ಕನ್ನಡ ಸುದ್ದಿ  /  ಕರ್ನಾಟಕ  /  After Sslc: ಆರ್ಟ್ಸ್‌, ಸೈನ್ಸ್, ಕಾಮರ್ಸ್: ಪಿಯುಸಿಯಲ್ಲಿ ಕಾಂಬಿನೇಷನ್ ಆರಿಸಿಕೊಳ್ಳುವ ಮೊದಲು ಈ 10 ಅಂಶಗಳು ಗಮನದಲ್ಲಿರಲಿ

After SSLC: ಆರ್ಟ್ಸ್‌, ಸೈನ್ಸ್, ಕಾಮರ್ಸ್: ಪಿಯುಸಿಯಲ್ಲಿ ಕಾಂಬಿನೇಷನ್ ಆರಿಸಿಕೊಳ್ಳುವ ಮೊದಲು ಈ 10 ಅಂಶಗಳು ಗಮನದಲ್ಲಿರಲಿ

PUC Combination: ಎಸ್‌ಎಸ್‌ಎಲ್‌ಸಿ ಮುಗಿಸಿದ ಮಕ್ಕಳ ಎದುರು ಧುತ್ತನೆ ನಿಲ್ಲುವ ಪ್ರಶ್ನೆ "ಮುಂದೇನು" ಎನ್ನುವುದು. ಇಷ್ಟು ದಿನ ಸರ್ಕಾರ ನಿಗದಿಪಡಿಸಿದ್ದ ಪಠ್ಯಕ್ರಮವನ್ನು ಶ್ರದ್ಧೆಯಿಂದ ಓದಿಕೊಳ್ಳುತ್ತಿದ್ದ ಮಕ್ಕಳ ಎದುರು ಒಂದಿಷ್ಟು ಆಯ್ಕೆಗಳು ಇವೆ. ಯಾವುದನ್ನು ಆರಿಸಿಕೊಂಡರೆ ಏನು ಅವಕಾಶ? ಇಲ್ಲಿದೆ ಉತ್ತರ.

ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ? (ಪ್ರಾತಿನಿಧಿಕ ಚಿತ್ರ)
ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ? (ಪ್ರಾತಿನಿಧಿಕ ಚಿತ್ರ)

Arts, Science, Commerce: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ನಂತರ ಮಕ್ಕಳು ಮತ್ತು ಪೋಷಕರ ಮನಸ್ಸನ್ನು "ಮುಂದೇನು ಮಾಡುವುದು?" ಎಂಬ ಪ್ರಶ್ನೆ ಕಾಡುತ್ತದೆ. ಏನು ಓದಿದರೆ ಏನು ಅವಕಾಶ? ಯಾವ ಕೋರ್ಸ್‌ ಅಥವಾ ಕಾಂಬಿನೇಷನ್ ಆರಿಸಿಕೊಂಡರೆ ಭವಿಷ್ಯಕ್ಕೆ ಒಳ್ಳೆಯದು ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಆರಂಭವಾಗುತ್ತದೆ. ಕೆಲವರಂತೂ ಇಷ್ಟು ಹೊತ್ತಿಗೆ ಉತ್ತರ ಕಂಡುಕೊಂಡು ಆ ನಿಟ್ಟಿನಲ್ಲಿ ಹೆಜ್ಜೆಯನ್ನೂ ಇಟ್ಟಿರುತ್ತಾರೆ. ಎಸ್‌ಎಸ್‌ಎಲ್‌ಸಿ ನಂತರ ಬಹುತೇಕ ವಿದ್ಯಾರ್ಥಿಗಳು ಆರಿಸಿಕೊಳ್ಳುವ ಕೋರ್ಸ್‌ ಪಿಯುಸಿ. ಪಿಯುಸಿ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯ ಅಂಶಗಳು ಇಲ್ಲಿವೆ.

ಟ್ರೆಂಡಿಂಗ್​ ಸುದ್ದಿ

1) ಕಲೆ, ವಾಣಿಜ್ಯ, ವಿಜ್ಞಾನ: ಪಿಯುಸಿಯಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಎನ್ನುವ ಮೂರು ವಿಭಾಗಗಳಿವೆ. ಈ ಮೂರೂ ವಿಭಾಗಗಳಲ್ಲಿ ತಲಾ ನಾಲ್ಕು ವಿಷಯ ಹಾಗೂ ಎರಡು ಭಾಷೆಗಳನ್ನು ಸೇರಿಸಿ ಒಂದಿಷ್ಟು ಕಾಂಬಿನೇಷನ್‌ಗಳಾಗಿ ರೂಪಿಸಿದ್ದಾರೆ. ನೀವು ಪಿಯು ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು, ಸೇರ್ಪಡೆಯಾಗುವ ಮೊದಲು ಈ ಕಾಂಬಿನೇಷನ್‌ಗಳನ್ನು ಅಂತಿಮಗೊಳಿಸಿಕೊಳ್ಳುವುದು ಒಳ್ಳೆಯದು.

