ಕನ್ನಡ ಸುದ್ದಿ  /  Karnataka  /  D K Shivakumar Helicopter Hit By Eagle And People Reminded Jatayu What Is Story Behind Jatayu Explainer Uks

Story behind Jatayu: ಕಾಪ್ಟರ್‌ಗೆ ಹಕ್ಕಿ ಬಡಿದಾಗ ನೆನಪಾದ ಜಟಾಯು; ರಾವಣನ ವಿಮಾನಕ್ಕೆ ಜಟಾಯು ಕುಕ್ಕಿದ್ದು ಯಾಕೆ? ಹೀಗಿದೆ ರಾಮಾಯಣದ ಕಥೆ

Story behind Jatayu: ಡಿ.ಕೆ.ಶಿವಕುಮಾರ್ ಅವರ ಹೆಲಿಕಾಪ್ಟರ್ ಗೆ ರಣಹದ್ದೊಂದು ದಾಳಿ ಮಾಡಿದ ವಿಚಾರವೀಗ ವೈರಲ್ ಆಗಿದೆ. ಜಟಾಯು ವಿಮಾನ ಕುಕ್ಕಿದ ಕಥೆ ಮುನ್ನೆಲೆಗೆ ಬಂದಿದೆ. ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ HT ಕನ್ನಡದ ಪ್ರತಿನಿಧಿ ಹರೀಶ್‌ ಮಾಂಬಾಡಿ ಜತೆಗೆ ಮಾತನಾಡಿ ರಾಮಾಯಣದಲ್ಲಿ ಬರುವ ಜಟಾಯುವಿನ ಮೂಲ ಪ್ರಸಂಗವನ್ನು ವಿವರಿಸಿದ್ದು ಹೀಗೆ..

ಡಿಕೆಶಿವಕುಮಾರ್‌ ಕಾಪ್ಟರ್‌ಗೆ ಹಕ್ಕಿ ಬಡಿದ ಘಟನೆ ಬೆನ್ನಲ್ಲೆ ಸೋಷಿಯಲ್‌ ಮೀಡಿಯಾಗಳಲ್ಲಿ ಜಟಾಯುವನ್ನು ನೆನಪಿಸಿಕೊಂಡರು ಜನ. ಆದ್ದರಿಂದ ಜಟಾಯುವಿನ ಕಥೆಯ ವಿವರಣೆ ನೀಡಲು ಈ ಚಿತ್ರಗಳನ್ನು ಇಲ್ಲಿ ಸಾಂದರ್ಭಿಕವಾಗಿ ಬಳಸಲಾಗಿದೆ.
ಡಿಕೆಶಿವಕುಮಾರ್‌ ಕಾಪ್ಟರ್‌ಗೆ ಹಕ್ಕಿ ಬಡಿದ ಘಟನೆ ಬೆನ್ನಲ್ಲೆ ಸೋಷಿಯಲ್‌ ಮೀಡಿಯಾಗಳಲ್ಲಿ ಜಟಾಯುವನ್ನು ನೆನಪಿಸಿಕೊಂಡರು ಜನ. ಆದ್ದರಿಂದ ಜಟಾಯುವಿನ ಕಥೆಯ ವಿವರಣೆ ನೀಡಲು ಈ ಚಿತ್ರಗಳನ್ನು ಇಲ್ಲಿ ಸಾಂದರ್ಭಿಕವಾಗಿ ಬಳಸಲಾಗಿದೆ. (KPCC / pathsanatan)

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President D K Shivakumar) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿದ್ದು, ಸಂಭಾವ್ಯ ಅಪಾಯದಿಂದ ಅವರು ಸ್ವಲ್ಪದರಲೇ ಪಾರಾದರು. ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023)ಗೆ ಪ್ರಚಾರಕ್ಕಾಗಿ ಮುಳಬಾಗಿಲಿಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ʻಜಟಾಯುʼ ಎಂಬ ಕಂಪನಿಗೆ ಸೇರಿದ್ದು. ಈ ವಿಚಾರ ಭಾರೀ ಚರ್ಚೆಗೂ ಒಳಗಾಯಿತು. ಬಜರಂಗದಳ ನಿಷೇಧದ ಕುರಿತ ಪ್ರಣಾಳಿಕೆ ಬಿಡುಗಡೆಯಾದ ಕೆಲ ಹೊತ್ತಲ್ಲೇ ಈ ಘಟನೆ ನಡದಿದ್ದು ಇದಕ್ಕೆ ಕಾರಣ. ಈ ವಿಷಯ ಭಾರೀ ಟ್ರೋಲ್ ಗೂ ಒಳಗಾಯಿತು.

