Kannada News  /  Karnataka  /  Union Home Minister Amit Shah Arrived In Hubli
ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಿದ ಸಿಎಂ ಬೊಮ್ಮಾಯಿ. ಸಚಿವ ಪ್ರಹ್ಲಾದ್ ಜೋಶಿ ಇದ್ದಾರೆ.
ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಿದ ಸಿಎಂ ಬೊಮ್ಮಾಯಿ. ಸಚಿವ ಪ್ರಹ್ಲಾದ್ ಜೋಶಿ ಇದ್ದಾರೆ.

Amit Shah arrived in Hubli: ತಡರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿಯ ಚಾಣಾಕ್ಷ ಅಮಿತ್ ಶಾ ಅವರನ್ನ ಸ್ವಾಗತಿಸಿದ ಸಿಎಂ ಬೊಮ್ಮಾಯಿ

28 January 2023, 7:00 ISTHT Kannada Desk
28 January 2023, 7:00 IST

ಕೇಂದ್ರ ಗೃಹ ಸಚಿವ ಅಮಿತ್ ಶಾ ತಡರಾತ್ರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರು ಶಾ ಅವರನ್ನು ಸ್ವಾಗತಿಸಿದ್ದಾರೆ. ಈ ವೇಳೆ ಸಚಿವ ಪ್ರಹ್ಲಾದ್ ಜೋಶಿ ಇದ್ದರು. 

ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರು ಪದೇ ಪದೆ ರಾಜ್ಯ ಪ್ರವಾಸ ಕೈಗೊಳ್ಳುತ್ತಲೇ ಇದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಬಿಜೆಪಿಯ ಚಾಣಾಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ತಡರಾತ್ರಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಇಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿಯ ಕೆಎಲ್‌ಇ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಬಿ.ವಿ.ಭೂಮರಡ್ಡಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ಲಾಟಿನಂ ಜುಬಿಲಿ ಕಾರ್ಯಕ್ರಮದಲ್ಲಿ ಅಮಿತ್​ ಶಾ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ ಧಾರವಾಡದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ (ಎನ್‌ಎಫ್‌ಎಸ್‌ಯು)ದ ಶಂಕುಸ್ಥಾಪನೆಯನ್ನು ಸಚಿವರು ನೆರವೇರಿಸಲಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅದರಲ್ಲೂ ಹುಬ್ಬಳ್ಳಿ- ಧಾರವಾಡ ನಗರಕ್ಕೆ ವಿಧಿ ವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಈ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದರು.

ಬಳಿಕ ಧಾರವಾಡದ ಕುಂದಗೋಳದ ಬ್ರಹ್ಮದೇವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ರೋಡ್‌ಶೋ ನಡೆಸಲಿದ್ದಾರೆ. ಬಳಿಕ ಬೆಳಗಾವಿ ಜಿಲ್ಲೆಯಲ್ಲಿರುವ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವರ್ಷ ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರ - ಈ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್​​ - ಮೇ ಅಸುಪಾಸಿನಲ್ಲಿ ಚುನಾವಣೆ ನಡೆಯಲಿದೆ. 2024ರ ಲೋಕಸಭಾ ಚುನಾವಣೆಗೆ ಈ ರಾಜ್ಯಗಳ ಎಲೆಕ್ಷನ್ ಸೆಮಿಫೈನಲ್​ ಇದ್ದಂತೆ. ಹೀಗಾಗಿ ಎಲ್ಲಾ ಪಕ್ಷಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.

ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬಿಜೆಪಿ ಪ್ಲಾನ್​ ಮಾಡುತ್ತಿದ್ದು, ಚುನಾವಣಾ ಚಾಣಾಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ಡಿಸೆಂಬರ್​​ನಲ್ಲಿ ಮೂರು ದಿನಗಳ ಕಾಲ ಅಮಿತ್​ ಶಾ ರಾಜ್ಯ ಭೇಟಿಯಲ್ಲಿದ್ದರು. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಳೆ ಮೈಸೂರು ಭಾಗದ ಮತದಾರರನ್ನು ಸೆಳೆಯಲು ಮಂಡ್ಯದಲ್ಲಿ ಬೃಹತ್​ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬಳಿಕ ಬೆಂಗಳೂರಿನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಅಮಿತ್‌ ಶಾ ಒಂದಲ್ಲ, ನೂರು ಬಾರಿ ರಾಜ್ಯಕ್ಕೆ ಬಂದರೂ ಬಿಜೆಪಿ ಗೆಲ್ಲೋದಿಲ್ಲ - ಸಿದ್ದರಾಮಯ್ಯ

ಬಿಜೆಪಿಯ ರಾಷ್ಟ್ರೀಯ ನಾಯಕರು ಸತತವಾಗಿ ರಾಜ್ಯಕ್ಕೆ ಆಗಮಿಸುತ್ತಲೇ ಇದ್ದು, ಚುನಾವಣೆ ಗೆಲ್ಲಲು ರಣತಂತ್ರಗಳನ್ನು ರೂಪಿಸಿ ಹೋಗುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಕೇಸರಿ ಪಡೆಗೆ ಟಕ್ಕರ್ ನೀಡುತ್ತಿದ್ದಾರೆ.

ಅಮಿತ್‌ ಶಾ ಅವರ ಭೇಟಿಯಿಂದ ಏನೂ ಪ್ರಯೋಜನವಾಗದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಂದಲ್ಲ, ನೂರು ಬಾರಿ ರಾಜ್ಯಕ್ಕೆ ಬಂದರೂ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗುವುದು ಶತಸಿದ್ಧ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ. ಅಮಿತ್‌ ಶಾ ಅವರ ಪುನರಾವರ್ತಿತ ಭೇಟಿಯಿಂದ ಬಿಜೆಪಿಗೆ ಯಾವುದೇ ಲಾಭವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈಗಾಗಲೇ ವಿವಿಧ ಸಭೆ, ಸಮಾರಂಭ, ಯಾತ್ರೆಗಳ ಮೂಲಕ ಮತದಾರರ ಮನ ಗೆಲ್ಲುವ ಕಸರತ್ತು ಆರಂಭಿಸಿವೆ.