Bangalore News:ಬೆಂಗಳೂರಿನಲ್ಲಿ ಐ.ಟಿ ದಾಳಿ, 28 ಕೋಟಿ ರೂ. ನಗದು, ಚಿನ್ನ ವಜ್ರಾಭರಣ ವಶ; ಮುಚ್ಚಳಿಕೆ ಬರೆದುಕೊಟ್ಟ 5 ಸಾವಿರ ರೌಡಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  Bangalore News:ಬೆಂಗಳೂರಿನಲ್ಲಿ ಐ.ಟಿ ದಾಳಿ, 28 ಕೋಟಿ ರೂ. ನಗದು, ಚಿನ್ನ ವಜ್ರಾಭರಣ ವಶ; ಮುಚ್ಚಳಿಕೆ ಬರೆದುಕೊಟ್ಟ 5 ಸಾವಿರ ರೌಡಿಗಳು

Bangalore News:ಬೆಂಗಳೂರಿನಲ್ಲಿ ಐ.ಟಿ ದಾಳಿ, 28 ಕೋಟಿ ರೂ. ನಗದು, ಚಿನ್ನ ವಜ್ರಾಭರಣ ವಶ; ಮುಚ್ಚಳಿಕೆ ಬರೆದುಕೊಟ್ಟ 5 ಸಾವಿರ ರೌಡಿಗಳು

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಣದ ಕುಳಗಳ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ( Income Tax Department) ಬೆಂಗಳೂರಿನ ಹಲವು ಕಡೆ ದಾಳಿ ಮಾಡಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬೆಂಗಳೂರಲ್ಲಿ ಐಟಿ ಇಲಾಖೆ ದಾಳಿ ಮಾಡಿ ಭಾರೀ ಹಣ ವಶಪಡಿಸಿಕೊಂಡಿದೆ.
ಬೆಂಗಳೂರಲ್ಲಿ ಐಟಿ ಇಲಾಖೆ ದಾಳಿ ಮಾಡಿ ಭಾರೀ ಹಣ ವಶಪಡಿಸಿಕೊಂಡಿದೆ.

ಬೆಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಬೆಂಗಳೂರು ದಕ್ಷಿಣ ಮತ್ತು ಉತ್ತರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಎರಡೂ ಕ್ಷೇತ್ರಗಳಲ್ಲಿ ನಡೆದ ದಾಳಿಯಲ್ಲಿ 28.07 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನ ಹಾಗೂ ವಜ್ರಾಭರಣಗಳನ್ನು ವಶಪಡಿಸಿಕೊಂಡಿದೆ.

ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐ.ಟಿ ಇಲಾಖೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಉದ್ಯಮಿಗಳು, ಬ್ಯಾಂಕ್‌ಗಳು ಹಾಗೂ ರಾಜಕೀಯ ಮುಖಂಡರ ನಿವಾಸಗಳಲ್ಲಿ ಶೋಧ ನಡೆಸುತ್ತಿದ್ದು ಅಪಾರ ಪ್ರಮಾಣದ ಹಣ ಹಾಗೂ ಚಿನ್ನಾಭರಣ ಗಳನ್ನು ಜಪ್ತಿ ಮಾಡಿದೆ.

ಈ ಒಂದೇ ಕ್ಷೇತ್ರದಲ್ಲಿ 4.69 ಕೋಟಿ ಹಣ ನಗದು, 16.92 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಚಿನ್ನದ ಬಿಸ್ಕೆಟ್ ಗಳು ಮತ್ತು ರೂ. 6.46 ಕೋಟಿ ಮೌಲ್ಯದ ವಜ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ತಪಾಸಣೆ,ದಾಳಿ

ಬಸವನಗುಡಿ, ಜಯನಗರ, ಶಂಕರಪುರ, ಚಿಕ್ಕಪೇಟೆ, ಪುಲಕೇಶಿನಗರ ಮತ್ತು ಮಹಾಲಕ್ಷ್ಮಿ ಲೇ ಔಟ್, ಚಾಮರಾಜಪೇಟೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ತಪಾಸಣೆ ನಡೆಸಲಾಗಿದೆ.

