ಕನ್ನಡ ಸುದ್ದಿ  /  Karnataka  /  Karnataka Sslc Result 2023 Possible Reasons Behind Decrease In Udupi Dakshina Kannada Exam Results Mgb

SSLC : ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ 18,19ನೇ ಸ್ಥಾನ ಗಳಿಸಿದ ಉಡುಪಿ, ದಕ್ಷಿಣ ಕನ್ನಡ; ಪಾಸ್ ಮಾಡಲು ಫೇಲ್ ಆಗುತ್ತಿರುವುದಕ್ಕೆ ಕಾರಣಗಳಿವು

SSLC Result 2023: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತಿತ್ತು. ಅದೀಗ ವಿಡಂಬನೆಯ ಶಬ್ದವಾಗಿ ಮಾರ್ಪಾಡಾಗಿದೆ. ಪಿಯುಸಿಯಲ್ಲಿ ಟಾಪರ್​​ಗಳಾಗುವ ಉಭಯ ಜಿಲ್ಲೆಗಳು, ಎಸ್ಸೆಸ್ಸೆಲ್ಸಿ ಬಂದಾಗ ರಾಜ್ಯದಲ್ಲಿ ಹತ್ತರ ಬಳಿಕದ ಸ್ಥಾನಿಯಾಗುತ್ತವೆ. ಪಾಸ್ ಮಾಡಲು ಫೇಲ್ ಆಗುತ್ತಿರುವಿದೆಲ್ಲಿ, ಇಲ್ಲಿದೆ ವಿಶ್ಲೇಷಣೆ

ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ (ಸಾಂದರ್ಭಿಕ ಚಿತ್ರ)ಬ
ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ (ಸಾಂದರ್ಭಿಕ ಚಿತ್ರ)ಬ

ಮಂಗಳೂರು: 2022-23ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ (SSLC Result) ನಿನ್ನೆ ( ಮೇ 8, ಸೋಮವಾರ) ಪ್ರಕಟವಾಗಿದೆ. ಆದರೆ, ಎಜುಕೇಶನಲ್ ಹಬ್ ಎನಿಸಿಕೊಳ್ಳುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು (Udupi and Dakshina Kannada) ಈ ಬಾರಿ ರಾಜ್ಯದಲ್ಲಿ 18 ಮತ್ತು 19ನೇ ಸ್ಥಾನಿಯಾಗಿವೆ. ಕಳೆದ ಬಾರಿ ದಕ್ಷಿಣ ಕನ್ನಡ 20ನೇ ಸ್ಥಾನಿಯಾಗಿದ್ದರೆ, ಉಡುಪಿ 12ನೇ ಸ್ಥಾನ ಪಡೆದಿತ್ತು. ಶೇಕಡಾವಾರು ಫಲಿತಾಂಶದಲ್ಲಿ ಕಳೆದ ಬಾರಿಗೂ ಈ ಬಾರಿಗೂ ದೊಡ್ಡ ವ್ಯತ್ಯಾಸವೇನಿಲ್ಲ. ಎರಡೂ ವರ್ಷಗಳು ಶೇ.88ರಿಂದ 89ರ ಆಜುಬಾಜಿನಲ್ಲಿವೆ. ಆದರೆ ರಾಜ್ಯಮಟ್ಟದಲ್ಲಿ ಉಭಯ ಜಿಲ್ಲೆಗಳ ಸ್ಥಾನ ಕುಸಿತ ಹಾಗೂ ಏರಿಳಿತ ಕಳೆದ ಕೆಲ ವರ್ಷಗಳಿಂದ ಆಗುತ್ತಿವೆ. ಯಾಕೆ ಹೀಗೆ?

ಈ ಕುರಿತು ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಗಳಲ್ಲಿ ದುಡಿದು ನಿವೃತ್ತರಾದವರು, ಪ್ರಸ್ತುತ ಶಿಕ್ಷಕರಾಗಿ ಕೆಲಸ ಮಾಡುವವರ ಸಹಿತ ಹಲವರನ್ನು ಹೆಚ್​​ಟಿ ಕನ್ನಡ ಪ್ರತಿನಿಧಿ ಮಾತನಾಡಿಸಿದ ಸಂದರ್ಭ ಒಟ್ಟಾರೆಯಾಗಿ ಫಲಿತಾಂಶ ಏರುಪೇರಿಗೆ ಈ ಐದು ಪ್ರಮುಖ ಅಂಶಗಳನ್ನು ಅವರು ಬೊಟ್ಟು ಮಾಡಿದರು.

