ಕನ್ನಡ ಸುದ್ದಿ  /  Entertainment  /  Sandalwood News Nenapirali Prem Explained Why He Lost Opportunity To Act As Dr Vishnuvardhan Son Produced By K Manju Rsm

Nenapirali Prem: ಡಾ ವಿಷ್ಣುವರ್ಧನ್‌ ಅಭಿಮಾನಿಯಾದ್ರೂ ಅವರ ಮಗನ ಪಾತ್ರದಲ್ಲಿ ನಟಿಸುವ ಅವಕಾಶ ಬಿಟ್ಟ ಕಾರಣ ವಿವರಿಸಿದ ನೆನಪಿರಲಿ ಪ್ರೇಮ್‌

ನಾನು ಮೊದಲೇ ವಿಷ್ಣು ಸರ್‌ ಅವರ ದೊಡ್ಡ ಅಭಿಮಾನಿ. ಕೆ. ಮಂಜು ಅವರ ಮಾತು ಕೇಳಿ ನನಗೆ ಆ ಖುಷಿಯನ್ನು ಯಾವ ರೀತಿ ಸೆಲಬ್ರೇಟ್‌ ಮಾಡಬೇಕೆಂದು ತಿಳಿಯಲಿಲ್ಲ. ನನ್ನ ಸ್ನೇಹಿತರೆಲ್ಲರ ಬಳಿ ಈ ಖುಷಿಯನ್ನು ಹಂಚಿಕೊಂಡೆ. ಆದರೆ ಅದೇ ಸಮಯದಲ್ಲಿ ನನಗೆ 'ಪ್ರಾಣ' ಚಿತ್ರದಲ್ಲಿ ಹೀರೋ ಆಗಿ ನಟಿಸುವ ಅವಕಾಶ ಬಂತು.

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಪ್ರೇಮ್‌
ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಪ್ರೇಮ್‌

ಪ್ರೇಮ್‌, ಕನ್ನಡ ಚಿತ್ರರಂಗದ ಸ್ಫುರದ್ರೂಪಿ ನಟ. ಸಿನಿಮಾಗೆ ಬರುವ ಮುನ್ನ ಜೀವನಕ್ಕಾಗಿ ನೇಯ್ಗೆ ಕೆಲಸ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೆಲಸ ಮಾಡಿದ್ದ ಪ್ರೇಮ್‌ ಮೊದಲ ಬಾರಿಗೆ ಧಾರಾವಾಹಿಯೊಂದರ ಮೂಲಕ ಬಣ್ಣದ ಬದುಕು ಆರಂಭಿಸಿದರು. 'ಪ್ರಾಣ' ಚಿತ್ರದ ಮೂಲಕ ಸಿನಿ ಕರಿಯರ್‌ ಆರಂಭಿಸಿದ ಪ್ರೇಮ್‌ ಇದುವರೆಗೂ 25 ಸಿನಿಮಾಗಳಲ್ಲಿ ನಟಿಸಿದ್ದು 26ನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

ರಮೇಶ್‌ ಅರವಿಂದ್‌ ನಡೆಸಿಕೊಡುತ್ತಿರುವ ಜೀ ಕನ್ನಡದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ನಟ ಪ್ರೇಮ್‌ ಭಾಗವಹಿಸಿ ತಮ್ಮ ಬಾಲ್ಯ, ವೈಯಕ್ತಿಕ ಜೀವನ, ಸಿನಿಮಾಗಳು, ಸ್ನೇಹಿತರು ಸೇರಿದಂತೆ ತಮ್ಮ ಜೀವನದ ನೋವು ಹಾಗೂ ನಲಿವಿನ ದಿನಗಳನ್ನು ಹಂಚಿಕೊಂಡರು. ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ 14ನೇ ಎಪಿಸೋಡ್‌ನಲ್ಲಿ ಪೇಮ್‌ ಅತಿಥಿಯಾಗಿ ಭಾಗವಹಿಸಿದ್ದರು. ತಾವು ವಿಷ್ಣುವರ್ಧನ್‌ ಅವರ ದೊಡ್ಡ ಅಭಿಮಾನಿಯಾದರೂ ಅವರ ಮಗನ ಪಾತ್ರದಲ್ಲಿ ನಟಿಸುವ ಅವಕಾಶವನ್ನು ಬಿಟ್ಟಿದ್ದ ಆಸಕ್ತಿಕರ ವಿಚಾರವೊಂದನ್ನು ಪ್ರೇಮ್‌ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಡಾ. ವಿಷ್ಣುವರ್ಧನ್‌ ಪುತ್ರನ ಪಾತ್ರಕ್ಕೆ ಅವಕಾಶ ನೀಡಿದ್ದ ನಿರ್ಮಾಪಕ ಕೆ. ಮಂಜು

