ಕನ್ನಡ ಸುದ್ದಿ  /  ಕರ್ನಾಟಕ  /  Life Of A Politician: ರಾಜಕಾರಿಣಿ ಅನ್ನೋದೆ ವಿಶಿಷ್ಟ ತಳಿ, ಅವರು ಹ್ಯಾಗಿರ್ತಾರೆ ಅನ್ನೋದೇ ಕುತೂಹಲ; ಇದು ರಾಜಕೀಯ ಲಹರಿ

Life of a Politician: ರಾಜಕಾರಿಣಿ ಅನ್ನೋದೆ ವಿಶಿಷ್ಟ ತಳಿ, ಅವರು ಹ್ಯಾಗಿರ್ತಾರೆ ಅನ್ನೋದೇ ಕುತೂಹಲ; ಇದು ರಾಜಕೀಯ ಲಹರಿ

Karnataka Assembly Elections 2023: ರಾಜಕಾರಿಣಿಗಳ ವೈಯಕ್ತಿಕ ಬದುಕು ಹೇಗಿರುತ್ತದೆ? ಅದನ್ನೊಂದು ವೃತ್ತಿಯಾಗಿ ಪರಿಗಣಿಸಿದರೆ ಆ ಕೆಲಸದ ಸ್ವರೂಪ ಏನು? ಇಂಥ ಹಲವು ಪ್ರಶ್ನೆಗಳಿಗೆ ಈ ಲಘು ಬರಹದಲ್ಲಿ ಉತ್ತರ ಹುಡುಕಲು ಯತ್ನಿಸಿದ್ದಾರೆ ಮೈಸೂರಿನ ಯುವ ಲೇಖಕಿ ಧಾತ್ರಿ ಭಾರದ್ವಾಜ್.

ರಾಜಕಾರಿಣಿಗಳ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲರಿಗೂ ಕುತೂಹಲ (ಪ್ರಾತಿನಿಧಿಕ ಚಿತ್ರ)
ರಾಜಕಾರಿಣಿಗಳ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲರಿಗೂ ಕುತೂಹಲ (ಪ್ರಾತಿನಿಧಿಕ ಚಿತ್ರ)

ಬದುಕು ನಡೆಸಲು ಎಲ್ಲರೂ ಒಂದೊಂದು ವೃತ್ತಿಯನ್ನು ಅವಲಂಬಿಸಿರುತ್ತಾರೆ. ಟೀಚರ್‌, ಡಾಕ್ಟರ್, ಲಾಯರ್‌, ಡ್ರೈವರ್..ಹೀಗೆ ವಿವಿಧ ಜನರು ತಮ್ಮ ಸಾಮರ್ಥ್ಯ ಹಾಗೂ ಆಸಕ್ತಿಯ ಆಧಾರದ ಮೇಲೆ ಒಂದೊಂದು ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ವೃತ್ತಿಯಲ್ಲಿ ಅವರಿಗೆ ಜೀವನೋಪಾಯ ಇರುತ್ತದೆ. ಬೇಕಾದಾಗ ರಜೆ, ಅವಶ್ಯಕತೆಗೆ ಆಗುವಷ್ಟು ಸಂಪಾದನೆ, ಸಾರ್ವಜನಿಕ ಸಂಪರ್ಕ ಮತ್ತೆಲ್ಲವೂ ಅವರವರ ವೃತ್ತಿಯಲ್ಲಿ ಅವರಿಗೆ ಸಿಗುತ್ತದೆ. ಆದರೆ ಇದೆಲ್ಲಕ್ಕಿಂತ ಭಿನ್ನವಾದ, ಬೇಕಾದಷ್ಟು ಅನುಕೂಲಗಳೊಂದಿಗೆ ಭರಪೂರ ಅನಾನುಕೂಲಗಳೂ ಇರುವ ವೃತ್ತಿ ಒಂದಿದೆ. ಅದೇ ರಾಜಕೀಯ.

ಹೌದು..ರಾಜಕೀಯ ಒಂದು ವೃತ್ತಿಯೇ? ಅಥವಾ ಪ್ಯಾಷನ್‌ನಿಂದ ಮಾಡುವ ಕೆಲಸವೇ? ಎರಡೂ ಅಲ್ಲದೆ ಬಿಟ್ಟೇನೆಂದರೂ ಬಿಡದು ಎಂಬಂತೆ ಕಾಡುವ ಮಾಯೆಯೇ? ಏನೇ ಇರಬಹುದು. ಆದರೆ ರಾಜಕೀಯವನ್ನು ಒಂದು ವೃತ್ತಿಯ ಚೌಕಟ್ಟಿನಲ್ಲಿ ನೋಡುವುದು ಸವಾಲಿನ ಕೆಲಸವೇ ಸರಿ. ವೃತ್ತಿ ಎನಿಸಿಕೊಳ್ಳಲು ಹಾಗೂ ವೃತ್ತಿ ಎನಿಸಿಕೊಳ್ಳದೆ ಇರಲು ರಾಜಕೀಯಕ್ಕೆ ಬಹಳಷ್ಟು ಕಾರಣಗಳಿವೆ. ಇತರ ಸಾಮಾನ್ಯ ವೃತ್ತಿಪರರಂತೆ ರಾಜಕಾರಣಿಗಳಿಗೂ ಸಂಬಳ, ರಜೆ ಹಾಗೂ ಇತರ ಸೌಲಭ್ಯಗಳು ದೊರೆಯುತ್ತವೆ. ರಾಜಕೀಯ ಮತ್ತು ಇತರ ವೃತ್ತಿಗಳ ನಡುವೆ ಇರುವುದು ಇದೊಂದೇ ಸಾಮ್ಯತೆ. ಮಿಕ್ಕಿದ್ದೆಲ್ಲವೂ ರಾಜಕೀಯದಲ್ಲಿ ಅಯೋಮಯ.

