರೆ. ಜನರಲ್ಲಿ ಮತದಾನದ ಜಾಗೃತಿ ಮೂಡಿಸುವಲ್ಲಿ ಸೆಲೆಬ್ರಿಟಿಗಳ ಕೊಡುಗೆ ಮಹತ್ವದ್ದು. ಇದೇ ಸಮಯದಲ್ಲಿ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕೆಲವು ಬಾಲಿವುಡ್‌ ನಟರಿಗೆ, ನಟಿಯರಿಗೆ ಓಟಿಂಗ್‌ ಹಕ್ಕಿಲ್ಲ ಎಂಬ ಸಂಗತಿ ನಿಮಗೆ ಗೊತ್ತೆ. ಈ ಕುರಿತು ಒಂದಿಷ್ಟು ವಿವರ ಇಲ್ಲಿದೆ.

ಆಲಿಯಾ ಭಟ್‌

ಆಲಿಯಾ ಭಟ್‌ ಭಾರತೀಯರ ಅಚ್ಚುಮೆಚ್ಚಿನ ನಟಿ. ಈಕೆಯ ನಟನೆಗೆ ಹಲವು ಪ್ರಶಸ್ತಿಗಳು, ಪ್ರಶಂಸೆಗಳು ದೊರಕಿವೆ. ಬಾಲಿವುಡ್‌ನ ಈ ಜನಪ್ರಿಯ ನಟಿಗೆ ಭಾರತದ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶವಿಲ್ಲ. ಏಕೆಂದರೆ, ಇವರು ಬ್ರಿಟನ್‌ ಪೌರತ್ವ ಹೊಂದಿದ್ದಾರೆ. ತನ್ನ ತಾಯಿಯಿಂದ ಬ್ರಿಟನ್‌ ಪೌರತ್ವವನ್ನು ಬಳವಳಿಯಾಗಿ ಪಡೆದ ಇವರಿಗೆ ಭಾರತದ ಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕಿಲ್ಲ.

ಕತ್ರಿನಾ ಕೈಫ್‌

ಬಾಲಿವುಡ್‌ನ ಜನಪ್ರಿಯ ನಟಿ ಕತ್ರಿನಾ ಕೈಫ್‌ಗೂ ಮತದಾನದ ಹಕ್ಕಿಲ್ಲ. ಈಕೆಯೂ ಬ್ರಿಟಿಷ್‌ ಪೌರತ್ವ ಹೊಂದಿದ್ದಾರೆ. ಕಾಶ್ಮೀರಿ ಮೂಲದ ಬ್ರಿಟಿಷ್ ಉದ್ಯಮಿ ಮತ್ತು ಇಂಗ್ಲಿಷ್ ವಕೀಲರ ಮಗಳಾದ ಇವರು ಹಾಂಗ್ ಕಾಂಗ್‌ನಲ್ಲಿ ಜನಿಸಿದರು. ಬಾಲಿವುಡ್‌ಗೆ ನೀಡಿದ ಮಹತ್ವದ ಕೊಡುಗೆಗಳ ಹೊರತಾಗಿಯೂ ಇವರ ಬ್ರಿಟಿಷ್‌ ಪೌರತ್ವದಿಂದಾಗಿ ಭಾರತದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಇವರು ಹೊಂದಿಲ್ಲ.

ಜಾಕ್ವೆಲಿನ್‌ ಫೆರ್ನಾಂಡಿಸ್‌

ಭಾರತದ ಚಿತ್ರನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಕೂಡ ಭಾರತದಲ್ಲಿ ಮತದಾನದ ಹಕ್ಕನ್ನು ಹೊಂದಿಲ್ಲ. ಶ್ರೀಲಂಕಾ ಮಿಸ್‌ ಯೂನಿವರ್ಸ್‌ ಗೆದ್ದಿರುವ ಇವರು ಭಾರತದ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದರು. ಜಾಕ್ವಲಿನ್‌ ಫೆರ್ನಾಂಡಿಸ್‌ ಅವರು ಶ್ರೀಲಂಕಾದ ಪೌರತ್ವ ಹೊಂದಿರುವುದರಿಂದ ಭಾರತದಲ್ಲಿ ಮತದಾನ ಮಾಡುವ ಹಕ್ಕು ಹೊಂದಿಲ್ಲ.

