ಕನ್ನಡ ಸುದ್ದಿ  /  ಕರ್ನಾಟಕ  /  Karnataka Cabinet Decisions: ಗಣಿ ಪರಿಸರ ಪುನರುಜ್ಜೀವನ ನಿಗಮಕ್ಕೆ ಹೆಚ್ಚಿನ ಅಧಿಕಾರ; ಗಣಿಬಾಧಿತ ಪ್ರದೇಶ ಅಭಿವೃದ್ಧಿಗೆ 24000 ಕೋಟಿ ರೂ.

Karnataka cabinet decisions: ಗಣಿ ಪರಿಸರ ಪುನರುಜ್ಜೀವನ ನಿಗಮಕ್ಕೆ ಹೆಚ್ಚಿನ ಅಧಿಕಾರ; ಗಣಿಬಾಧಿತ ಪ್ರದೇಶ ಅಭಿವೃದ್ಧಿಗೆ 24000 ಕೋಟಿ ರೂ.

Karnataka Minor Mineral Policy: ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಅಂದಾಜು 24,000 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆ ಅನುಮೋದಿಸಿದೆ. ಅದೇ ರೀತಿ, ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮ ತಿದ್ದುಪಡಿ-2023ಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರವನ್ನೂ ಸಚಿವ ಸಂಪುಟ ತೆಗೆದುಕೊಂಡಿದೆ.

ವಿಧಾನಸೌಧ
ವಿಧಾನಸೌಧ

ಗಣಿಬಾಧಿತ ಪ್ರದೇಶಗಳ ಪುನರುಜ್ಜಿವನಕ್ಕಾಗಿ ದಿಟ್ಟ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಅಂದಾಜು 24,000 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆ ಅನುಮೋದಿಸಿದೆ. ಅದೇ ರೀತಿ, ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮ ತಿದ್ದುಪಡಿ-2023ಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರವನ್ನೂ ಸಚಿವ ಸಂಪುಟ ತೆಗೆದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಒಡಿಶಾ ಮಾದರಿಯಲ್ಲಿ ಗಣಿಬಾಧಿತ ಪ್ರದೇಶ ಅಭಿವೃದ್ಧಿ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ತೀವ್ರತರದ ಹಾನಿ ಉಂಟಾಗಿದೆ. ಈ ಪ್ರದೇಶಗಳ ಪುನರುಜೀವನಕ್ಕೆ ಅಗತ್ಯವಾದ ಯೋಜನೆಗಳ ರೂಪುರೇಷೆಯನ್ನು ಆಯಾ ಇಲಾಖೆ ಮುಖ್ಯಸ್ಥರೇ ತಯಾರಿಸಲಿದ್ದಾರೆ. ಇಲಾಖೆ ಮುಖ್ಯಸ್ಥರು ಸಲ್ಲಿಸುವ ಯೋಜನೆಗಳ ಪರಿಶೀಲನೆ ನಡೆಸಿ ಅನುಮೋದನೆ ನೀಡುವ ಕೆಲಸವನ್ನು ಸುದರ್ಶನರೆಡ್ಡಿ ನೇತೃತ್ವದ ಪ್ರಾಧಿಕಾರ ನಡೆಸಲಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಚಿವ ಸಂಪುಟ ಸಭೆ ಬಳಿಕ ತಿಳಿಸಿದರು.

ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ವಿಶೇಷವಾಗಿ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಅಂದಾಜು 1,700 ಕೋಟಿ ರೂಪಾಯಿ ವಿನಿಯೋಗಿಸಬಹುದು. ಗಣಿಗಾರಿಕೆಯಿಂದ ಸಂಗ್ರಹಿಸಲಾದ ರಾಜಧನ ಅಂದಾಜು 18,000 ಕೋಟಿ ರೂಪಾಯಿ ಇತ್ತು. ಅದು ಈಗ ಬಡ್ಡಿ ಸೇರಿ 23- 24,000 ಕೋಟಿ ರೂಪಾಯಿ ಆಗಿರಬಹುದು. ಈ ಹಣವನ್ನು ಈ ಪ್ರದೇಶಾಭಿವೃದ್ಧಿಗೆ ವಿನಿಯೋಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಖನಿಜ ನಿಯಮ ತಿದ್ದುಪಡಿಗೆ ಸಮ್ಮತಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮ ತಿದ್ದುಪಡಿ-2023ಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಖನಿಜ ನೀತಿ ಪರಿಷ್ಕರಣೆ ಈ ಹಿಂದೆಯೇ ಆಗಬೇಕಾಗಿತ್ತು. ಅದಕ್ಕಾಗಿ ಸಚಿವ ಸಂಪುಟ ಉಪಸಮಿತಿ ರಚಿಸಿ 3-4 ವರ್ಷ ಸುದೀರ್ಘ ಚರ್ಚೆ ಕೂಡ ಆಗಿತ್ತು. ಈಗ ಕೆಲವು ನಿಯಮ ಸರಳೀಕರಿಸಿ ಕಲ್ಲು ಗಣಿಗಾರಿಕೆ, ಸಾಮಗ್ರಿ ಪೂರೈಕೆಗೆ ರಿಯಾಯಿತಿ ಕೊಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವಿವರಿಸಿದರು.

