Ashwath Narayan: ಇನ್ನೊಬ್ಬರ ಕೆಲಸಕ್ಕೆ ನಾನ್ಯಾಕೆ ಕ್ರೆಡಿಟ್‌ ತೆಗೆದುಕೊಳ್ಳಲಿ, ಅನಿತಾ ಕುಮಾರಸ್ವಾಮಿ ಆರೋಪಕ್ಕೆ ಅಶ್ವತ್ಥನಾರಾಯಣ ಉತ್ತರ
ಕನ್ನಡ ಸುದ್ದಿ  /  ಕರ್ನಾಟಕ  /  Ashwath Narayan: ಇನ್ನೊಬ್ಬರ ಕೆಲಸಕ್ಕೆ ನಾನ್ಯಾಕೆ ಕ್ರೆಡಿಟ್‌ ತೆಗೆದುಕೊಳ್ಳಲಿ, ಅನಿತಾ ಕುಮಾರಸ್ವಾಮಿ ಆರೋಪಕ್ಕೆ ಅಶ್ವತ್ಥನಾರಾಯಣ ಉತ್ತರ

Ashwath Narayan: ಇನ್ನೊಬ್ಬರ ಕೆಲಸಕ್ಕೆ ನಾನ್ಯಾಕೆ ಕ್ರೆಡಿಟ್‌ ತೆಗೆದುಕೊಳ್ಳಲಿ, ಅನಿತಾ ಕುಮಾರಸ್ವಾಮಿ ಆರೋಪಕ್ಕೆ ಅಶ್ವತ್ಥನಾರಾಯಣ ಉತ್ತರ

ತಮ್ಮ ಮೇಲೆ ಶಿಷ್ಟಾಚಾರ ಉಲ್ಲಂಘನೆ ಹಾಗೂ ಹಕ್ಕುಚ್ಯುತಿ ಆರೋಪ ಮಾಡಿರುವುದರ ಕುರಿತು ಡಾ. ಸಿಎನ್‌ ಅಶ್ವತ್ಥನಾರಾಯಣ ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಿಗದಿತ ಸಮಯಕ್ಕೆ ಹಾಜರಾಗದೆ ಈ ರೀತಿ ಆರೋಪ ಮಾಡೋದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

CN Ashwath Narayan: ಅನಿತಾ ಕುಮಾರಸ್ವಾಮಿ ಆರೋಪಕ್ಕೆ ಅಶ್ವತ್ಥನಾರಾಯಣ ಪ್ರತಿಕ್ರಿಯೆ
CN Ashwath Narayan: ಅನಿತಾ ಕುಮಾರಸ್ವಾಮಿ ಆರೋಪಕ್ಕೆ ಅಶ್ವತ್ಥನಾರಾಯಣ ಪ್ರತಿಕ್ರಿಯೆ

ಬೆಂಗಳೂರು: ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ತಮ್ಮ ಮೇಲೆ ಶಿಷ್ಟಾಚಾರ ಉಲ್ಲಂಘನೆ ಹಾಗೂ ಹಕ್ಕುಚ್ಯುತಿ ಆರೋಪ ಮಾಡಿರುವುದರ ಕುರಿತು ಡಾ. ಸಿಎನ್‌ ಅಶ್ವತ್ಥನಾರಾಯಣ ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಿಗದಿತ ಸಮಯಕ್ಕೆ ಹಾಜರಾಗದೆ ಈ ರೀತಿ ಆರೋಪ ಮಾಡೋದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

"ಹಾರೋಹಳ್ಳಿ ನೂತನ ತಾಲೂಕು ಕಚೇರಿ ಉದ್ಘಾಟನೆ ವೇಳೆ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಗೆ ಅಪಮಾನಿಸಲಾಗಿದೆ ಎಂಬರ್ಥದ ಮಾತನ್ನು ಕೇಳಿ ಆಶ್ಚರ್ಯವಾಯಿತು! ಕಾರ್ಯಕ್ರಮ ಶಿಷ್ಟಾಚಾರದ ಪ್ರಕಾರವೇ ಜರುಗಿದರೂ ನಿಗದಿತ ಸಮಯಕ್ಕೆ ಹಾಜರಾಗದೇ, ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ಡಾ. ಸಿಎನ್‌ ಅಶ್ವತ್ಥನಾರಾಯಣ ಟ್ವೀಟ್‌ ಮಾಡಿದ್ದಾರೆ.

ನಮ್ಮ ರಾಮನಗರ ಜಿಲ್ಲೆಯ ಜನತೆಯ ಶ್ರೇಯವೇ ನನ್ನ ಆದ್ಯತೆ. ಕ್ಷುಲ್ಲಕ ರಾಜಕಾರಣ, ಕುಟುಂಬ ರಾಜಕಾರಣದ ಬಗ್ಗೆ ನನಗೆ ಆಸಕ್ತಿಯಿಲ್ಲ. ಬಿಜೆಪಿ ಸರ್ಕಾರ ಬರುವ ಮೊದಲು ಅಭಿವೃದ್ಧಿ ಹೇಗೆ ಕುಂಠಿತವಾಗಿತ್ತು, ನಮ್ಮ ಸರ್ಕಾರ ಬಂದಮೇಲೆ ಏನೆಲ್ಲಾ ಅಭಿವೃದ್ಧಿ ಕೆಲಸಗಳು ಆಗಿವೆ ಎನ್ನುವುದು ಜನರಿಗೂ ಗೊತ್ತಿದೆ, ದಾಖಲೆಗಳೂ ಹೇಳುತ್ತವೆ ಎಂದು ಅವರು ವಿವರಣೆ ನೀಡಿದ್ದಾರೆ.

