Teja Sajja: ಸೂಪರ್ ಯೋಧಾ ಆಗಲಿದ್ದಾರೆ ತೇಜಾ ಸಜ್ಜಾ; ಹನುಮಾನ್ ಯಶಸ್ಸಿನ ಬೆನ್ನಲ್ಲೇ ಹೊಸ ಅವಕಾಶ ಪಡೆದ ಸೂಪರ್‌ಹೀರೋ
Teja Sajja Upcoming Movies: ಹನುಮಾನ್ ಸಿನಿಮಾದ ಮೂಲಕ ಸೂಪರ್‌ಹೀರೋ ಆಗಿ ಹೊರಹೊಮ್ಮಿದ ತೇಜಾ ಸಜ್ಜಾ ಅವರ ಮುಂದಿನ ಸಿನಿಮಾದ ಹೆಸರನ್ನು ಏಪ್ರಿಲ್ 18ರಂದು ಪ್ರಕಟಿಸಲಾಗುತ್ತದೆ. ತೇಜಾ ಸಜ್ಜಾ ಮುಂದಿನ ಸಿನಿಮಾದ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಟಾಲಿವುಡ್ ನಟ ತೇಜ ಸಜ್ಜಾ ನಟನೆಯ ಹನುಮಾನ್ ಸಿನಿಮಾ ಇತ್ತೀಚೆಗೆ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲ ಉಡೀಸ್ ಮಾಡಿತ್ತು. ಸಾಧಾರಣ ಬಜೆಟ್‌ನ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರಹೊಮ್ಮಿತ್ತು. . ಪ್ರಶಾಂತ್ ವರ್ಮಾ ನಿರ್ದೇಶನದ ಈ ಸಿನಿಮಾದ ಮೂಲಕ ತೇಜಾ ಸಜ್ಜಾ ಆಂಧ್ರ ಮಾತ್ರವಲ್ಲದೆ, ಕನ್ನಡ, ತಮಿಳು, ಮಲಯಾಳಂ, ಹಿಂದಿ ವೀಕ್ಷಕರಿಗೂ ಹತ್ತಿರವಾದರು. ಹನುಮಾನ್ ಸಕ್ಸಸ್ ಬೆನ್ನಲ್ಲೇ ಹನುಮಾನ್ ಸೀಕ್ವೆಲ್ ಸೆಟ್ಟೇರುತ್ತಿದೆ. 2025ರ ವೇಳೆಗೆ ಜೈ ಹನುಮಾನ್ ಎಂಬ ಬಿಗ್‌ಬಜೆಟ್ ಚಿತ್ರ ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಈಗಲ್ ಚಿತ್ರದ ಮೂಲಕ ಜನಪ್ರಿಯತೆ ಪಡೆದ ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ ಮುಂದಿನ ಸಿನಿಮಾಕ್ಕೆ ತೇಜಾ ಸಜ್ಜಾ ಹೀರೋ ಆಗಿ ಆಯ್ಕೆಯಾಗಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಮುಂದಿನ ಸಿನಿಮಾದ ಟೈಟಲ್ ಇದೇ ಏಪ್ರಿಲ್ 18ರಂದು ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ತೇಜಾ ಸಜ್ಜಾ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗುವ ಸೂಚನೆಯಿದೆ. ತೇಜಾ ಸಜ್ಜಾ ಅವರನ್ನು ಹೊಸ ಅವತಾರದಲ್ಲಿ ಪರಿಚಯಿಸುವ ಭರವಸೆ ನೀಡಿದ್ದರಿಂದ ಸಿನಿಮಾ ಪ್ರೇಮಿಗಳು ಕುತೂಹಲಗೊಂಡಿದ್ದಾರೆ. ಸೂಪರ್ ಯೋಧಾ ಎಂದು ಕರೆಯಲ್ಪಡುವ ಈ ಚಿತ್ರದ ಟೈಟಲ್ ಏನಾಗಿರಲಿದೆ? ತೇಜಾ ಸಜ್ಜಾ ಯಾವ ಲುಕ್‌ನಲ್ಲಿ ಇರಲಿದ್ದಾರೆ? ಇತ್ಯಾದಿ ಕುತೂಹಲಗಳು ಮನೆಮಾಡಿವೆ.
