ಕನ್ನಡ ಸುದ್ದಿ  /  ಕರ್ನಾಟಕ  /  ವಿಶ್ಲೇಷಣೆ: ಸಹಕಾರ ಬ್ಯಾಂಕ್‌ಗಳ ಸುಧಾರಣೆಗೆ ದಾರಿ ಯಾವುದಯ್ಯಾ? ಮರೆತ ತತ್ವಗಳ ಒಮ್ಮೆ ನೆನಪಿಸಿಕೊಳ್ಳೋಣ

ವಿಶ್ಲೇಷಣೆ: ಸಹಕಾರ ಬ್ಯಾಂಕ್‌ಗಳ ಸುಧಾರಣೆಗೆ ದಾರಿ ಯಾವುದಯ್ಯಾ? ಮರೆತ ತತ್ವಗಳ ಒಮ್ಮೆ ನೆನಪಿಸಿಕೊಳ್ಳೋಣ

ಸಹಕಾರ ಬ್ಯಾಂಕ್‌ಗಳು ನಷ್ಟ ಅನುಭವಿಸಲು ಕಾರಣಗಳೇನು? ಪುನಶ್ಚೇತನಕ್ಕೆ ಮಾರ್ಗೋಪಾಯಗಳೇನು? ರಾಜಕೀಯ, ಜಾತಿ, ಮತ್ತು ಧರ್ಮ ಮೀರಿ ಸಹಕಾರ ತತ್ವದಡಿಯಲ್ಲಿ ಬ್ಯಾಂಕ್ ನಡೆಸಲು ಸಾಧ್ಯವಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. (ಬರಹ: ಎಚ್.ಮಾರುತಿ)

ಸಹಕಾರ ಬ್ಯಾಂಕ್‌ಗಳಲ್ಲಿ ಅವ್ಯವಹಾರ ತಡೆಯಲು ಕಠಿಣ ಕ್ರಮ ಅಗತ್ಯ (ಪ್ರಾತಿನಿಧಿಕ ಚಿತ್ರ)
ಸಹಕಾರ ಬ್ಯಾಂಕ್‌ಗಳಲ್ಲಿ ಅವ್ಯವಹಾರ ತಡೆಯಲು ಕಠಿಣ ಕ್ರಮ ಅಗತ್ಯ (ಪ್ರಾತಿನಿಧಿಕ ಚಿತ್ರ)

ಸಹಕಾರಿ ಬ್ಯಾಂಕ್‌ಗಳೆಂದರೆ ಸಣ್ಣ ಹಣಕಾಸು ಸಂಸ್ಥೆಗಳಾಗಿದ್ದು, ಅಲ್ಲಿ ಸದಸ್ಯರೇ ಬ್ಯಾಂಕ್‌ನ ಮಾಲೀಕರು ಮತ್ತು ಗ್ರಾಹಕರಾಗಿರುತ್ತಾರೆ. ಸದಸ್ಯರಿಂದ ಸದಸ್ಯರಿಗಾಗಿ ಸದಸ್ಯರೇ ಸ್ಥಾಪಿಸಿಕೊಂಡ ಸಂಸ್ಥೆಗಳೇ ಬ್ಯಾಂಕ್‌ಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ಬ್ಯಾಂಕ್‌ಗಳ ವಿಧಗಳೆಂದರೆ ಪ್ರಾಥಮಿಕ ಸಾಲ ಸಂಘಗಳು, ಕೇಂದ್ರ ಸಹಕಾರಿ ಬ್ಯಾಂಕ್‌ಗಳು, ರಾಜ್ಯ ಸಹಕಾರಿ ಬ್ಯಾಂಕ್‌ಗಳು, ಭೂ ಅಭಿವೃದ್ಧಿ ಬ್ಯಾಂಕ್‌ಗಳು ಮತ್ತು ನಗರ ಸಹಕಾರಿ ಬ್ಯಾಂಕ್‌ಗಳು.

ಟ್ರೆಂಡಿಂಗ್​ ಸುದ್ದಿ

ಸಹಕಾರಿ ತತ್ವದಡಿಯಲ್ಲಿ ಸ್ಥಾಪನೆಯಾಗಿರುವ ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ಒದಗಿಸುವುದು. ಉಳಿತಾಯ ಮತ್ತು ಹೂಡಿಕೆಯನ್ನು ಪ್ರೋತ್ಸಾಹಿಸುವುದು, ಕೃಷಿ ವಿಧಾನದಲ್ಲಿ ಸುಧಾರಣೆ ತರುವುದು ಈ ಬ್ಯಾಂಕ್‌ಗಳ ಪ್ರಮುಖ ಉದ್ದೇಶವಾಗಿರುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆಯಲು ಮಿತಿಗಳಿರುತ್ತವೆ. ಆದರೆ ಸಹಕಾರಿ ಸಂಸ್ಥೆಗಳು ಉದಾರ ನೀತಿಯನ್ನು ಅನುಸರಿಸುತ್ತವೆ.

