ಕನ್ನಡ ಸುದ್ದಿ  /  Karnataka  /  Huge Amount Of Cash Jewellery Seized In Kalaburagi Ahead Of Assembly Elections

Kalaburagi News: ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಭರ್ಜರಿ ಬೇಟೆ; ಕಲಬುರಗಿಯಲ್ಲಿ ದಾಖಲೆ ಇಲ್ಲದ 1.90 ಕೋಟಿ ರೂ.ವಶ

ಕಲಬುರಗಿ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆ ಇಲ್ಲದ 1.90 ಕೋಟಿ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಕಿನ್ನಿ ಸಡಕ್ ಚೆಕ್‌ಪೋಸ್ಟ್‌ನಲ್ಲಿ 1.40 ಕೋಟಿ ಹಾಗೂ ಜೇವರ್ಗಿ ಚೆಕ್‌ಪೋಸ್ಟ್‌ನಲ್ಲಿ 50 ಲಕ್ಷ ಸೀಜ್ ಮಾಡಲಾಗಿದೆ ಎಂದು ಕಲಬುರಗಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಯಶವಂತ ಗುರುಕರ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಕಂತೆ ಕಂತೆ ಹಣ
ಕಲಬುರಗಿಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಕಂತೆ ಕಂತೆ ಹಣ

ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ಆರಂಭಿಸಿದ್ದು, ಚೆಕ್ ಪೋಸ್ಟ್ ಗಳಲ್ಲಿ ದಾಖಲೆ ಇಲ್ಲದ ಅಪಾರ ಪ್ರಮಾಣದ ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.

ಕಲಬುರಗಿ ಚೆಕ್ ಪೋಸ್ಟ್ ಗಳಲ್ಲಿ ನಿನ್ನೆ (ಮಾರ್ಚ್ 23, ಗುರುವಾರ) ದಾಖಲೆ ಇಲ್ಲದ ಸುಮಾರು 1.9 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಕಿನ್ನಿ ಸಡಕ್ ಚೆಕ್ ಪೋಸ್ಟ್ ನಲ್ಲಿ 1.40 ಕೋಟಿ ಹಾಗೂ ಜೇವರ್ಗಿ ಚೆಕ್ ಪೋಸ್ಟ್ ನಲ್ಲಿ 50 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸುವ ಮೂಲಕ ಪೊಲೀಸ್ ಇಲಾಖೆ ಕೂಡ ಸಖತ್ ಅಲರ್ಟ್ ಆಗಿದೆ. ಕಲಬುರಗಿ ಜಿಲ್ಲಾಡಳಿತ ಕೂಡ ಜಿಲ್ಲೆಯಲ್ಲಿ 42 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿದೆ ಎಂದು ಕಲಬುರಗಿ ಉಪ ಪೊಲೀಸ್ ಆಯುಕ್ತ -ಡಿಸಿಪಿ ಯಶವಂತ ಗುರುಕರ ತಿಳಿಸಿದ್ದಾರೆ.

ಗದಗನಲ್ಲಿ ಮತದಾರರ ಹಂಚಲು ಸಾಗಿಸುತ್ತಿದ್ದರು ಎನ್ನಲಾದ ಅಪಾರ ಪ್ರಮಾಣದ ದಾಖಲೆ ಇಲ್ಲದ ನಗದನ್ನು ಪೊಲೀಸರು ಮಾರ್ಚ್ 22 ರಂದು ವಶಪಡಿಸಿಕೊಂಡಿದ್ದರು. ಬುಧವಾರ ಬೆಟಗೇರಿ ಪೊಲೀಸರು ಸೂಕ್ತ ದಾಖಲೆಗಳಿಲ್ಲದ ಕಾರಿನಲ್ಲಿ ಸಾಗಿಸುತ್ತಿದ್ದ 1.43 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಗದಗ ಪಟ್ಟಣ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ 15 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ ಬೆಳಗಾವಿಯಲ್ಲಿ ಬುಧವಾರ ಕಣಬರ್ಗಿ ಚೆಕ್‌ಪೋಸ್ಟ್‌ನಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದು, ಬೆಳಗಾವಿ ನಗರದಿಂದ ಅಂಕಲಗಿ ಕಡೆಗೆ ಹೋಗುತ್ತಿದ್ದ ಕಾರನ್ನು ಪರಿಶೀಲಿಸಿದಾಗ ದಾಖಲೆ ಇಲ್ಲದ ಹಣ ಪತ್ತೆಯಾಗಿತ್ತು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾರ್ಚ್ 22 ರಂದು ಚಿಕ್ಕಮಗಳೂರಿನಿಂದ ತರೀಕೆರೆ ಕಡೆಗೆ ಸಾಗಿಸುತ್ತಿದ್ದ 9.3 ಕೆಜಿ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 3 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ನಿನ್ನೆ (ಮಾರ್ಚ್ 23, ಗುರುವಾರ) ಮಾಹಿತಿ ನೀಡಿದ್ದರು. ಇಲ್ಲಿನ ಜಿಲ್ಲಾಡಳಿತವು ಕೂಡ ಜಿಲ್ಲೆಯಾದ್ಯಂತ 18 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದೆ.

ರಾಜ್ಯದಲ್ಲಿ ಮೇ ತಿಂಗಳೊಳಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿ ಪ್ರಚಾರ ಕಾರ್ಯಕ್ರಮಗಳನ್ನು ಆರಂಭಿಸಿವೆ. ಕೇಂದ್ರ ಚುನಾವಣಾ ಆಯೋಗ ಮುಂದಿನ ವಾರದೊಳಗೆ ಚುನಾವಣೆಯ ದಿನಾಂಕ ಘೋಷಿಸಲಿದೆ. ಆ ಬಳಿಕ ರಾಜ್ಯದಲ್ಲಿ ಚುನಾವಣಾ ರಂಗು ಮತ್ತಷ್ಟು ಹೆಚ್ಚಾಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಿಸಲು ಭಾರಿ ಕಸರತ್ತು ನಡೆಸುತ್ತಿವೆ.

IPL_Entry_Point