ಕನ್ನಡ ಸುದ್ದಿ  /  Karnataka  /  Bannadarpane Program: What Is Bannadarpane Bannadarpane Campaign In Dharwad Lok Sabha Constituency Color Is Ours, Service Is Yours Here Is The Detail

Bannadarpane Program: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ʻಬಣ್ಣದರ್ಪಣೆʼ - ಬಣ್ಣ ನಮ್ಮದು ಸೇವೆ ನಿಮ್ಮದು; ಏನಿದು ಯೋಜನೆ? ಇಲ್ಲಿದೆ ವಿವರ

Bannadarpane Program: ಧಾರವಾಡ ಲೋಕಸಭಾ ಕ್ಷೇತ್ರದ ʻಬಣ್ಣದರ್ಪಣೆʼ ಕಾರ್ಯಕ್ರಮ ಈಗ ರಾಜ್ಯದ ಗಮನಸೆಳೆದಿದೆ. ಬಣ್ಣ ನಮ್ಮದು ಸೇವೆ ನಿಮ್ಮದು ಎಂಬ ಉಪಶೀರ್ಷಿಕೆಯೂ ಕಾರ್ಯಕ್ರಮಕ್ಕೆ ನೀಡಲಾಗಿದ್ದು, ಯೋಜನೆಯ ಬಗ್ಗೆ ಕುತೂಹಲ ಕೆರಳಿಸಿದೆ. ಏನಿದು ಯೋಜನೆ? ಯಾವಾಗ ಚಾಲನೆ ಇತ್ಯಾದಿ ವಿವರ ಇಲ್ಲಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ʻಬಣ್ಣದರ್ಪಣೆʼ ಕಾರ್ಯಕ್ರಮಕ್ಕೆ ನಾಳೆ ಚಾಲನೆ ಸಿಗಲಿದೆ.
ಧಾರವಾಡ ಲೋಕಸಭಾ ಕ್ಷೇತ್ರದ ʻಬಣ್ಣದರ್ಪಣೆʼ ಕಾರ್ಯಕ್ರಮಕ್ಕೆ ನಾಳೆ ಚಾಲನೆ ಸಿಗಲಿದೆ.

ಬೆಂಗಳೂರು: ಧಾರವಾಡ ಲೋಕಸಭಾ ಕ್ಷೇತ್ರದ ʻಬಣ್ಣದರ್ಪಣೆʼ ಕಾರ್ಯಕ್ರಮ ಈಗ ರಾಜ್ಯದ ಗಮನಸೆಳೆದಿದೆ. ಬಣ್ಣ ನಮ್ಮದು ಸೇವೆ ನಿಮ್ಮದು ಎಂಬ ಉಪಶೀರ್ಷಿಕೆಯೂ ಕಾರ್ಯಕ್ರಮಕ್ಕೆ ನೀಡಲಾಗಿದ್ದು, ಯೋಜನೆಯ ಬಗ್ಗೆ ಕುತೂಹಲ ಕೆರಳಿಸಿದೆ.

ಸ್ವಕ್ಷೇತ್ರದಲ್ಲಿ ಕಳೆಗುಂದಿರುವ ಸರ್ಕಾರಿ ಶಾಲಾ - ಕಾಲೇಜುಗಳ ಗೋಡೆಗಳಿಗೆ ಹೊಸ ಕಳೆ ತುಂಬಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಂದಾಗಿದಾರೆ. ಅವರ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ಈ ಕಾರ್ಯಕ್ರಮಕ್ಕೆ ನಾಳೆ ಚಾಲನೆ ಸಿಗಲಿದೆ.

ಒಂದು ವರ್ಷದ ವರೆಗೆ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ, ಬಣ್ಣದರ್ಪಣೆ ಅಭಿಯಾನ ಮುಂದುವರಿಯಲಿದೆ. ಪ್ರತಿ ತಿಂಗಳು 100 ಶಾಲೆಗಳಿಗೆ ಬಣ್ಣ ಹಚ್ಚುವ ಗುರಿ ಹೊಂದಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1130 ಸರ್ಕಾರಿ ಶಾಲಾ ಕಾಲೇಜುಗಳನ್ನ ಗುರುತಿಸಲಾಗಿದ್ದು, ವರ್ಷದೊಳಗೆ ಅವುಗಳನ್ನು ಸುಣ್ಣಬಣ್ಣದೊಂದಿಗೆ ಕಂಗೊಳಿಸುವಂತೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಸಚಿವರ ಕಚೇರಿ ಮೂಲಗಳು ತಿಳಿಸಿವೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿರುವ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮ ಅಭಿಯಾನದ ರೀತಿಯಲ್ಲಿ ನಡೆಸಲು ಯೋಜನೆ ರೂಪುಗೊಂಡಿದೆ. ಈಗಾಗಲೇ ಕೇಂದ್ರ ಸಚಿವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಬಣ್ಣದರ್ಪಣೆ ಕಾರ್ಯಕ್ರಮಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.