ಬೇರೆ ಕೆಲಸಗಳಂತೆ ಇಲ್ಲಿ ನಿವೃತ್ತಿಗೆ ವಯಸ್ಸಿಲ್ಲ. ಹಾಗೆ ನೋಡಿದರೆ ಒಬ್ಬರ ರಾಜಕೀಯ ಜೀವನ ಬೇರೂರುವುದೇ ನಿವೃತ್ತಿಯ ವಯಸ್ಸಿನ ನಂತರ. ಮಾಮೂಲಿ ಕೆಲಸಗಳಂತೆ ಇಲ್ಲಿ ವಿರಾಮಕ್ಕೆ ಅವಕಾಶ ಇಲ್ಲ. ಬಹುಪಾಲು ಸಂದರ್ಭಗಳಲ್ಲೂ, ಎಲ್ಲ ಸಮಯಗಳಲ್ಲೂ ಜಾಗೃತವಾಗಿಯೇ ಇರಬೇಕು. ರಾಜಕೀಯ ಚಟುವಟಿಕೆಗಳು 24X7/365 ಆಧಾರದ ಮೇಲೆ ಕೆಲಸ ಮಾಡುತ್ತವೆ. ಒಂದು ಕ್ಷಣ ಎಚ್ಚರ ತಪ್ಪಿದರೂ ಲೆಕ್ಕಾಚಾರಗಳೆಲ್ಲವೂ ಅದಲುಬದಲಾಗಿಬಿಡುವ ಅಪಾಯ ಇರುತ್ತದೆ. ʻಮಕ್ಕಳನ್ನು ನೋಡಿಕೊಳ್ಳಬೇಕುʼ, ʻಮನೆಯಲ್ಲಿ ಸಮಾರಂಭ ಇದೆʼ, ʻಮದುವೆಗೆ ಹೋಗಿ ಬರಬೇಕುʼ, ʻಫ್ರೆಂಡ್ಸ್‌ ಜೊತೆ ಪ್ರವಾಸ ಹೋಗಬೇಕುʼ ಎಂಬಂತಹ ಕಾರಣಗಳಿಂದ ವಿರಾಮ ತೆಗೆದುಕೊಂಡರೆ ಅದು ಆ ವ್ಯಕ್ತಿಗೆ ಆಗುವ ನಷ್ಟವೇ ಹೊರತು ಮತ್ಯಾರಿಗೂ ಅಲ್ಲ.

ʻPoliticians are a different breed altogether. ಅವರು ಸಾಮಾನ್ಯರಲ್ಲ. ದಿನಕ್ಕೆ ಎರಡ್ಮೂರು ಡಿನ್ನರ್‌, ನಾಲ್ಕೈದು ಲಂಚ್‌, ಮೂರ್ನಾಲ್ಕು ಬ್ರೇಕ್‌ಫಾಸ್ಟ್‌, ಏಳೆಂಟು ಕಾಫಿ-ಟೀ ಕುಡಿಯುವ ಜನ ಅವರು. ಅರ್ಧರಾತ್ರಿಯವರೆಗೂ ಅವರ ಡಿನ್ನರ್‌ ಪಾರ್ಟಿ ನಡೆದೇ ಇರುತ್ತದೆ. ಅಲ್ಲದೆ ಅವರು ಯಾರೂ ವ್ಯಾಯಾಮ ಮಾಡೋದಿಲ್ಲ. ಆದರೂ ಆರೋಗ್ಯವಾಗಿರುತ್ತಾರೆ. ನಿನ್ನೆ ಬಾಯಿತುಂಬಾ ಬೈದವನು ಎದುರಿಗೆ ಸಿಕ್ಕರೆ ಖುಷಿಯಿಂದ ಮಾತನಾಡುತ್ತಾರೆ. ಒಂದೇ ದಿನ ನಾಲ್ಕೈದು ರಾಜ್ಯಗಳನ್ನು ಸುತ್ತಿ ಹತ್ತಾರು ಕಾರ್ಯಕ್ರಮಗಳಿಗೆ ಹೋಗಿ ಬರುತ್ತಾರೆ. ಇವೆಲ್ಲವೂ ನಮ್ಮ ಕೈಲಿ ಸಾಧ್ಯವೇ ಇಲ್ಲʼ ಎಂದು ಹಿರಿಯ ಲೇಖಕ ಆರ್.ಕೆ.ನಾರಾಯಣ್‌ ಹೇಳುತ್ತಾರೆ. ರಾಜಕಾರಣಿಗಳ ಬದುಕನ್ನು ಅರಿಯಲು ಈ ಮಾತುಗಳು ಸಾಕು. ಒಟ್ಟಾರೆ ದೇಹಕ್ಕೂ, ಮನಸ್ಸಿಗೂ ಬಿಡುವು ಕೊಡದ ಕೆಲಸ ರಾಜಕೀಯ.

