ಕನ್ನಡ ಸುದ್ದಿ  /  ಮನರಂಜನೆ  /  'ಬನ್ ಟೀ' ಚಿತ್ರದಲ್ಲಿ ನಟಿಸಿರುವ ಮಂಗಳೂರು ಬಾಲನಟ ತನ್ಮಯ್‌ನ ಸ್ಲಂ ಅನುಭವವೇ ರೋಚಕ

'ಬನ್ ಟೀ' ಚಿತ್ರದಲ್ಲಿ ನಟಿಸಿರುವ ಮಂಗಳೂರು ಬಾಲನಟ ತನ್ಮಯ್‌ನ ಸ್ಲಂ ಅನುಭವವೇ ರೋಚಕ

ಕುತೂಹಲಕಾರಿಯಾಗಿ ನಾನಾ ಘಟನೆಗಳೊಂದಿಗೆ ಸಾಗುವ ಚಿತ್ರದಲ್ಲಿ ನೈತಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯಬೇಕು ಎಂಬ ಸೂತ್ರದಡಿ ಶಿಕ್ಷಣ ಸಂಸ್ಥೆ, ಮಕ್ಕಳು, ಹೆತ್ತವರು ನಿಗಾ ಇಡುತ್ತಿರುವ ಬಗ್ಗೆ, ಮಕ್ಕಳಿಗೆ ಕ್ರಿಯೇಟಿವ್ ಎಜುಕೇಶನ್ ನೀಡಬೇಕು ಎಂಬ ಅಂಶಗಳ ಜತೆಗೆ ಭಾವನಾತ್ಮಕವಾಗಿ ಚಿತ್ರೀಕರಿಸಲಾಗಿದೆ.

ಬನ್‌ ಟೀ ಬಾಲ ಕಲಾವಿದ ತನ್ಮಯ್‌
ಬನ್‌ ಟೀ ಬಾಲ ಕಲಾವಿದ ತನ್ಮಯ್‌

ಮಂಗಳೂರು: ಟ್ರೇಲರ್‌ ಮೂಲಕ ಸದ್ದು ಮಾಡುತ್ತಿರುವ ನಾಗತಿಹಳ್ಳಿ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿರುವ ಬಹುನಿರೀಕ್ಷಿತ 'ಬನ್ ಟೀ' ಸಿನಿಮಾ ಕಥೆಯ ಮೂಲಕವೇ ಕುತೂಹಲ ಮೂಡಿಸುತ್ತಿದೆ. ಚಿತ್ರದಲ್ಲಿ ಕನಸು ಕಂಗಳ ಪುಟ್ಟ ಬಾಲಕನಾಗಿ ಅಭಿನಯಿಸಿರುವ ಮಂಗಳೂರಿನ ಹುಡುಗ ತನ್ಮಯ್, ಶೂಟಿಂಗ್ ಸಂದರ್ಭ ಒಂದು ತಿಂಗಳು ಬೆಂಗಳೂರಿನ ಸ್ಲಂನಲ್ಲಿ ಅಕ್ಷರಶಃ ಪಾತ್ರದ ಪರಕಾಯ ಪ್ರವೇಶ ಮಾಡಿದ್ದ.

ಟ್ರೆಂಡಿಂಗ್​ ಸುದ್ದಿ

ಮಂಗಳೂರಿನ ಬಿಜೈನಲ್ಲಿರುವ ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಹಾಗೂ ಸುಚಿತ್ರಾ ಶೆಟ್ಟಿ ದಂಪತಿಯ ಏಕೈಕ ಪುತ್ರ ತನ್ಮಯ್ ಆರ್. ಶೆಟ್ಟಿ ಶಾಲೆಗೆ ಒಂದು ತಿಂಗಳು ರಜಾ ಹಾಕಿ ಬೆಂಗಳೂರಿಗೆ ತೆರಳಿ, ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ. ಈ ಸಿನಿಮಾ ಸ್ಲಂನಲ್ಲಿ ವಾಸಿಸುವ ಹುಡುಗರ ಕನಸಿನ ಕುರಿತಾಗಿರುವ ಕಾರಣ, ಬೆಂಗಳೂರಿನ ಸ್ಲಂ ಒಂದರಲ್ಲೇ ಶೂಟಿಂಗ್ ನಡೆದಿತ್ತು. ಸಿನಿಮಾದ ಕೇಂದ್ರ ಬಿಂದುಗಳೇ ತನ್ಮಯ್ ಮತ್ತು ಮೌರ್ಯ ಎಂಬ ಬಾಲಕರು. ರವಿಕಿರಣ್ ಅವರ ಚಿತ್ರಕಥೆ-ಸಂಭಾಷಣೆ ಹೊಂದಿರುವ, ರಾಜರಾವ್ ಅಂಚಲ್‌ಕರ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ, ಪ್ರದ್ಯೋತ್ತನ್ ಅವರ ಹಿನ್ನೆಲೆ ಸಂಗೀತವಿರುವ ಈ ಚಿತ್ರದಲ್ಲಿ ಬಾಲ ಕಲಾವಿದರಾಗಿರುವ ಮೌರ್ಯ ಮತ್ತು ಮಂಗಳೂರಿನ ತನ್ಮಯ್ ಆರ್. ಶೆಟ್ಟಿ ಅವರದ್ದೇ ಲೀಡ್ ರೋಲ್‌.

