ಕನ್ನಡ ಸುದ್ದಿ  /  ಕರ್ನಾಟಕ  /  ಸಣ್ಣದಾಗಿ ಸದ್ದು ಮಾಡಿದ ಅಮಾನತ್ ಬ್ಯಾಂಕ್ ಹಗರಣ; ಈ ಅವ್ಯವಹಾರದ ಕುರಿತು ಬಿಜೆಪಿ ತುಟಿ ಬಿಚ್ಚಿಲ್ಲ ಯಾಕೆ -Amanath Bank Scam

ಸಣ್ಣದಾಗಿ ಸದ್ದು ಮಾಡಿದ ಅಮಾನತ್ ಬ್ಯಾಂಕ್ ಹಗರಣ; ಈ ಅವ್ಯವಹಾರದ ಕುರಿತು ಬಿಜೆಪಿ ತುಟಿ ಬಿಚ್ಚಿಲ್ಲ ಯಾಕೆ -Amanath Bank scam

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮನ್ಸೂರ್ ಅಲಿ ಖಾನ್ ಅಭ್ಯರ್ಥಿಯಾದ ನಂತರ ಅಮಾನತ್ ಕೋ ಆಪರೇಟಿವ್ ಬ್ಯಾಂಕ್ ಹಗರಣ ಸದ್ದು ಮಾಡಿತ್ತು. ಅಷ್ಟಕ್ಕೂ ಈ ಪ್ರಕರಣ ಇದೀಗ ಯಾಕೆ ಸದ್ದು ಮಾಡ್ತಿದೆ, ಬಿಜೆಪಿ ಮೌನವಾಗಿರುವುದರ ಹಿಂದಿನ ಕಾರಣವೇನು? (ವರದಿ: ಎಚ್ ಮಾರುತಿ)

ಸಣ್ಣದಾಗಿ ಸದ್ದು ಮಾಡಿದ ಅಮಾನತ್ ಬ್ಯಾಂಕ್ ಹಗರಣದ ಬಗ್ಗೆ ಬಿಜೆಪಿ ನಾಯಕರುತುಟಿ ಬಿಚ್ಚಿಲ್ಲ ಯಾಕೆ ಅನ್ನೋದನ್ನ ತಿಳಿಯಿರಿ.
ಸಣ್ಣದಾಗಿ ಸದ್ದು ಮಾಡಿದ ಅಮಾನತ್ ಬ್ಯಾಂಕ್ ಹಗರಣದ ಬಗ್ಗೆ ಬಿಜೆಪಿ ನಾಯಕರುತುಟಿ ಬಿಚ್ಚಿಲ್ಲ ಯಾಕೆ ಅನ್ನೋದನ್ನ ತಿಳಿಯಿರಿ.

ಬೆಂಗಳೂರು: ಕಳೆದ ಒಂದೂವರೆ ದಶಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರನ್ನು ತಲ್ಲಣಗೊಳಿಸಿ ಸಾವಿರಾರು ಗ್ರಾಹಕರನ್ನು ಬೀದಿಗೆ ತಂದ ಎರಡು ಕೋ ಆಪರೇಟಿವ್ ಬ್ಯಾಂಕ್ ಗಳೆಂದರೆ ಅಮಾನತ್ ಕೋ ಆಪರೇಟಿವ್ ಬ್ಯಾಂಕ್ (Amanath Co-Operative Bank) ಮತ್ತು ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ (Guru Raghavendra Co-Operative Bank). ಅಮಾನತ್ ಬ್ಯಾಂಕ್‌ನಲ್ಲಿ ಒಟ್ಟು 2.20 ಲಕ್ಷ ಗ್ರಾಹಕರಿದ್ದು, ಅದರಲ್ಲಿ 90 ಸಾವಿರ ಖಾತೆದಾರರಿದ್ದಾರೆ. 1975 ರಲ್ಲಿ ಆರಂಭವಾದ ಅಮಾನತ್ ಬ್ಯಾಂಕ್ 1998 ರವರೆಗೆ ಚೆನ್ನಾಗಿಯೇ ನಡೆಯುತ್ತಿತ್ತು. ರಾಜ್ಯಸಭೆ ಮಾಜಿ ಸದಸ್ಯ ಕೆ. ರೆಹಮಾನ್ ಖಾನ್ 1998 ರಿಂದ 2012 ರವರೆಗೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ (Amanath Co-Operative Bank ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಬ್ಯಾಂಕ್ ದಿವಾಳಿಯಾಗಿ ಠೇವಣಿ ಇಟ್ಟವರಿಗೆ ಹಣ ಸಿಗದಂತಾಗಿತ್ತು.