2) ಕಲಾ ವಿಭಾಗ: ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರದ ಕಾಂಬಿನೇಷನ್ ಜನಪ್ರಿಯ. (History, Economic, Political Science, Socialogy - HEPS). ಇದರ ಜೊತೆಗೆ ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಮನಃಶಾಸ್ತ್ರ, ಭೂಗೋಳ, ಸಂಗೀತದ ವಿಷಯಗಳು ಲಭ್ಯವಿದೆ. ಐಎಎಸ್‌, ಕೆಎಎಸ್‌ನಂಥ ನಾಗರಿಕ ಸೇವಾ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡವರು, ಸಾಹಿತ್ಯ ಮತ್ತು ಸಾಮಾಜಿಕ ಅಧ್ಯಯನದಲ್ಲಿ ಆಸಕ್ತಿಯಿರುವವರು ಸಾಮಾನ್ಯವಾಗಿ ಕಲಾ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಾರೆ.

3) ವಿಜ್ಞಾನ ವಿಭಾಗ: ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (Physics, Chemistry, Maths, Biology - PCMB) ಜನಪ್ರಿಯ ಕಾಂಬಿನೇಷನ್. ಇದರಲ್ಲಿ ಜೀವಶಾಸ್ತ್ರದ ಬದಲು ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಆರಿಸಿಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಎಂಜಿನಿಯರಿಂಗ್, ಮೆಡಿಕಲ್ ಓದಲು ಆಸಕ್ತಿಯಿರುವವರು, ಮೂಲ ವಿಜ್ಞಾನದಲ್ಲಿ ಸಂಶೋಧನೆ ಮುಂದುವರಿಸಲು ಇಚ್ಛಿಸುವವರು ಸಾಮಾನ್ಯವಾಗಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಾರೆ.

4) ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಲ್ಲಿ ಮೂಲಗಣಿತ, ಅಕೌಂಟೆನ್ಸಿ, ಸಂಖ್ಯಾಶಾಸ್ತ್ರ ಮತ್ತು ಬ್ಯುಸಿನೆಸ್ ಸ್ಟಡೀಸ್ (Basic Maths, Accountance, Statistics, Business Studies - BASB) ಜನಪ್ರಿಯ ಕಾಂಬಿನೇಷನ್. ಕೆಲ ಕಾಲೇಜುಗಳ ವಾಣಿಜ್ಯ ವಿಭಾಗಗಳಲ್ಲಿ ಅರ್ಥಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಮಾಜಶಾಸ್ತ್ರ, ಇತಿಹಾಸದ ಅಧ್ಯಯನಕ್ಕೂ ಅವಕಾಶ ಇರುತ್ತದೆ. ಷೇರುಪೇಟೆಯಲ್ಲಿ ಆಸಕ್ತಿಯಿರುವವರು, ಉದ್ಯಮಶೀಲ ಕುಟುಂಬಗಳಿಂದ ಬಂದವರು, ಉದ್ಯಮಶೀಲತೆ ಇರುವವರು, ಸ್ವಂತ ಕಂಪನಿ ಸ್ಥಾಪಿಸುವ ಆಸಕ್ತಿ ಇರುವವರು, ಲೆಕ್ಕಪರಿಶೋಧಕರಾಗಬೇಕೆಂಬ (ಸಿಎ) ಹಂಬಲ ಇರುವವರು ಸಾಮಾನ್ಯವಾಗಿ ವಾಣಿಜ್ಯ ವಿಭಾಗ ಆರಿಸಿಕೊಳ್ಳುತ್ತಾರೆ.

