ಕನ್ನಡ ಸುದ್ದಿ  /  ಕರ್ನಾಟಕ  /  Sslc Supplementary Exam: ಫೇಲಾದವರು ಭಯಪಡಬೇಡಿ; ನಿಮಗಿನ್ನೂ ಇದೆ ಅವಕಾಶ; ಪೂರಕ ಪರೀಕ್ಷೆಗೆ ಈಗಲೇ ನೋಂದಣಿ ಮಾಡಿಕೊಳ್ಳಿ

SSLC Supplementary Exam: ಫೇಲಾದವರು ಭಯಪಡಬೇಡಿ; ನಿಮಗಿನ್ನೂ ಇದೆ ಅವಕಾಶ; ಪೂರಕ ಪರೀಕ್ಷೆಗೆ ಈಗಲೇ ನೋಂದಣಿ ಮಾಡಿಕೊಳ್ಳಿ

ಎಸ್​ಎಸ್​​ಎಲ್​ಸಿ ಪರೀಕ್ಷೆಯಲ್ಲಿ (SSLC Result 2023) ಫೇಲಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಇದೆ. ಪರೀಕ್ಷೆಯಲ್ಲಿ ಪಾಸಾಗಲು ಪೂರಕ ಪರೀಕ್ಷೆಯನ್ನು (SSLC Supplementary Exam) ಬರೆಯಬೇಕಾಗುತ್ತದೆ. ಹಾಗಾದರೆ ಪೂರಕ ಪರೀಕ್ಷೆ ಯಾವಾಗ? ಈ ಮುಂದೆ ಓದಿ.

ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ
ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ

ಮಾರ್ಚ್​ 31ರಿಂದ ಏಪ್ರಿಲ್​ 15ರವರೆಗೆ ನಡೆದಿದ್ದ ಪ್ರಸಕ್ತ ಸಾಲಿನ ಕರ್ನಾಟಕ ಎಸ್ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ (SSLC Result 2023) ಪ್ರಕಟಗೊಂಡಿದೆ. ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪಾಸಾದ ವಿದ್ಯಾರ್ಥಿಗಳು 7,00,619. ಈ ಪೈಕಿ 625ಕ್ಕೆ 625 ಅಂಕವನ್ನು ನಾಲ್ವರು ವಿದ್ಯಾರ್ಥಿಗಳು ಪಡೆದಿದ್ದಾರೆ. ಆದರೆ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು, ಭಯಪಡಬೇಡಿ. ಇದು ಜೀವನದ ಭಾಗವಷ್ಟೆ. ಇನ್ನೂ ಅವಕಾಶ ಇದೆ. ಪೂರಕ ಪರೀಕ್ಷೆ (SSLC Supplementary Exam) ಬರೆದು ಪಾಸಾಗಬಹುದು.

ಟ್ರೆಂಡಿಂಗ್​ ಸುದ್ದಿ

ಪೂರಕ ಪರೀಕ್ಷೆಗಾಗಿ ಇಂದಿನಿಂದಲೇ (ಮೇ 8ರಂದು) ನೋಂದಣಿ ಮಾಡಿಕೊಳ್ಳಬೇಕಿದೆ. ಮೇ 8ರಿಂದ ಮೇ 15 ರೊಳಗೆ ಫೇಲ್​ ಆಗಿರುವ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗಾಗಿ ನೋಂದಣಿ (ರಿಜಿಸ್ಟರ್​) ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪೂರಕ ಪರೀಕ್ಷೆ ಯಾವಾಗ ನಡೆಯಲಿದೆ ಎಂಬುದು ಮುಂದಿನ ವಾರ ವೇಳಾಪಟ್ಟಿ ಬಿಡುಗಡೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್​ ತಿಂಗಳಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಜುಲೈನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಹಾಗೆ ಉತ್ತರ ಪತ್ರಿಕೆಗಳ ಫೋಟೋ ಕಾಪಿ, ಮರು ಎಣಿಕೆ, ಮರು ಮೌಲ್ಯಮಾಪನಕ್ಕೂ ಅರ್ಜಿ ಹಾಕಬಹುದು. ಉತ್ತರ ಪತ್ರಿಕೆಯ ಫೋಟೋ ಕಾಪಿಗಾಗಿ ಮೇ 8ರಿಂದ 14ರೊಳಗೆ ಅರ್ಜಿ ಸಲ್ಲಿಸಬೇಕು. ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು ಮೇ 15 ರಿಂದ ಮೇ 21ರೊಳಗೆ ಸಲ್ಲಿಸಬೇಕು. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು ಪ್ರಕಟಿಸಿದೆ.

