ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ಕಲಬುರಗಿ ವಿಭಾಗದಲ್ಲಿ 42 ನಕಲಿ ಅಂಕ ಪಟ್ಟಿ ಜಾಲ: ಅಂಚೆ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಳ್ಳಲು ನಕಲಿ ದುರ್ಬಳಕೆ ಶಂಕೆ

Kalburgi News: ಕಲಬುರಗಿ ವಿಭಾಗದಲ್ಲಿ 42 ನಕಲಿ ಅಂಕ ಪಟ್ಟಿ ಜಾಲ: ಅಂಚೆ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಳ್ಳಲು ನಕಲಿ ದುರ್ಬಳಕೆ ಶಂಕೆ

Fake marks card ನಕಲಿ ಅಂಕಪಟ್ಟಿಯನ್ನು ಸೃಷ್ಟಿಸಿ ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆದಿರುವ ಪ್ರಕರಣಗಳು ಕಲಬುರಗಿ ವಿಭಾಗದಲ್ಲಿ ಬಯಲಾಗಿವೆ. ಇವರ ವಿರುದ್ದ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ನಕಲಿ ಅಂಕಪಟ್ಟಿ ಸೃಷ್ಟಿಸಿ ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆದಿರುವುದನ್ನು ಕಲಬುರಗಿ ವಿಭಾಗದಲ್ಲಿ ಪತ್ತೆ ಮಾಡಲಾಗಿದೆ.
ನಕಲಿ ಅಂಕಪಟ್ಟಿ ಸೃಷ್ಟಿಸಿ ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆದಿರುವುದನ್ನು ಕಲಬುರಗಿ ವಿಭಾಗದಲ್ಲಿ ಪತ್ತೆ ಮಾಡಲಾಗಿದೆ.

ಕಲಬುರಗಿ: ಪರೀಕ್ಷೆ ಅಕ್ರಮಕ್ಕೆ ಕುಖ್ಯಾತಿ ಪಡೆದಿರುವ ಕಲಬುರಗಿ ವಿಭಾಗದಲ್ಲಿ ಮತ್ತೊಂದು ನಕಲಿ ಅಂಕ ಪಟ್ಟಿ ಜಾಲ ಬೆಳಕಿಗೆ ಬಂದಿದೆ.ಪಿಎಸ್ಐ ಮತ್ತು ಕೆಇಎ ಪರೀಕ್ಷಾ ಅಕ್ರಮದ ಬೆನ್ನಲೆ ಇದೀಗ ಎಸ್‌ಎಸ್‌ಎಲ್‌ಸಿ ನಕಲಿ ಅಂಕ ಪಟ್ಟಿ ಹಗರಣ ಬೆಳಕಿಗೆ ಬಂದಿರುವುದು ಸಂಚಲನ ಮೂಡಿಸಿದೆ. ಕಲಬುರಗಿ ವಿಭಾಗದ ಕಲಬುರಗಿ ಜಿಲ್ಲೆಯಲ್ಲಿ 27, ವಿಜಯಪುರ ಜಿಲ್ಲೆಯಲ್ಲಿ 1, ಶಿರಸಿಯಲ್ಲಿ 2, ಯಾದಗಿರಿ ಜಿಲ್ಲೆಯಲ್ಲಿ 7, ಬೀದರ್‌ ಜಿಲ್ಲೆಯಲ್ಲಿ 4 ಮತ್ತು ರಾಯಚೂರು ಜಿಲ್ಲೆಯಲ್ಲಿ 1 ಸೇರಿ ಒಟ್ಟು 42 ನಕಲಿ ಅಂಕ ಪಟ್ಟಿ ಜಾಲ ಪತ್ತೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಅಂಚೆ ಇಲಾಖೆಯ 1,714 ಹುದ್ದೆಗಳ ನೇಮಕಾತಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಲಬುರಗಿಯಲ್ಲಿ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ನಕಲಿ ಅಂಕ ಪಟ್ಟಿ ನೀಡಿ ಸಿಕ್ಕಿಬಿದ್ದಿದ್ದಾರೆ. ಅಂಚೆ ಇಲಾಖೆಯಿಂದ ಎಸ್ಎಸ್ಎಲ್‌ಸಿ ಅಂಕಪಟ್ಟಿ ಪರಿಶೀಲನೆ ವೇಳೆ 8 ಮಂದಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದು, ನಕಲಿ ಅಂಕಪಟ್ಟಿ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಅಂಚೆ ಇಲಾಖೆಯು ವಂಚನೆ ದೂರು ನೀಡಲು ಮುಂದಾಗಿದೆ.