5) ಗಮನದಲ್ಲಿರಬೇಕಾದ ಮುಖ್ಯ ಅಂಶ: ಪಿಯುಸಿಯಲ್ಲಿ ವಿಜ್ಞಾನ ಓದಿದ್ದರೆ ಮುಂದೆ ಯಾವುದೇ ಕಾಂಬಿನೇಷನ್‌ನಲ್ಲಿ ಪದವಿ ಶಿಕ್ಷಣ ಪಡೆಯಲು ಅವಕಾಶ ಇರುತ್ತದೆ. ಪಿಯುಸಿಯಲ್ಲಿ ಕಲೆ ಅಥವಾ ವಾಣಿಜ್ಯ ವಿಭಾಗದ ಕಾಂಬಿನೇಷನ್‌ಗಳನ್ನು ಓದಿದ್ದರೆ ವಿಜ್ಞಾನದಲ್ಲಿ ಪದವಿ ಪಡೆಯಲು ಅವಕಾಶ ಕಷ್ಟ. ನೀವು ಪದವಿ, ಸ್ನಾತಕೋತ್ತರ ಪದವಿಯನ್ನು ದೂರಶಿಕ್ಷಣದ ಮೂಲಕ (ಡಿಸ್ಟೆನ್ಸ್ ಎಜುಕೇಶನ್) ಮಾಡಲು ಮುಂದಾದರೂ ಪಿಯುಸಿ ಅಂಕಪಟ್ಟಿ ಅತ್ಯಗತ್ಯ.

6) ವಿಜ್ಞಾನ ತೆಗೆದುಕೊಳ್ಳುವ ಮುನ್ನ: ನಮ್ಮ ಸಮಾಜದಲ್ಲಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣದ ಬಗ್ಗೆ ಹುಚ್ಚಿನಂಥ ಆಸಕ್ತಿಯಿದೆ. ಪೋಷಕರು, ಸಂಬಂಧಿಕರು ಇದೇ ವಿಭಾಗಕ್ಕೆ ಮಕ್ಕಳನ್ನು ದೂಡಲು ಯತ್ನಿಸುತ್ತಾರೆ. ಆದರೆ ಎಲ್ಲ ಮಕ್ಕಳಿಗೂ ವಿಜ್ಞಾನದ ಕಾಂಬಿನೇಷನ್‌ಗಳು ಸೂಕ್ತವಾಗುವುದಿಲ್ಲ. ಸಂಕೀರ್ಣ ಪರಿಕಲ್ಪನೆಗಳು, ತರ್ಕಬದ್ಧ ಆಲೋಚನಾ ಕ್ರಮ, ಉತ್ತಮ ನೆನಪಿನ ಶಕ್ತಿ, ಪ್ರಯೋಗಗಳನ್ನು ಏಕರೂಪದಲ್ಲಿ ನಿರ್ವಹಿಸುವ ಸಾಮರ್ಥ್ಯ ಇರುವ ಮಕ್ಕಳಿಗೆ ಇದು ಸೂಕ್ತ.

7) ವಾಣಿಜ್ಯ ಆರಿಸಿಕೊಳ್ಳುವ ಮುನ್ನ: ಅಂಕಿಅಂಶಗಳನ್ನು ಆಸ್ವಾದಿಸುವ, ಆಟವಾಡುವ, ತಪ್ಪುಗಳನ್ನು ಸುಲಭವಾಗಿ ಕಂಡುಹಿಡಿಯುವ, ಲೆಕ್ಕಾಚಾರದಲ್ಲಿ ಚುರುಕಾಗಿರುವ ಮಕ್ಕಳಿಗೆ ಇದು ಸೂಕ್ತ. ಮುಂದಿನ ದಿನಗಳಲ್ಲಿ CLAT, CPT ಥರದ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಈ ಕಾಂಬಿನೇಷನ್‌ ಅನುಕೂಲ.

8) ಕಲಾ ವಿಭಾಗ ತೆಗೆದುಕೊಳ್ಳುವ ಮುನ್ನ: ಇತರ ದೇಶಗಳಲ್ಲಿ ಕಲಾ ವಿಭಾಗ ಓದುವವರಿಗೆ ಇರುವಷ್ಟು ಮಾನ್ಯತೆ ಭಾರತದಲ್ಲಿ ಇಲ್ಲ. ಕಡಿಮೆ ಬುದ್ಧಿವಂತಿಕೆ ಇರುವವರು ಮಾತ್ರ ಕಲಾ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ತಪ್ಪು ಭಾವನೆ ಸಮಾಜದಲ್ಲಿದೆ. ಸಮಾಜವನ್ನು ಅರಿಯುವ ತುಡಿತ, ಸಾಹಿತ್ಯ-ಭಾಷಾಶಾಸ್ತ್ರ ಅಭ್ಯಾಸ ಮಾಡುವ ಆಸಕ್ತಿಯಿರುವವರಿಗೆ ಇದು ಹೇಳಿ ಮಾಡಿಸಿದ್ದು. ಭಾರತದ ಅತ್ಯುತ್ತಮ ವಕೀಲರು, ಪತ್ರಕರ್ತರು, ನೀತಿ ನಿರೂಪಕರು, ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ರಾಜಕಾರಿಣಿಗಳು ಇದೇ ಹಿನ್ನೆಲೆಯಿಂದ ಬಂದವರು. ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಸಕ್ತಿಯಿರುವವರಿಗೆ ಇದು ಅತ್ಯುತ್ತಮ ಆಯ್ಕೆ.