ಲೋಕಸಭಾ ಚುನಾವಣೆ ಘೋಷಣೆಯಾಗಿ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾದ ನಂತರ ಈ ಹಗರಣ ಮತ್ತೆ ಸದ್ದು ಮಾಡಿತ್ತು. ತೇಜಸ್ವಿ ಸೂರ್ಯ ಪ್ರಚಾರ ಮಾಡುವ ವೇಳೆ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನುಣುಚಿಕೊಂಡು ಜಾಗ ಖಾಲಿ ಮಾಡಿದ್ದರು.

ಕೆಲವು ಮುಸ್ಲಿಮ್ ಮಹಿಳೆಯರು ಪ್ಲೇ ಕಾರ್ಡ್ ಹಿಡಿದುಕೊಂಡು ಅಮಾನತ್ ಬ್ಯಾಂಕ್ ವಿರುದ್ಧ ಘೋಷಣೆ ಕೂಗುತ್ತಾ ನಮ್ಮ ಹಣ ನಮಗೆ ಸಿಗಬೇಕು, ಈ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಮತ್ತು ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರ ಕೈವಾಡವಿದೆ ಎಂದು ಪ್ರತಿಭಟಿಸುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಅಮಾನತ್ ಬ್ಯಾಂಕ್ ಹಾಗೂ ಅದರ ಗ್ರಾಹಕರು ಮತ್ತು ಠೇವಣಿದಾರರ ಪ್ರಕಾರ ಬ್ಯಾಂಕ್ ಸರಿ ದಾರಿಗೆ ಬರುತ್ತಿದೆ. ಹಂತ ಹಂತವಾಗಿ ಠೇವಣಿದಾರರ ಹಣವನ್ನು ಮರಳಿಸಲಾಗುತ್ತಿದೆ ಎಂಬ ಮಾಹಿತಿ ಇದೆ.

ಈ ಬ್ಯಾಂಕ್ ನ ಬಹುತೇಕ ಗ್ರಾಹಕರು ಮುಸಲ್ಮಾನರು. ಅವರ ಪ್ರಗತಿಗಾಗಿಯೇ ಈ ಬ್ಯಾಂಕ್ ಸ್ಥಾಪನೆಯಾಗಿತ್ತು. ನಿಜ, ದಶಕಕ್ಕೂ ಹೆಚ್ಚು ಕಾಲ ಗ್ರಾಹಕರು ಒದ್ದಾಡಿದ್ದರು. ದುಡಿದ ಹಣವನ್ನು ತೆಗೆದುಕೊಳ್ಳಲಾಗದೆ ಚಡಪಡಿಸಿದ್ದರು. ಆಸ್ಪತ್ರೆ, ಶಿಕ್ಷಣ, ಮದುವೆ ಮೊದಲಾದ ಉದ್ದೇಶಗಳಿಗೆ ಹಣ ಇಲ್ಲದೆ ಪರದಾಡಿದ್ದರು. ಈಗಲೂ ಶೇಕಡಾ ನೂರರಷ್ಟು ಎಲ್ಲವೂ ಸರಿ ಇದೆ ಎಂದು ಹೇಳುವಂತಿಲ್ಲ. ಬ್ಯಾಂಕ್‌ಗೆ ವಂಚನೆ ಮಾಡಿದ್ದ ಗ್ರಾಹಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ನೂರಾರು ದಿನ ಗ್ರಾಹಕರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ್ದರು. ಹಣ ಸಿಗದೇ ಕಣ್ಣೀರು ಹಾಕಿದ್ದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ. ಜಾಫರ್‌ಷರೀಫ್ ಅವರೇ ಉಪವಾಸ ಸತ್ಯಾಗ್ರಹ ನಡೆಸಿದ್ದರು. ವಿಧಾನ ಮಂಡಲದ ಉಭಯ ಸದನಗಳಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ರೆಹಮಾನ್ ಖಾನ್ ಅವರು ಅಮಾನತ್ ಬ್ಯಾಂಕ್‌ನಿಂದ ತಮ್ಮ ಸಂಬಂಧಿಕರಿಗೆ ಸೇರಿದ 17 ಸಂಸ್ಥೆಗಳಿಗೆ ಸಾಲ ನೀಡಿ ಅವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ಹುಯಿಲೆಬ್ಬಿಸಿದ್ದವು.