ಕಾನೂನು ಪುಸ್ತಕದಲ್ಲಿ ಇದ್ದಂತೆ ಸಹಕಾರಿ ಬ್ಯಾಂಕ್‌ಗಳು ನಡೆಯುವುದಿಲ್ಲ. ಸಹಕಾರ ಬ್ಯಾಂಕ್‌ನ ಸ್ಥಾಪನೆಯಿಂದ ಆರಂಭವಾಗುವ ರಾಜಕೀಯ, ಜಾತಿ, ಧರ್ಮ ಆ ಬ್ಯಾಂಕ್ ಮುಳುಗುವವರೆಗೆ ಪ್ರಭಾವ ಬೀರುತ್ತಲೇ ಇರುತ್ತದೆ. ಬ್ಯಾಂಕ್ ಸ್ಥಾಪನೆ, ಸಾಲ ನೀಡುವಿಕೆ, ನಿರ್ದೇಶಕರ ಆಯ್ಕೆ, ಸಾಲ ವಸೂಲಾತಿ ಠೇವಣ ಹೂಡಿಕೆ, ಲೆಕ್ಕ ಪರಿಶೋಧನೆಯಲ್ಲೂ ಪ್ರಭಾವ ಬೀರುತ್ತದೆ.

ಈ ಅನೀತಿ ಎಲ್ಲ ಬ್ಯಾಂಕ್‌ಗಳಿಗೂ ಅನ್ವಯವಾಗುತ್ತದೆ ಎಂದು ಹೇಳುತ್ತಿಲ್ಲ. ಬೆಂಗಳೂರು, ರಾಜ್ಯ ಮತ್ತು ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನೂ ಮೀರಿಸುವಂತೆ ಹಲವು ಸಹಕಾರಿ ಬ್ಯಾಂಕ್‌ಗಳು ಕೆಲಸ ಮಾಡುತ್ತಿವೆ. ಕೆಲ ಬ್ಯಾಂಕ್‌ಗಳ ಗ್ರಾಹಕರ ಪರ ನಿಲುವು, ಕಾಳಜಿಯನ್ನು ನಾನು ಗೌರವಿಸುತ್ತೇನೆ.

ಕರ್ನಾಟಕದ ಶೇ 15ರಷ್ಟು ನಗರ ಸಹಕಾರಿ ಬ್ಯಾಂಕ್‌ಗಳು ನಷ್ಟ ಅನುಭವಿಸುತ್ತಿವೆ. 41 ನಗರ ಸಹಕಾರಿ ಬ್ಯಾಂಕ್‌ಗಳ ಪೈಕಿ 7 ಬೆಂಗಳೂರಿನಲ್ಲಿವೆ. 21 ಜಿಲ್ಲಾ ಬ್ಯಾಂಕ್‌ಗಳು ನಷ್ಟದಲ್ಲಿವೆ. ವಿಧಾನಮಂಡಲದಲ್ಲಿ ಈ ವಿಷಯ ಕುರಿತು ಗಂಟೆಗಟ್ಟಲೆ ಚರ್ಚೆ ನಡೆದಿದ್ದು, ಉಗ್ರ ಮತ್ತು ಕಠಿಣ ಕ್ರಮದ ಭರವಸೆ ಬಿಟ್ಟು ಬೇರೆ ಏನೂ ಆಗುವುದೇ ಇಲ್ಲ.

ಸಹಕಾರ ಬ್ಯಾಂಕ್‌ಗಳ ಠೇವಣಿದಾರರು ಯಾರು?

