Mangaluru News: ಆಳ್ವಾಸ್‌ನ ವರ್ಧಿತ ಜಲಜನಕ ಇಂಧನ ಕೋಶಕ್ಕೆ ಪೇಟೆಂಟ್ ಅನುಮೋದನೆ
Mangaluru News: ಮಂಗಳೂರಿನ ಆಳ್ವಾಸ್ ವಿದ್ಯಾಸಂಸ್ಥೆಯ ಪ್ರಾಧ್ಯಾಪಕ ರಿಚರ್ಡ್ ಪಿಂಟೊ ನೇತೃತ್ವದಲ್ಲಿ ವರ್ಧಿತ ಜಲಜನಕ ಇಂಧನ ಕೋಶ ಅಂದರೆ ಹೈಡ್ರೋಜನ್ ಫ್ಯುಯೆಲ್ ಸೆಲ್ ಎಚ್‌ಎಫ್‌ಸಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು ಮೊದಲ ಪೇಟೆಂಟ್ ಪಡೆದಿದೆ.

ಮಂಗಳೂರು: ಸುಸ್ಥಿರ ಭವಿಷ್ಯಕ್ಕಾಗಿ ಕ್ರಾಂತಿಕಾರಿ ಇಂಧನವಾಗಿ ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿರುವ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಿಂದ ವರ್ಧಿತ ಜಲಜನಕ ಇಂಧನ ಕೋಶಕ್ಕೆ ಪೇಟೆಂಟ್ ದೊರಕಿದೆ. ವರ್ಧಿತ ಜಲಜನಕ ಇಂಧನ ಕೋಶ ಅಂದರೆ ಹೈಡ್ರೋಜನ್ ಫ್ಯುಯೆಲ್ ಸೆಲ್- ಎಚ್‌ಎಫ್‌ಸಿ ತಂತ್ರಜ್ಞಾನಕ್ಕಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೊದಲ ಪೇಟೆಂಟ್ ಪಡೆದಿದ್ದು, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಾರಥ್ಯದಲ್ಲಿ ಪ್ರಾಧ್ಯಾಪಕ ಡಾ. ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಆವಿಷ್ಕಾರವು ಸಾಕಾರಗೊಂಡಿದೆ.
ತಂಡದಲ್ಲಿರುವವರು
ಪ್ರಾಧ್ಯಾಪಕ ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕರಾದ ಪ್ರೀತಮ್ ಕ್ಯಾಸ್ಟೆಲಿನೊ, ಜಯರಾಮ ಅರಸಳಿಕೆ, ಸತ್ಯನಾರಾಯಣ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಸೋಹನ್ ಪೂಜಾರಿ, ಸನ್ನಿ ರಾಮ್ನಿವಾಸ್ ಶರ್ಮಾ, ಪ್ರಶಾಂತ್ ಶೇಖರ್ ಪೂಜಾರಿ ಮತ್ತು ಚಿರಾಗ್ ಸತೀಶ್ ಪೂಜಾರಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.
ಏನಿದು ಪೇಟೆಂಟ್?
ಈ ಪೇಟೆಂಟ್ (ಪೇಟೆಂಟ್ ಸಂಖ್ಯೆ -201941035383) ಹೊಸ ಆವಿಷ್ಕಾರವಾಗಿದ್ದು, ಆಲ್ಟ್ರಾ ವೈಲೆಟ್ ಕಿರಣಗಳಿಗೆ ಅತ್ಯುತ್ತಮವಾಗಿ ತೆರೆದುಕೊಂಡ ನೆಫಿಯಾನ್ ಎಂಬ ಪೊರೆಯ ವರ್ಧಿತ ಕಾರ್ಯಕ್ಷಮತೆ ನೀಡುವ ಜಲಜನಕ ಇಂಧನ ಕೋಶವಾಗಿದೆ. (ಹೈಡ್ರೋಜನ್ ಫ್ಯುಯೆಲ್ ಸೆಲ್ಸ್ ಹ್ಯಾವಿಂಗ್ ಎನ್‌ಹ್ಯಾನ್ಸ್‌ಡ್ ಫರ್ಮಾರೆನ್ಸ್ ವಿತ್ ನಫೀಯಾನ್ ಪ್ರೊಟಾನ್ ಎಕ್ಸ್‌ಚೇಂಜ್ ಮೆಂಬ್ರೇನ್ ಆಪ್ಟಿಮಲ್ ಎಕ್ಸ್‌ಪೋಸ್ಡ್ ಟು ಆಲ್ಟ್ರಾವಯಲೆಟ್ ರೇಸ್). ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಈ ಸಂಶೋಧನಾತ್ಮಕ ಹೆಜ್ಜೆಯು ಸುಸ್ಥಿರ ಇಂಧನ ಅಭಿವೃದ್ಧಿಯಲ್ಲಿ ಬಹುದೊಡ್ಡ ದಾಪುಗಾಲಾಗಿದೆ. ಪ್ರಸ್ತುತ ಸಾಂಪ್ರದಾಯಿಕ ಜಲಜನಕ ಇಂಧನ ಕೋಶಗಳಿಗೆ ಹೋಲಿಸಿದರೆ, ದುಪ್ಪಟ್ಟು ವಿದ್ಯುತ್ ಶಕ್ತಿ ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಈ ತಂಡವು ಸೌರ ಶಕ್ತಿಯಿಂದ ಜಲಜನಕದ ಉತ್ಪಾದನೆ ಹಾಗೂ ಸಂಗ್ರಹಿಸುವ ಮಾರ್ಗಗಳನ್ನು ಅನ್ವೇಷಣೆಯತ್ತ ತೊಡಗಿದೆ. ಜಲಜನಕದ ಉತ್ಪಾದನೆ, ಶೇಖರಣೆ ಹಾಗೂ ಇಂಧನ ಕೋಶದ ತಂತ್ರಜ್ಞಾನದಿಂದ ವಿದ್ಯುತ್ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಸಲು ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಬನ್ ಮುಕ್ತ ಇಂಧನವಾಗಿ ಬಳಸಹುದು.
