Uttara Kannada Crime: ಗಂಡನ ಮೇಲಿನ ಕೋಪ: ಸಮುದ್ರಕ್ಕೆ ಹಾರಿದ ನಾಟಕವಾಡಿದ ಮಹಿಳೆ ಕುಮಟಾ ಪೊಲೀಸರ ಅತಿಥಿ
Kumta Police ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತಿಗೆ ಬೆದರಿಸಿ ನಾಟಕವಾಡಿದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರವಾರ: ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಕುಮಟಾ ದಲ್ಲಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಯ ನಾಟಕವಾಡಿದ್ದ ತಾಯಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ. ಪತಿಯ ಮೇಲಿನ ಕೋಪದಿಂದ ಆತನಿಗೆ ಪಾಠ ಕಲಿಸಲು ಆತ್ಮಹತ್ಯೆಯ ನಾಟಕ ವಾಡಿದ್ದು ಬಯಲಾಗಿದೆ.
ವಾರದ ಹಿಂದೆ ಕುಮಟಾ ತಾಲೂಕಿನ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಎಂಬಾಕೆ ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೆಡ್‌ಬಂದರ್ ಸಮುದ್ರದ ಬಳಿ ಸಮುದ್ರಕ್ಕೆ ಹಾರಿದಂತೆ ನಾಟಕವಾಡಿದ್ದಳು. ಈಕೆ ಗಂಡನ ಜತೆಗೆ ಜಗಳವಾಡಿಕೊಂಡಿದ್ದು, ಆತನಿಗೆ ತಕ್ಕ ಪಾಠ ಕಲಿಸಬೇಕೆಂಬ ಉದ್ದೇಶದಿಂದ ಸಮುದ್ರ ತೀರಕ್ಕೆ ಬಂದು ತಾನು ತಂದಿದ್ದ ಸ್ಕೂಟಿ, ಮಾಂಗಲ್ಯ, ಕಾಲುಂಗುರ, ಮೊಬೈಲ್ ಅನ್ನು ದಂಡೆಯ ಮೇಲಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಂತೆ ವೇಲ್ ಅನ್ನು ಸಮುದ್ರಕ್ಕೆ ಎಸೆದಿದ್ದಾಳೆ.
ನಿಲ್ದಾಣದಲ್ಲಿ ಸಿಕ್ಕ ಮಕ್ಕಳು ಹಾಗೂ ಸಮುದ್ರದಲ್ಲಿ ವೇಲ್ ಬಿದ್ದು ತೇಲುತ್ತಿರುವುದನ್ನು ಕಂಡು ಇದೊಂದು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಅಲ್ಲದೇ ಈ ಕುರಿತು ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.
ಮಹಿಳೆ ಶವಕ್ಕಾಗಿ ಲೈಫ್ ಗಾರ್ಡ್‌ಗಳು, ಪೊಲೀಸರು ಸಮುದ್ರದಲ್ಲಿ ಜಾಲಾಡಿದ್ದರು. ಆದರೆ ಶವ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪಿ.ಎಸ್.ಐ ನವೀನ್ ನೇತೃತ್ವದ ತಂಡಕ್ಕೆ ಅನುಮಾನ ಕಾಡಿತ್ತು. ಹೀಗಾಗಿ ಸಮುದ್ರ ಜಾಲಾಡುವ ಜೊತೆ ಬೇರೆ ರೀತಿಯಲ್ಲೂ ತನಿಖೆ ಕೈಗೊಳ್ಳಲಾಗಿತ್ತು.
ಅದೇ ದಿನ ಸಮುದ್ರ ತೀರದ ಬಳಿ ಆಟೋವೊಂದು ನಿಂತಿದ್ದನ್ನು ಪತ್ತೆ ಹಚ್ಚಿ ಆಟೋ ಚಾಲಕನ ಮೂಲಕ ಈಕೆ ಬೇರೆಡೆ ಅಡಗಿರುವ ಕುರಿತು ಮಾಹಿತಿ ಕಲೆಹಾಕಿ ದಾಗ ಆತ್ಮಹತ್ಯೆ ನಾಟಕ ಬಯಲಾಗಿದೆ.
ತಾನು ಗಂಡನ ಮೇಲಿನ ಕೋಪಕ್ಕೆ ಹೀಗೆ ಮಾಡಿದ್ದೇನೆ. ಪ್ರತಿ ದಿನ ಕುಡಿದು ನನ್ನೊಂದಿಗೆ ಜಗಳವಾಡುತಿದ್ದ. ಹೊಡೆಯುತ್ತಿದ್ದ ಹೀಗಾಗಿ ಆತನಿಗೆ ಬುದ್ದಿ ಕಲಿಸಲು ಹೀಗೆ ಮಾಡಿದ್ದಾಗಿ ವಿಚಾರಣೆ ವೇಳೆ ಮಹಿಳೆ ಒಪ್ಪಿಕೊಂಡಿದ್ದಾಳೆ. ಆತ್ಮಹತ್ಯೆ ನಾಟಕವಾಡಿ ಲೈಫ್ ಗಾರ್ಡ್ ಹಾಗೂ ಪೊಲೀಸರ ದಿಕ್ಕು ತಪ್ಪಿಸಿ ಸಮಯ ವ್ಯರ್ಥ ಮಾಡಿರುವ ಆರೋಪದಡಿ ಮಹಿಳೆ ಇನ್ನೂ ಪೋಲಿಸರ ವಶದಲ್ಲೇ ಇದ್ದು ವಿಚಾರಣೆ ಮುಂದುವರಿದಿದೆ.
