Pavan Wadeyar: ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನು ಹಾಗೇ ಇದೆ; ಬಸವರಾಜ ಬೊಮ್ಮಾಯಿ ಬಗ್ಗೆ ಪವನ್ ಒಡೆಯರ್ ಬೇಸರದ ಮಾತು
ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಚಿತ್ರತಂಡ ರಾಜ್ಯಪಾಲರು ಸೇರಿದಂತೆ ಪ್ರಮುಖ ರಾಜಕೀಯ ಗಣ್ಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ತಮ್ಮ ಸಿನಿಮಾ ನೋಡುವಂತೆ ಆಹ್ವಾನ ನೀಡಿದ್ದರು. ಇದೇ ವಿಚಾರವನ್ನು ಪವನ್ ಒಡೆಯರ್ ಇದೀಗ ನೆನಪಿಸಿಕೊಂಡಿದ್ದಾರೆ.
ರಾಜಕೀಯ ನಾಯಕರು ಬಹಳ ದಿನಗಳಿಂದ ಕಾಯುತ್ತಿದ್ದ ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಕೂಡಾ ಪ್ರಕಟವಾಗಿದೆ. ಚುನಾವಣೆ ಸಮೀಕ್ಷೆಗಳು ಸುಳ್ಳಾಗಿದ್ದು ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಗೆಲುವು ಸಾಧಿಸಿದೆ. ಇದೀಗ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಈ ಬಾರಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕೆಲವರು ಸಿದ್ದು ಪರ ನಿಂತರೆ ಡಿಕೆ ಶಿವಕುಮಾರ್ ಅವರಿಗೂ ಅವಕಾಶ ನೀಡಿ ಎಂದು ಅನೇಕರು ಮನವಿ ಮಾಡುತ್ತಿದ್ದಾರೆ. ಇದರ ನಡುವೆ ಸ್ಯಾಂಡಲ್‌ವುಡ್ ನಿರ್ದೇಶಕ ಪವನ್ ಒಡೆಯರ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ವಿರುದ್ಧ ಹರಿಹಾಯ್ದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಇದೇ ವಿಚಾರವಾಗಿ ಅವರು ಎರಡು ಟ್ವೀಟ್ ಮಾಡಿದ್ದಾರೆ. ಪವನ್ ಒಡೆಯರ್ ಅವರ ಟ್ವೀಟ್‌ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಕಳೆದ ವರ್ಷ ಡೊಳ್ಳು ಚಿತ್ರಕ್ಕೆ 68ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿತ್ತು. ಈ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗ್ಡೆ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಹಾಗೂ ಶರಣ್ ಸುರೇಶ್ ಹಾಗೂ ಇನ್ನಿತರರು ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಚಿತ್ರತಂಡ ರಾಜ್ಯಪಾಲರು ಸೇರಿದಂತೆ ಪ್ರಮುಖ ರಾಜಕೀಯ ಗಣ್ಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ತಮ್ಮ ಸಿನಿಮಾ ನೋಡುವಂತೆ ಆಹ್ವಾನ ನೀಡಿದ್ದರು. ಇದೇ ವಿಚಾರವನ್ನು ಪವನ್ ಒಡೆಯರ್ ಇದೀಗ ನೆನಪಿಸಿಕೊಂಡಿದ್ದಾರೆ. "ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳು ಕುಣಿತದ ಕುರಿತು ನಿರ್ಮಿಸಿದ್ದ ಡೊಳ್ಳು ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ, ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೋರಿದ್ದೆವು. ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ. ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ, 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ. ಕನ್ನಡಿಗರು ಮುಠ್ಠಾಳರಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಸಿದ್ದರಾಮಯ್ಯ ಸರ್‌ಗೆ ಒಂದೇ ಒಂದು ಬಾರಿ ಕರೆ ಮಾಡಿದ್ದೆವು. "ಹೌದಾ, ಡೊಳ್ಳು ಕುಣಿತ ನಂಗೆ ಭಾರಿ ಇಷ್ಟ ರೀ" ಎಂದು ಕರೆಕೊಟ್ಟ ಸಂಜೆಯೇ ಬಂದು ಚಿತ್ರ ವೀಕ್ಷಿಸಿ, ಹಾರೈಸಿ, ಹಲವಾರು ಕಡೆ ಹೆಮ್ಮೆಯಿಂದ ಮಾತನಾಡಿದ್ದರು. ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಜಾನಪದ ಕಲೆ. ಇವೆಲ್ಲವನ್ನೂ ಜನ ಮಾರಿಕೊಳ್ಳಲ್ಲ. #Statesman #Siddaramaiah ಎಂದು ಬರೆದುಕೊಂಡಿದ್ದಾರೆ. ಪವನ್ ಒಡೆಯರ್ ಟ್ವೀಟ್‌ಗೆ ನೆಟಿಜನ್ಸ್ ಪರ ವಿರೋಧ ಕಾಮೆಂಟ್ ಮಾಡುತ್ತಿದ್ದಾರೆ.