ಮಕ್ಕಳ ಕಥೆ ಇರುವ ಸಿನಿಮಾ

ಈ ಇಬ್ಬರ ಮಕ್ಕಳ ಮೇಲೆ ಇಡೀ ಚಿತ್ರದ ಕಥೆ ಸಾಗುತ್ತದೆ. ಉಳಿದಂತೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಉಮೇಶ್ ಸಕ್ಕರೆ ನಾಡ್, ಶ್ರೀದೇವಿ, ನಿಶಾ ಯಶ್‌ರಾಮ್, ಗುಂಡಣ್ಣ ಚಿಕ್ಕಮಗಳೂರು ಮೊದಲಾದವರು ನಟಿಸಿದ್ದಾರೆ. ತನ್ಮಯ್‌ನದ್ದು ಹೀಗೆ ಬಂದು ಹಾಗೆ ಹೋಗುವ ಪಾತ್ರವಲ್ಲ, ಪೂರ್ತಿ ಒಂದು ತಿಂಗಳು ಶೂಟಿಂಗ್‌ನಲ್ಲಿ ಪಾಲ್ಗೊಂಡದ್ದು, ಬೆಳಗ್ಗೆ ಬೇಗನೆ ಎದ್ದು ಶೂಟಿಂಗ್ ಗೆ ಹೋಗುವುದು, ರಾತ್ರಿವರೆಗೆ ಶೂಟಿಂಗ್ ಮುಗಿಸಿ ರೂಮ್‌ಗೆ ಹೋಗುವುದು. ಹೀಗೆ ಸುಮಾರು 30 ದಿನಗಳ ಕಾಲ ತನ್ಮಯ್‌ಗೆ ಬೆಂಗಳೂರಿನ ಸ್ಲಂ ಬದುಕಿನ ದರ್ಶನವಾಗಿತ್ತು. ''ಸಾಮಾನ್ಯವಾಗಿ ಮಕ್ಕಳಿಗೆ ಹೊರ ಜಗತ್ತು ಹೇಗಿದೆ ಎಂದು ಗೊತ್ತಿರುವುದಿಲ್ಲ. ಆದರೆ ತನ್ಮಯ್‌ಗೆ ಶೂಟಿಂಗ್, ಅಭಿನಯ ಪಕ್ವತೆಯನ್ನು ಕಲಿಸಿದ್ದಷ್ಟೇ ಅಲ್ಲ, ಮಕ್ಕಳ ಬದುಕು ಹೇಗಿರುತ್ತದೆ ಎಂಬ ದರ್ಶನ ಮಾಡಿಸಿತು'' ಎನ್ನುತ್ತಾರೆ ತನ್ಮಯ್ ತಂದೆ ರವೀಂದ್ರ ಶೆಟ್ಟಿ.

ಕುತೂಹಲಕಾರಿಯಾಗಿ ನಾನಾ ಘಟನೆಗಳೊಂದಿಗೆ ಸಾಗುವ ಚಿತ್ರದಲ್ಲಿ ನೈತಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯಬೇಕು ಎಂಬ ಸೂತ್ರದಡಿ ಶಿಕ್ಷಣ ಸಂಸ್ಥೆ, ಮಕ್ಕಳು, ಹೆತ್ತವರು ನಿಗಾ ಇಡುತ್ತಿರುವ ಬಗ್ಗೆ, ಮಕ್ಕಳಿಗೆ ಕ್ರಿಯೇಟಿವ್ ಎಜುಕೇಶನ್ ನೀಡಬೇಕು ಎಂಬ ಅಂಶಗಳ ಜತೆಗೆ ಭಾವನಾತ್ಮಕವಾಗಿ ಚಿತ್ರೀಕರಿಸಲಾಗಿದೆ. ಬನ್-ಟೀ ಚಿತ್ರೀಕರಣವೂ ವಿಭಿನ್ನ ರೀತಿಯಲ್ಲಿ ನಡೆಸಲಾಗಿದ್ದು, ಎಲ್ಲೂ ಸೆಟ್‌ಗಳನ್ನು ಬಳಸದೇ ಬೆಂಗಳೂರಿನ ರಿಯಲ್ ಲೋಕೇಶನ್‌ಗಳಾದ ಸ್ಲಮ್, ಮಾರ್ಕೆಟ್ ಮುಂತಾದ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ಸಿನಿಮಾ ರಿಲೀಸ್ ದಿನ ತನ್ಮಯ್‌ ಪರೀಕ್ಷೆ

