ಕನ್ನಡ ಸುದ್ದಿ  /  Karnataka  /  Dharwad News Bjp Leader Nalin Kumar Kateel On Jds Status In Old Mysore Politics Karnataka Election News In Kannada Rst

Karnataka Election 2023: ಹಳೆ ಮೈಸೂರಿನ ಜೆಡಿಎಸ್‌ ಭದ್ರಕೋಟೆ ಛಿದ್ರವಾಗಲಿದೆ; ಹುಬ್ಬಳ್ಳಿಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಕಿಡಿನುಡಿ

Karnataka Election 2023: ʼಹಳೆ ಮೈಸೂರಿನ ಜೆಡಿಎಸ್‌ ಭದ್ರಕೋಟೆ ಈ ಚುನಾವಣೆಯಲ್ಲಿ ಛಿದ್ರವಾಗಲಿದೆ. ಈ ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಲು ಬಿಜೆಪಿ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆʼ ಎಂದು ಹುಬ್ಬಳ್ಳಿಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬುಧವಾರ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಬಹುಮತ ಪಡೆಯಲಿದ್ದು, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಭದ್ರಕೋಟೆ ಛಿದ್ರವಾಗಲಿದೆ ಹಾಗೂ ಕಾಂಗ್ರೆಸ್‌ ಸ್ಥಾನಗಳು ಕಡಿಮೆಯಾಗಲಿವೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಳಿನ್‌ ʼಜೆಡಿಎಸ್‌ ಭದ್ರಕೋಟೆಯಾಗಿರುವ ಹಳೇ ಮೈಸೂರಿನಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಕಸರತ್ತು ನಡೆಸುತ್ತಿದ್ದು, ಸಾಕಷ್ಟು ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಬಿಜೆಪಿ ಸ್ಟಾರ್ ಪ್ರಚಾರಕರು ಈ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆʼ ಎಂದಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನ ಗಳಿಸುವುದೂ ಕಷ್ಟ ಎಂದು ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಗೆಲುವು ಖಚಿತ: ನಳಿನ್‌ ವಿಶ್ವಾಸ

ʼಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಪ್ರಮುಖರ ಭೇಟಿಯಿಂದ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದೆ. ಇದರಿಂದ ಗೆಲುವು ನಮ್ಮದಾಗಲಿದೆʼ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, 'ಬಿಜೆಪಿಯಲ್ಲಿ ಈ ಬಾರಿ 75 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ. ಡಬಲ್ ಎಂಜಿನ್ ಸರ್ಕಾರದ ಸಾಧನೆಗಳು ಜನರನ್ನು ತಲುಪಿವೆ. ಮೀಸಲಾತಿಯಲ್ಲೂ ಬಿಜೆಪಿ ನ್ಯಾಯ ನೀಡಿದೆ. ಆದರೆ, ಕಾಂಗ್ರೆಸ್ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ, ವೀರಶೈವರು ಲಿಂಗಾಯತರನ್ನು ಒಡೆದಿದ್ದಾರೆ, ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆʼ ಎಂದು ಕಟೀಲ್ ಟೀಕಿಸಿದರು.

ಬಿಜೆಪಿಯಲ್ಲಿ ಎಲ್ಲವೂ ಸಾಮೂಹಿಕ ನಿರ್ಧಾರ

ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದರಿಂದ ಬಿಜೆಪಿಯಲ್ಲಿ ಗೊಂದಲ ಉಂಟಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಳಿನ್‌ ʼಹುಬ್ಬಳ್ಳಿ ಹತ್ತಾರು ಪ್ರದೇಶಗಳ ಕೇಂದ್ರವಾಗಿದೆ. ಹೀಗಾಗಿ ಎಲ್ಲ ನಾಯಕರು ಇಲ್ಲಿಗೆ ಬರುತ್ತಿದ್ದಾರೆಯೇ ಹೊರತು ಶೆಟ್ಟರ್ ಕಾರಣದಿಂದಲ್ಲ. ಇಲ್ಲಿ ಬಿಜೆಪಿ ದುರ್ಬಲವಾಗಿದೆ ಎಂಬ ಕಾರಣಕ್ಕೆ ಮೋದಿಜಿ ಇಲ್ಲಿಗೆ ಬರುತ್ತಿರುವುದಲ್ಲ. ಬೇರೆ ಪ್ರದೇಶಗಳಿಗೆ ಬಂದಂತೆ ಇಲ್ಲಿಗೂ ಬರುತ್ತಾರೆ. ನಾವು ಬಿಜೆಪಿಯವರು ಒಂದು ಸಮುದಾಯವನ್ನು ಮೆಚ್ಚಿಸುವ ಕೆಲಸ ಮಾಡಿಲ್ಲ. ನಾವು ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸುತ್ತೇವೆʼ ಎಂದಿದ್ದಾರೆ.

ಶೆಟ್ಟರ್ ಟಿಕೆಟ್ ಕೈ ತಪ್ಪಲು ಬಿ.ಎಲ್.ಸಂತೋಷ್ ಕಾರಣ ಎಂದು ಆರೋಪಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಇದು ಸಾಮೂಹಿಕ ನಿರ್ಧಾರ ಎಂದು ಉಲ್ಲೇಖಿಸಿದ್ದಾರೆ.

ʼನಮ್ಮ ಪಕ್ಷದಲ್ಲಿ ಒಬ್ಬರ ತೀರ್ಮಾನವೇ ಅಂತಿಮವಲ್ಲ, ಸಾಮೂಹಿಕ ನಿರ್ಧಾರ ಎಂಬುದು ಶೆಟ್ಟರ್ ಅವರಿಗೆ ಗೊತ್ತಿದೆ. ಬಿಜೆಪಿಯಿಂದ ಬಂಡಾಯವೆದ್ದವರು ಯಾರೂ ಗೆದ್ದಿಲ್ಲ. ಹಲವು ಹುದ್ದೆಗಳನ್ನು ಅಲಂಕರಿಸಿ ಪಕ್ಷ ತೊರೆದಿರುವ ಜಗದೀಶ್ ಶೆಟ್ಟರ್ ಅವರ ಭವಿಷ್ಯ ಮೇ 13ರಂದು ನಿರ್ಧಾರವಾಗಲಿದೆ. ನಾವು ಎಲ್ಲಾ 224 ಕ್ಷೇತ್ರಗಳನ್ನೂ ಸವಾಲಾಗಿ ಸ್ವೀಕರಿಸಿದ್ದೇವೆʼ ಎಂದರು.

ಒಂದು ವಾರದೊಳಗೆ ಆಡಳಿತಾರೂಢ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಲಿಂಗಾಯತ ಸಮುದಾಯದ ಎರಡನೇ ಹಿರಿಯ ನಾಯಕ ಶೆಟ್ಟರ್. ಈ ಹಿಂದೆ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರಿದ್ದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಶೆಟ್ಟರ್ ವಿರುದ್ಧ ಮಹೇಶ್ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದೆ. 224 ಸ್ಥಾನಗಳ ವಿಧಾನಸಭಾ ಚುನಾವಣೆ ಮೇ 10 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.

IPL_Entry_Point