ಕನ್ನಡ ಸುದ್ದಿ  /  Karnataka  /  Good To Have Competition Siddaramaiah About Cm Aspirants In Congress

Siddaramaiah: ಪಕ್ಷದ ನಾಯಕರಲ್ಲೇ ಆರೋಗ್ಯಕರ ಪೈಪೋಟಿ ಇರುವುದು ಒಳ್ಳೆಯದು: ಸಿಎಂ ಅಭ್ಯರ್ಥಿ ಕುರಿತು ಸಿದ್ದರಾಮಯ್ಯ ಹೇಳಿದ್ದು ಹೀಗೆ

ಸಿಎಂ ಅಭ್ಯರ್ಥಿ ವಿಚಾರವಾಗಿ ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಹಲವು ಸಿಎಂ ಆಕಾಂಕ್ಷಿಗಳಿದ್ದು, ಅವರಲ್ಲಿ ತಾನೂ ಒಬ್ಬ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದು, ಪಕ್ಷದ ನಾಯಕರಲ್ಲೇ ಆರೋಗ್ಯಕರ ಪೈಪೋಟಿ ಇರುವುದು ಒಳ್ಳೆಯದು ಎಂದಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾವೆಲ್ಲರೂ ಸಿಎಂ ಆಕಾಂಕ್ಷಿಗಳು. ಆದರೆ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಕೂಡ ಆಕಾಂಕ್ಷಿಗಳಾಗಿದ್ದು, ಜಿ.ಪರಮೇಶ್ವರ್ ಕೂಡ ಒಬ್ಬರು. ನಾನು ಸಹ ಆಕಾಂಕ್ಷಿ, ಆರೋಗ್ಯಕರ ಸ್ಪರ್ಧೆ ಇದೆ. ಆರೋಗ್ಯಕರ ಸ್ಪರ್ಧೆಯನ್ನು ಹೊಂದಿರುವುದರಲ್ಲಿ ತಪ್ಪೇನಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕಳೆದ ವಾರ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ ಪರಮೇಶ್ವರ್ ಅವರು ಪಕ್ಷದೊಳಗೆ ಸಿಎಂ ಅಭ್ಯರ್ಥಿಯಾಗಲು 10 ಮಂದಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.

ನಾನೇಕೆ ರಾಜಕೀಯ ಮಾಡುತ್ತಿದ್ದೇನೆ? ಅಧಿಕಾರಕ್ಕೆ ಬರಲು. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು. ಎಲ್ಲರೂ ರಾಜಕೀಯ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಮುಖ್ಯಮಂತ್ರಿಯಾಗಲು ಹಾತೊರೆಯುತ್ತಾರೆ ಮತ್ತು ಕಾಂಗ್ರೆಸ್‌ನಲ್ಲಿ ಅಂತಹ 10 ನಾಯಕರಿದ್ದಾರೆ ಮತ್ತು ಅವರಲ್ಲಿ ನಾನೂ ಒಬ್ಬ ಎಂದು ಹೇಳಬಲ್ಲೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಜಿ ಪರಮೇಶ್ವರ್ ಅವರಿಗೆ ಕೂಡ ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಲು ಹೊರಟಿಲ್ಲ. ಸಿಎಂ ಮುಖವನ್ನು ಘೋಷಿಸುವಾಗ ಹಲವಾರು ಅಂಶಗಳನ್ನು ಪರಿಗಣಿಸಲಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಧ್ಯೇಯೋದ್ದೇಶಗಳನ್ನು ಯಾರು ಈಡೇರಿಸುತ್ತಾರೋ ಮತ್ತು ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಯಾರು ನಿರ್ಣಾಯಕ ಪಾತ್ರ ವಹಿಸುತ್ತಾರೋ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಜಿ ಪರಮೇಶ್ವರ ಹೇಳಿದ್ದರು.

