ಕನ್ನಡ ಸುದ್ದಿ  /  Karnataka  /  Karnataka Elections 2023 20 Seats To Watch Out For Check Details

Karnataka Elections: ಕರ್ನಾಟಕದ 224 ಕ್ಷೇತ್ರಗಳ ಪೈಕಿ ಗಮನ ಸೆಳೆದ 20 ಕ್ಷೇತ್ರಗಳಿವು, ಈ ಮಾತಿಗೆ ಕಾರಣಗಳು ಹಲವು

Karnataka Elections: ರಾಜ್ಯದ 224 ಕ್ಷೇತ್ರಗಳ ಪೈಕಿ ಗಮನಸೆಳೆಯುವ ಸ್ಪರ್ಧೆ ಇರುವಂತಹ ಕ್ಷೇತ್ರಗಳು ಕೆಲವಷ್ಟೆ. ಅದರಲ್ಲೂ ಈ 20 ಕ್ಷೇತ್ರಗಳು ಹೆಚ್ಚು ಗಮನಸೆಳೆಯುವ ಸಾಧ್ಯತೆ ಇದೆ.

ಕರ್ನಾಟಕ ಚುನಾವಣೆ 2023 ಗಮನಿಸಬಹುದಾದ 20 ಕ್ಷೇತ್ರಗಳು (ಸಾಂಕೇತಿಕ ಚಿತ್ರ)
ಕರ್ನಾಟಕ ಚುನಾವಣೆ 2023 ಗಮನಿಸಬಹುದಾದ 20 ಕ್ಷೇತ್ರಗಳು (ಸಾಂಕೇತಿಕ ಚಿತ್ರ) (Arijit Sen/HT Photo)

ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ ಆಗಿದ್ದು, ಮೇ 10ಕ್ಕೆ ಮತದಾನ ನಿಕ್ಕಿಯಾಗಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಎರಡನೇ ಪಟ್ಟಿ ಬಿಡುಗಡೆಗೆ ಸಿದ್ದತೆ ನಡೆದಿದೆ. ಬಿಜೆಪಿ ಇನ್ನೂ ಅಭ್ಯರ್ಥಿ ಆಯ್ಕೆ ಕಸರತ್ತಿನಲ್ಲೇ ಇದ್ದು, ಮೊದಲ ಪಟ್ಟಿ ಶೀಘ್ರವೇ ಬಿಡುಗಡೆ ಆಗುವ ನಿರೀಕ್ಷೆ ಇದೆ.

ರಾಜ್ಯದ 224 ಕ್ಷೇತ್ರಗಳ ಪೈಕಿ ಗಮನಸೆಳೆಯುವ ಸ್ಪರ್ಧೆ ಇರುವಂತಹ ಕ್ಷೇತ್ರಗಳು ಕೆಲವಷ್ಟೆ. ಅದರಲ್ಲೂ ಈ 20 ಕ್ಷೇತ್ರಗಳು ಹೆಚ್ಚು ಗಮನಸೆಳೆಯುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಹೇಳಿದೆ.