ಐಐಟಿಬಿ, ಟಿಐಎಫ್ಆರ್ ಸಹಕಾರ
ಐಐಟಿಬಿ(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ) ಮತ್ತು ಟಿಐಎಫ್‌ಆರ್ (ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈ) ಜೊತೆಗಿನ ಸಹಯೋಗದಲ್ಲಿ ಅಲ್ಲಿನ ತಜ್ಞರಾದ ಸಿದ್ಧಾರ್ಥ ಪ್ರಕಾಶ್ ದುತ್ತಗುಪ್ತ ಮತ್ತು ಶ್ರೀ ಗಣೇಶ್ ಪ್ರಭು ಸಹಕಾರದಲ್ಲಿ ಆವಿಷ್ಕಾರವನ್ನು ಉನ್ನತೀಕರಿಸಲಾಗಿದೆ. ಸಮಾಜದ ಅಭಿವೃದ್ಧಿ ನಿಟ್ಟಿನಲ್ಲಿ ತಂತ್ರಜ್ಞಾನದ ಪರಿವರ್ತನೆಗಾಗಿ ಈ ಆಧುನೀಕರಿಸಿದ ಜಲಜನಕ ಇಂಧನ ಕೋಶ ತಂತ್ರಜ್ಞಾನವನ್ನು ನೀಡಲು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಬದ್ಧವಾಗಿದೆ. ಈ ಆವಿಷ್ಕಾರವು ಪಳೆಯುಳಿಕೆ ಇಂಧನದ ಅಭಿವೃದ್ಧಿಯಲ್ಲಿ ಸುಸ್ಥಿರ ಪರ್ಯಾಯವಾಗಿದ್ದು, ಇದನ್ನು ಅಳವಡಿಸಿಕೊಳ್ಳಲು ಹಾಗೂ ಸೇರ್ಪಡೆಗೊಳಿಸಲು ಕಾರ್ಪೊರೇಟ್‌ಗಳಿಗೆ ಮುಕ್ತ ಆಹ್ವಾನವನ್ನು ನೀಡುತ್ತಿದ್ದೇವೆ ಎಂದು ಆಳ್ವಾಸ್ ಪ್ರಕಟಣೆ ತಿಳಿಸಿದೆ..
ಪರಿಸರ ಸ್ನೇಹಿ ಇಂಧನ ಶಕ್ತಿಯನ್ನು ಉತ್ತೇಜಿಸುವ ಸಂಸ್ಥೆಯ ಬದ್ಧತೆಯ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಅವರ ಸಕ್ರಿಯ ಹಾಗೂ ನಿರಂತರ ಬೆಂಬಲದಿಂದ ಆವಿಷ್ಕಾರವು ಸಾಕಾರಗೊಂಡಿದೆ. ಈ ಅತ್ಯಾಧುನಿಕ ತಂತ್ರಜ್ಞಾನವನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವರ ಸುಸ್ಥಿರ ಮತ್ತು ಪರಿಸರ ಸ್ನೇಹಿ ದೃಷ್ಟಿಕೋನಕ್ಕೆ ಅನುಗುಣವಾಗಿ ಗಣನೀಯ ಕೊಡುಗೆ ನೀಡಲು ಸಹಕಾರಿಯಾಗಲಿದೆ ಎಂದು ಕಾಲೇಜಿನ ವಕ್ತಾರರು ತಿಳಿಸಿದ್ದಾರೆ.
ಕರ್ನಾಟಕದ ಇತರ ಸುದ್ದಿಗಳು
ಗೋವಾದಲ್ಲಿ ಪತ್ತೆಯಾಗಿದ್ದ ಕನ್ನಡ ಶಾಸನದ ಅಧ್ಯಯನ, ತಳಾರ ನೇವಯ್ಯನ ಮಗನ ಶೌರ್ಯ ಸಾಹಸ ವೀರಮರಣದ ಕಥೆಯಿದು
