BIFF 2023: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಸಿಎಂ ಚಾಲನೆ; ಸಿಲಿಕಾನ್ ಸಿಟಿಯಲ್ಲೀಗ ಸಿನಿಮಾ ರಂಗು..
ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಬಳಿ ಕಲರ್‌ಫುಲ್ ದೀಪಾಲಂಕಾರದ ನಡುವೆ, ಗಣ್ಯರ ಸಮ್ಮುಖದಲ್ಲಿ 14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ದೊರಕಿದೆ.
BIFF 2023: 14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ (Bengaluru International Film Festival) ಗುರುವಾರ ಸಂಜೆ ಅದ್ದೂರಿ ಚಾಲನೆ ದೊರೆತಿದೆ. ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಬಳಿ ಕಲರ್‌ಫುಲ್ ದೀಪಾಲಂಕಾರದ ನಡುವೆ, ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಆರ್. ಅಶೋಕ್, ಕಥೆಗಾರ ವಿಜಯೇಂದ್ರ ಪ್ರಸಾದ್, ಬಾಲಿವುಡ್‌ನ ಖ್ಯಾತ ನಿರ್ದೇಶಕ ಗೋವಿಂದ ನಿಹ್ಲಾನಿ, ಅಭಿಷೇಕ್ ಅಂಬರೀಷ್, ನಟಿ ಸಪ್ತಮಿ ಗೌಡ ಸೇರಿ ಹಲವರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಸಿನಿಮೋತ್ಸವಕ್ಕೆ ಚಾಲನೆ ನೀಡಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಸಿನಿಮಾ ಕ್ಷೇತ್ರಕ್ಕೆ ಬಹಳ ದೊಡ್ಡ ಇತಿಹಾಸ ಇದೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಅದ್ಬುತವಾದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಡಿಜಿಟಲೀಕರಣ ಆದ ಮೇಲೆ ಬಹಳಷ್ಟು ಬದಲಾವಣೆ ಆಗಿದೆ. ನಾವು ನೋಡುವುದಕ್ಕೂ, ನಮ್ಮ ಮಕ್ಕಳು ಸಿನಿಮಾ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಬದುಕಿನಲ್ಲಿ ಎಲ್ಲವೂ ವೇಗವಾಗಿ ಬೆಳೆಯುತ್ತಿರುವುದರಿಂದ ಸಿನಿಮಾ ಕ್ಷೇತ್ರವೂ ಅದೇ ಹಾದಿಯಲ್ಲಿ ವೇಗವಾಗಿ ಬೆಳವಣಿಗೆಯತ್ತ ಸಾಗುತ್ತಿದೆ ಎಂದರು.
ಕಾಂತಾರ ನೆನಪಿಸಿಕೊಂಡ ಸಿಎಂ
ಕಾಂತಾರ ಚಿತ್ರದ ಬಗ್ಗೆ ಯಾರು ನಿರೀಕ್ಷೆ ಮಾಡಿರಲಿಲ್ಲ. ಕಾಂತಾರ ಸ್ಥಳೀಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದ ಕನ್ನಡದ ಸಿನಿಮಾ. ಆ ತಂಡಕ್ಕೆ ಅಭಿನಂದನೆಗಳು. ಆರ್‌ಆರ್‌ಆರ್ ಸಿನಿಮಾ ಆಸ್ಕರ್ ಪಡೆದಿದ್ದು ನಾವೆಲ್ಲ ಹೆಮ್ಮೆ ಪಡಬೇಕು. ಇದರಿಂದ ಆಸ್ಕರ್ ನಮಗೆ ದೂರ ಇಲ್ಲ. ಪ್ರತಿವರ್ಷ ಪಡೆಯಬಹುದು ಅಂತ ತೋರಿಸಿ ಕೊಟ್ಟಿದೆ. ಸಿನಿಮಾ ಇಲ್ಲದೆ ನಮ್ಮ ಬದುಕಿಲ್ಲ. ಹೀಗಾಗಿ ಸಿನಿಮಾಗಾಗಿ ನಾನು ಏನೆಲ್ಲ ಬೇಕು, ಅದನ್ನು ಮಾಡಿದ್ದೇನೆ. ಸಿನಿಮಾ ಸಬ್ಸಿಡಿ ಹೆಚ್ಚಿಗೆ ಮಾಡಿದ್ದೇನೆ. ಸಬ್ಸಿಡಿ ಪಡೆಯುವ ಚಿತ್ರಗಳ ಸಂಖ್ಯೆ ಹೆಚ್ಚಳ ಮಾಡಿದ್ದೇನೆ. ಫಿಲ್ಮ್ ಸಿಟಿ ಕೂಡ ಆಗಲಿದೆ. ಅಲ್ಲಿ ಹಾಲಿವುಡ್ ಚಿತ್ರಗಳೂ ಶೂಟಿಂಗ್ ಆಗಬೇಕು ಎಂದರು.