ಮೊದಲನೆಯದ್ದು, ನಮ್ಮ ಪಾಸಿಂಗ್ ಪರ್ಸೆಂಟೇಜ್ ಅಂದರೆ ಶೇಕಡಾವಾರು ಫಲಿತಾಂಶವೇನೂ ಕಡಿಮೆಯಾಗಿಲ್ಲ. 85ರಿಂದ 90 ಶೇಕಡಾ ಫಲಿತಾಂಶ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಈಗಲೂ ದೊರಕುತ್ತಿದೆ. ಆದರೆ ಇತರ ಜಿಲ್ಲೆಗಳು ಪ್ರಗತಿ ಹೊಂದುತ್ತಿವೆ. ಅಲ್ಲಿ ಪರೀಕ್ಷೆ ಸಂದರ್ಭ ಪಾಸ್ ಆಗುವ ಕಲೆಯನ್ನು ಕರಗತಮಾಡಿಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿ ಅದಿನ್ನೂ ಜಾಗೃತವಾಗಬೇಕಷ್ಟೇ.

ಎರಡನೆಯ ಅಂಶವೇನೆಂದರೆ, ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಇಲ್ಲಿ ಕೇವಲ ಖಾಸಗಿ ಶಾಲೆಗಳಷ್ಟೇ ಇರುವುದು ಎಂಬ ನಂಬಿಕೆ ಹಲವರಲ್ಲಿದೆ. ಆದರೆ ವಾಸ್ತವವಾಗಿ ಹಾಗಲ್ಲ. ಇಲ್ಲಿ ಸರಕಾರಿ ಹೈಸ್ಕೂಲುಗಳೂ ಇವೆ. ಖಾಸಗಿ ವಿದ್ಯಾರ್ಥಿನಿಲಯಗಳು ಇದ್ದು, ಪರವೂರಿನ ವಿದ್ಯಾರ್ಥಿಗಳು ಇಲ್ಲಿ ಓದಲು ಬರುತ್ತಾರೆ. (ಇದು ಸರಕಾರಿ ಹೈಸ್ಕೂಲುಗಳಿಗೆ ಸಂಬಂಧಿಸಿದ್ದು). ಆ ವಿದ್ಯಾರ್ಥಿಗಳು ಎಂಟನೇ ತರಗತಿಗೆ ಬರುವಾಗಲೇ ಶೈಕ್ಷಣಿಕವಾಗಿ ದುರ್ಬಲರಿರುತ್ತಾರೆ. ಫಲಿತಾಂಶ ಏರುಪೇರಾಗಲು ಅದೂ ಒಂದು ಕಾರಣವಾಗುತ್ತದೆ.

ಮೂರನೆಯ ಅಂಶ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿವಿಧ ಸಾಮಾಜಿಕ ಸ್ತರಗಳಿಗೆ ಸೇರಿದ ವಿದ್ಯಾರ್ಥಿಗಳು ಇರುತ್ತಾರೆ. ಇವರಲ್ಲಿ ಕಲಿಕೆಯಲ್ಲಿ ಆಸಕ್ತಿ ಇರುವವರು ಒಂದೆಡೆಯಾದರೆ, ತೀರಾ ಸಮಸ್ಯೆ ಇರುವವರು ಇನ್ನೊಂದೆಡೆ. ಇವುಗಳನ್ನು ಸರಿದೂಗಿಸಲು ಹಾಗೂ ಕಲಿಕಾ ಚೇತರಿಕೆಯಂಥ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ವರ್ಷಾರಂಭದಲ್ಲೇ ಅನುಷ್ಠಾನಿಸಲು ಇಲಾಖೆಯೂ, ಶಿಕ್ಷಕರೂ ಒಂದು ಹಂತದಲ್ಲಿ ವಿಫಲರಾಗುತ್ತಾರೆ. ಏನು ಸಮಸ್ಯೆ ಎಂಬುದನ್ನು ಕಂಡುಹಿಡಿಯಲೂ ಆಗದಂಥ ಪರಿಸ್ಥಿತಿಯಲ್ಲಿದ್ದರೆ, ಅದು ಫಲಿತಾಂಶವನ್ನು ಬಾಧಿಸುತ್ತದೆ.

ನಾಲ್ಕನೆಯ ಅಂಶ ಪರೀಕ್ಷೆಗೆ ಸಂಬಂಧಿಸಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಳನ್ನ ಎದುರಿಸುವ ವೇಳೆ ಆ ವಿಷಯದಲ್ಲಿ ಹಿಡಿತ ಹೊಂದಿರದಿದ್ದರೆ, ಅವನ್ನು ಪಾಸ್ ಮಾಡುವುದು ಕಷ್ಟವಾಗುತ್ತದೆ. ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಗ್ಗಿದರೆ, ಪರೀಕ್ಷೆ ತೇರ್ಗಡೆಯಾಗಲೂ ಅಸಾಧ್ಯ. ಇಂಥ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಹಿಂದುಳಿಯುವ ಅಂಶಗಳು ಯಾವುವು ಎಂಬುದನ್ನು ಪತ್ತೆಹಚ್ಚಲು ಶಿಕ್ಷಕರೂ ವಿಫಲರಾಗುವ ಸಂದರ್ಭವೂ ಇರುತ್ತದೆ.

