Karnataka Elections: ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಏಪ್ರಿಲ್ 6 ಅಥವಾ 7ರಂದು ಬಿಡುಗಡೆ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿಯನ್ನು ಏಪ್ರಿಲ್ 6 ಅಥವಾ 7ರಂದು ಪ್ರಕಟಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ತಿಳಿಸಿದ್ದಾರೆ.

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿಯನ್ನು ಏಪ್ರಿಲ್ 6 ಅಥವಾ 7ರಂದು ಪ್ರಕಟಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ತಿಳಿಸಿದ್ದಾರೆ. ಬೆಳಗಾವಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸುವ ಸಭೆಯಲ್ಲಿ ಭಾಗವಹಿಸಿದ ಬಳಿಕ ಜೋಶಿ ಈ ಮಾಹಿತಿ ನೀಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಬಿಜೆಪಿಯು ಇಂದು 39 ಸಂಘಟನಾ ಜಿಲ್ಲೆಗಳಲ್ಲಿ ಸ್ಥಳೀಯ ಮುಖಂಡರಿಂದ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಆ ಅಭಿಪ್ರಾಯಗಳ ಆಧಾರದಲ್ಲಿ ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲು ಪ್ರಯತ್ನಿಸುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿಯು ವಿವಿಧ ಜಿಲ್ಲೆಗಳಲ್ಲಿ 97 ವೀಕ್ಷಕರನ್ನು ನೇಮಿಸಿದೆ. ಈ ವೀಕ್ಷಕರು ಗುಪ್ತಮತದಾನದ ಮೂಲಕ ಅಭ್ಯರ್ಥಿಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಈ ಗುಪ್ತಮತದಾನದ ಮಾಹಿತಿಯನ್ನು ಬೆಂಗಳೂರಿನ ಬಿಜೆಪಿ ಕಚೇರಿಗೆ ಕಳುಹಿಸಲಾಗುತ್ತದೆ. ಏಪ್ರಿಲ್ 1 ಮತ್ತು 2ರಂದು ನಿಗದಿಯಾಗಿರುವ ಕೋರ್ ಕಮಿಟಿ ಸಭೆಯಲ್ಲಿ ಈ ಹೆಸರುಗಳನ್ನು ಚರ್ಚಿಸಿ ಪಟ್ಟಿ ತಯಾರಿಸುವ ಪ್ರಕ್ರಿಯೆ ನಡೆಸಲಾಗುತ್ತದೆ ಎನ್ನಲಾಗಿದೆ.
ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿವೆ. ಆಮ್ ಅದ್ಮಿ ಪಕ್ಷವು ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಪ್ರಕಟಿಸಿದೆ. ಇದೀಗ ಬಿಜೆಪಿಯು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸುವ ಹಂತದಲ್ಲಿದ್ದು, ಏಪ್ರಿಲ್ 6 ಅಥವಾ ಏಪ್ರಿಲ್ 7ರಂದು ಬಿಡುಗಡೆ ಮಾಡಲಿದೆ.
"ಚುನಾವಣೆಗೆ ಟಿಕೆಟ್ ನೀಡುವ ಮೊದಲು ಪಕ್ಷವು ವಿವಿಧ ಜನರ ಅಭಿಪ್ರಾಯಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿದೆ. ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ರಾಜ್ಯ ಘಟಕ ಶ್ರಮಿಸುತ್ತಿದೆ. ಹೈಕಮಾಂಡ್ ರಾಜ್ಯದ ಪ್ರಮುಖ ನಾಯಕರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡುವ ಮೊದಲು ಎಲ್ಲಾ ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹಿಸಲು ಕೇಳಿದೆ. ಕರ್ನಾಟಕ ಬಿಜೆಪಿಯ ಕೋರ್ ಕಮಿಟಿ ಸಭೆಯೂ ಕೆಲವೇ ದಿನಗಳಲ್ಲಿ ನಿಗದಿಯಾಗಿದ್ದು, ಈ ಸಭೆಯಲ್ಲಿ ಮೊದಲ ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ" ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಬಿಜೆಪಿಗೆ ಸ್ಪಷ್ಟವಾದ ಬಹುಮತ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ತಿಳಿಸಿದ್ದಾರೆ. ಬಹಳಷ್ಟು ಚುನಾವಣಾ ಸಮೀಕ್ಷೆಗಳು ನಡೆದಿದ್ದು, ಪೈಪೋಟಿ ಯನ್ನೇ ತೋರಿಸುತ್ತಿದೆ. ಕಾಂಗ್ರೆಸ್ ಪರವಾಗಿ ಇಲ್ಲ. ಚುನಾವಣೆಗೆಇನ್ನೂ ಒಂದೂವರೆ ತಿಂಗಳಿದ್ದು, ಬಹಳಷ್ಟು ಬದಲಾವಣೆಗಳು ಕಾಣುತ್ತಿವೆ ಎಂದು ಹೇಳಿದ ಅವರು ಈ ಬಾರಿಯೂ ಬಿಜೆಪಿಗೆ ಗೆಲುವು ಗ್ಯಾರಂಟಿ ಎಂದಿದ್ದಾರೆ.