ಬಹುತೇಕ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವವರು ನಿವೃತ್ತ ನೌಕರರು. ಸಾಮಾನ್ಯವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ನಿವೃತ್ತಿ ಸಂದರ್ಭದಲ್ಲಿ 10-50 ಲಕ್ಷ ರೂಪಾಯಿ ಹಣವನ್ನು ಇಡಗಂಟಾಗಿ ಪಡೆಯುತ್ತಾರೆ. ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ವಿವಾಹ, ಆರೋಗ್ಯ ಇತ್ಯಾದಿ ಸಮಸ್ಯೆಗಳಿಗೆ ಸಹಾಯವಾಗುತ್ತದೆ ಮತ್ತು ಹೆಚ್ಚು ಬಡ್ಡಿ ನೀಡಲಾಗುತ್ತದೆ ಎಂಬ ಕಾರಣಕ್ಕೆ ಅಷ್ಟೂ ಹಣವನ್ನು ಸಹಕಾರಿ ಬ್ಯಾಂಕ್‌ಗಳಲ್ಲಿ ಇಡುತ್ತಾರೆ. ಅಲ್ಲಿಯೂ ಜಾತಿ ನುಸುಳದೆ ಇರುವುದಿಲ್ಲ. ಅಮಾನತ್ ಬ್ಯಾಂಕ್ ಮತ್ತು ಗುರುರಾಘವೇಂದ್ರ ಬ್ಯಾಂಕ್ ಗಳಲ್ಲಿ ಅತಿ ಹೆಚ್ಚು ಠೇವಣಿ ದಾರರು ಆಯಾ ಬ್ಯಾಂಕ್‌ಗಳ ಆಡಳಿತ ಮಂಡಳಿಯ ಸಮುದಾಯಕ್ಕೆ ಸೇರಿದವರು.

ಜಾತಿ ಮತ್ತು ಉಪ ಜಾತಿಗಳ ಹೆಸರಿನಲ್ಲೂ ಸಹಕಾರಿ ಬ್ಯಾಂಕ್‌ಗಳು ಸ್ಥಾಪನೆಯಾಗುತ್ತಿದ್ದು, ಆಯಾ ಸಮುದಾಯಗಳ ನಾಗರೀಕರಿಂದ ಠೇವಣಿ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. ಕಳೆದ ಮಂಗಳವಾರವಷ್ಟೇ (ಜುಲೈ 25) ನ್ಯಾಷನಲ್ ಕೋ ಆಪರೇಟೀವ್ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದ್ದು, ಠೇವಣಿದಾರರ ಹಿತ ಕಾಪಾಡಬೇಕು ಎಂದು ಬ್ಯಾಂಕ್ ಠೇವಣಿದಾರರು ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆ ಮುಖಂಡ ಶಂಕರ್ ಗುಹಾ ಸರಕಾರವನ್ನು ಒತ್ತಾಯಿಸಿದ್ದಾರೆ. ನಷ್ಟ ಅನುಭವಿಸುತ್ತಿರುವ ಬ್ಯಾಂಕ್‌ಗಳ ಪಟ್ಟಿಗೆ ಇದು ಹೊಸ ಸೇರ್ಪಡೆಯಷ್ಟೇ. ಅಮಾನತ್ ಕೋ ಆಪರೇಟೀವ್ ಬ್ಯಾಂಕ್, ಗುರು ರಾಘವೇಂದ್ರ ಸಹಕಾರ ಬ್ಯಾಂಕ್ (ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಸರಕಾರ ನಿರ್ಧರಿಸಿದೆ) ಕೆಲವು ಉದಾಹರಣೆಗಳಷ್ಟೇ.

ಸಹಕಾರ ಬ್ಯಾಂಕ್‌ಗಳ ನಷ್ಟಕ್ಕೆ ಕಾರಣಗಳೇನು?

ಸಣ್ಣ ಬಂಡವಾಳ ಮೂಲ, ರಾಜಕಿಯ ಹಿತಾಸಕ್ತಿ, ಅಪ್ರಮಾಣಿಕ ಸಾಲ ನೀಡುವಿಕೆ, ಆರ್‌ಬಿಐ ಮತ್ತು ರಾಜ್ಯ ಸರಕಾರ ಎರಡರ ನಿಯಂತ್ರಣ, ಭ್ರಷ್ಟಾಚಾರ, ಅನೈತಿಕ ಲೆಕ್ಕ ಪರಿಶೋಧನೆ, ಅಧಿಕಾರ ದುರುಪಯೋಗ, ಗುಣಮಟ್ಟದ ಕೊರತೆ, ಗೂಢ ಸದಸ್ಯತ್ವ, ಅಸಮರ್ಪಕ ಆಡಳಿತ, ಅರ್ಹತೆಯೇ ಇಲ್ಲದ ಅತವಾ ರಾಜಕೀಯ ಪ್ರೇರಿತ ಆಡಳಿತ ಮಂಡಲಿ, ತಾಳೆಯಾಗದ ಬ್ಯಾಲೆನ್ಸ್ ಶೀಟ್ ಹೀಗೆ ಕಾರಣಗಳನ್ನು ಪಟ್ಟಿ ಮಾಡಬಹುದು.