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸಿಎಂ ಪಟ್ಟಕ್ಕಾಗಿ ಕಿತ್ತಾಡುತ್ತಿದ್ದಾರೆ. ಅವರ ಹೋರಾಟದಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ.ಕರ್ನಾಟಕದ ಕಲ್ಯಾಣವಾಗಬೇಕಾದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ರಚನೆಯಾಗಬೇಕು. ಆಗ ಮಾತ್ರ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿಯ ಚುನಾವಣಾ ಚಾಣಕ್ಯ, ಕೇಂದ್ರ ಸಚಿವ ಅಮಿತ್‌ ಶಾ ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ವಂಶಾಡಳಿತ ಪಕ್ಷಗಳಾಗಿದ್ದು, ಅಂತಹ ಪಕ್ಷಗಳು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಈ ಎರಡೂ ಪಕ್ಷಗಳ ವಿರುದ್ಧ ಶಾ ವಾಗ್ದಾಳಿ ನಡೆಸಿದ್ದರು.

ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿಯುತ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಹಿಂದಿನ ಕಾಂಗ್ರೆಸ್‌ ಸರ್ಕಾರ ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿತ್ತು ಎಂದು ಸುಳ್ಳು ಹೇಳಿರುವುದು ಖಂಡನೀಯ ಎಂದಿದ್ದಾರೆ.

ತಮ್ಮ ನಿವಾಸದಲ್ಲಿ ನಿನ್ನೆ (ಫೆ.24) ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಬಿಜೆಪಿ ಸರ್ಕಾರ ಅಡ್ವೊಕೇಟ್‌ ಜನರಲ್‌ ಅವರ ಮೂಲಕ ಎಸಿಬಿ ರಚನೆ ಮಾಡಿರುವುದು ಸರಿಯಿದೆ, ಎಸಿಬಿಯು ಲೋಕಾಯುಕ್ತ ಕಾಯ್ದೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಕೋರ್ಟಿನಲ್ಲಿ ಹೇಳಿಸಿದ್ದಾರೆ. ಆದರೆ ಹೊರಗಡೆ ತಮ್ಮ ನಿಲುವಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇಂಥಾ ದ್ವಂದ್ವ ಯಾಕೆ ಎಂದು ಪ್ರಶ್ನಿಸಿದ್ದಾರೆ.

ನಾವು ಲೋಕಾಯುಕ್ತ ಮುಚ್ಚಿಲ್ಲ

ಎಸಿಬಿ ರಚನೆ ಆದ ನಂತರ ಲೋಕಾಯುಕ್ತವನ್ನು ಮುಚ್ಚಿರಲಿಲ್ಲ, ಲೋಕಾಯುಕ್ತ ರಚನೆಯಾದದ್ದು 1984ರ ಲೋಕಾಯುಕ್ತ ಕಾಯ್ದೆಯ ಪ್ರಕಾರ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿರುವಾಗ ಮಾಡಿದ್ದು, 14-3-2016ರಲ್ಲಿ ಲೋಕಾಯುಕ್ತರಾಗಿದ್ದ ಭಾಸ್ಕರ್‌ ರಾವ್‌ ಅವರ ಮಗ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು, ಬೇರೆ ರಾಜ್ಯಗಳಲ್ಲಿ ಕೂಡ ಎಸಿಬಿ ರಚನೆ ಮಾಡಿದ್ದರಿಂದ ನಾವು ರಾಜ್ಯದಲ್ಲೂ ಪ್ರತ್ಯೇಕ ಸಂಸ್ಥೆಯನ್ನು ರಚನೆ ಮಾಡಿದ್ದೆವು. ನಾವು ಲೋಕಾಯುಕ್ತ ಮುಚ್ಚಲೂ ಇಲ್ಲ, ಲೋಕಾಯುಕ್ತರನ್ನು ತೆಗೆದುಹಾಕುವುದಾಗಲೀ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

IPL_Entry_Point