ಈ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಉಪ ಖನಿಜ ನೀತಿ ಜಾರಿಗೆ ತರುವುದಾಗಿ ಘೋಷಣೆ ಮಾಡಲಾಗಿತ್ತು. ಈಗ ಉಪ ಖನಿಜ ನೀತಿ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ತಿದ್ದುಪಡಿಯಿಂದ ಜಲ್ಲಿ ಕಲ್ಲು ಪೂರೈಕೆ ಹಾಗೂ ಎಂ- ಸ್ಯಾಂಡ್ ನಿರ್ವಹಣೆಗೆ ಅನುಕೂಲವಾಗಲಿದೆ. ಕಲ್ಲುಗಣಿ ಮಂಜೂರಾತಿ, ಗುತ್ತಿಗೆ ನವೀಕರಣ ನಿಯಮಗಳ ಸರಳೀಕರಣ ಆಗಿದೆ. ಇದಲ್ಲದೆ ಹಲವು ರಿಯಾಯಿತಿ ಕೂಡ ಇರಲಿದೆ ಎಂದು ಸಚಿವರು ಹೇಳಿದರು.

ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮಕ್ಕೆ ಹೆಚ್ಚಿನ ಅಧಿಕಾರ

ಅಧಿಕಾರ ವಿಕೇಂದ್ರೀಕರಣದ ಪ್ರಸ್ತಾವನೆಯನ್ನು ಸಚಿವ ಸಂಪುಟ ಅನುಮೋದಿಸಿದ ಕಾರಣ ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮ ಹೆಚ್ಚು ಸಕ್ರಿಯವಾಗಲಿದೆ.

ಇದುವರೆಗೆ 10 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಎಲ್ಲ ಯೋಜನೆಗಳಿಗೂ ಸಚಿವ ಸಂಪುಟದ ಅನುಮೋದನೆ ಬೇಕಿತ್ತು. ಇದರಿಂದ ವಿಳಂಬವಾಗುತ್ತಿತ್ತು. ಈ ವಿಳಂಬವನ್ನು ತಪ್ಪಿಸುವ ಸಲುವಾಗಿ ಅಧಿಕಾರ ವಿಕೇಂದ್ರೀಕರಿಸುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ. ಈ ತೀರ್ಮಾನದಿಂದ ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.

ರಾಜ್ಯದಲ್ಲಿ ಕಲ್ಲುಗಣಿಗಾರಿಕೆಗೆ ಏಕರೂಪದ ರಾಯಧನ

ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ನಿಗದಿಪಡಿಸಲಾದ ರಾಯಧನ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿ ಇತ್ತು. ಇದರಿಂದ ಕಲ್ಲು ಗಣಿಗಾರಿಕೆ ಮಾಡುವವರಿಗೆ ಸಮಸ್ಯೆ ಆಗಿತ್ತು. ಇದನ್ನು ಗುತ್ತಿಗೆದಾರರು ತೀವ್ರವಾಗಿ ಆಕ್ಷೇಪಿಸಿದ್ದರು. ಪದೇಪದೆ ಪ್ರತಿಭಟನೆ ಕೂಡ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಲ್ಲುಗಣಿಗಾರಿಕೆಗೆ ಸಂಬಂಧಿಸಿ ಏಕರೂಪ ರಾಯಧನ ನಿಗದಿ ಮಾಡಲು ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ಎಂದು ಸಚಿವರು ತಿಳಿಸಿದರು.

IPL_Entry_Point