JDS Pancharatna Yatra: ಮಾರ್ಚ್ 26ಕ್ಕೆ ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ, 4 ಕಿ.ಮೀ. ರೋಡ್ ಶೋ, 10 ಲಕ್ಷ ಜನ ಸೇರುವ ನಿರೀಕ್ಷೆ
Karnataka Election: ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆಯು ಸಮಾರೋಪದ ಹಂತದಲ್ಲಿದೆ.
ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆಯು ಸಮಾರೋಪದ ಹಂತದಲ್ಲಿದೆ. ಇದೇ ಮಾರ್ಚ್ 26ರಂದು ಜೆಡಿಎಸ್‌ನ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಎಚ್‌ಡಿ ದೇವೇಗೌಡ ರೋಡ್‌ಶೋ
ಶಾಸಕರ ಸಲಹೆಯ ಮೇರೆಗೆ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶಕ್ಕೆ ಕುಂಬಳಗೋಡಿನಿಂದ ರೋಡ್ ಬದಲು ಸಮಾವೇಶದ ಸ್ಥಳಕ್ಕೆ ನಾಲ್ಕು ಕೀ.ಮಿ ದೂರ ಮಾತ್ರ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೇಗೌಡರನ್ನು ಕರೆದುಕೊಂಡು ಹೋಗಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶದ ಪೂರ್ವಸಿದ್ಧತೆ ಬಗ್ಗೆ ಶಾಸಕರು, ಪಕ್ಷದ ತಾಲ್ಲೂಕು, ಜಿಲ್ಲಾ ಅಧ್ಯಕ್ಷರು ಹಾಗೂ ಅಭ್ಯರ್ಥಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಈ ವಿಷಯ ತಿಳಿಸಿದರು.
ಸಮಾರೋಪ ಸಮಾವೇಶದ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ವೈದ್ಯರು ಹಾಗೂ ಎಲ್ಲ ಶಾಸಕರ ಸಲಹೆಯ ಮೇರೆಗೆ ಸಮಾರೋಪ ಸಮಾವೇಶದ ರೋಡ್ ಶೋ ವನ್ನು ನಾಲ್ಕು ಕೀ. ಮೀ ಗೆ ಸೀಮಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ತಿಂಗಳ 26ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿಯ ಸಿದ್ದತೆ ಆಗಿದೆ. ಶ್ರೀ ಚಾಮುಂಡೇಶ್ವರಿ ಸನ್ನಿದಾನದಲ್ಲಿ ತಾಯಿ ಆಶಿರ್ವಾದ ಇರಲಿ ಅಂತಲೇ ಅಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.
ಪಂಚರತ್ನ ರಥಯಾತ್ರೆ ರಾಜ್ಯದ 85 ಕ್ಷೇತ್ರದಲ್ಲಿ ಪೂರ್ಣಗೊಳಿಸಿದ್ದೇನೆ. ಎಲ್ಲೆಡೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಗೆ ನೈತಿಕತೆ ಅನ್ನುವುದು ಇಲ್ಲ
ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ಪಕ್ಷದ ಅಧಿಕೃತ ಸದಸ್ಯತ್ವ ಪಡೆದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿ ಅವರು; ಸೈಲೆಂಟ್ ಸುನೀಲ, ಸ್ಯಾಂಟ್ರೋ ರವಿ, ಫೈಟರ್ ರವಿ ಅಂತವರೇ ಬಿಜೆಪಿಗೆ ಸೇರಿಕೊಳ್ಳೋದು. ಇವರಿಗೆ ಪ್ರಾಮುಖ್ಯತೆ ಕೊಡೋದು ಬೇಡ ಎನ್ನುವುದು ಅಭಿಪ್ರಾಯ ಎಂದರು.
ಬಿಜೆಪಿಯವರು ನೈತಿಕತೆ ಭಾಷಣ ಮಾಡುತ್ತಾರೆ. ಅದರ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಜನ ಇಂತವರ ಬಗ್ಗೆ, ಇಂಥ ಪಕ್ಷಗಳ ಬಗ್ಗೆ ಎಚ್ಚರವಾಗಿರಬೇಕು. ಯಾವುದೇ ಕಾರಣಕ್ಕೂ ಇಂಥವರಿಗೆ ಮತ ನೀಡಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿ ರೌಡಿ ಶೀಟರ್ ಗಳಿಗೆ ಎಗ್ಗಿಲ್ಲದೆ ಪಕ್ಷದಲ್ಲಿ ಟಿಕೆಟ್ ನೀಡುತ್ತಿವೆ. ಆಸೆಗೆ ಅಮಾಯಕರ ಜೀವನ ಬಲಿ ಪಡೆದವರನ್ನ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಡ್ತಿದ್ದಾರೆ. ಅದೇ ಅವರ ಪಕ್ಷಕ್ಕೆ ಮುಳುಗಲಿದೆ. ಪಾಪದ ಹಣ ಮಾಡಲು ಹೊರಟಿದ್ದು, ಅವರಿಗೆ ಮುಳುವಾಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.