ರಾಮಾಯಣದಲ್ಲಿ ಜಟಾಯು ರಾವಣನ ಪುಷ್ಪಕ ವಿಮಾನಕ್ಕೆ ಕುಕ್ಕಿದ ಪ್ರಸಂಗಕ್ಕೂ ಇದನ್ನು ಹೋಲಿಸಲಾಯಿತು. ಬಜರಂಗಿ ಅಂದರೆ ಹನುಮಂತ. ಈತ ರಾಮಭಕ್ತ. ರಾಮಭಕ್ತರನ್ನು ಕೆಣಕಿದರೆ, ಜಟಾಯು ಸುಮ್ಮನೆ ಬಿಡುವನೇ ಎಂಬ ತಾತ್ಪರ್ಯದ ಸಂದೇಶಗಳು ಹರಡುತ್ತಿರುವ ಸಂದರ್ಭ, ಜಟಾಯುವಿಗೂ ವಿಮಾನಕ್ಕೂ ಏನು ಸಂಬಂಧ ಎಂಬ ಕುತೂಹಲವೂ ಸಾಕಷ್ಟು ಮೂಡತೊಡಗಿದೆ. ಆದರೆ, ರಾಮಾಯಣದಲ್ಲಿ ಬರುವ ಜಟಾಯು ಪ್ರಸಂಗದ ಮೂಲ ಕಥೆ ಹಾಗಿಲ್ಲ.

ಈ ಹಿನ್ನೆಲೆಯಲ್ಲಿ ರಾಮಾಯಣದ ಈ ಜಟಾಯು ಯುದ್ಧದ ಪ್ರಸಂಗದ ಕುರಿತು ಹಿರಿಯ ವಿದ್ವಾಂಸ ಉಡುಪಿಯ ವಿಶ್ರಾಂತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್ ಅವರು HT ಕನ್ನಡದ ಜತೆಗೆ ಹಂಚಿಕೊಂಡ ವಿವರಣೆ ಹೀಗಿದೆ -

ಕಾಲು, ಕೊಕ್ಕಿನಿಂದ ಕುಕ್ಕಿದ ಜಟಾಯು

ರಾಮಾಯಣದಲ್ಲಿ ಬರುವ ಜಟಾಯು ಪ್ರಸಂಗ ಉಪಕಥೆಯೇನಲ್ಲ. ಮೂಲ ರಾಮಾಯಣದಲ್ಲೇ ಇದೆ. ವಾಲ್ಮೀಕಿ ಬರೆದ ರಾಮಾಯಣದಲ್ಲಿ ಜಟಾಯು ಪ್ರಸಂಗವಿದೆ. ರಾಮ ಕಾಡಿಗೆ ಹೋದ ಮೇಲೆ ಸೀತಾಪಹರಣ ಪ್ರಸಂಗ ಬರುತ್ತದೆ. ಇದು ರಾಮಾಯಣದ ಅರಣ್ಯಕಾಂಡದ 49,50 ಮತ್ತು 51ನೇ ಸರ್ಗ (ಅಧ್ಯಾಯ)ದಲ್ಲಿದೆ ಎನ್ನುತ್ತಾರೆ ಡಾ. ಪಾದೇಕಲ್ಲು.

ರಾಮನ ದಿಕ್ಕು ತಪ್ಪಿಸುವ ರಾವಣ, ಸೀತೆ ಒಬ್ಬಳೇ ಇದ್ದಾಗ ಮಾರುವೇಷದಿಂದ ಬಂದು ಆಕೆಯನ್ನು ಅಪಹರಿಸುತ್ತಾನೆ. ತನ್ನ ಪುಷ್ಪಕ ವಿಮಾನವನ್ನೇರಿ ಸೀತಾಪಹರಣ ಮಾಡುತ್ತಾನೆ. ಆಕಾಶಮಾರ್ಗದಲ್ಲಿ ಲಂಕೆಯತ್ತ ಸಾಗುತ್ತಾನೆ. ಈ ಸಂದರ್ಭ ಅಪಾಯವೇನೋ ನಡೆಯುತ್ತಿದೆ ಎಂಬುದನ್ನು ಗ್ರಹಿಸಿದ ವೃದ್ಧಪಕ್ಷಿ ಜಟಾಯು ಆಕಾಶಮಾರ್ಗದಲ್ಲಿ ಶಸ್ತ್ರಸಜ್ಜಿತ ರಾವಣನನ್ನು ತಡೆಯುತ್ತದೆ. ಈ ಸಂದರ್ಭ ರಾವಣನು ಜಟಾಯುವನ್ನು ಉದ್ದೇಶಿಸಿ ʻಅಡ್ಡ ಬರಬೇಡ, ದಾರಿ ಬಿಡುʼ ಎಂದು ಎಚ್ಚರಿಸುತ್ತಾನೆ.