ಕಳೆದ ಜುಲೈ 2023ರಲ್ಲಿ ಗ್ರಾಮೀಣ ಅಂಚೆ ಸೇವಕರ ಅರ್ಜಿ ಕರೆಯಲಾಗಿತ್ತು. ಎಸ್‌ಎಸ್‌ಎಲ್‌ಸಿ ಮೆರಿಟ್ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗಿತ್ತು. ಆಯ್ಕೆ ಆದವರಿಗೆ ತಾತ್ಕಾಲಿಕವಾಗಿ ನೇಮಕಾತಿ ಆದೇಶವನ್ನೂ ನೀಡಲಾಗಿತ್ತು. ಅರ್ಹರಾದವರ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಪರಿಶೀಲನೆಗೆ ಅಂಚೆ ಇಲಾಖೆ, ಕಲಬುರಗಿಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಕಳುಹಿಸಲಾಗಿತ್ತು.

ಆದರೆ, ಕಲಬುರಗಿಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ದಾಖಲಾತಿ ಪರಿಶೀಲನೆ ವೇಳೆ 42 ಜನರ ಅಂಕಪಟ್ಟಿ ನಕಲಿ ಬಹಿರಂಗವಾಗಿದ್ದು, ಪರೀಕ್ಷಾ ಮೌಲ್ಯ ನಿರ್ಣಯ ಮಂಡಳಿ ದಾಖಲೆಗಳಲ್ಲಿರುವ ಅಂಕ ಹಾಗೂ ಸಲ್ಲಿಸಿರುವ ಅಂಕಪಟ್ಟಿಯಲ್ಲಿನ ಅಂಕಗಳು ಬೇರೆ ಎನ್ನುವುದು ದೃಢಪಟ್ಟಿತ್ತು. ಈ ಹಿನ್ನೆಲೆ ನಕಲಿ ಅಂಕಪಟ್ಟಿವೆಂದು ಅಂಚೆ ಇಲಾಖೆಗೆ ಪರೀಕ್ಷಾ ಮಂಡಳಿ ವರದಿ ಸಲ್ಲಿಸಿತ್ತು. ಕಲಬುರಗಿ ವಿಭಾಗದ ಒಟ್ಟು 7 ಜಿಲ್ಲೆಗಳ 42 ಅಂಕಪಟ್ಟಿಗಳು ನಕಲಿವೆಂದು ತಿಳಿದು ಬಂದಿದೆ.

ಇನ್ನು ನಕಲಿ ಅಂಕಪಟ್ಟಿ ಜಾಲ ಪತ್ತೆಯಾಗಿ 3 ತಿಂಗಳಾಗಿದರೂ ಸಹ ದೂರು ನೀಡಲು ಹಿಂದೇಟು ಹಾಕಿದ್ದು ಕೂಡ ಬಯಲಾಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ, ಕೆಇಎ ವಿವಿಧ ಹುದ್ದೆಗಳ ನೇಮಕಾತಿ ಅಕ್ರಮ ಸೇರಿದಂತೆ ವಿವಿಧ ಇಲಾಖೆಯಲ್ಲಿನ ನೇಮಕಾತಿ ವೇಳೆ ಕಲಬುರಗಿಯಲ್ಲಿ ಅಕ್ರಮ ನಡೆಸಲಾಗಿದೆ. ವ್ಯಾಪಕ ಅಕ್ರಮ ನಡೆಯುತ್ತಿರುವುದರಿಂದ ಜಿಲ್ಲೆಯಲ್ಲಿ ನೇಮಕಾತಿ ಪರೀಕ್ಷೆ ನಡೆಸದಿರುವ ನಿರ್ಧಾರಕ್ಕೆ ಬರಲಾಗಿದೆ.