ಹಾರೋಹಳ್ಳಿ ಪ್ರತ್ಯೇಕ ತಾಲೂಕು ರಚನೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಅವರ ಕೊಡುಗೆಯ ಬಗ್ಗೆ ವೇದಿಕೆಯಲ್ಲಿ ಹೇಳಿದ್ದೇನೆ. ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್‌ ತೆಗೆದುಕೊಳ್ಳುವ ದುರ್ಬುದ್ಧಿಯಾಗಲಿ, ಕೆಲಸವನ್ನೇ ಮಾಡದೇ ನಾನೇ ಮಾಡಿದ್ದು ಎನ್ನುವ ಕುಬುದ್ಧಿಯಾಗಲಿ ನನ್ನಲ್ಲಿಲ್ಲ. ನೇರ ನುಡಿ, ಅಭಿವೃದ್ಧಿಪರ ರಾಜಕಾರಣ ನನ್ನದು ಎಂದು ಟ್ವೀಟ್‌ ಮಾಡಿದ್ದಾರೆ.

ಹಾರೋಹಳ್ಳಿ ತಾಲೂಕು ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಅಶ್ವತ್ಥನಾರಾಯಣ ನಾರಾಯಣ ಅವರು, ತಮ್ಮನ್ನು ಕಡೆಗಣಿಸಿ ಅಪಮಾನ ಮಾಡಿದ್ದಾರೆ. ಉನ್ನತ ಶಿಕ್ಷಣ ಸಚಿವರ ಉನ್ನತ ಮೌಲ್ಯ ಇದೇನಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕೊಡಬೇಕು ಹಾಗೂ ಈ ಬಗ್ಗೆ ವಿಧಾನಸಭೆ ಸಭಾಧ್ಯಕ್ಷರು, ಹಕ್ಕು ಭಾದ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ಕೊಡಲಾಗುವುದು ಎಂದು ಅನಿತಾ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದರು.

ಹಾರೋಹಳ್ಳಿ ತಾಲೂಕು ಕೇಂದ್ರದ ಅಭಿವೃದ್ಧಿಗೆ ನಾನು ಸಾಕಷ್ಟು ಅನುದಾನ ತಂದಿದ್ದೇನೆ. ನಾನು ಮತ್ತು ಶ್ರೀ ಕುಮಾರಸ್ವಾಮಿ ಅವರು ರಾಜಕೀಯವನ್ನು ಬದಿಗಿಟ್ಟು ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಆದರೆ, ಪ್ರತಿ ಸಣ್ಣ ವಿಷಯದಲ್ಲಿಯೂ ರಾಜಕೀಯ ಹುಡುಕುವ ಉಸ್ತುವಾರಿ ಸಚಿವರಿಗೆ, ಶಾಸಕರು ಕೂಡ ಉತ್ತರದಾಯಿ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಾಯಿತಲ್ಲ ಎನ್ನುವುದು ನನಗೆ ಬೇಸರ ಉಂಟು ಮಾಡಿದೆ ಎಂದು ಅವರು ಟ್ವೀಟ್‌ ಮಾಡಿದ್ದರು.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಉತ್ತರ ನೀಡಬೇಕು ಹಾಗೂ ಶಾಸಕಿಗೆ ಅಪಮಾನಿಸಿದ ಸಚಿವರ ನಡೆಯನ್ನು ಖಂಡಿಸಬೇಕು. ಈ ಬಗ್ಗೆ ನನಗೆ ಬಹಳ ನೋವಾಗಿದೆ. ಮಾನ್ಯ ಸಭಾಧ್ಯಕ್ಷರು ಹಾಗೂ ಹಕ್ಕು ಭಾದ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದರು.

ಹಾರೋಹಳ್ಳಿ ತಾಲೂಕು ಕಚೇರಿ ಲೋಕಾರ್ಪಣೆಗೊಳಿಸುವ ವಿಷಯದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತೋರಿದ ಆತುರ ನನಗೆ ಅಚ್ಚರಿ ಉಂಟು ಮಾಡಿದೆ. ರಾಜಕೀಯಕ್ಕಾಗಿ ಶಿಷ್ಟಾಚಾರವನ್ನು ಹತ್ತಿಕ್ಕಿ, ಓರ್ವ ಮಹಿಳಾ ಶಾಸಕಿಯನ್ನು ಅಪಮಾನಿಸುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದರು.

ಇದೀಗ ಕಾರ್ಯಕ್ರಮ ಶಿಷ್ಟಾಚಾರದ ಪ್ರಕಾರವೇ ಜರುಗಿದರೂ ನಿಗದಿತ ಸಮಯಕ್ಕೆ ಹಾಜರಾಗದೇ, ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಡಾ. ಸಿಎನ್‌ ಅಶ್ವತ್ಥನಾರಾಯಣ ಮಾರುತ್ತರ ನೀಡಿದ್ದಾರೆ.

Whats_app_banner