ಕನ್ನಡ ಸುದ್ದಿ  /  ಕರ್ನಾಟಕ  /  Ipl Viral News: ತುರ್ತು ಕೆಲಸ ನೆಪದಲ್ಲಿ ಕಚೇರಿಯಿಂದ ಹೊರಟು ಐಪಿಎಲ್‌ ನೋಡುವಾಗ ಬಾಸ್‌ಗೆ ಸಿಕ್ಕಿಬಿದ್ದ ಕ್ಷಣ ಹೇಗಿರಬೇಡ !

IPL Viral News: ತುರ್ತು ಕೆಲಸ ನೆಪದಲ್ಲಿ ಕಚೇರಿಯಿಂದ ಹೊರಟು ಐಪಿಎಲ್‌ ನೋಡುವಾಗ ಬಾಸ್‌ಗೆ ಸಿಕ್ಕಿಬಿದ್ದ ಕ್ಷಣ ಹೇಗಿರಬೇಡ !

ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಪಂದ್ಯ ವೀಕ್ಷಿಸಲು ಬಂದ ಟೆಕ್ಕಿಯೊಬ್ಬರು ಬಾಸ್‌ಗೆ ಸಿಕ್ಕಿ ಬಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರು ಕಚೇರಿಯಿಂದ ಹೊರಟಿದ್ದೇ ಬೇರೆ ಕಾರಣ ಹೇಳಿ. ಬಂದಿದ್ದು ಐಪಿಎಲ್‌ ನ ಆರ್‌ಸಿಬಿ ಪಂದ್ಯಕ್ಕೆ. ಮುಂದೇನಾಯ್ತು.. ಓದಿ..ವರದಿ: ಎಚ್.ಮಾರುತಿ, ಬೆಂಗಳೂರು

ಐಪಿಎಲ್‌ ಪಂದ್ಯ ವೀಕ್ಷಿಸುತ್ತಿರುವ ನೇಹಾ ದ್ವಿವೇದಿ
ಐಪಿಎಲ್‌ ಪಂದ್ಯ ವೀಕ್ಷಿಸುತ್ತಿರುವ ನೇಹಾ ದ್ವಿವೇದಿ

ಹಬ್ಬ, ಪ್ರವಾಸ ಇತ್ಯಾದಿ ಕಾರ್ಯಕ್ರಮಗಳಿಗೆ ಯಾವುದೇ ಕಂಪನಿಯಲ್ಲಿ ಸುಲಭವಾಗಿ ರಜೆ ಸಿಗುವುದಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತೆ ಮೇಲಿನ ಬಾಸ್ ರಜಾ ನೀಡದೆ ಕಾಡಿಸುವುದೇ ಹೆಚ್ಚು. ಅದರಲ್ಲೂ ಮಹಿಳಾ ಉದ್ಯೋಗಿಗಳಿಗೆ ರಜಾ ನೀಡದೆ ಮಜಾ ತೆಗೆದುಕೊಳ್ಳುವ ಬಾಸ್ ಗಳಿಗೇನೂ ಕೊರತೆ ಇಲ್ಲ. ಇನ್ನು ಐಪಿಎಲ್ ಮ್ಯಾಚ್ ನೋಡಲು ಬಾಸ್‌ ರಜೆ ನೀಡುವುದು ಸಾಧ್ಯವೇ ಇಲ್ಲ. ಆದರೆ ಇಲ್ಲೊಬ್ಬ ಮಹಿಳಾ ಉದ್ಯೋಗಿ ಮನೆಯಲ್ಲಿ ತುರ್ತು ಕೆಲಸ ಇದೆ ಎಂದು ಹೇಳಿ ಅರ್ಧಕ್ಕೆ ಲಾಗ್ ಔಟ್ ಆಗಿ ಕಚೇರಿಯಿಂದ ಹೊರಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೇಳಿಕೇಳಿ ಆಕೆ ರಾಯಲ್ ಚಾಲೆಂಜರ್ಸ್ ಅಭಿಮಾನಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ವೀಕ್ಷಿಸಲು ತೆರಳಿದ್ದಾರೆ. ಆಕೆಯ ದುರಾದೃಷ್ಟ, ಬಾಸ್ ಈಕೆಯನ್ನು ಟಿವಿಯಲ್ಲಿ ನೋಡಿದ್ದಾರೆ. ಈ ರೀತಿ ಸುಳ್ಳು ಹೇಳಿ ಪಂದ್ಯ ವೀಕ್ಷಿಸಿದ್ದು ನೇಹಾ ದ್ವಿವೇದಿ.

ಟಿವಿಯಲ್ಲಿ ನೋಡಿದ ನಂತರ ಬಾಸ್ ನೀವು ಆರ್ ಸಿಬಿ ಅಭಿಮಾನಿಯೇ? ನಿನ್ನೆ ಟಿವಿಯಲ್ಲಿ ನಿಮ್ಮನ್ನು ನೋಡಿದ್ದು ಒಂದೇ ಕ್ಷಣವಾದರೂ ನಿಮ್ಮನ್ನು ಗುರುತು ಹಿಡಿದು ಬಿಟ್ಟೆ ಎಂದು ಸಂದೇಶ ಕಳುಹಿಸಿದ್ದಾರೆ.