ಪುನಃಶ್ಚೇತನಕ್ಕೆ ಮಾರ್ಗಗಳು

ಹಾಗಾದರೆ ಸಹಕಾರಿ ಬ್ಯಾಂಕ್‌ಗಳ ಪುನಶ್ಚೇತನ ಸಾಧ್ಯವೇ ಇಲ್ಲವೇ. ಖಂಡಿತಾ ಇದೆ. ನಷ್ಟದಲ್ಲಿರುವ ಬ್ಯಾಂಕ್‌ಗಳನ್ನು ವಿಲೀನಗೊಳಿಸುವುದು, ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡಿಸುವುದು, ಸಾಲ ನೀಡುವ ಪ್ರಕ್ರಿಯೆ ಸುಧಾರಿಸುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ಅನುಸರಿಸಲು ಕಾನೂನು ರೂಪಿಸಬೇಕಿದೆ. ಕಟ್ಟುನಿಟ್ಟಿನ ಲೆಕ್ಕಪರಿಶೋಧನೆ, ನಿರ್ದೇಶಕರು ಮತ್ತು ಆಡಳಿತ ಮಂಡಲಿಗೆ ತರಬೇತಿ, ಜಾತಿ ಮತ್ತು ಧರ್ಮಾಧರಿತ ಬ್ಯಾಂಕ್‌ಗಳ ಸ್ಥಾಪನಗೆಗೆ ಕಡಿವಾಣ ಹಾಕುವಂತಹ ಕ್ರಮಗಳನ್ನು ಅನುಸರಿಸಿದರೆ ಸಹಕಾರ ಬ್ಯಾಂಕ್‌ಗಳನ್ನು ತಹಬದಿಗೆ ತರಲು ಸಾಧ್ಯವಿದೆ.

ಈ ಬ್ಯಾಂಕ್‌ಗಳು ಪ್ರತಿ ಮೂರು ತಿಂಗಳಿಗೊಮ್ಮೆ ವಹಿವಾಟಿನ ಪರಿಸ್ಥಿತಿ ಕುರಿತು ಆರ್‌ಬಿಐ ಅಥವಾ ಸಹಕಾರ ಇಲಾಖೆಗೆ ಲೆಕ್ಕಪತ್ರ ಅಥವಾ ವಿವರಣೆ ನೀಡಬೇಕು. ಇದು ಪಾರದರ್ಶಕ ನಡತೆಗೆ ಕಾರಣವಾಗುತ್ತದೆ. ಸಹಕಾರ ಬ್ಯಾಂಕುಗಳು ದಿವಾಳಿ ಆಗುವಾಗ ಎಚ್ಚರ ವಹಿಸುವ ಬದಲಿಗೆ ಕಾಲಕಾಲಕ್ಕೆ ನಿಗಾ ವಹಿಸುವಂತಹ ವ್ಯವಸ್ಥೆ ಜಾರಿಗೊಳ್ಳಬೇಕು.

ರಾಜಕೀಯ ಆಕಾಂಕ್ಷಿಗಳಿಗೆ ಸಹಕಾರ ಬ್ಯಾಂಕುಗಳು ರಾಜಕೀಯ ಮೆಟ್ಟಿಲಾಗಬಾರದು. ಸಹಕಾರ ಬ್ಯಾಂಕುಗಳನ್ನು ವೃತ್ತಿಪರರು ಮುನ್ನಡೆಸಿಕೊಂಡು ಹೋಗುವ ವ್ಯವಸ್ಥೆ ಜಾರಿಯಾಗಬೇಕು. ಪ್ರತಿ ಬ್ಯಾಂಕಿಗೂ ಚುನಾವಣೆ ನಡೆಯುತ್ತದೆ. ಆಗ ಷೇರುದಾರರು ಜವಾಬ್ದಾರಿಯಿಂದ ತಮ್ಮ ಹಕ್ಕನ್ನು ಚಲಾಯಿಸಬೇಕು. ಅಂತಿಮವಾಗಿ ಸಹಕಾರ ಬ್ಯಾಂಕುಗಳ ಸ್ಥಾಪನೆಯಲ್ಲಿ ಅಗತ್ಯ ಮಾರ್ಪಾಡುಗಳು ತುರ್ತಾಗಿ ಆಗದೇ ಇದ್ದರೆ ಮತ್ತಷ್ಟು ಅಮಾನತ್, ಗುರು ರಾಘವೇಂದ್ರ ಮತ್ತು ನ್ಯಾಷನಲ್ ಸಹಕಾರ ಬ್ಯಾಂಕ್‌ಗಳು ಸೃಷ್ಟಿಯಾಗುತ್ತವೆ. ಕ್ರಮ ಕೈಗೊಳ್ಳಲು ಇದಕ್ಕಿಂತ ಸುಸಮಯ ಇನ್ನೊಂದಿಲ್ಲ.

ಟಿ20 ವರ್ಲ್ಡ್‌ಕಪ್ 2024