ಕನ್ನಡ ಸುದ್ದಿ  /  Karnataka  /  Karnataka Bjp Prez To Seek Explanation From Leaders Who Shared Stage With Rowdy Sheeter

Nalin Kumar Kateel: ಸೈಲೆಂಟ್ ಸುನೀಲ್ ನನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಲ್ಲ: ನಳಿನ್ ಕುಮಾರ್ ಕಟೀಲ್

ರೌಡಿ ಶೀಟರ್ ಸೈಲೆಂಟ್ ಸುನೀಲ್ ನನ್ನು ಯಾವುದೇ ಕಾರಣಕ್ಕೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಈತನೊಂದಿಗೆ ವೇದಿಕೆ ಹಂಚಿಕೊಂಡಿದ್ದ ನಾಯಕರಿಗೆ ವಿವರಣೆ ಕೇಳಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಬಿಜೆಪಿ ನಾಯಕರು ರೌಡಿ ಶೀಟರ್ ಸೈಲೆಂಟ್ ಸುನೀಲ್ ಜೊತೆ ವೇದಿಕೆ ಹಂಚಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣಕ್ಕೂ ಸೈಲೆಂಟ್ ಸುನೀಲ್ ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ ಸಿ ಮೋಹನ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಹರ್, ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್ ಆರ್ ರಮೇಶ್ ಸೇರಿದಂತೆ ಇತರರು ಭಾನುವಾರ ರಕ್ತದಾನ ಶಿಬಿರದಲ್ಲಿ ಸುನೀಲ್ ನೊಂದಿಗೆ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿತ್ತು.

ಸುನೀಲ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಲು, ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೂ ಇದು ಕಾರಣವಾಗಿತ್ತು. ಸೈಲೆಂಟ್ ಸುನೀಲ್ ನನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಆತನ ಜೊತೆಗೆ ಪಕ್ಷದ ಕೆಲವು ಮುಖಂಡರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಆ ನಾಯಕರಿಂದ ವಿವರಣೆ ಕೇಳಲಾಗುವುದು ಎಂದು ಕಟೀಲ್ ಹೇಳಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ನಾಯಕರಿಗೆ ಸೂಚಿಸಿದ್ದು, ಎಲ್ಲ ವಿಷಯಗಳನ್ನು ಪಕ್ಷದ ಗಮನಕ್ಕೆ ತರುವಂತೆ ಸೂಚಿಸಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಕ್ಷವು ಭಯೋತ್ಪಾದಕರು, ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವವರು ಮತ್ತು ಅಪರಾಧ ಹಿನ್ನೆಲೆ ಹೊಂದಿರುವವರನ್ನು ಎಂದಿಗೂ ಸಹಿಸುವುದಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.

ಒಂದು ಕಾಲದಲ್ಲಿ ಬೆಂಗಳೂರಿನ ಅತ್ಯಂತ ಭಯಭೀತ ಕಿಲ್ಲರ್‌ಗಳೆಂದು ಪರಿಗಣಿಸಲ್ಪಟ್ಟಿದ್ದ ಸುನೀಲ್, ಈಗ ತಾನು ಅಪರಾಧ ಚಟುವಟಿಕೆಗಳನ್ನು ದೂರವಿದ್ದು ಸಮಾಜ ಸೇವೆಯ ಕಾರ್ಯವನ್ನು ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

ಈ ಘಟನೆಯ ನಂತರ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಎಐಸಿಸಿ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಬೆಂಗಳೂರಿಗರ ರೌಡಿ ಶೀಟರ್‌ಗಳಿಗೆ ಬಿಜೆಪಿ ರೆಸಿಪಿಯಾಗಿದೆ. ಪೊಲೀಸರ ದಾಳಿ ವೇಳೆ ಸಿಗದ ರೌಡಿ ಶೀಟರ್ ಗಳು ಬಿಜೆಪಿ ನಾಯಕರ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡು ಪಕ್ಷ ಸೇರುತ್ತಾರೆ ಮತ್ತು ಮೋದಿಯಿಂದ ಪ್ರೇರಿತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಂದೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರು ಈಗ ಬಿಜೆಪಿ ಮತ್ತು ಮೋದಿಯವರಿಂದ ಪ್ರೇರಿತರಾಗಿದ್ದಾರೆ ಎಂದು ಡಿ ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕೂಡ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದೆ. ಒಂದು ಕಾಲದಲ್ಲಿ ಕೊತ್ವಾಲ್‌ನ ನೆಚ್ಚಿನ ಶಿಷ್ಯ! ತಿಹಾರ್ ಜೈಲಿನಿಂದ ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಬಡ್ತಿ. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರ "ಆ ದಿನಗಳು" ಮರೆತು ಹೋಗಿದೆಯಾ? ಎಂದು ಡಿಕೆ ಶಿವಕುಮಾರ್ ಹೆಸರು ಹೇಳದೆ ಟೀಕಿಸಿದೆ.

ಭೂಗತ ಪಾತಕಿಗಳ ಗರಡಿಯಲ್ಲಿ ಬೆಳೆದ ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕೊಲೆ ಆರೋಪಿ ವಿನಯ್ ಕುಲಕರ್ಣಿ, ಗೂಂಡಾಗಿರಿಯ ಮೊಹಮ್ಮದ್ ನಲಪಾಡ್ ಕಾಂಗ್ರೆಸ್ ನ ನಾಯಕರು! ಕಾಂಗ್ರೆಸ್‌ ರೌಡಿಗಳನ್ನು ಖಂಡಿಸುತ್ತದೆಯಂತೆ! ಮೊದಲು ನಿಮ್ಮ ಪಕ್ಷದ ನಾಯಕರ "ಆ ದಿನಗಳು" ಹೇಗಿವೆ ಅಂತ ನೋಡಿ ಎಂದಿದೆ.

ರೌಡಿ ಶೀಟರ್ ಸೈಲೆಂಟ್ ಸುನೀಲ್ ರಾಜಾರೋಷವಾಗಿ ಹೊರಗಡೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಎಸ್ ಡಿ ಶರಣಪ್ಪ ಮಾತನಾಡಿ, ಪೊಲೀಸರ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ. ಸುನೀಲ್ ವಿರುದ್ಧ ಯಾವುದೇ ವಾರೆಂಟ್ ಬಾಕಿ ಉಳಿದಿಲ್ಲ ಅಥವಾ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ವ್ಯಕ್ತಿಯ ಅಗತ್ಯವಿಲ್ಲ. ಆದ್ದರಿಂದ ಕಾರ್ಯಕ್ರಮದ ನಂತರ ಆತನನ್ನು ತಕ್ಷಣವೇ ಸ್ಥಳದಿಂದ ವಶಕ್ಕೆ ಪಡೆಯಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

IPL_Entry_Point