ʻನೀನು ಹೆಣ್ಣೊಬ್ಬಳನ್ನು ಹೀಗೆ ಕರೆದುಕೊಂಡು ಹೋಗುವುದು ತಪ್ಪು, ಬಿಟ್ಟುಬಿಡು ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾದೀತುʼ ಎಂದು ಜಟಾಯು ಪ್ರತ್ಯೆಚ್ಚರಿಕೆ ನೀಡುತ್ತದೆ.

ಆಗ ರಾವಣನು ಜಟಾಯುವನ್ನು ಉದ್ದೇಶಿಸಿ , ʻವೃದ್ಧಹಕ್ಕಿಯೇ ನೀನು ನನಗೆ ಯಾವ ಲೆಕ್ಕʼ ಎಂದು ಕೇಳುತ್ತಾನೆ.

ʻವೃದ್ಧನಾದರೂ ನನ್ನ ಕೊಕ್ಕು, ರೆಕ್ಕೆ, ಕಾಲುಗಳಲ್ಲಿ ಬಲವಿದೆʼ ಎಂದು ಹೇಳುವ ಜಟಾಯು, ʻರಾಮನ ಪತ್ನಿಯಾದ ವೈದೇಹಿಯನ್ನು ಅಪಹರಿಸಿದರೆ, ಪರಿಣಾಮ ನೆಟ್ಟಗಿರುವುದಿಲ್ಲʼ ಎಂದು ಹೇಳುತ್ತದೆ.

ಆ ಸಂದರ್ಭದಲ್ಲಿ ರಾವಣ ಮತ್ತು ಜಟಾಯುವಿನ ಮಧ್ಯೆ ಘನ ಘೋರ ಯುದ್ಧವು ನಡೆಯುತ್ತದೆ. ಈ ಹಂತದಲ್ಲಿ ವಿಮಾನದ ಸಾರಥಿಯನ್ನು ಜಟಾಯು ತನ್ನ ಕೊಕ್ಕಿನಿಂದಲೇ ಕುಕ್ಕಿ ಕುಕ್ಕಿ ಕೊಲ್ಲುತ್ತದೆ. ಕಾಲುಗಳಿಂದ, ಕೊಕ್ಕಿನಿಂದ ಜಟಾಯು ರಾವಣನ ಆಕ್ರಮಣವನ್ನು ಎದುರಿಸುತ್ತದೆ. ಕೊನೆಗೆ ರಾವಣನಿಂದ ಹತನಾಗುವ ಜಟಾಯುವಿನ ಈ ಪ್ರಸಂಗ ರಾಮಾಯಣದಲ್ಲಿದೆ ಎಂದು ಡಾ. ಪಾದೇಕಲ್ಲು ವಿವರಿಸಿದರು.

ರಾಮಭಕ್ತ ಹನುಮಂತನ ಹೆಸರಲ್ಲಿರುವ ಬಜರಂಗದಳವನ್ನು ಕೆಣಕಿದರೆ, ಸುಮ್ಮನಿರೋಲ್ಲ ಎಂಬ ಸಂದೇಶವನ್ನು ಸಾರುವ ಮೂಲಕ ವಿಎಚ್‌ಪಿ, ಬಜರಂಗದಳಗಳ ಬೆನ್ನಿಗೆ ಬಿಜೆಪಿ ನಿಂತಿದ್ದು, ಇದಕ್ಕೆ ಮೇ 10ರಂದು ಉತ್ತರ ಕೊಡುವುದಾಗಿ ಹೇಳಬೇಕು ಎಂದು ಮತದಾರರನ್ನು ಆಗ್ರಹಿಸುತ್ತಿರುವ ಸಂದರ್ಭದಲ್ಲಿ ರಾಮಾಯಣದ ಈ ಕಥೆಯೂ ಜೋಡಿಕೊಂಡಿದೆ. ಒಟ್ಟಾರೆಯಾಗಿ ಈ ಬಾರಿಯ ವಿಧಾನಸಭಾ ಚುನಾವಣೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾದ ಬಳಿಕ ಈ ಮಜಲು ತಲುಪಿದೆ.

IPL_Entry_Point