ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah: ಪಕ್ಷ ಒಪ್ಪಿದ್ರೆ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆಂದ ಸಿದ್ದರಾಮಯ್ಯ; ವರುಣಾ ಜೊತೆಗೆ ಕೋಲಾರ ಅಥವಾ ಬಾದಾಮಿ?

Siddaramaiah: ಪಕ್ಷ ಒಪ್ಪಿದ್ರೆ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆಂದ ಸಿದ್ದರಾಮಯ್ಯ; ವರುಣಾ ಜೊತೆಗೆ ಕೋಲಾರ ಅಥವಾ ಬಾದಾಮಿ?

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ಇದರ ಜೊತೆಗೆ ಪಕ್ಷ ಒಪ್ಪಿದರೆ ಮತ್ತೊಂದು ಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಆ ಕ್ಷೇತ್ರ ಯಾವುದೆಂದು ತಿಳಿಸಿದ್ದಾರೆ.

ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಬಯಸಿದ್ದಾರೆ.

ವರುಣಾದಲ್ಲಿ ಹಾಲಿ ಶಾಸಕ, ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಅವರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ 75ರ ಹರೆಯದ ನಾಯಕ ಐದು ವರ್ಷಗಳ ನಂತರ ಪ್ರಸ್ತುತ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ತವರು ಕ್ಷೇತ್ರಕ್ಕೆ ಮರಳಿದ್ದಾರೆ.

ಸಿದ್ದರಾಮಯ್ಯ ಅವರು ಈ ಹಿಂದೆ 2008 ಮತ್ತು 2013ರಲ್ಲಿ ವರುಣಾದಿಂದ ಎರಡು ಬಾರಿ ಗೆದ್ದಿದ್ದರು ಮತ್ತು 2013 ರಲ್ಲಿ ಇಲ್ಲಿಂದ ಗೆದ್ದು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಆಡಳಿತ ಪೂರೈಸಿದ್ದರು.

ತಮ್ಮ ಸ್ಪರ್ಧೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪಕ್ಷವು ತನ್ನ ತವರು ಮೈಸೂರು ಜಿಲ್ಲೆಯ ವರುಣಾದಿಂದ ಕಣಕ್ಕಿಳಿಯಲು ಹೇಳಿದೆ. ಪಕ್ಷ ಒಪ್ಪಿದರೆ ವರುಣಾದ ಜೊತೆಗೆ ಕೋಲಾರದಿಂದ ಸ್ಪರ್ಧಿಸಲು ಬಯಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಹೇಳಿದ್ದೆ. ವರುಣಾದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿದೆ. ಕೋಲಾರ ಮತ್ತು ಇಲ್ಲಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೇನೆ, ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ತಮ್ಮ ಪುತ್ರ ಯತೀಂದ್ರ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಅಂತಲೂ ಹೇಳಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆಗೆ ಆಸಕ್ತಿ ತೋರಿರುವ ಕೋಲಾರ ಹಾಗೂ ಈಗಾಗಲೇ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಪಕ್ಷದ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಎರಡೂ ಸ್ಥಾನಗಳಿಂದ ಗೆದ್ದರೆ, ವರುಣಾ ಕ್ಷೇತ್ರವನ್ನು ತೆರವು ಮಾಡ್ತಾರೆ. ನಂತರದ ಉಪಚುನಾವಣೆಯಲ್ಲಿ ಯತೀಂದ್ರ ಅವರನ್ನು ಕಣಕ್ಕೆ ಇಳಿಸಲು ಯೋಜಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಸಿದ್ದರಾಮಯ್ಯ ಅವರು ‘ಸುರಕ್ಷಿತ ಸ್ಥಾನ’ದ ನಿರೀಕ್ಷೆಯಲ್ಲಿದ್ದಾರೆ. ಸಮೀಕ್ಷೆ ನಡೆಸಿ ಒಪ್ಪಿಗೆ ಸಿಕ್ಕರೆ ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಜನವರಿಯಲ್ಲಿ ಘೋಷಿಸಿದ್ದರು.

ಆದರೆ, ಕಳೆದ ವಾರ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕತ್ವವು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಸ್ಪರ್ಧಿಸದಂತೆ ಸಲಹೆ ನೀಡಿತ್ತು ಎಂದು ವರದಿಯಾಗಿತ್ತತು. ಆ ಕ್ಷೇತ್ರ ಅವರಿಗೆ "ರಿಸ್ಕಿ" ಎಂದು ಹೇಳಲಾಗಿದೆ.

ಇತ್ತೀಚೆಗೆ ತಮ್ಮ ನಿವಾಸದ ಬಳಿ ಜಮಾಯಿಸಿದ್ದ ಕೋಲಾರದ ಬೃಹತ್ ಬೆಂಬಲಿಗರನ್ನು ಉದ್ದೇಶಿ ಮಾತನಾಡಿದ್ದ ಸಿದ್ದರಾಮಯ್ಯ, ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ ಶೇ. 1ರಷ್ಟು ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ ಎಂದಿದ್ದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಅವರು ಕ್ಷೇತ್ರದ ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗದ ಕಾರಣ ಅಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಪದೇ ಪದೆ ಹೇಳ್ತಿದ್ದಾರೆ.

2023ರ ವಿಧಾನಸಭಾ ಚುನಾವಣೆ ತನ್ನ ಕೊನೆಯ ಚುನಾವಣೆ ಎಂದು ಘೋಷಿಸಿರುವ ಸಿದ್ದರಾಮಯ್ಯ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗಲೇ ಸಿದ್ದರಾಮಯ್ಯ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ ನ ಜಿಟಿ ದೇವೇಗೌಡರ ವಿರುದ್ಧ 36,042 ಮತಗಳಿಂದ ಸೋತಿದ್ದರು.

ಆದರೂ ಅವರು 2018 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಾದಾಮಿಯಲ್ಲಿ ಗೆಲುವು ಸಾಧಿಸಿದ್ದರು. ಬಿ ಶ್ರೀರಾಮುಲು ಅವರನ್ನು 1,696 ಮತಗಳಿಂದ ಸೋಲಿಸಿದ್ದರು.

1983 ರಲ್ಲಿ ವಿಧಾನಸಭೆಗೆ ಪಾದಾರ್ಪಣೆ ಮಾಡಿದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಲೋಕದಳ ಪಕ್ಷದ ಟಿಕೆಟ್‌ನಲ್ಲಿ ಆಯ್ಕೆಯಾಗಿದ್ದರು. ಈ ಕ್ಷೇತ್ರದಿಂದ ಐದು ಬಾರಿ ಗೆದ್ದು ಮೂರು ಬಾರಿ ಸೋಲಿನ ರುಚಿ ಕಂಡಿದ್ದಾರೆ.

IPL_Entry_Point