ವಿಶೇಷವಾಗಿ ಉತ್ತರ ಭಾರತದ ಮೂಲದ ಬ್ಯಾಂಕರ್ಸ್ ಗಳ ಅಂಗಡಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ ಅವರು ಸಂಗ್ರಹಿಸಿದ್ದಬೃಹತ್‌ ಪ್ರಮಾಣದ ಹಣಕಾಸು ಲೇವಾದೇವಿ ನಡೆಸುತ್ತಿರುವ ಉತ್ತರ ಭಾರತದ ಮೂಲದ ವರ್ತಕರ ಮನೆಗಳ ಮೇಲೆ ದಾಳಿ ಮಾಡಿದ್ದು, ಅವರ ಬಳಿ ಇದ್ದ ಚಿನ್ನ ಮತ್ತು ವಜ್ರಾಭರಣ ಮತ್ತು ಚಿನ್ನದ ಗಟ್ಟಿಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಮೇಲೆ ನಿಗಾ

ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಮೇಲೂ ಹದ್ದಿನ ಕಣ್ಣು ಇಟ್ಟಿದ್ದ ಐ ಟಿ ಇಲಾಖೆ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಇತ್ತೀಚೆಗೆ ನಡೆಸಿದ ವಹಿವಾಟುಗಳ ಲೆಕ್ಕವನ್ನು ತಾಳೆ ಹಾಕುತ್ತಿದೆ. ಇತ್ತೀಚಿನ ಕೆಲವು ತಿಂಗಳುಗಳಲ್ಲಿ ನಡೆಸಿರುವ ಭಾರಿ ಪ್ರಮಾಣದ ವಹಿವಾಟಿಗೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುಕ್ರವಾರ ನಡೆಯಲಿದ್ದರೆ ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. ಮತದಾನ ಪೂರ್ಣಗೊಂಡಿರುವ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಮೇ 7 ವರೆಗೆ ಕಾರ್ಯಾಚರಣೆ ನಡೆಯುತ್ತಲೇ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

ಮುಚ್ಚಳಿಕೆ ಬರೆದುಕೊಟ್ಟ 5 ಸಾವಿರ ರೌಡಿಗಳು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ 7,553 ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಗಳ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಂದೂಕು, ಪಿಸ್ತೂಲ್, ರಿವಾಲ್ವರ್ ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಲು ಪೊಲೀಸರು ನೋಟಿಸ್ ನೀಡುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲವು ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್ ಹಾಗೂ ಭದ್ರತಾ ಏಜೆನ್ಸಿಗಳು ಸೇರಿದಂತೆ ಕೆಲವರಿಗೆ ಶಸ್ತ್ರಾಸ್ತ್ರಗಳನ್ನು ಇರಿಸಿಕೊಳ್ಳಲು ಶಸ್ತ್ರಾಸ್ತ್ರ ಠೇವಣಿಯಿಂದ ವಿನಾಯಿತಿ ನೀಡಲಾಗಿದೆ.

ಜೀವ ಭಯ ಇರುವವರಿಗೆ ಶಸ್ತ್ರಾಸ್ತ್ರವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಚುನಾವಣೆ ನಂತರ ಶಸ್ತ್ರಾಸ್ತ್ರಗಳನ್ನು ಮಾಲೀಕರಿಗೆ ಮರಳಿಸಲಾಗುತ್ತದೆ.

ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರನ್ನು ಹೆದರಿಸುವ ಹಾಗೂ ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಮಾಹಿತಿ ಇದ್ದು, ರೌಡಿ ಪಟ್ಟಿಯಲ್ಲಿ ಹೆಸರಿರುವ ಹಾಗೂ ಅಪರಾಧ ಹಿನ್ನೆಲೆಯುಳ್ಳ 5,117 ಮಂದಿಯನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಒಂದು ವೇಳೆ ಇವರು ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner