ಕನ್ನಡ ಸುದ್ದಿ  /  Karnataka  /  Jds State President Cm Ibrahim Accuses Siddaramaiah For Collapse Of Coalition Government

CM Ibrahim on Siddarmaiah: ಮೈತ್ರಿ ಸರ್ಕಾರ ಉರುಳಿಸಿದ್ದೇ ಸಿದ್ದರಾಮಯ್ಯ: ಸಿಎಂ ಇಬ್ರಾಹಿಂ ಆರೋಪ!

ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಈ ಕುರಿತಾದ ಮಾಹಿತಿ ಇಲ್ಲಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (Verified Twitter)

ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಚ್‌ಡಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದರು. ಆದರೆ ಇದರಿಂದ ಹೆಚ್‌ಡಿಕೆ ಜನಪ್ರಿಯತೆ ಹೆಚ್ಚಲಿದೆ ಎಂದು ಆತಂಕಗೊಂಡ ಸಿದ್ದರಾಮಯ್ಯ, ಷಡ್ಯಂತ್ರ ಮಾಡಿ ಸರ್ಕಾರ ಉರುಳಿಸಿದರು. ಬಿಜೆಪಿ ನಾಯಕ ಬಿಎಸ್‌ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಖರೀದಿಸುವಂತೆ ಹೇಳಿದ್ದೇ ಸಿದ್ದರಾಮಯ್ಯ ಎಂದು ಸಿಎಂ ಇಬ್ರಾಹಿಂ ಗಂಭೀರ ಆರೋಪ ಮಾಡಿದರು.

ಹೆಚ್‌ಡಿ ಕುಮಾರಸ್ವಾಮಿ ಅವರು ತಮ್ಮನ್ನು ಮುಖ್ಯಮಂತ್ರಿ ಮಾಡುವಂತೆ ಯಾರ ಮನೆಯ ಬಾಗಲಿಗೂ ಹೋಗಿ ನಿಲ್ಲಲಿಲ್ಲ. ಆದರೆ ಐದು ವರ್ಷ ನೀವೇ ಸಿಎಂ ಆಗಿ ಎಂದು ಕಾಂಗ್ರೆಸ್‌ನವರೇ ಹೆಚ್‌ಡಿಕೆ ಅವರನ್ನು ಹುಡುಕಿಕೊಂಡು ಬಂದು ಮನವಿ ಮಾಡಿದರು. ಆದರೆ ಮೈತ್ರಿ ಸರ್ಕಾರ ರಚನೆಯಾದ ಮೇಲೆ ನಿತ್ಯವೂ ಹೆಚ್‌ಡಿಕೆ ಅವರಿಹೆ ಕಿರುಕುಳ ನೀಡಲು ಆರಂಭಿಸಿದರು ಎಂದು ಸಿಎಂ ಇಬ್ರಾಹಿಂ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಲಾಟರಿ ನಿಷೇಧ, ಸಾರಾಯಿ ನಿಷೇಧದಂತ ಜನಪರ ನಿರ್ಧಾರಗಳನ್ನು ಕೈಗೊಂಡಿದ್ದರು. ರಾಜ್ಯದ ಹಿತ ಕಾಪಾಡುವಲ್ಲಿ ಜೆಡಿಎಸ್ ಪಕ್ಷ ಸದಾ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ರೈತರಿಗಾಗಿ 23 ಸಾವಿರ ಕೋಟಿ ರೂ. ಸಾಲ ತೀರಿಸಿದ ಯಾವುದಾದರೂ ಪಕ್ಷ ಇದ್ದರೆ ಅದು ಜೆಡಿಎಸ್‌ ಮಾತ್ರ ಎಂದು ಸಿಎಂ ಇಬ್ರಾಹಿಂ ಇದೇ ವೇಳೆ ನುಡಿದರು.

ಹೆಚ್‌ಡಿ ಕುಮಾರಸ್ವಾಮಿ ಸುಧೀರ್ಘ 20 ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಜನರುಈಗಲೂ ಅವರ ಮನೆ ಬಳಿ ಕಷ್ಟ ಹೇಳಿಕೊಂಡು ಬರುತ್ತಾರೆ. ಹೆಚ್‌ಡಿಕೆ ಅವರೇ ಈಗಲೂ ಮುಖ್ಯಮಂತ್ರಿ ಎಂದು ಜನರು ಭಾವಿಸಿದ್ದಾರೆ. ಜನರ ಈ ಅಭಿಮಾನವನ್ನು ಮತವನ್ನಾಗಿ ಪರಿವರ್ತಿಸಿ ಜೆಡಿಎಸ್‌ ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸ ಇರುವುದಾಗಿ ಸಿಎಂ ಇಬ್ರಾಹಿಂ ಹೇಳಿದರು.

ಜೆಡಿಎಸ್‌ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಗೆ ಅಭೂಪಪೂರ್ವ ಜನಬೆಂಬಲ ದೊರೆಯುತ್ತಿದೆ. 2023ರ ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್‌ ಪೂರ್ಣಬಹುಮತದ ಸರ್ಕಾರ ರಚಿಸಲಿದ್ದು, ಐದು ವರ್ಷಗಳಲ್ಲಿ ಪಂಚರತ್ನ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸಿಎಂ ಇಬ್ರಾಹಿಂ ವಾಗ್ದಾನ ಮಾಡಿದರು.

ಒಂದು ವೇಳೆ ನಾವು ಪಂಚರತ್ನ ಯೋಜನೆಯನ್ನು ಅನುಷ್ಠಾನಗೊಳಿಸದೇ ಹೋದರೆ, ಮತ್ತೆಂದೂ ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುವುದಿಲ್ಲ. ನಾವು ಕಾಂಗ್ರೆಸ್‌ ಹಾಗೂ ಬಿಜೆಪಿ ರೀತಿಯ ದ್ರೋಹ ರಾಜಕಾರಣವನ್ನು ಮಾಡುವುದಿಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊತ್ತಿರುವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಜನತೆ ಬೆಂಬಲಿಸಬೇಕು ಎಂದು ಸಿಎಂ ಇಬ್ರಾಹಿಂ ಇದೇ ವೇಳೆ ಮನವಿ ಮಾಡಿದರು.

ವಿಧಾನಸೌಧದ ಮುಂಭಾಗದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪುತ್ಥಳಿಯನ್ನು ನಿರ್ಮಾಣ ಮಾಡುವುದು ನಮ್ಮ ಗುರಿ. ಕೆಂಪೇಗೌಡ ಯೂನಿವರ್ಸಿಟಿ ಹಾಗೂ ಟಿಪ್ಪು ಯೂನಿವರ್ಸಿಟಿ ಮಾಡಿ, ಈ ಮೂಲಕ ಸರ್ವಜನಾಂಗದ ಶಾಂತಿಯ ತೋಟವನ್ನು ನಾವು ನಿರ್ಮಾಣ ಮಾಡುತ್ತೇವ ಏಂದು ಸಿಎಂ ಇಬ್ರಾಹಿಂ ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ನವೆಂಬರ್ 18 ರಂದು ಕೋಲಾರದಿಂದ ಆರಂಭವಾದ ಪಂಚರತ್ನ ರಥಯಾತ್ರೆಗೆ ಜನರು ನೀಡುತ್ತಿರುವ ಅಭೂತಪೂರ್ವ ಜನಬೆಂಬಲಕ್ಕೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

IPL_Entry_Point

ವಿಭಾಗ