ನಾನು 'ಪ್ರಾಣ' ಚಿತ್ರದ ಮೂಲಕ ನಾಯಕನಾಗಿ ಗುರುತಿಕೊಂಡರೂ ನನಗೆ ಸಿನಿಮಾಗಳಲ್ಲಿ ಮೊದಲು ಅವಕಾಶ ನೀಡಿದ್ದು ನಿರ್ಮಾಪಕ ಕೆ. ಮಂಜು. ಈ ವಿಚಾರ ಬಹಳ ಜನರಿಗೆ ಗೊತ್ತಿಲ್ಲ. ಸಿನಿಮಾ ಅವಕಾಶಗಳಿಗಾಗಿ ಒಮ್ಮೆ ನಿರ್ದೇಶಕರೊಬ್ಬರನ್ನು ಭೇಟಿ ಮಾಡಲು ಬೆಂಗಳೂರಿನ ಹೈಲ್ಯಾಂಡ್ಸ್‌ ಹೋಟೆಲ್‌ ಬಳಿ ಹೋಗಿದ್ದೆ. ಅಲ್ಲಿ ಕೆ. ಮಂಜು ನಿರ್ಮಾಣದ ಸಿನಿಮಾವೊಂದರ ಶೂಟಿಂಗ್‌ ನಡೆಯುತ್ತಿತ್ತು. ಶೂಟಿಂಗ್‌ ನೋಡಲು ಅಲ್ಲೇ ನಿಂತೆ. ನನ್ನನ್ನು ಮಾತನಾಡಿಸಿದ ಮಂಜು, ಅಲ್ಲಿಗೆ ಬಂದ ಉದ್ಧೇಶ ಕೇಳಿದರು. ಎಲ್ಲವನ್ನೂ ವಿವರಿಸಿದೆ. ನನ್ನ ಫೋಟೋ ನೋಡಿ ಅವರು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಜು ಅವರನ್ನು ಭೇಟಿ ಮಾಡಿ ಬಂದ ಎರಡನೇ ದಿನಗಳಲ್ಲಿ ನನ್ನನ್ನು ಕರೆದು ಸಿನಿಮಾವೊಂದರಲ್ಲಿ ಅವಕಾಶ ನೀಡುವುದಾಗಿ ಹೇಳಿದರು. ಅವರು ನನಗೆ ಆಫರ್‌ ಮಾಡಿದ್ದು ಡಾ. ವಿಷ್ಣುವರ್ಧನ್‌ ಅವರ ಮಗನ ಪಾತ್ರ ಎಂದು ತಿಳಿದು ನನಗೆ ಬಹಳ ಖುಷಿ ಆಯ್ತು. ನಾನು ಮೊದಲೇ ವಿಷ್ಣು ಸರ್‌ ಅವರ ದೊಡ್ಡ ಅಭಿಮಾನಿ. ಕೆ. ಮಂಜು ಅವರ ಮಾತು ಕೇಳಿ ನನಗೆ ಆ ಖುಷಿಯನ್ನು ಯಾವ ರೀತಿ ಸೆಲಬ್ರೇಟ್‌ ಮಾಡಬೇಕೆಂದು ತಿಳಿಯಲಿಲ್ಲ. ನನ್ನ ಸ್ನೇಹಿತರೆಲ್ಲರ ಬಳಿ ಈ ಖುಷಿಯನ್ನು ಹಂಚಿಕೊಂಡೆ. ಆದರೆ ಅದೇ ಸಮಯದಲ್ಲಿ ನನಗೆ 'ಪ್ರಾಣ' ಚಿತ್ರದಲ್ಲಿ ಹೀರೋ ಆಗಿ ನಟಿಸುವ ಅವಕಾಶ ಬಂತು. ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕು ಎಂದು ತೋಚಲಿಲ್ಲ.

'ಪ್ರಾಣ' ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ಪ್ರೇಮ್‌

ಒಂದು ಸ್ವೀಟ್‌ ಬಾಕ್ಸ್‌ ಹಿಡಿದು ನಿರ್ಮಾಪಕ ಮಂಜು ಬಳಿ ಹೋದೆ. ನಿಮ್ಮ ಸಿನಿಮಾದಲ್ಲಿ ವಿಷ್ಣು ಸರ್‌ ಅವರ ಮಗನ ಪಾತ್ರದಲ್ಲಿ ನಟಿಸಬೇಕೋ, ಪ್ರಾಣ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸಬೇಕೋ ಎಂಬ ಗೊಂದಲದಲ್ಲಿದ್ದೇನೆ ಎಂಬ ವಿಚಾರ ತಿಳಿಸಿದೆ. ಮಂಜು ಅವರು ಸ್ವಲ್ಪವೂ ತಡ ಮಾಡದೆ, ನಾನು ನಿನಗೆ ಯಾವಾಗ ಬೇಕಿದ್ರೂ ಅವಕಾಶ ಕೊಡುತ್ತೇನೆ. ಆದರೆ ಹೀರೋ ಆಗಿ ಸಿಕ್ಕಿರುವ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡ. ಯಾರಿಗೆ ಗೊತ್ತು. ಇನ್ನೊಂದು ವರ್ಷದಲ್ಲಿ ಕಾಲ್‌ಶೀಟ್‌ ಕೇಳಿಕೊಂಡು ನಾನೇ ನಿನ್ನ ಮನೆ ಬಳಿ ಬರಬಹುದು ಎಂದು ಮಂಜು ಸರ್‌ ಹೇಳಿದ್ದರು. ಅವರು ಹೇಳಿದಂತೆ ಆಯ್ತು. ಇಂದಿನವರೆಗೂ ನನ್ನ ಅವರ ಬಾಂಧವ್ಯ ಹಾಗೇ ಉಳಿದಿದೆ ಎಂದು ಪ್ರೇಮ್‌ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

IPL_Entry_Point