ಕನ್ನಡ ಸುದ್ದಿ  /  Karnataka  /  Karnataka 2nd Pu Exam Second Pu Examination From Today State Govt Clarified That Hijab Ban Applicable In Exam Center

Karnataka 2nd PU Exam: ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ; ಹಿಜಾಬ್‌ ಧರಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಇಲ್ಲ

Karnataka 2nd PU Exam: ರಾಜ್ಯದಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಇಂದಿನಿಂದ ಮಾರ್ಚ್‌ 29ರ ತನಕ ನಡೆಯಲಿದೆ. ಹಿಜಾಬ್‌ ಧರಿಸಿ ಬಂದರೆ ಪರೀಕ್ಷಾ ಕೊಠಡಿಗೆ ಪ್ರವೇಶ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ದ್ವಿತೀಯ ಪಿಯು ಪರೀಕ್ಷೆ (ಸಾಂಕೇತಿಕ ಚಿತ್ರ)
ದ್ವಿತೀಯ ಪಿಯು ಪರೀಕ್ಷೆ (ಸಾಂಕೇತಿಕ ಚಿತ್ರ) (HT )

ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯು ಇಂದು ರಾಜ್ಯದ 5,716 ಕಾಲೇಜುಗಳ 1,109 ಪರೀಕ್ಷಾ ಕೇಂದ್ರಗಳಲ್ಲಿ ಶುರುವಾಗುತ್ತಿದೆ.

ಈ ಕೇಂದ್ರಗಳಲ್ಲಿ 1,109 ಸಹ ಮುಖ್ಯಶಿಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ, 2373 ವಿಶೇಷ ಜಾಗೃತ ದಳದ ಸಿಬ್ಬಂದಿಯನ್ನು ಪರೀಕ್ಷಾ ನಿರ್ವಹಣೆಗಾಗಿ ನಿಯೋಜಿಸಲಾಗಿದೆ. ಇದಲ್ಲದೆ, ಸಿಸಿ ಟಿವಿ ಕ್ಯಾಮೆರಾ, ಪೊಲೀಸ್‌ ಬಂದೋಬಸ್ತ್‌ ಕೂಡ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು.

ರಾಜ್ಯದ ಒಟ್ಟು 3,63,698 ವಿದ್ಯಾರ್ಥಿಗಳು ಮತ್ತು 3,62,497 ವಿದ್ಯಾರ್ಥಿನಿಯರು ಸೇರಿ ಒಟ್ಟು 7,26,195 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ 6.29 ಲಕ್ಷ ವಿದ್ಯಾರ್ಥಿಗಳು ಹೊಸಬರಾಗಿದ್ದು, 25,847 ಖಾಸಗಿ ಮತ್ತು 70,589 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ನಿಕಾಯವಹಿ ನೋಡುವುದಾದರೆ ಕಲಾ ನಿಕಾಯದಿಂದ 2,34,815, ವಾಣಿಜ್ಯ ನಿಕಾಯದಿಂದ 2,47,260 ಮತ್ತು ವಿಜ್ಞಾನ ನಿಕಾಯದಿಂದ 2,44,120 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಇಂದು ಕನ್ನಡ/ಅರೇಬಿಕ್ ಪರೀಕ್ಷೆ

ಮಾ.9ರಿಂದ 29ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದ್ದು, ಮೊದಲ ದಿನವಾದ ಇಂದು ಪ್ರಥಮ ಭಾಷೆ ಕನ್ನಡ ಹಾಗೂ ಆರೇಬಿಕ್‌ ಪರೀಕ್ಷೆ ನಡೆಯಲಿವೆ.

ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಭದ್ರತಾ ಕೊಠಡಿಗಳ ಬಳಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.

ಪರೀಕ್ಷಾ ಸಮಯಕ್ಕಿಂತ ಅರ್ಧಗಂಟೆ ಮೊದಲೇ ಪರೀಕ್ಷಾ ಕೊಠಡಿಯಲ್ಲಿ ಹಾಜರಾಗಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ನಿಗದಿತ ಸಮಯಕ್ಕಿಂತ ಮೊದಲ ಕೊಠಡಿ ಪ್ರವೇಶಿಸುವುದರಿಂದ ವಿದ್ಯಾರ್ಥಿಗಳು ನಿರಾಂತಕವಾಗಿ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದರು.

ಹಿಜಾಬ್‌ ಧರಿಸಿ ಬರಬೇಡಿ, ಹಿಜಾಬ್‌ ಧರಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಇಲ್ಲ

ದ್ವಿತೀಯ ಪಿಯು ಪರೀಕ್ಷೆಗಳಿಗೆ ಹಿಜಾಬ್ ಸೇರಿ ಯಾವುದೇ ಧರ್ಮಾಧಾರಿತ ಉಡುಪು ಧರಿಸಿ ಬಂದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು.

ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಆದ್ದರಿಂದ ಈ ವಿಚಾರದಲ್ಲಿ ಕಳೆದ ಸಾಲಿನ ಪರೀಕ್ಷೆ ಸಂದರ್ಭದಲ್ಲಿ ಯಾವ ನಿಯಮ ಅನುಸರಿಸಲಾಗಿತ್ತೋ ಅದೇ ನಿಯಮವನ್ನು ಸರ್ಕಾರ ಈ ವರ್ಷವೂ ಮುಂದುವರಿಸಿದೆ.

ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರಬಹುದು. ಅಥವಾ ಇನ್ನಿತರ ಸಾಮಾನ್ಯ ಉಡುಪು ಧರಿಸಿ ಬರಬಹುದು. ಹಿಜಾಬ್ ಹಾಗೂ ಯಾವುದೇ ಧರ್ಮಾಧಾರಿತ ಉಡುಪುಗಳು ಸಮವಸ್ತ್ರ ಈ ಯಾದಿಗೆ ಸಂಬಂಧಿಸಿದವಲ್ಲ. ಹಾಗಾಗಿ ಅವುಗಳನ್ನು ಧರಿಸಿ ಬಂದರೆ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಸಚಿವ ನಾಗೇಶ್‌ ನಿನ್ನೆಯೇ ವಿವರಿಸಿದ್ದರು.

ಗಮನಿಸಬಹುದಾದ ಸುದ್ದಿ

ಗಣಿ ಪರಿಸರ ಪುನರುಜ್ಜೀವನ ನಿಗಮಕ್ಕೆ ಹೆಚ್ಚಿನ ಅಧಿಕಾರ; ಗಣಿಬಾಧಿತ ಪ್ರದೇಶ ಅಭಿವೃದ್ಧಿಗೆ 24000 ಕೋಟಿ ರೂ.

ಗಣಿಬಾಧಿತ ಪ್ರದೇಶಗಳ ಪುನರುಜ್ಜಿವನಕ್ಕಾಗಿ ದಿಟ್ಟ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಅಂದಾಜು 24,000 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆ ಅನುಮೋದಿಸಿದೆ. ಅದೇ ರೀತಿ, ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮ ತಿದ್ದುಪಡಿ-2023ಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರವನ್ನೂ ಸಚಿವ ಸಂಪುಟ ತೆಗೆದುಕೊಂಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point