ಕೆಲವು ಮೂಲಗಳ ಪ್ರಕಾರ ಬ್ಯಾಂಕಿನ ವಹಿವಾಟು ಎಂದಿನಂತೆ ನಡೆಯುತ್ತಿದೆ. ಬ್ಯಾಂಕ್ ಪ್ರತಿದಿನ ತೆರೆಯುತ್ತಿದ್ದು, ನಿತ್ಯ ವಹಿವಾಟು ನಡೆಯುತ್ತಿದೆ. ಮನ್ಸೂರ್ ಅಲಿ ಖಾನ್ ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿ ಅಜ್ಞಾತ ಸ್ಥಳದಲ್ಲಿ ಕುಳಿತು ವಿಡಿಯೋ ಮಾಡಿ ಹರಿಯ ಬಿಡಲಾಗುತ್ತಿದೆ ಎಂದು ಆರೋಪಿಸುತ್ತಾರೆ. ಯಾರು ಏನೇ ಹೇಳಿದರೂ ರೆಹಮಾನ್ ಖಾನ್ ಅವರ ವಿರುದ್ಧ ಈಗಲೂ ಅನುಮಾನ ಇದ್ದೇ ಇದೆ. ಬ್ಯಾಂಕ್ ಗೆ ನಷ್ಟ ಉಂಟಾಗಿರುವುದರಲ್ಲಿ ಎರಡು ಮಾತಿಲ್ಲ. ದೇಶದ ಸಹಕಾರಿ ಬ್ಯಾಂಕ್ ಗಳ ಹಣೆ ಬರಹವೇ ಇಷ್ಟು. ಆಡಳಿತ ಮಂಡಳಿಯಲ್ಲಿ ಆಯಕಟ್ಟಿನ ಜಾಗದಲ್ಲಿ ಇರುವವರಿಗೆ ಶಿಕ್ಷೆ ಆಗುವುದಿಲ್ಲ. ಆರೋಪಗಳಿಗೆ ದಾಖಲೆಗಳನ್ನೂ ಉಳಿದಿರುವುದಿಲ್ಲ.

ಈಗಲೂ ಬ್ಯಾಂಕ್ ಆರ್ಥಿಕವಾಗಿ ನಷ್ಟದಲ್ಲಿದ್ದರೆ ಬಿಜೆಪಿ ಅಷ್ಟೊಂದು ಸುಲಭವಾಗಿ ಬಿಡುತ್ತಿರಲಿಲ್ಲ. ಆದರೆ ಈ ಹಗರಣ ಕುರಿತು ತುಟಿ ಪಿಟಿಕ್ ಎಂದಿಲ್ಲ. ಒಂದೋ ಅಮಾನತ್ ಬ್ಯಾಂಕ್ ಸರಿ ಇರಬೇಕು ಇಲ್ಲವೇ ಗುರು ರಾಘವೇಂದ್ರ ಬ್ಯಾಂಕ್ ಗುಮ್ಮ ಕಾಡುತ್ತಿರಬೇಕು ಅಷ್ಟೇ.

IPL_Entry_Point