ಇದೇ ಕಾರಣಕ್ಕೆ ನೀವು ಮನೆಯಲ್ಲಿ ತುರ್ತು ಕೆಲಸ ಇದೆ ಎಂದು ಕಚೇರಿಯಿಂದ ನಿರ್ಗಮಿಸಿದ್ದು ಎಂದು ಪ್ರಶ್ನಿಸಿದ್ದಾರೆ. ಈಕೆ ತನ್ನ ಮತ್ತು ತನ್ನ ಬಾಸ್.ನಡುವೆ ನಡೆದ ಸಂಭಾಷಣೆಯನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, 3.50 ಲಕ್ಷಕ್ಕೂ ಹೆಚ್ಚು ಮಂದಿಯ ಗಮನ ಸೆಳೆದಿದೆ. 4 ಸಾವಿರಕ್ಕೂ ಹೆಚ್ಚು ಮಂದಿ ವಿವಿಧ ಬಗೆಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ನೇಹಾ, ಇದನ್ನು ಒಂದು ಸಾಧನೆ ಎಂಬಂತೆ ಬಿಂಬಿಸಿಕೊಂಡಿದ್ದಾರೆ. ಇವರ ಪೋಸ್ಟ್ ಗೆ ಕಾಮೆಂಟ್ ಗಳ ಪಹಾಪೂರವೇ ಹರಿದುಬಂದಿದೆ. ಕಚೇರಿಯ ಬಾಸ್ ತನ್ನ ಉದ್ಯೋಗಿಗಳಿಗೆ ಸ್ವಾತಂತ್ರ್ಯ ನೀಡಬೇಕು. ಆಗ ಸತ್ಯ ಹೇಳಲು ಸಾಧ್ಯವಾಗುತ್ತದೆ. ಇಲ್ಲವೇ ಇದು ಅವರ ಖಾಸಗಿ ಜೀವನ ಎಂದುಕೊಂಡು ಸುಮ್ಮನಾಗಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕ್ರೀಡಾಂಗಣದಲ್ಲಿ ನೆರೆದಿರುವ ಪ್ರತಿಯೊಬ್ಬರೂ ಕ್ಯಾಮೆರಾ ತನ್ನತ್ತ ತಿರುಗಬಾರದೇ ಎಂದು ಕಾಯುತ್ತಿರುತ್ತಾರೆ. ಆದರೆ ಆ ಅವಕಾಶ ನಿಮಗೆ ಲಭಿಸಿದೆ. ಇದು ಅದೃಷ್ಟವೋ ದುರದೃಷ್ಟವೋ ನೀವೇ ಹೇಳಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ನಿಮ್ಮ ಬಾಸ್ ಟಿವಿಯಲ್ಲಿ ಕ್ರಿಕೆಟ್ ಪಂದ್ಯ ನೋಡುತ್ತಿದ್ದಾರೆ. ನೀವು ಅದೇ ಕೆಲಸವನ್ನು ಸ್ಟೇಡಿಯಂನಲ್ಲಿ ಮಾಡುತ್ತಿದ್ದೀರಿ ಎಂದಿದ್ದಾರೆ.

ಮತ್ತೊಬ್ಬರ ಪ್ರತಿಕ್ರಿಯೆ ಇನ್ನೂ ಚೆನ್ನಾಗಿದೆ. ಆರ್ ಸಿಬಿ ಟ್ರೋಫಿ ಗೆದ್ದರೆ ಅದು ಕುಟುಂಬದ ತುರ್ತು ಅಲ್ಲ, ರಾಜ್ಯದ ತುರ್ತು ಎಂದು ಘೋಷಣೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ನಿಮ್ಮ ಪಾಲಿಗೆ ಐಪಿಎಲ್ ಕ್ಯಾಮೆರಾಮೆನ್ ಗಳೇ ನಿಜವಾದ ಹೀರೋಗಳು ಎಂದು.ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

ಓ ಮೈ ಗಾಡ್ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿದರೂ ಅಚ್ಚರಿಪಡಬೇಕಿಲ್ಲ. ಮೊದಲನೆಯದಾಗಿ ಸುಳ್ಳು ಹೇಳಿದ್ದೀರಿ, ಎರಡನೆಯದಾಗಿ.ನೀವು ಕಚೇರಿಯ ಚರ್ಚೆಯ ಶಾಟ್ ಗಳನ್ನು ಹಂಚಿಕೊಂಡಿದ್ದೀರಿ ಎಂದು ಮತ್ತೊಬ್ಬರು ಭಯ ಹುಟ್ಟಿಸಿದ್ದಾರೆ. ಆ ಪಂದ್ಯವನ್ನು ಆರ್ ಸಿಬಿ ಸೋತರೂ ನೇಹಾ ದ್ವಿವೇದಿ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಗೆದ್ದಿದ್ದಾರೆ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಅವರ ರಜೆ, ಕ್ರಿಕೆಟ್‌ ಹುಚ್ಚು, ಬಾಸ್‌ ಪ್ರತಿಕ್ರಿಯೆ ಎಲ್ಲವೂ ಪಾಸಿಟಿವ್‌ ನೆಲೆಯಲ್ಲಿಯೇ ಚರ್ಚೆಯಾಗಿದೆ. ಆದರೆ ಕಚೇರಿಗೆ ಹೋದ ನಂತರ ಏನಾಗಿದೆ ಎನ್ನುವುದನ್ನು ನಾವಿನ್ನೂ ಕಾಯಬೇಕಷ್ಟೇ !.

(ವರದಿ: ಎಚ್.ಮಾರುತಿ, ಬೆಂಗಳೂರು)

IPL_Entry_Point

ವಿಭಾಗ