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (KSET 2023) ಕೆಸೆಟ್‌ ಪರೀಕ್ಷೆ ಜನವರಿ 13 ರಂದು ರಾಜ್ಯಾದ್ಯಂತ ನಡೆಯಲಿದೆ. ಆದರೆ, ಕಲಬುರಗಿಯಲ್ಲಿ ನೇಮಕಾತಿ ಪರೀಕ್ಷೆ ನಡೆಸದೆ ನಿಗದಿ ಮಾಡಲಾಗಿರುವ ಪರೀಕ್ಷಾ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಜಾತಿ ತಿದ್ದುಪಡಿ,ಇಬ್ಬರು ಮುಖ್ಯ ಶಿಕ್ಷಕರ ಅಮಾನತು

ಜಾತಿ ತಿದ್ದುಪಡಿ ಮಾಡಿ ಕರ್ತವ್ಯ ಲೋಪ ವೆಸಗಿದ ಆರೋಪದ ಮೇಲೆ ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಅಫಜಲಪುರ ತಾಲೂಕಿನ ಆನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಲಿ ಮುಖ್ಯ ಶಿಕ್ಷಕ ಬಸವಲಿಂಗಪ್ಪ ಮತ್ತು ಈ ಮೊದಲು ಇದೇ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅಪ್ಪಾಸಾಬ್ ಚವ್ಹಾಣ ಎಂಬುವರು ಅಮಾನತುಗೊಂಡ ಮುಖ್ಯ ಶಿಕ್ಷಕರು.

ಅಫಜಲಪುರ ತಾಲೂಕಿನ ಆನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳು ವಿದ್ಯಾರ್ಥಿಗಳ ಜಾತಿಯನ್ನು ನಿಯಮ ಬಾಹಿರವಾಗಿ ತಿದ್ದುಪಡಿ ಮಾಡಿದ್ದರಿಂದ ಇಬ್ಬರು ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಆದೇಶ ಹೊರಡಿಸಿದ್ದಾರೆ.

ಅಪ್ಪಾಸಾಬ್ ಸದ್ಯ ಕರಜಗಿ ಅಶೋಕ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಾಖಲಾತಿಗಳಲ್ಲಿ ಏಳು ವಿದ್ಯಾರ್ಥಿಗಳ ಮೂಲ ಜಾತಿಯಾದ ಕಬ್ಬಲಿಗ ಎಂಬುದನ್ನು ಅಳಿಸಿ ಅದರ ಮೇಲೆ ತಳವಾರ ಎಂದು ಬರೆಯಲಾಗಿದೆ. ವರ್ಗಾವಣೆ ಪತ್ರದಲ್ಲೂ ತಳವಾರ ಎಂದು ನಮೂದಿಸಿದ್ದರು. ಪ್ರಕರಣ ತನಿಖೆ ವೇಳೆ ಇಬ್ಬರು ಮುಖ್ಯ ಶಿಕ್ಷಕರು ಒಬ್ಬರ ಮೇಲೊಬ್ಬರು ಆರೋಪ ಹೊರಸಿರುವ ಬಗ್ಗೆ ತಹಸೀಲ್ದಾರರು ವರದಿ ನೀಡಿರುವುದಲ್ಲದೆ ಮೇಲ್ಮೋಟಕ್ಕೆ ನಿಯಮ ಬಾಹಿರವಾಗಿ ಜಾತಿ ಬದಲಿ ಮಾಡಿದ್ದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಮುಖ್ಯ ಶಿಕ್ಷಕರನ್ನು ಇಲಾಖೆ ವಿಚಾರಣೆಗೆ ಕಾಯ್ದಿರಿಸಿ, ಅಮಾನತು ಮಾಡಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

IPL_Entry_Point

ವಿಭಾಗ