ಈಗಿನಿಂದಲೇ ತಯಾರಿ ನಡೆಸಿ

ಎಸ್​ಎಸ್​ಎಲ್​ಸಿಯಲ್ಲಿ ಅನುತ್ತೀರ್ಣರಾದ ಮಕ್ಕಳು ಈಗಿನಿಂದಲೇ ಪೂರಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ. ಫೇಲಾಗಿದ್ದಾರೆ ಎಂದು ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ದೂಷಿಸಬೇಡಿ. ಸಕಾರಾತ್ಮಕ ಮಾತುಗಳೊಂದಿಗೆ ಅವರ ಆತ್ಮ ವಿಶ್ವಾಸ ಹೆಚ್ಚಿಸುವುದು ಉತ್ತಮ. ಪರೀಕ್ಷೆಗೆ ಬೇಕಾದ ನೆರವು ನೀಡಿ. ಅವರಿಗೆ ಉತ್ತಮ ವಾತಾವರಣ ನಿರ್ಮಿಸಿ. ಮಕ್ಕಳಿಗೆ ಧೈರ್ಯ ಹೆಚ್ಚಿಸಿ. ಮಾನಸಿಕ ಕುಗ್ಗುವಂತೆ ಮಾಡಬೇಡಿ. ಆತ್ಮವಿಶ್ವಾಸ ಹೆಚ್ಚಿಸಿದರೆ, ಪೂರಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನೇ ಪಡೆಯಲಿದ್ದಾರೆ.

ಈ ಬಾರಿ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಭೂಮಿಕಾ ಆರ್ ಪೈ, ಯಶಸ್​​ ಗೌಡ, ಭೀಮನ ಗೌಡ, ಅನುಪಮಾ ಶೇಕಡಾ 100ಕ್ಕೆ ನೂರು ಅಂಕ ಪಡೆದಿದ್ದಾರೆ. A ಗ್ರೇಡ್​​​ನಲ್ಲಿ ಉತ್ತೀರ್ಣ ಜಿಲ್ಲೆಗಳು 23, B ಗ್ರೇಡ್​​ನಲ್ಲಿ 12 ಜಿಲ್ಲೆಗಳು ಉತ್ತೀರ್ಣವಾಗಿವೆ. ನಗರದ ಭಾಗದ ವಿದ್ಯಾರ್ಥಿಗಳ ಫಲಿತಾಂಶ ಶೇ 79.62ರಷ್ಟು ದಾಖಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ,87.00 ರಷ್ಟು ಉತ್ತೀರ್ಣರಾಗಿದ್ದಾರೆ. ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.

8,35,102 ವಿದ್ಯಾರ್ಥಿಗಳ ಪೈಕಿ 7,00,619 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ 83.89 ವಿದ್ಯಾರ್ಥಿನಿಯರು ಉತ್ತೀರ್ಣಗೊಂಡಿದ್ದಾರೆ. ಶೇ 80.08 ಬಾಲಕರು ಈ ಬಾರಿ ಪಾಸ್​ ಆಗಿದ್ದಾರೆ. ಚಿತ್ರದುರ್ಗಕ್ಕೆ ಪ್ರಥಮ ಸ್ಥಾನ, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕ್ರಮವಾಗಿ ಎರಡು, ಮೂರು, ನಾಲ್ಕನೇ ಪಡೆದಿವೆ.

IPL_Entry_Point

ವಿಭಾಗ