ಇಮ್ರಾನ್‌ ಖಾನ್‌

ಬಾಲಿವುಡ್‌ನ ಜನಪ್ರಿಯ ನಟ ಇಮ್ರಾನ್‌ ಖಾನ್‌ ಹುಟ್ಟಿರುವುದು ಅಮೆರಿಕದಲ್ಲಿ. ಸಾಫ್ಟ್‌ವೇರ್‌ ಎಂಜಿನಿಯರ್‌ ತಂದೆ ಮತ್ತು ಸೈಕಾಲಜಿಸ್ಟ್‌ ತಾಯಿ ಮಗನಾದ ಇವರು ತಮ್ಮ ಹೆತ್ತವರು ಡಿವೋರ್ಸ್‌ ನೀಡಿದ ಬಳಿಕ ಭಾರತಕ್ಕೆ ಆಗಮಿಸಿದರು. ತನ್ನ ಮಾವ ಅಮಿರ್‌ ಖಾನ್‌ ನೆರವಿನಿಂದ ಬಾಲಿವುಡ್‌ನಲ್ಲಿ ಮಿಂಚಿದರು. ಅಮೆರಿಕ ಪೌರತ್ವದಿಂದಾಗಿ ಭಾರತದಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿಲ್ಲ.

ಸನ್ನಿ ಲಿಯೋನ್‌

ಭಾರತದಲ್ಲಿ ಸಾಕಷ್ಟು ಜನರಿಗೆ ಸನ್ನಿ ಲಿಯೋನ್‌ ಕನಸಿನ ಕನ್ಯೆ. ಮನರಂಜನಾ ಕ್ಷೇತ್ರದಲ್ಲಿ ಸಖತ್‌ ಫೇಮಸ್‌ ಆಗಿರುವ ಈಕೆ ಕೆನಡಿಯನ್‌-ಅಮೆರಿಕನ್‌ ಪೌರತ್ವ ಹೊಂದಿದ್ದಾರೆ. ಹೀಗಾಗಿ ಭಾರತದ ಚುನಾವಣೆಯಲ್ಲಿ ಇವರು ಸ್ಪರ್ಧಿಸುವಂತೆ ಇಲ್ಲ. ಕೆನಡದಲ್ಲಿ ಜನಿಸಿರುವ ಇವರು ಅಮೆರಿಕದ ಪೌರತ್ವ ಹೊಂದಿದ್ದಾರೆ.

ನೋರಾ ಫಾತೆಹಿ

ಬಾಲಿವುಡ್‌ನಲ್ಲಿ ತಮ್ಮ ಡ್ಯಾನ್ಸ್‌ ಮೂಲಕವೇ ಜನಪ್ರಿಯರು. ಕೆನಡಿಯನ್‌-ಮೊರಕನ್‌ ಹಿನ್ನಲೆ ಹೊಂದಿದ್ದಾರೆ. ಇವರು ಕೆನಡಾ ಪೌರತ್ವ ಹೊಂದಿದ್ದಾರೆ. ಹೀಗಾಗಿ ಭಾರತದಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿಲ್ಲ.

ನರ್ಗಿಸ್‌ ಫಖ್ರಿ

ಅಮೆರಿಕ ನಟಿ ಮತ್ತು ಮಾಡೆಲ್‌ ನರ್ಗಿಸ್‌ ಫಖ್ರಿ ಅವರು ಬಾಲಿವುಡ್‌ನಲ್ಲೂ ಫೇಮಸ್‌. ರಾಕ್‌ಸ್ಟಾರ್‌ ಮತ್ತು ಮದ್ರಾಸ್‌ ಕೆಫೆ ಸಿನಿಮಾದಲ್ಲಿ ನಟಿಸಿದ್ದಾರೆ. ಅಮೆರಿಕ ಪೌರತ್ವದಿಂದಾಗಿ ಭಾರತದಲ್ಲಿ ಮತಚಲಾಯಿಸುವ ಹಕ್ಕನ್ನು ಇವರು ಹೊಂದಿಲ್ಲ.

ಇನ್ನುಳಿದಂತೆ ಫ್ರೆಂಚ್‌ ಪೌರತ್ವ ಹೊಂದಿರುವ ಕಲ್ಕಿ ಕೊಚ್ಚಿಲಿನ್‌ ಅವರಿಗೆ ಭಾರತದಲ್ಲಿ ಮತದಾನದ ಹಕ್ಕಿಲ್ಲ. ಅಮೆರಿಕದ ಪೌರತ್ವ ಹೊಂದಿರುವ ದೀಪ್ತಿ ನಾವಲ್‌ ಕೂಡ ಭಾರತದಲ್ಲಿ ಓಟ್‌ ಮಾಡುವಂತೆ ಇಲ್ಲ. ಹೀಗೆ ಭಾರತದಲ್ಲಿ ಜನಪ್ರಿಯತೆ ಪಡೆದಿರುವ ಹಲವು ಸೆಲೆಬ್ರಿಟಿಗಳು ಭಾರತದ ಚುನಾವಣಾ ಹಬ್ಬದಲ್ಲಿ ತಮ್ಮ ಅಮೂಲ್ಯ ಮತ ಚಲಾಯಿಸುವ ಹಕ್ಕನ್ನು ಹೊಂದಿಲ್ಲ.

IPL_Entry_Point