ದ್ವೇಷಕ್ಕೆಂದು ಟಿಪ್ಪರ್ ನಲ್ಲಿ ಹೊಡೆಸಿ ಹತ್ಯೆ
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಆದ ಗಲಾಟೆ ಯಿಂದ ಆಟೋದಲ್ಲಿ ಕುಳಿತಿದ್ದ ಮೂವರ ಮೇಲೆ ಟಿಪ್ಪರ್ ಢಿಕ್ಕಿ ಹೊಡೆಸಿದ ಪರಿಣಾಮ ಓರ್ವ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಅರೇಅಂಗಡಿ ಸಮೀಪ ನಡೆದಿದೆ.
ಟಿಪ್ಪರ್ ಹಾಯಿಸಿದ್ದರಿಂದ ತಲೆಗೆ ಗಂಭೀರವಾಗಿ ಪೆಟ್ಟುಬಿದ್ದು ಆಟೋ ಚಾಲಕ ಓಲ್ವಿನ್ ಸ್ಥಳದಲ್ಲೇ ಮೃತಪಟ್ಟು ವಸಂತ ಹಾಗೂ ಜನಾರ್ದನರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಆರೊಳ್ಳಿಯಲ್ಲಿ ಹಡಿನಬಾಳದ ವಿನಾಯಕ ನಾರಾಯಣ ಭಟ್ ಮತ್ತು ಜನಾರ್ದನ ಕೇಶವ ನಾಯ್ಕ ಮಧ್ಯೆ ಹಣದ ವ್ಯವಹಾರಕ್ಕೆ ಸಂಬಂಧಿಸಿ ಜಗಳ ನಡೆದಿತ್ತು. ಅನಂತರ ಇದೇ ದ್ವೇಷದಿಂದ ಅರೇಅಂಗಡಿಯ ಜನತಾ ಕಾಲನಿ ಹತ್ತಿರ ಜನಾರ್ದನ ನಾಯ್ಕ ಹಾಗೂ ಸ್ನೇಹಿತರಾದ ವಸಂತ ನಾಯ್ಕ, ಓಲ್ವಿನ್ ಲೋಬೊ ಆಟೋದಲ್ಲಿ ಕುಳಿತಿದ್ದ ವೇಳೆ ಇವರನ್ನು ಕೊಲೆ ಮಾಡುವ ಉದ್ದೇಶದಿಂದ ವಿನಾಯಕ ನಾರಾಯಣ ಭಟ್ ಟಿಪ್ಪರ್ ಚಲಾಯಿಸಿಕೊಂಡು ಬಂದು ಆಟೋಕ್ಕೆ ಡಿಕ್ಕಿ ಹೊಡೆಸಿದ್ದಾನೆ ಎಂದು ವಿನಾಯಕ ಭಟ್ ವಿರುದ್ದ ವಸಂತ ನಾಯ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅಂಕೋಲಾದಲ್ಲಿ ತಾಯಿ ಮಗಳು ನಾಪತ್ತೆ
ಅಂಕೋಲಾದ ಲಕ್ಷ್ಮೇಶ್ವರದ ಗಜಾಲಾ ಸೈಯ್ಯದ್ ಮಹಮ್ಮದ್ ಇಕ್ಬಾಲ ಪಿರಜಾದೆ (43) ಹಾಗೂ ಮಗ ಅರೀಜ್ ಸಯ್ಯದ್ ಮಹಮ್ಮದ್ ಇಕ್ಬಾಲ್ ಪಿರಜಾದೆ (4 ವರ್ಷ 6 ತಿಂಗಳು) ನಾಪತ್ತೆಯಾಗಿದ್ದಾರೆ. ಅಂಕೋಲಾದ ಬೊಬ್ರವಾಡದ ಉರ್ದು ಶಾಲೆ ಹಿಂಬದಿಯವರಾದ ಸೈಯ್ಯದ ಪಿರಜಾದೆ ಅವರು ಹಾಲಿ ಲಕ್ಷ್ಮೇಶ್ವರದಲ್ಲಿ ತನ್ನ ಪತ್ನಿ ಗಜಾಲಾ ಹಾಗೂ ಮಗನೊಂದಿಗೆ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.ಯಾರಿಗೂ ಹೇಳದೆ ಕೇಳದೆ ತನ್ನ ಪತ್ನಿ ಮಗನನ್ನು ಕರೆದುಕೊಂಡು ನಾಪತ್ತೆಯಾಗಿದ್ದಾಳೆ. ತನ್ನ ಪತ್ನಿ ಹಾಗೂ ಮಗುವನ್ನು ಹುಡುಕಿಕೊಡುವಂತೆ ಮಹಮದ್ ದೂರು ದಾಖಲಿಸಿದ್ದಾರೆ.