  1. ಶಿಗ್ಗಾಂವ್:‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ. 2018ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಸಯ್ಯದ್‌ ಅಜೀಮ್‌ ಪೀರ್‌ ಖಾದ್ರಿ ವಿರುದ್ಧ 9,265 ಮತಗಳ ಅಂತರದ ಗೆಲುವು ಸಾಧಿಸಿದ್ದರು.
  2. ವರುಣಾ: ಕಾಂಗ್ರೆಸ್‌ ಪಕ್ಷದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಇದು. ಕಳೆದ ಬಾರಿ ಅಂದರೆ 2018ರಲ್ಲಿ ಈ ಕ್ಷೇತ್ರವನ್ನು ತಮ್ಮ ಮಗ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟಿದ್ದರು. ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಅವರು ಸ್ಪರ್ಧಿಸಿದ್ದರು. ನಿರೀಕ್ಷೆಯಂತೆ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆದ್ದರು. ಚಾಮುಂಡೇಶ್ವರಿಯಲ್ಲಿ ಅವರು ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರ ವಿರುದ್ಧ ಸೋಲು ಅನುಭವಿಸಿದರು. ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ 1,996 ಮತಗಳ ಅಂತರದ ಗೆಲುವು ದಾಖಲಿಸಿದರು. ಈಗ ತ್ಯಾಗದ ಸರದಿ ಮಗ ಯತೀಂದ್ರ ಅವರದ್ದು.
  3. ರಾಮನಗರ: ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ 2018ರಲ್ಲಿ ಗೆದ್ದು ಶಾಸಕರಾದವರು. ಈ ಸಲ ಮಗ ನಿಖಿಲ್‌ಗಾಗಿ ಅನಿತಾ ಕುಮಾರಸ್ವಾಮಿ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ನಿಖಿಲ್‌ ಕುಮಾರಸ್ವಾಮಿ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್‌ ವಿರುದ್ಧ ಮಂಡ್ಯದಲ್ಲಿ ಸೋಲು ಅನುಭವಿಸಿದ್ದರು.
  4. ಮಂಡ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಎಂ ಶ್ರೀನಿವಾಸ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಮೂರನೇ ಸ್ಥಾನದಲ್ಲಿದ್ದ ಬಿಜೆಪಿಗೆ ಈಗ ಸ್ವತಂತ್ರ ಸಂಸದೆ ಸುಮಲತಾ ಬೆಂಬಲವಿದೆ. ಅವರು ಇತ್ತೀಚೆಗೆ ಈ ಬೆಂಬಲವನ್ನು ಘೋಷಿಸಿದರು.
  5. ಕನಕಪುರ: ‘ಕನಕಪುರದ ಬಂಡೆ’ ಎಂದೇ ಹೆಸರಾಗಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಈ ಕ್ಷೇತ್ರದಲ.್ಲಿ ಏಳು ಬಾರಿ ಶಾಸಕರಾಗಿದ್ದು, 1989 ರಿಂದ ಇಲ್ಲಿಯವರೆಗೆ ತಮ್ಮ ಗೆಲುವಿನ ಓಟವನ್ನು ಉಳಿಸಿಕೊಂಡಿದ್ದಾರೆ.
  6. ಹಾಸನ: ಬಿಜೆಪಿಯ ಪ್ರೀತಂ ಗೌಡ ಕಳೆದ ಬಾರಿ ಸುಮಾರು 13,000 ಮತಗಳ ಅಂತರದಿಂದ ಎಚ್‌ಎಸ್ ಪ್ರಕಾಶ್ ಅವರನ್ನು ಸೋಲಿಸುವ ಮೂಲಕ ಜೆಡಿಎಸ್ ಏಕಸ್ವಾಮ್ಯವನ್ನು ಮುರಿದಿದ್ದರು. ಈ ಬಾರಿ ಜೆಡಿಎಸ್‌ಗೆ ‘ಕೌಟುಂಬಿಕ ಕಲಹ’ ಎದುರಾಗಿದ್ದು, ದೇವೇಗೌಡರ ಸೊಸೆ (ಎಚ್‌ಡಿ ರೇವಣ್ಣ ಅವರ ಪತ್ನಿ) ಭವಾನಿ ಹಾಸನದಿಂದ ಸ್ಪರ್ಧಿಸಲು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ.
  7. ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದರೂ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಕಳೆದ ವರ್ಷ ಜೂನ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆ ವೇಳೆ ಜೆಡಿಎಸ್‌ನ ಹಾಲಿ ಶಾಸಕ ಕೆ ಶ್ರೀನಿವಾಸಗೌಡ ಕಾಂಗ್ರೆಸ್‌ ಪರ ನಿಂತಿದ್ದರು. ಜೆಡಿಎಸ್ ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆಸಬೇಕಿದೆ.
  8. ಚನ್ನಪಟ್ಟಣ: ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು 2018ರಲ್ಲಿ ರಾಮನಗರದ ಬದಲು ಇಲ್ಲಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ಸ್ಥಳೀಯ ಪ್ರಬಲ ಸಿಪಿ ಯೋಗೀಶ್ವರ ಅವರನ್ನು ಸೋಲಿಸುವ ಉದ್ದೇಶದಿಂದ ಮಾತ್ರ. ಕುಮಾರಸ್ವಾಮಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
  9. ಶಿಕಾರಿಪುರ: ಮಾಜಿ ಸಿಎಂ, ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರ ಸ್ವಕ್ಷೇತ್ರ. ಈಗ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾದ ನಂತರ ಅವರ ಈ ಕ್ಷೇತ್ರ ಖಾಲಿ ಆಗಿದೆ. ಅವರ ಎರಡನೇ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಟಿಕೆಟ್ ಸಿಗಬಹುದು ಎಂಬ ವದಂತಿ ರಾಜಕೀಯ ವಲಯದಲ್ಲಿ ಇದೆ.