ಐದನೆಯ ಅಂಶವೆಂದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪರೀಕ್ಷಾ ನಿರ್ವಹಣೆ. ಎಷ್ಟೇ ಸಿದ್ಧತೆ ಮಾಡಿದರೂ ಪರೀಕ್ಷಾಕಾಲಕ್ಕೆ ಯಾವ ಪ್ರಶ್ನೆಗಳು ಬರಬಹುದು, ಅವುಗಳನ್ನು ಹೇಗೆ ಎದುರಿಸುವುದು ಎಂಬ ಅಂಶಗಳೂ ಪ್ರಾಧಾನ್ಯ. ಅವುಗಳೊಂದಿಗೆ ಶಿಕ್ಷಕರ ಪಾಲ್ಗೊಳ್ಳುವಿಕೆಯೂ ಸೇರಿಕೊಳ್ಳುತ್ತವೆ. ಎಷ್ಟು ಓದಿದರೂ ಪಾಸ್ ಆಗುವ ಕಲೆಯನ್ನು ರೂಢಿಸಿಕೊಳ್ಳದೇ ಇದ್ದರೆ, ಹಿಟ್ ವಿಕೆಟ್ ಆಗುತ್ತದೆ.

ಜೂನ್ ತಿಂಗಳಲ್ಲೇ ತಯಾರಿ ಆಗಬೇಕು:

ವೃತ್ತಿಪರರು ನೀಡುವ ಸಲಹೆ ಏನೆಂದರೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ, ಕಲಿಕಾ ವಿಧಾನ ಚೆನ್ನಾಗಿದೆ. ಆದರೆ ಪರೀಕ್ಷೆಗೆ ತಯಾರು ಮಾಡುವುದೇ ಬೇರೆ. ಜೂನ್ ತಿಂಗಳಿಂದಲೇ ತಯಾರಿ ಆರಂಭಗೊಳ್ಳಬೇಕು. ಸೆಪ್ಟೆಂಬರ್ ನಂತರ ಪರೀಕ್ಷಾ ಸಿದ್ಧತೆ ಮಾಡುವುದಲ್ಲ. ಗಿಡಕ್ಕೆ ನೀರು ಪ್ರತಿ ದಿನ ಹಾಕುವಾಗ ಅದು ಬೆಳೆಯುತ್ತದೆಯೋ ಇಲ್ಲವೋ ಎಂದು ಗೊತ್ತಾಗುತ್ತದೆ. ಬೆಳೆಯದಿದ್ದರೆ, ಏನು ಮಾಡಬೇಕು ಎಂಬ ಕುರಿತು ನಾವು ಯೋಚಿಸುತ್ತೇವೆ. ಹಾಗೆಯೇ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಕೂಡಲೇ ಗ್ರಹಿಸಿ, ಅದಕ್ಕೆ ಬೇಕಾದ ಬಂದೋಬಸ್ತ್ ಗಳು ಆಗಬೇಕು. ರಿಸಲ್ಟ್ ಪಡೆಯುವುದು ಅತಿ ಮುಖ್ಯವೇ ಆದಾಗ, ಮತ್ತೆ ಎರಡೂ ಜಿಲ್ಲೆಗಳು ಟಾಪ್ ಶ್ರೇಣಿ ಅಲಂಕರಿಸಬಹುದು.

ಫಲಿತಾಂಶ ಹೀಗಿದೆ:

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಹಾಜರಾದವರು 27170. ಉತ್ತೀರ್ಣರಾದವರು 24,322. ಶೇ.100 ಫಲಿತಾಂಶವನ್ನು 125 ಶಾಲೆಗಳು ಪಡೆದುಕೊಂಡಿವೆ. ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ, 2022-23ರಲ್ಲಿ ಹಾಜರಾದವರು 27170, ಉತ್ತೀರ್ಣ 24322. ಶೇಕಡಾವಾರು ಫಲಿತಾಂಶ 89.52, 2021-22ರಲ್ಲಿ ಹಾಜರಾದವರು 28443, ಉತ್ತೀರ್ಣರಾದವರು 25052, ಶೇಕಡಾವಾರು 88.08, 2020-21ರಲ್ಲಿ 29336 ಹಾಜರು, 29315 ಉತ್ತೀರ್ಣ, ಶೇಕಡಾವಾರು 99.93. (ಇದು ಕೊರೊನಾ ಬ್ಯಾಚ್), 2019-20ರಲ್ಲಿ 27416 ಹಾಜರು, 21669 ಉತ್ತೀರ್ಣ, ಶೇಕಡಾವಾರು 79.04.

ವರದಿ: ಹರೀಶ ಮಾಂಬಾಡಿ ಮಂಗಳೂರು

IPL_Entry_Point