ಕನ್ನಡ ಸುದ್ದಿ  /  ಕರ್ನಾಟಕ  /  Karnataka Assembly Elections: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟ, ಚುನಾವಣಾ ಪ್ರಕ್ರಿಯೆಗೆ ಮೇ 15ರ ಗಡುವು

Karnataka Assembly Elections: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟ, ಚುನಾವಣಾ ಪ್ರಕ್ರಿಯೆಗೆ ಮೇ 15ರ ಗಡುವು

ಮೇ 15ರ ಒಳಗೆ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾಗಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮತದಾನಕ್ಕೆ ಬೆಳಿಗ್ಗೆ 7ರಿಂದ ಸಂಜೆ 6ರವರೆಗಿನ ಅವಧಿಯನ್ನು ನಿಗದಿಪಡಿಸಲಾಗಿದೆ.

ಕೇಂದ್ರ ಚುನಾವಣಾ ಆಯೋಗ
ಕೇಂದ್ರ ಚುನಾವಣಾ ಆಯೋಗ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಕೇಂದ್ರ ಚುನಾವಣಾ ಆಯೋಗವು (Election Commision of India - EC) ಗುರುವಾಗ (ಏ 13) ಮುಂಜಾನೆ ಅಧಿಸೂಚನೆ ಹೊರಡಿಸಿದೆ. ರಾಜ್ಯಪಾಲ ತಾವರಚಂದ್ ಗೆಹಲೋತ್ ಸೂಚನೆ ಮೇರೆಗೆ ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ (Karnataka Gazette Notification) ಪ್ರಕಟವಾಗಿದ್ದು, ಇಂದಿನಿಂದ ಚುನಾವಣಾ ವಿಧಿವಿಧಾನಗಳು ಅಧಿಕೃತವಾಗಿ ಆರಂಭಗೊಂಡಂತೆ ಆಗಿವೆ. ಅಧಿಸೂಚನೆಯ ಪ್ರಕಾರ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20, ನಾಮಪತ್ರ ಪರಿಶೀಲನೆಗೆ ಏ 21, ನಾಮಪತ್ರ ಹಿಂಪಡೆಯಲು ಏ 24 ಕೊನೆಯ ದಿನ. ಮೇ 10ರಂದು ಮತದಾನ ನಡೆಯಲಿದೆ. ಮೇ 15ರ ಒಳಗೆ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾಗಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮತದಾನಕ್ಕೆ ಬೆಳಿಗ್ಗೆ 7ರಿಂದ ಸಂಜೆ 6ರವರೆಗಿನ ಅವಧಿಯನ್ನು ನಿಗದಿಪಡಿಸಲಾಗಿದೆ. ಕರ್ನಾಟಕದಲ್ಲಿ ಮತಎಣಿಕೆ ಮೇ 13ರಂದು ನಡೆಯಲಿದೆ ಎಂದು ಈ ಮೊದಲು ಚುನಾವಣಾ ಆಯೋಗವು ತಿಳಿಸಿತ್ತು.

ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರಿದ್ದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳ ಉಮೇದುವಾರರು ಬಿಸಿಲಿನಲ್ಲಿ ಬೆವರು ಸುರಿಸುತ್ತಿದ್ದಾರೆ. ಮತದಾರರ ಓಲೈಕೆಗೆ ಅಭ್ಯರ್ಥಿಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯು ಮೊದಲ ಹಂತದಲ್ಲಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅವರ ಸ್ವಕ್ಷೇತ್ರ ಶಿಗ್ಗಾವಿ ಸಿಕ್ಕಿದ್ದರೆ, ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಮೊದಲ ಪಟ್ಟಿ ಘೋಷಿಸಿದ ಒಂದು ದಿನದ ನಂತರ ಎರಡನೇ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿತು. ಇದರಲ್ಲಿ 23 ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಬಾಕಿ 12 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಮಾಜಿ ಮುಖ್ಯಮಂತ್ರಿ ಹಾಗೂ ಧಾರವಾಡದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಅವರ ಹೆಸರು ಎರಡೂ ಪಟ್ಟಿಗಳಲ್ಲಿ ನಾಪತ್ತೆಯಾಗಿದೆ. ಟಿಕೆಟ್ ವಂಚಿತರಾದ ಲಕ್ಷ್ಮಣ ಸವದಿ, ಅಂಗಾರ, ಸೊಗಡು ಶಿವಣ್ಣ ಸೇರಿದಂತೆ ಹಲವರು ಪಕ್ಷ ತೊರೆಯುವ ಮಾತನ್ನಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ಮೊದಲ ಪಟ್ಟಿಯಲ್ಲಿ 124 ಮತ್ತು 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಪಂಚರತ್ನ ಯಾತ್ರೆಯ ಮೂಲಕ ರಾಜ್ಯವ್ಯಾಪಿ ಸಂಚರಿಸಿದುವ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ 93 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಣ ಮುಸುಕಿನ ಗುದ್ದಾಟ, ಜೆಡಿಎಸ್‌ನಲ್ಲಿ ಹಾಸನದಿಂದ ಸ್ಪರ್ಧಿಸಲು ಭವಾನಿ ರೇವಣ್ಣ ಹಿಡಿದಿರುವ ಪಟ್ಟು ಇನ್ನೂ ಬಗೆಹರಿದಿಲ್ಲ.

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆಯಲಿದೆ. 112 ಶಾಸಕರನ್ನು ಪಡೆಯುವ ಪಕ್ಷ ಅಧಿಕಾರ ರಚಿಸಲಿದೆ. ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆಯ ಅವಧಿ ಮೇ 23ಕ್ಕೆ ಕೊನೆಯಾಗಲಿದೆ. ಪ್ರಸ್ತುತ ಬಿಜೆಪಿ 119, ಕಾಂಗ್ರೆಸ್ 75, ಜೆಡಿಎಸ್‌ 28 ಶಾಸಕ ಬಲ ಹೊಂದಿವೆ. ಬಿಜೆಪಿಯ ಉಮೇಶ್ ಕತ್ತಿ ಹಾಗೂ ಆನಂದ್ ಮಾಮನಿ ನಿಧನರಾದ ಹಿನ್ನೆಲೆಯಲ್ಲಿ 2 ಸ್ಥಾನಗಳು ಖಾಲಿಯಿವೆ. ಈ ಸ್ಥಾನಗಳಿಗೆ ಉಪ ಚುನಾವಣೆ ನಡೆದಿರಲಿಲ್ಲ.

ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.

IPL_Entry_Point