  10. ಶಿವಮೊಗ್ಗ: ಲಂಚ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್.ಈಶ್ವರಪ್ಪ ಇಲ್ಲಿನ ಹಾಲಿ ಶಾಸಕ.
  11. ಸೊರಬ: ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಇಬ್ಬರು ಪುತ್ರರಾದ ಬಿಜೆಪಿಯ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಳೆದ ಬಾರಿ ಮಧುಗೆ ಜೆಡಿಎಸ್ ಟಿಕೆಟ್ ನೀಡಿತ್ತು ಆದರೆ ಈ ಬಾರಿ ಅವರು ಕಾಂಗ್ರೆಸ್‌ನಲ್ಲಿದ್ದಾರೆ.
  12. ಗೋಕಾಕ: ಬೆಳಗಾವಿಯ ಪ್ರಬಲ ಜಾರಕಿಹೊಳಿ ಕುಟುಂಬದ ರಮೇಶ ಜಾರಕಿಹೊಳಿ ಅವರು 1999ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ‘ಸಾಹುಕಾರ’ ಎಂದೇ ಬಿಂಬಿತರಾಗಿರುವ ಜಾರಕಿಹೊಳಿ ಅವರು ಎರಡು ವರ್ಷಗಳ ಹಿಂದೆ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಾರಕಿಹೊಳಿ ಕಾಂಗ್ರೆಸ್ ತೊರೆದು 2019ರಲ್ಲಿ ಬಿಜೆಪಿ ಸೇರಿದ್ದರು.
  13. ದೇವನಹಳ್ಳಿ: ಲೋಕಸಭೆಯಲ್ಲಿ 1991ರಿಂದ ಸತತವಾಗಿ ಕಾಂಗ್ರೆಸ್ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರ ಸುದೀರ್ಘ ಅವಧಿಗೆ 2019ರಲ್ಲಿ ಮೋದಿ ಅಲೆ ತಡೆಯೊಡ್ಡಿತ್ತು. ಲೋಕಸಭೆಯಲ್ಲಿ ತನ್ನೆಲ್ಲಾ ಚುನಾವಣಾ ರಾಜಕೀಯವನ್ನು ಕಳೆದಿರುವ ಮುನಿಯಪ್ಪ ಈ ಸಲ ದೇವನಹಳ್ಳಿಯಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಹಾಲಿ ಶಾಸಕ ಎಲ್ ಎನ್ ನಾರಾಯಣ ಸ್ವಾಮಿ ವಿರುದ್ಧ ಸೆಣಸಲಿದ್ದಾರೆ.
  14. ಗಂಗಾವತಿ: ಗಣಿ ಉದ್ಯಮಿ ಮತ್ತು ಬಿಜೆಪಿಯ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರು ತಮ್ಮ ಹೊಸ ಪಕ್ಷ “ಕರ್ನಾಟಕ ರಾಜ್ಯ ಪ್ರಗತಿ ಪಕ್ಷ” ವನ್ನು ಪ್ರತಿನಿಧಿಸಿ ಇಲ್ಲಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇದಾದ ನಂತರ ಗಂಗಾವತಿ ಇದ್ದಕ್ಕಿದ್ದಂತೆ ಮಹತ್ವ ಪಡೆದುಕೊಂಡಿದೆ. ಸದ್ಯ ಬಿಜೆಪಿಯ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರ ಕೈಯಲ್ಲಿದೆ ಈ ಕ್ಷೇತ್ರ.
  15. ವಿಜಯಪುರ: ಸದಾ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾದ ಬಸನಗೌಡ ಪಾಟೀಲ್ ಯತ್ನಾಳ್ ಇಲ್ಲಿನ ಬಿಜೆಪಿ ಶಾಸಕ.
  16. ಬಳ್ಳಾರಿ ನಗರ: ಮಾಜಿ ಸಚಿವ, ಗಣಿ ಉದ್ಯಮಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥ ಜಿ.ಜನಾರ್ದನ ರೆಡ್ಡಿ ಇಲ್ಲಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮಿ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ರೆಡ್ಡಿ ಸಹೋದರ ಜಿ ಸೋಮಶೇಖರ ರೆಡ್ಡಿ ಹಾಲಿ ಬಿಜೆಪಿ ಶಾಸಕ.
  17. ಚಿತ್ತಾಪುರ: ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಇಲ್ಲಿಂದ ಮರು ಆಯ್ಕೆ ಬಯಸಿದ್ದಾರೆ.
  18. ಕೊರಟಗೆರೆ: ಮಾಜಿ ಉಪಮುಖ್ಯಮಂತ್ರಿ ಹಾಗೂ ಐದು ಬಾರಿ ಶಾಸಕರಾಗಿದ್ದ ಜಿ.ಪರಮೇಶ್ವರ ಇಲ್ಲಿಂದ ಪುನರಾಯ್ಕೆ ಬಯಸಿದ್ದಾರೆ. ಎಂಟು ವರ್ಷಗಳ ಕಾಲ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ, ಅವರು ಈಗಾಗಲೇ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿದ್ದಾರೆ.
  19. ಮಂಗಳೂರು: ವಿಧಾನಸಭೆಯಲ್ಲಿ ತನ್ನ ಉಪನಾಯಕನಾಗಿರುವ ಯುಟಿ ಖಾದರ್ ಅಲಿ ಫರೀದ್ ಅವರನ್ನು ಕಾಂಗ್ರೆಸ್‌ ಮತ್ತೆ ಇಲ್ಲಿ ಕಣಕ್ಕಿಳಿಸಿದೆ. ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ.
  20. ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ನಾಲ್ಕು ಬಾರಿಯ ಶಾಸಕ ಸಿಟಿ ರವಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮತ್ತಷ್ಟು ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point