ಅಂದಹಾಗೆ ರಾಜಕೀಯಕ್ಕೆ ಬರುವವರು ಎಷ್ಟು ಚುರುಕಾಗಿದ್ದರೂ ಸಾಲದು. ಎಲ್ಲ ಸಾಧ್ಯತೆಗಳನ್ನು, ಎಲ್ಲ ಕೋನಗಳನ್ನೂ, ಎಲ್ಲ ರೀತಿಯ ಪರಿಣಾಮಗಳನ್ನೂ ಯೋಚಿಸಿ ಹೆಜ್ಜೆ ಇಡಬೇಕು. ಯಾವ ವಿಷಯದಲ್ಲಿ ಇನ್ನೊಬ್ಬರ ಸಲಹೆಯನ್ನು ಕೇಳಬೇಕು, ಯಾವುದರಲ್ಲಿ ಕೇಳಬಾರದು ಎಂಬ ವಿವೇಚನೆ ಮಾತ್ರ ಬಹಳ ಮುಖ್ಯವಾಗುತ್ತದೆ. ಮನುಷ್ಯನನ್ನು ಅರ್ಥಮಾಡಿಕೊಳ್ಳುವ, ಸಂದರ್ಭೋಚಿತವಾಗಿ ಹೆಜ್ಜೆ ಇಡುವ, ಪರಿಸ್ಥಿತಿಯನ್ನು ಅವಲೋಕಿಸುವ ಚಾಕಚಕ್ಯತೆ ಬೇಕು. ಏನೂ ಇಲ್ಲವಾದರೆ ಇಲ್ಲಿ ಉಳಿಯುವುದು ಅಸಾಧ್ಯ. ಎಲ್ಲಕ್ಕೂ ಮೀರಿ ರಾಜಕೀಯದಲ್ಲಿ ಬೆಳೆಯಬೇಕೆಂದರೆ ಕೆಲ ವರ್ಷಗಳ ಕಾಲ ವೈಯಕ್ತಿಕ ಬದುಕನ್ನು ಬದಿಗಿಟ್ಟುಬಿಡಬೇಕು. ಆಗ ಮಾತ್ರ ರಾಜಕೀಯದಲ್ಲಿ ನೆಲೆಯೂರಲು ಸಾಧ್ಯ.

ರಾಜಕೀಯ ಬೇರೆ ವೃತ್ತಿಗಳಂತೆ ನಿಮ್ಮ ʻಪ್ಯಾಷನ್‌ʼ ಅನ್ನು ಮಾತ್ರ ಕೇಳುವುದಿಲ್ಲ. ನಿಮ್ಮ ತನು-ಮನ-ಧನ ಎಲ್ಲವನ್ನೂ ಕೇಳುತ್ತದೆ. ಕೊಡದಿದ್ದರೆ ಅದೇ ಪಡೆದುಕೊಳ್ಳುತ್ತದೆ. ರಾಜಕೀಯದಿಂದ ಸಿಗುವ ಹೆಸರು, ಪ್ರಚಾರ, ಸಾರ್ವಜನಿಕ ಸಂಪರ್ಕ ಎಲ್ಲವೂ ಉಚಿತವೇನಲ್ಲ. ಎಲ್ಲಕ್ಕೂ ಒಂದಿಲ್ಲೊಂದು ರೀತಿಯಲ್ಲಿ ಬೆಲೆ ತೆರಲೇಬೇಕು. ಇವೆಲ್ಲಕ್ಕೂ ಸಿದ್ಧವಿರುವವರು ಮಾತ್ರ ರಾಜಕೀಯವೆಂಬ ಚಕ್ರವ್ಯೂಹದಂತಹ ರಣರಂಗವನ್ನು ಪ್ರವೇಶಿಸಬಹುದು. ಇದೊಂಥರಾ ವ್ಯಸನವೇ ಸರಿ. ಒಮ್ಮೆ ರಾಜಕೀಯ ಅಥವಾ ಅಧಿಕಾರದ ರುಚಿ ನೋಡಿದವರು ಎಂದಿಗೂ ಹಿಂದಡಿಯಿಡುವುದಿಲ್ಲ!

ಬರಹ: ಧಾತ್ರಿ ಭಾರದ್ವಾಜ್

IPL_Entry_Point