ಕನ್ನಡ ಸುದ್ದಿ  /  ಕರ್ನಾಟಕ  /  Laxman Savadi: ಲಕ್ಷ್ಮಣ ಸವದಿಯಿಂದಾಗಿ ಮಗ್ಗಲು ಬದಲಿಸಿದ ಬೆಳಗಾವಿ ರಾಜಕಾರಣ: ಕಾಂಗ್ರೆಸ್‌ ಬಲ ವೃದ್ಧಿಸಲು ಸಿದ್ಧವಾಗುತ್ತಿದೆ ಹೂರಣ

Laxman Savadi: ಲಕ್ಷ್ಮಣ ಸವದಿಯಿಂದಾಗಿ ಮಗ್ಗಲು ಬದಲಿಸಿದ ಬೆಳಗಾವಿ ರಾಜಕಾರಣ: ಕಾಂಗ್ರೆಸ್‌ ಬಲ ವೃದ್ಧಿಸಲು ಸಿದ್ಧವಾಗುತ್ತಿದೆ ಹೂರಣ

ವಿಧಾನ ಪರಿಷತ್‌ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ನಿನ್ನೆಯಷ್ಟೇ ರಾಜೀನಾಮೆ ನೀಡಿರುವ ಲಕ್ಷ್ಮಣ ಸವದಿ, ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಯ ಈ ಪಕ್ಷಾಂತರ ಬೆಳಗಾವಿ ಜಿಲ್ಲೆಯ ರಾಜಕಾರಣದ ಮೇಲೆ ತನ್ನದೇ ಆದ ಪ್ರಭಾವ ಬೀರುವುದು ಇದೀಗ ಖಚಿತ ಎಂದು ಹೇಳಲಾಗುತ್ತಿದೆ. ಈ ಕುರಿತು ಇಲ್ಲಿದೆ ಮಾಹಿತಿ..

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (PTI)

ಬೆಳಗಾವಿ: ಸುಮಾರು ಇಪ್ಪತ್ತು ವರ್ಷಗಳಿಗೂ ಅಧಿಕ ಕಾಲ ಭಾರತೀಯ ಜನತಾ ಪಕ್ಷದಲ್ಲಿದ್ದ ಲಕ್ಷ್ಮಣ ಸವದಿ, ಈ ಬಾರಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ದೊರೆಯದ ಕಾರಣಕ್ಕೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಯ ಈ ಪಕ್ಷಾಂತರ ಬೆಳಗಾವಿ ಜಿಲ್ಲೆಯ ರಾಜಕಾರಣದ ಮೇಲೆ ತನ್ನದೇ ಆದ ಪ್ರಭಾವ ಬೀರುವುದು ಇದೀಗ ಖಚಿತ.

ವಿಧಾನ ಪರಿಷತ್‌ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ನಿನ್ನೆಯಷ್ಟೇ ರಾಜೀನಾಮೆ ನೀಡಿರುವ ಲಕ್ಷ್ಮಣ ಸವದಿ, ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಕ್ಷ ಅವರಿಗೆ ಅಥಣಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ನಾಯಕರಿಂದ ಅಥಣಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಭರವಸೆ ಪಡೆದುಕೊಂಡಿದ್ದಾರೆ.

ಸವದಿ ಅವರ ಕಾಂಗ್ರೆಸ್‌ ಸೇರ್ಪಡೆ ಇದೀಗ ಬೆಳಗಾವಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಧಾಡಸಿ ವ್ಯಕ್ತಿತ್ವದ ಸವದಿ ಅವರಿಂದ ಜಿಲ್ಲೆಯ ಯಾವ ಕ್ಷೇತ್ರಗಳಲ್ಲಿ ಬಿಜೆಪಿಗೆ ಸವಾಲು ಎದುರಾಗಬಹುದು ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ರಮೇಶ್‌ ಜಾರಕಿಹೊಳಿ ಬಿಜೆಪಿ ಸೇರಿದ್ದರಿಂದ ಉಂಟಾಗಿದ್ದ ಶೂನ್ಯತೆಯನ್ನು, ಕಾಂಗ್ರೆಸ್‌ ಲಕ್ಷ್ಮಣ ಸವದಿ ಅವರನ್ನು ಸೆಳೆದುಕೊಳ್ಳುವ ಮೂಲಕ ತುಂಬಿಸಿಕೊಳ್ಳಲಿದೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಲಕ್ಷ್ಮಣ ಸವದಿ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಮೆಚ್ಚಿ ರಾಜಕಾರಣಕ್ಕೆ ಬಂದವರು. ಸವದಿ ಹಿಂದುತ್ವದ ನೆರಳಲ್ಲಿ ಬೆಳೆದ ರಾಜಕಾರಣಿಯಾದರೂ, ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡವರು. ಹೀಗಾಗಿ ಕಾಂಗ್ರೆಸ್‌ ಪಕ್ಷದ ರಾಜಕಾರಣಕ್ಕೆ ಒಗ್ಗಿಕೊಳ್ಳುವುದು ಅವರಿಗೆ ಕಷ್ಟವಾಗದು ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಹಿರಿಯರು.

ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರಗಳಲ್ಲಿ ಗಾಣಿಗ ಸಮುದಾಯದ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಲಕ್ಷ್ಮಣ ಸವದಿ ಅವರ ಕಾಂಗ್ರೆಸ್‌ ಸೇರ್ಪಡೆಯಿಂದ, ಈ ಸಮುದಾಯದ ಬಹುತೇಕ ಮತಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಾಗೆಯೇ ಜಿಲ್ಲೆಯಲ್ಲಿ ತನ್ನದೇ ಆದ ಸಾಂಪ್ರದಾಯಿಕ ಮತಗಳನ್ನು ಹೊಂದಿರುವ ಕಾಂಗ್ರೆಸ್‌, ಇದೀಗ ಸವದಿ ಅವರ ಶಕ್ತಿಯನ್ನು ಒಟ್ಟುಗೂಡಿಸಿ ಜಿಲ್ಲೆಯ ರಾಜಕಾರಣವನ್ನು ಬದಲಾಯಿಸುವ ತಂತ್ರ ಹೆಣೆಯುತ್ತಿದೆ. ಪಂಚಮಸಾಲಿ, ಮುಸ್ಲಿಂ, ರೆಡ್ಡಿ, ಕುರುಬ, ಗಾಣಿಗ ಸಮುದಾಯದ ಬೆಂಬಲದೊಂದಿಗೆ, ಬೆಳಗಾವಿ ಜಿಲ್ಲೆಯಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಕಾಂಗ್ರೆಸ್‌ಗೆ ಸುಲಭವಾಗಲಿದೆ ಎನ್ನಲಾಗುತ್ತಿದೆ.

ಕೇವಲ ಲಕ್ಷ್ಮಣ ಸವದಿ ಮಾತ್ರವಲ್ಲದೇ, ಮಾಜಿ ಶಾಸಕ ರಾಜು ಕಾಗೆ ಕೂಡ ಇದೀಗ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಈ ಇಬ್ಬರೂ ನಾಯಕರ ನಡುವೆ ಹಲವು ದಶಕಗಳ ಒಡನಾಟವಿದ್ದು, ಸಹಕಾರ ಕ್ಷೇತ್ರದಲ್ಲಿ ಇವರನ್ನು ಸಂಗ್ಯಾ-ಬಾಳ್ಯಾ ಎಂದೇ ಕರೆಯಲಾಗುತ್ತದೆ. ಈ ಸಂಗ್ಯಾ-ಬಾಳ್ಯಾ ಅವರ ಶಕ್ತಿ ಗಿಟ್ಟಿಸಿಕೊಂಡಿರುವ ಕಾಂಗ್ರೆಸ್‌, ಬೆಳಗಾವಿ ಜಿಲ್ಲೆಯಲ್ಲಿ ಹೊಸ ಚಮತ್ಕಾರದ ನಿರೀಕ್ಷೆ ಇಟ್ಟುಕೊಂಡಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಿಂದಾಗಿ ಬೆಳಗಾವಿ ಜಿಲ್ಲೆಯ ಹಲವು ಭಾಗಗಳಲ್ಲಿ ಬಂಡಾಯದ ಕಹಳೆ ಮೊಳಗಿಸಲಾಗಿದೆ. ರಾಮದುರ್ಗ, ಬೈಲಹೊಂಗಲ ಹಾಗೂ ಖಾನಾಪುರ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಜೋರಾಗಿದ್ದು, ಈ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳನ್ನು ಪಕ್ಷೇತರರಾಗಿ ಸ್ಪರ್ಧಿಸುವಂತೆ ಲಕ್ಷ್ಮಣ ಸವದಿ ಮನವೋಲಿಸಬಹುದು. ಈ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವನ್ನು ಸುಲಭಗೊಳಿಸುವುದು ಸವದಿ ಅವರ ರಣತಂತ್ರವಾಗಲಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯಲ್ಲಿ ಸವದಿ ಕುಟುಂಬಕ್ಕೆ ನಿಷ್ಠರಾದ ಮತದಾರರ ಸಂಖ್ಯೆ ಅಧಿಕವಾಗಿದ್ದು, ಇದರ ಆಧಾರದ ಮೇಲೆ ಜಿಲ್ಲೆಯ ರಾಜಕಾರಣದ ಚಿತ್ರವನ್ನು ಬದಾಯಿಸುವ ಹುಮ್ಮಸ್ಸಿನಲ್ಲಿದ್ದಾರೆ ಲಕ್ಷ್ಮಣ ಸವದಿ. ಒಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಸವದಿ ಅವರ ಪಕ್ಷಾಂತರ, ಬೆಳಗಾವಿ ಜಿಲ್ಲೆಯಲ್ಲಿ ಹೊಸದೊಂದು ಸಂಚಲವನ್ನಂತೂ ಮೂಡಿಸಿರುವುದು ಸತ್ಯ.