9) ಪೋಷಕರೇ ಈ ತಪ್ಪು ಮಾಡಬೇಡಿ: ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ಓದುವಾಗ ಕಾಂಬಿನೇಷನ್ ಆರಿಸಿಕೊಳ್ಳುವ ಬಹುತೇಕ ವಿದ್ಯಾರ್ಥಿಗಳು ತಮ್ಮ ಸ್ವಂತ ಸಾಮರ್ಥ್ಯಕ್ಕಿಂತಲೂ ಅಕ್ಕಪಕ್ಕದ ಮನೆಯವರು ಮತ್ತು ಗೆಳೆಯರು ಏನು ಹೇಳುತ್ತಾರೆ, ಮಾಡುತ್ತಾರೆ ಎಂಬುದರಿಂದ ಪ್ರಭಾವಿತರಾಗುತ್ತಾರೆ. ಇದು ತಪ್ಪು. ಎಸ್‌ಎಸ್‌ಎಲ್‌ಸಿಯಲ್ಲಿ ಗಣಿತ ಅಥವಾ ವಿಜ್ಞಾನದಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಬಂದಿದೆ ಎನ್ನುವ ಒಂದೇ ಕಾರಣಕ್ಕೆ ಮಗುವನ್ನು ಸೈನ್ಸ್‌ ಕಾಂಬಿನೇಷನ್‌ಗೆ ದೂಡಬಾರದು. ಅವರ ಇಷ್ಟಕ್ಕೆ ಬೆಲೆ ಕೊಡಬೇಕು. ಸೈನ್ಸ್‌ ಓದಿದರೆ ಪ್ರೆಸ್ಟೀಜ್, ಆರ್ಟ್ಸ್‌ ಓದೋದು ಅವಮಾನ ಎನ್ನುವುದು ಬಹುಸಂಖ್ಯಾತ ಪೋಷಕರ ಭ್ರಮೆ. ಇಂಥ ಭ್ರಮೆಗಳು ಮಕ್ಕಳ ಭವಿಷ್ಯವನ್ನು ನಿರ್ಧರಿಸಬಾರದು.

10) ಯಾವ ಕಾಂಬಿನೇಷನ್ ಸೂಕ್ತ, ಕಂಡುಕೊಳ್ಳುವುದು ಹೇಗೆ: ಪಿಯುಸಿಯಲ್ಲಿ ಕಾಂಬಿನೇಷನ್ ಅಂತಿಮಗೊಳಿಸುವ ಮೊದಲು ಈ ಪ್ರಶ್ನೆಗೆ ಪೋಷಕರು ಉತ್ತರ ಕಂಡುಕೊಳ್ಳಬೇಕು. ನಿಮ್ಮ ಮಗು 5ನೇ ತರಗತಿಯ ನಂತರ 10ನೇ ತರಗತಿಯವರೆಗೆ ಯಾವ ವಿಷಯದ ಬಗ್ಗೆ ಆಸಕ್ತಿ ತೋರಿಸುತ್ತಿತ್ತು? ಓದಿನ ವಿಧಾನ ಹೇಗಿದೆ? ನೆನಪಿನ ಶಕ್ತಿ ಹೇಗಿದೆ? ವಿಶ್ಲೇಷಣಾ ಸಾಮರ್ಥ್ಯ ಚೆನ್ನಾಗಿದೆಯೇ? ನಿಮ್ಮ ಮಗುವಿಗೆ ಪಾಠ ಹೇಳಿದ ಮೇಡಮ್/ಮೇಷ್ಟ್ರುಗಳು ಏನು ಹೇಳುತ್ತಾರೆ? ನಿಮ್ಮ ಮಗಳು/ಮಗ ಏನು ಓದಲು ಬಯಸುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ನಂತರವೇ ಮುಂದಿನ ಕಾಂಬಿನೇಷನ್ ನಿರ್ಧರಿಸಿ.

IPL_Entry_Point