ಬಣ್ಣದರ್ಪಣೆ ಉದ್ಘಾಟನೆ ಯಾವಾಗ? ಎಲ್ಲಿ?

ಧಾರವಾಡ ಲೋಕಸಭಾ ಕ್ಷೇತ್ರದ ಕುಂದಗೋಳದ ಶ್ರೀ ಹರಭಟ್ಟ ಹೈಸ್ಕೂಲ್ ನಲ್ಲಿ ನಾಳೆ ಸಂಜೆ 6 ಗಂಟೆಗೆ ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಈ ಕಾರ್ಯಕ್ರಮವನ್ನು ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ರಾಜ್ಯಸಭಾ ಸದಸ್ಯ ನವರಸ ನಾಯಕ ಜಗ್ಗೇಶ್‌ ಕೂಡ ಭಾಗವಹಿಸಲಿದ್ದಾರೆ.

ಏನಿದು ಬಣ್ಣದರ್ಪಣೆ..?

ಸಚಿವ ಪ್ರಲ್ಹಾದ್ ಜೋಶಿಯವರ ಕ್ಷಮತಾ ಸೇವಾ ಸಂಸ್ಥೆಯ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯಕ್ರಮ ಬಣ್ಣದರ್ಪಣೆ. ಕ್ಷಮತಾ ಸೇವಾ ಸಂಸ್ಥೆ ಉಚಿತವಾಗಿ ಬ‍ಣ್ಣವನ್ನು ಪೂರೈಸಲಿದೆ. ಸಂಘ ಸಂಸ್ಥೆಗಳು, ಸೇವಾ ಸಂಘಟನೆಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ವಯಂ ಪ್ರೇರಣೆಯಿಂದ ಸೇವಾ ಭಾವದೊಂದಿಗೆ ಉಚಿತವಾಗಿ ಬಣ್ಣ ಪಡೆದು, ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೊಸ ಬಣ್ಣ ನೀಡಬಹುದಾಗಿದೆ. ಇದೇ ಕಾರಣಕ್ಕೆ ಬಣ್ಣ ನಮ್ಮದು ಸೇವೆ ನಿಮ್ಮದು ಎಂಬ ಹ್ಯಾಶ್ ಟ್ಯಾಗ್ ಜತೆ ಪ್ರಲ್ಹಾದ್ ಜೋಶಿ ಅವರು ಸಾಮಾಜಿಕ‌ ಜಾಲತಾಣಗಳಲ್ಲಿ ಬಣ್ಣದರ್ಪಣೆ ಅಭಿಯಾನ ನಡೆಸಿದ್ದಾರೆ.

ಬಣ್ಣ ಹಚ್ಚುವವರು ಯಾರು? ಅಭಿಯಾನದಲ್ಲಿ ಭಾಗವಹಿಸುವವರು ಯಾರು?

ಶಿಕ್ಷಕರು, ಎಸ್.ಡಿ.ಎಮ್.ಸಿ. ಸದಸ್ಯರು, ಶಾಲೆಯ ಹಳೆಯ ವಿಧ್ಯಾರ್ಥಿಗಳು, ಸ್ವಸಹಾಯ ಸಂಘಗಳು, ಸೇವಾ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಯುವಕ ಮಂಡಳಿ ಮತ್ತು ಸಂಘ ಸಂಸ್ಥೆಗಳು, ದೇವಸ್ಥಾನ ಕಮಿಟಿಗಳು, ಭಜನಾ ಸಂಘಗಳು ಹಾಗೂ ಯಾವುದೇ ಆಸಕ್ತ ತಂಡಗಳು ಈ ಬಣ್ಣದರ್ಪಣೆ ಅಭಿಯಾನದ ಭಾಗವಾಗುವ ಮೂಲಕ ಸರ್ಕಾರಿ‌ ಶಾಲಾ-ಕಾಲೇಜುಗಳಿಗೆ ಹೊಸ ಬಣ್ಣ ಹಚ್ಚುವ ಸೇವೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಚಿವರ ಕಚೇರಿ ಮೂಲಗಳು ತಿಳಿಸಿವೆ.

IPL_Entry_Point