ಸಿನಿಮಾ ವಹಿವಾಟು ವಿಶ್ಲೇಷಕರಾದ ತರುಣ್ ಆದರ್ಶ್ ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಬರೆದಿದ್ದಾರೆ. "ಹನುಮಾನ್ ನಂತರ ತೇಜಾ ಸಜ್ಜಾನ ಮುಂದಿನ ಸಿನಿಮಾ ಘೋಷಣೆಯಾಗಿದೆ. ಏಪ್ರಿಲ್ 18ರಂದು ಟೈಟಲ್ ಅನಾವರಣಗೊಳ್ಳಲಿದೆ. ಹನುಮಾನ್ ಚಿತ್ರದ ಸೂಪರ್ ಸಕ್ಸಸ್ ಬಳಿಕ ಟಿಜಿ ವಿಶ್ವ ಪ್ರಸಾದ್ (ಪೀಪಲ್ ಮೀಡಿಯಾ ಫ್ಯಾಕ್ಟರಿ) ನಿರ್ಮಾಣದ ಪ್ರಮುಖ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಪೀಪಲ್ ಮೀಡಿಯಾವು ನಿರ್ದೇಶಕ ಕಾರ್ತಿಕ್ ಗಟ್ಟಮ್ನೇನಿ ಜತೆ ಕೈ ಜೋಡಿಸಿದೆ. ಇದು ಇವರ ಎರಡನೇ ಪ್ರಾಜೆಕ್ಟ್" ಎಂದು ತರುಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಈ ಚಿತ್ರದಲ್ಲಿಮಂಚು ವಿಷ್ಣು ಖಳನಾಯಕನಾಗಿ ನಟಿಸಲಿದ್ದಾರೆ. ದುಲ್ಕರ್ ಸಲ್ಮಾನ್ ಪ್ರಮುಖ ಪಾತ್ರದಲ್ಲಿ ನಟಿಸುವ ಸೂಚನೆಯಿದೆ. ಹೀಗಾಗಿ ಈ ಚಿತ್ರದ ನಿರೀಕ್ಷೆ ದುಪ್ಪಟ್ಟಾಗಿದೆ. ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ ಈ ಚಿತ್ರದಲ್ಲಿ ತೇಜ ಸಜ್ಜಾ ಸೂಪರ್ ಯೋಧಾ ಪಾತ್ರವನ್ನು ನಿರ್ವಹಿಸಲಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯು ತೇಜಾ ಸಜ್ಜಾರ ಜತೆ ಈ ಮಹತ್ವದ ಸಾಹಸಕ್ಕೆ ಮುಂದಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯ 36ನೇ ನಿರ್ಮಾಣ ಇದಾಗಿದೆ. ಸೂಪರ್ ಯೋಧಾ ಚಿತ್ರದ ಫಸ್ಟ್ ಲುಕ್ ಟೀಸರ್ ಏಪ್ರಿಲ್ 18 ರಂದು ಬಿಡುಗಡೆಯಾಗಲಿದೆ.
ಹನುಮಾನ್ ಸಿನಿಮಾವು ಪ್ರಶಾಂತ್ ವರ್ಮಾ ಬರೆದ ಮತ್ತು ನಿರ್ದೇಶನ ಮಾಡಿರುವ ಸೂಪರ್ ಹೀರೋ ಸಿನಿಮಾವಾಗಿದೆ. ಪ್ರೈಮ್‌ಶೋ ಎಂಟರ್‌ಟೇನ್‌ಮೆಂಟ್ ನಿರ್ಮಾಣ ಮಾಡಿದ ಈ ಸಿನೆಮಾದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹನುಮಾನ್ ಸಿನಿಮಾವು ಈಗ ಒಟಿಟಿಯಲ್ಲಿದೆ.