ಡಾ. ನಾಗತಿಹಳ್ಳಿ ಚಂದ್ರಶೇಖರ್ ಪ್ರಸ್ತುತ ಪಡಿಸುವ ರಾಧಾಕೃಷ್ಣ ಪಿಕ್ಚರ್ಸ್‌ನ ಕೇಶವ್ ಆರ್. (ದೇವಸಂದ್ರ) ನಿರ್ಮಾಣದ ಉದಯ್ ಕುಮಾರ್ ನಿರ್ದೇಶನದ 'ಬನ್-ಟೀ' ಸಿನಿಮಾ ಸೆಪ್ಟೆಂಬರ್ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತಿದ್ದು ಮಂಗಳೂರಿನಲ್ಲಿ ಪಿವಿಆರ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲಿದೆ. ಆದರೆ ಆ ದಿನವೇ ತನ್ಮಯ್‌ಗೆ ಪರೀಕ್ಷೆ. ಇದೆ. ಒಂದೆಡೆ ಸಿನಿಮಾ ಹೇಗೆ ಬರುತ್ತದೆ ಎಂಬ ಸಹಜ ಕುತೂಹಲ. ಜತೆಗೆ ಪರೀಕ್ಷೆ ಬರೆಯುವ ಜವಾಬ್ದಾರಿ.

ನಾಟಕಕ್ಕೂ ಸೈ, ಯಕ್ಷಗಾನ ವೇಷವೂ ಹಾಕ್ತಾನೆ

ಮಂಗಳೂರಿನ ಬಿಜೈನ ಲೂರ್ಡ್ಸ್ ಶಾಲೆಯಲ್ಲಿ ತನ್ಮಯ್ ಶೆಟ್ಟಿ ಕಲಿಯುತ್ತಿದ್ದಾನೆ. ಈ ಬಾಲಕನಿಗೆ ಬನ್–ಟೀ ಮೊದಲನೆಯ ಸಿನಿಮಾವೇನಲ್ಲ. ಬಾಲ್ಯದಿಂದಲೇ ಯಕ್ಷಗಾನ, ನಟನೆಯತ್ತ ಆಸಕ್ತಿ ಹೊಂದಿದ್ದ ತನ್ಮಯ್‌ಗೆ ಪೋಷಕರು ನೆರವಾದರು. ಈ ಸಂದರ್ಭ ತುಳುವಿನ ಜನಪ್ರಿಯ ನಾಟಕ ದೇವದಾಸ್ ಕಾಪಿಕಾಡ್ ಅವರ 'ಪುದರ್ ದೀತಿಜಿ' ಮರು ಪ್ರದರ್ಶನದಲ್ಲಿ ಮಗುವಿನ ಪಾತ್ರವನ್ನು ಮಾಡಿ ಗಮನ ಸೆಳೆದಿದ್ದ. ಟೌನ್ ಹಾಲ್‌ನಲ್ಲಿ ಏರ್ಪಡಿಸಿದ್ದ ಟಿಕೆಟ್ ಶೋ ಅದಾಗಿತ್ತು. ಯಕ್ಷಗಾನ, ಚೆಸ್ ಆಡುವುದು, ಸ್ವಿಮ್ಮಿಂಗ್‌ನಲ್ಲಿಯೂ ತನ್ಮಯ್ ಎತ್ತಿದ ಕೈ. ನಾಟಕದಲ್ಲಿ ಅಭಿನಯಿಸಿದ್ದ ತನ್ಮಯ್ ಸಹಜವಾಗಿಯೇ ತುಳು ಚಿತ್ರರಂಗದವರ ಕಣ್ಣಿಗೆ ಬಿದ್ದದ್ದರಲ್ಲಿ ಆಶ್ಚರ್ಯವೇನಿಲ್ಲ.

ಹೀಗಾಗಿ 'ಮಗನೇ ಮಹಿಷ', 'ಅಬತರ' ಎಂಬ ತುಳು ಚಿತ್ರಗಳಲ್ಲಿ ತನ್ಮಯ್‌ಗೆ ಅವಕಾಶ ದೊರಕಿತು. ಅದಾದ ಬಳಿಕ 'ಅಪರಾಧಿ ನಾನಲ್ಲ' ಎಂಬ ಕನ್ನಡ ಚಿತ್ರದಲ್ಲೂ ಅವಕಾಶ ದೊರಕಿತು. ಇದು ಇನ್ನೂ ಬಿಡುಗಡೆ ಆಗಬೇಕಷ್ಟೇ. 'ಕರಿಯಜ್ಜ ಕರಿಹೈದ', 'ಸ್ಕೂಲ್ ಲೀಡರ್' ಕನ್ನಡ ಚಿತ್ರಗಳಲ್ಲಿ ತನ್ಮಯ್ ಪಾತ್ರ ಮಾಡಿದ್ದಾನೆ. ನೈಜ ಘಟನೆ ಆಧರಿಸಿ ನಮ್ಮ ಶಿಕ್ಷಣ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಚಿತ್ರವಾಗಿರುವ 'ಬನ್-ಟೀ' ಸಾಕಷ್ಟು ಕುತೂಹಲ ಮೂಡಿಸಿದೆ. ಕನಸು ಕಣ್ಣಿನ ತನ್ಮಯ್ ಪಾತ್ರವೂ ಅಷ್ಟೇ ಆಸಕ್ತಿದಾಯಕವೂ ಹೌದು.

ಬರಹ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point