ಪಟ್ಟಿ ತಯಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇನ್ನೊಂದು ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕದ ಆಯಾ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಓಟ್ ನಡೆದಿದೆ. ಗೆಲುವಿನ ಅಭ್ಯರ್ಥಿಗೆ ಟಿಕೆಟ್ ನೀಡಲು ಯೋಜಿಸಲಾಗಿದೆ. ಈಗಾಗಲೇ ಜಿಲ್ಲಾಮಟ್ಟದ ಬಿಜೆಪಿ ಪದಾಧಿಕಾರಿಗಳು, ಇದರಲ್ಲಿ ಪಾಲ್ಗೊಂಡು ಯಾರಿಗೆ ಟಿಕೆಟ್ ಕೊಡಬೇಕು ಎಂಬುದರ ಬಗ್ಗೆ ತಮ್ಮ ಮತ ಚಲಾಯಿಸಿದ್ದಾರೆ. ಇಂದಿನ ಮತದಾನದ ಫಲಿತಾಂಶ ಇಂದೇ ಬಿಜೆಪಿಗೆ ದೊರಕಿದ್ದು, ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಬಿರುಸಾಗಿದೆ. ಕರ್ನಾಟಕದ ಈ ಆಯ್ಕೆ ಪ್ರಕ್ರಿಯೆ ಯಶಸ್ವಿಯಾದರೆ ಮುಂದೆ ಚುನಾವಣೆ ನಡೆಯುವ ರಾಜ್ಯಗಳಲ್ಲಿಯೂ ಇದೇ ವಿಧಾನವನ್ನು ಬಿಜೆಪಿ ಅನುಸರಿಸಲಿದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಹಂತಗಳು
- ಇಂದು ಪದಾಧಿಕಾರಿಗಳ ಮತದಾನ ಪ್ರಕ್ರಿಯೆ ಮುಗಿದಿದೆ. ಇಂದೇ ಮತ ಎಣಿಕೆಯಾಗಲಿದೆ.
- ಆಯಾ ಸಂಘಟನಾ ಜಿಲ್ಲಾ ಮಟ್ಟದ ಬಿಜೆಪಿ ಕೋರ್ ಕಮಿಟಿ ಸದಸ್ಯರು ವಿವಿಧ ಟಿಕೆಟ್ ಆಕಾಂಕ್ಷಿಗಳಿಗೆ ಎಷ್ಟು ಮತ ಬಂದಿವೆ ಎಂಬ ಪಟ್ಟಿ ತಯಾರಿಸಿ ಬೆಂಗಳೂರಿನ ಬಿಜೆಪಿ ಕಚೇರಿಗೆ ತಲುಪಿಸಲಿದ್ದಾರೆ.
- ನಾಳೆ ಮತ್ತು ನಾಡಿದ್ದು (ಶನಿವಾರ- ಭಾನುವಾರ) ಬೆಂಗಳೂರಿನಲ್ಲಿ ಕೋರ್ ಕಮಿಟಿ ಸದಸ್ಯರು ರಾಜ್ಯ ವರಿಷ್ಠರನ್ನು ಭೇಟಿ ಮಾಡಿ ಮತದಾನದ ವರದಿಯನ್ನು ನೀಡಲಿದ್ದಾರೆ. ಜತೆಗೆ, ವಿವಿಧ ಅಭ್ಯರ್ಥಿಗಳ ಕುರಿತಾದ ತಮ್ಮ ಅಭಿಪ್ರಾಯಗಳನ್ನು ನೀಡಲಿದ್ದಾರೆ.
- -ಏಪ್ರಿಲ್ 3 ಮತ್ತು ಏಪ್ರಿಲ್ 4ರಂದು ರಾಜ್ಯಮಟ್ಟದ ಬಿಜೆಪಿ ಕೋರ್ ಸಮಿತಿ ಸಭೆ ನಡೆಯಲಿದೆ. ಜಿಲ್ಲಾ ಕಮಿಟಿ ಸದಸ್ಯರು ಸೂಚಿಸಿರುವ ಅಭ್ಯರ್ಥಿಗಳ ಪಟ್ಟಿ ಕುರಿತು ಚರ್ಚಿಸಲಾಗುತ್ತದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗುತ್ತದೆ. ಈ ಪಟ್ಟಿ ಬಿಜೆಪಿಯ ಸಂಸದೀಯ ಸಭೆಗೆ ಕಳುಹಿಸಲಾಗುತ್ತದೆ.
- ಮುಂದಿನ ದಿನಗಳಲ್ಲಿ ಬಿಜೆಪಿ ಸಂಸದೀಯ ಸಮಿತಿಯ ಸಭೆ ಸೇರಿ ಅರ್ಹ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಿದ್ದಾರೆ.