ಮಾ. 27ಕ್ಕೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು
ಅದೇ ರೀತಿ ರೇಸ್‌ಕೋರ್ಸ್ ರಸ್ತೆಗೆ ಅಂಬಿ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. "ನಾವು ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದೇವೆ. ಅವರ ಹೆಸರಿನಲ್ಲಿ ಸ್ಮಾರಕ ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಇದೇ ವರ್ಷ ನಟ ದಿ. ಪುನೀತ್ ರಾಜಕುಮಾರ್ ಅವರ ಸ್ಮಾರಕ ಅಭಿವೃದ್ಧಿ ಮಾಡುತ್ತೇವೆ. ಇದರ ಜೊತೆಗೆ ಅಂಬರೀಶ್ ಅವರ ಸ್ಮಾರಕ ಸಿದ್ದವಾಗುತ್ತಿದೆ. ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರಿಡಲು ತೀರ್ಮಾನಿಸಲಾಗಿದೆ. ಮಾರ್ಚ್ 27 ರಂದು ಸ್ಮಾರಕ ಹಾಗೂ ಹೆಸರಿಡುವ ಕಾರ್ಯಕ್ರಮ ಮಾಡುತ್ತೇವೆ" ಎಂದರು.
300 ಸಿನಿಮಾ ಪ್ರದರ್ಶನ..
ವಾರ್ತಾ ಮತ್ತು ಸಾವರ್ಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿ ಸಹಯೋಗದಲ್ಲಿ ಒಟ್ಟು ಎಂಟು ದಿನಗಳ ಕಾಲ ಅಂದರೆ ಮಾ. 23ರಿಂದ 30ರ ತನಕ ಈ ಸಿನಿಮೋತ್ಸವ ನಡೆಯಲಿದೆ. ಈ ಸಲದ ಸಿನಿಮೋತ್ಸವದಲ್ಲಿ ಕನ್ನಡ ಮತ್ತು ದಕ್ಷಿಣ ಭಾರತದ ಸಿನಿಮಾಗಳು, ವಿದೇಶಿ ಭಾಷೆ, ಏಷಿಯನ್ ಭಾಷೆಯ ಸರಿಸುಮಾರು 200ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಇರಾನ್, ಕೊರಿಯನ್, ರಷ್ಯನ್, ಲಂಕನ್ ಸಿನಿಮಾಗಳನ್ನೂ ಸಿನಿಮೋತ್ಸವದಲ್ಲಿ ವೀಕ್ಷಿಸಬಹುದು.
ಎಲ್ಲೆಲ್ಲಿ ಸಿನಿಮಾ ಪ್ರದರ್ಶನ
ಬೆಂಗಳೂರಿನ ರಾಜಾಜಿನಗರದ ಒರಾಯನ್ ಮಾಲ್‌ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಚಾಮರಾಜಪೇಟೆಯಲ್ಲಿನ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರ ಫಿಲಂ ಸೊಸೈಟಿಯಲ್ಲಿಯೂ ಚಿತ್ರಗಳು ಪ್ರದರ್ಶನ ಕಾಣಲಿವೆ.