ಅಯೋಧ್ಯೆ ರಾಮನ ಜನ್ಮಭೂಮಿಯಲ್ಲಿ ಕನ್ನಡ ಸೀರಿಯಲ್ ಶೂಟಿಂಗ್; ಈ ವಾಹಿನಿಯಲ್ಲಿ ವಿಶೇಷ ಸಂಚಿಕೆಗಳು ಪ್ರಸಾರ
ಕನ್ನಡ ಕಿರುತೆರೆಯಲ್ಲಿ ವೀಕ್ಷಕನನ್ನು ಸೆಳೆಯಲು ಧಾರಾವಾಹಿಗಳು ಹೊಸ ಹೊಸ ತಂತ್ರಗಳನ್ನು ನಿತ್ಯದ ಸಂಚಿಕೆಗಳಲ್ಲಿ ಪೂಣಿಸುತ್ತಿವೆ. ಆ ಪೈಕಿ ಇದೀಗ ಕನ್ನಡ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ದೂರದ ಅಯೋಧ್ಯೆಯಲ್ಲಿ ರಾಮನವಮಿಯ ವಿಶೇಷ ಸಂಚಿಕೆಗಳನ್ನು ಚಿತ್ರೀಕರಿಸಿಕೊಂಡಿದೆ ಕನ್ಯಾದಾನ ಸೀರಿಯಲ್.

Kanyaadaana Kannada serial: ಉದಯ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕನ್ಯಾದಾನ ಧಾರಾವಾಹಿಯಲ್ಲಿ ತನ್ನ ಐದು ಜನ ಹೆಣ್ಣುಮಕ್ಕಳ ಜೀವನ ನೆಮ್ಮದಿದಾಯಕವಾಗಿರಬೇಕು ಅಂತ ಪರಿತಪಿಸೋ ತಂದೆಯ ಭಾವನಾತ್ಮಕ ಹೋರಾಟದ ಕಥೆ ಈಗಾಗಲೇ ಕನ್ನಡಿಗರ ಮನ ಗೆದ್ದಿದೆ. 800 ಸಂಚಿಕೆಗಳನ್ನು ಪೂರೈಸುವ ಕನ್ಯಾದಾನ ಸೀರಿಯಲ್ ಮಹಿಳೆಯರ ದೈನಂದಿನ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈಗಾಗಲೇ ಹಲವು ಪ್ರಯೋಗಗಳ ಮೂಲಕ ಪ್ರತಿ ಏಪಿಸೋಡ್‌ಗಳಲ್ಲಿ ಹೊಸತನ ತರುವ ಪ್ರಯತ್ನ ಕನ್ಯಾದಾನ ಧಾರಾವಾಹಿಯಿಂದ ಆಗುತ್ತಿದೆ. ಸೀರಿಯಲ್‌ನ ಪ್ರಮುಖ ಪಾತ್ರಧಾರಿಗಳಷ್ಟೇ ಅಲ್ಲದೇ ಸ್ಯಾಂಡಲ್‌ವುಡ್‌ನ ಜನಪ್ರಿಯ ಕಲಾವಿದರೂ ಈ ಸೀರಿಯಲ್‌ನ ಭಾಗವಾಗಿದ್ದಾರೆ.
ಈ ಹಿಂದೆ ಸ್ಯಾಂಡಲ್‌ವುಡ್ ಖ್ಯಾತ ನಟಿ ಸುಧಾರಾಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಧಾರಾವಾಹಿಗೆ ಮೆರುಗು ನೀಡಿದ್ದರು. ಅದೇ ರೀತಿ ಇತ್ತೀಚಿನ ಸಂಚಿಕೆಗಳಲ್ಲಿ ಗಾಳಿಪಟ ಹಾರಿಸಿ ಮಿಂಚಿದ್ದ ನಟಿ ನೀತು ಸಹ ಬಹುಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಶ್ರೀರಾಮನವಮಿಯ ಪ್ರಯುಕ್ತ ವಿಶೇಷ ಸಂಚಿಕೆಗಳು ಬಹು ಸೊಗಸಾಗಿ ಪ್ರಸಾರವಾಗಲಿದ್ದು ವೀಕ್ಷಕರು ಇದೇ ಏಪ್ರಿಲ್ 15ರಿಂದ ಈ ಅಪರೂಪದ ಸಂಚಿಕೆಗಳನ್ನು ವೀಕ್ಷಿಸಬಹುದು!
ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ವಿಶೇಷ ಸಂಚಿಕೆಗಳನ್ನು ಕನ್ಯಾದಾನ ಸೀರಿಯಲ್ ಚಿತ್ರೀಕರಣ ಮಾಡಿಕೊಂಡ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದ್ದ ಅಯೋಧ್ಯೆ ಶ್ರೀರಾಮನ ಸನ್ನಿಧಾನದಲ್ಲಿ ಕನ್ಯಾದಾನದ ಸೀರಿಯಲ್ ಶೂಟಿಂಗ್ ನಡೆದಿದೆ. ಈ ಮೂಲಕ ನೋಡುಗರಿಗೆ ವಿಶೇಷ ಸಂಚಿಕೆಗಳನ್ನು ನೀಡಲು ತುದಿಗಾಲ ಮೇಲೆ ನಿಂತಿದೆ.
ಸೀರಿಯಲ್‌ಗೆ ಅಯೋಧ್ಯೆ ಕನೆಕ್ಷನ್ ಹೇಗೆ?
ಕನ್ಯಾದಾನ ಧಾರಾವಾಹಿಯಲ್ಲಿ ಅಶ್ವತ್ಥನ ಹೆಣ್ಣುಮಕ್ಕಳು ಎದುರಿಸುತ್ತಿರುವ, ಎದುರಾಗುವ ಅಗ್ನಿಪರೀಕ್ಷೆಗಳನು ಶ್ರೀರಾಮನವಮಿಯ ಈ ಶುಭ ಸಂದರ್ಭದಲ್ಲಿ ಹೇಗೆ ಎದುರಿಸುತ್ತವೆ? ಆ ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ? ಶ್ರೀರಾಮನ ಭಕ್ತಿಯಪರಾಕಾಷ್ಠೆಯ ಝಲಕ್ ಸಹ ಈ ವಿಶೇಷ ಸಂಚಿಕೆಗಳಲ್ಲಿ ವೀಕ್ಷಕರ ಮುಂದಿಡುವ ಪ್ರಯತ್ನವಾಗಿದೆ.
ಇದಷ್ಟೇ ಅಲ್ಲದೆ, ಬಾಲರಾಮನನ್ನು ಕಣ್ತುಂಬಿಕೊಂಡ ಬಳಿಕ ಕಾರ್ತಿಕ್‌ನ ದಾಂಪತ್ಯ ಜೀವನದಲ್ಲಾದ ಒಳ್ಳೆಯ ಬೆಳವಣಿಗೆಗಳು ಮತ್ತು ಆತನ ತಂಗಿಯ ಬಾಳಲ್ಲಿ ಎದುರಾದ ಸಮಸ್ಯೆಗಳಿಗೂ ಹೇಗೆ ತೆರೆಬೀಳುತ್ತವೆ ಎಂಬುದೂ ಈ ಸಂಚಿಕೆಗಳಲ್ಲಿ ವೀಕ್ಷಣೆಗೆ ಸಿಗುತ್ತವೆ. ಕನ್ಯಾದಾನ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ವಿಭಾಗ