ಕನ್ನಡ ಸುದ್ದಿ  /  Karnataka  /  Veerendra Heggade Case: K Somanath Nayak Surrendered To Belthangadi Court Who Spread Rumors About Veerendra Heggade

Veerendra heggade case: ವೀರೇಂದ್ರ ಹೆಗ್ಗಡೆ ವಿರುದ್ಧ ಸುಳ್ಳು ವದಂತಿ; ನ್ಯಾಯಾಲಯಕ್ಕೆ ಶರಣಾದ ಸೋಮನಾಥ ನಾಯಕ್‌: ಪೂರ್ಣ ವಿವರ ಇಲ್ಲಿದೆ

Veerendra heggade case: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌, ಲೇಖನಗಳ ಮೂಲಕ ಅಪಪ್ರಚಾರ ಮಾಡಿದ್ದ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸೋಮನಾಥ‌ ನಾಯಕ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಅವರಿಗೆ 3 ತಿಂಗಳ ಸಜೆ, 4.5 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಡಾ.ವೀರೇಂದ್ರ ಹೆಗ್ಗಡೆ (ಬಲಚಿತ್ರ) ಎಡ ಚಿತ್ರದಲ್ಲ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ ಸೋಮನಾಥ ನಾಯಕ್‌.
ಡಾ.ವೀರೇಂದ್ರ ಹೆಗ್ಗಡೆ (ಬಲಚಿತ್ರ) ಎಡ ಚಿತ್ರದಲ್ಲ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ ಸೋಮನಾಥ ನಾಯಕ್‌.

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಮನ ಸೆಳೆದ ಪ್ರಕರಣ ಒಂದರಲ್ಲಿ, ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಸೋಮನಾಥ್‌ ನಾಯಕ್‌ (71) ಬೆಳ್ತಂಗಡಿ ನ್ಯಾಯಾಲಯಕ್ಕೆ ಸೋಮವಾರ ಶರಣಾಗಿದ್ದಾರೆ.

ಅವರು ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಅಪಪ್ರಚಾರ ಮತ್ತು ಹೇಳಿಕೆ ನೀಡಿದ ಕಾರಣ ಸೋಮನಾಥ್‌ ನಾಯಕ್‌ ವಿರುದ್ಧ ಕೇಸ್‌ ದಾಖಲಾಗಿತ್ತು.

ಕೋರ್ಟ್‌ ಅವರಿಗೆ 3 ತಿಂಗಳ ಸಜೆ ಮತ್ತು 4.5 ಲಕ್ಷ ರೂಪಾಯಿ ಪರಿಹಾರವನ್ನು ಪಾವತಿಸುವಂತೆ ಆದೇಶಿಸಿದೆ. ಬಳಿಕ ಕೋರ್ಟ್‌ ಸೂಚನೆ ಮೇರೆಗೆ ಅವರನ್ನು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ಕರೆದೊಯ್ದಿದ್ದಾರೆ.

ಸೋಮನಾಥ್‌ ನಾಯಕ್‌ ಅವರು ಸೋಮನಾಥ ಮಧ್ಯಾಹ್ನ ವಕೀಲರೊಂದಿಗೆ ಬೆಳ್ತಂಗಡಿಯ ನ್ಯಾಯಾಧೀಶ ವಿಜಯೇಂದ್ರ ಅವರ ಮುಂದೆ ಹಾಜರಾದರು. ಈ ಸಂದರ್ಭದಲ್ಲಿ ಅವರು ಮೆರವಣಿಗೆ ಮೂಲಕ ಆಗಮಿಸಿದ್ದು, 70ಕ್ಕೂ ಅಧಿಕ ಬೆಂಬಲಿಗರು ಜತೆಗಿದ್ದರು. ಈ ಪೈಕಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿ, ರಂಜನ್ ರಾವ್ ಯರ್ಡೂರು, ಡಿಎಸ್ಎಸ್ ಮುಖಂಡರು, ಕೆಲ ಸಂಘಟನೆಗಳ ಕಾರ್ಯಕರ್ತರು ಇದ್ದರು.

ಏನು ಪ್ರಕರಣ ಇದು?

ಶ್ರೀ ಕ್ಷೇತ್ರ ಧರ್ಮಸ್ಥಳ ಅಥವಾ ಸಂಸ್ಥೆಯ ಕುರಿತು ಹಾಗೂ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಗೌರವಕ್ಕೆ ಚ್ಯುತಿ ತರುವ ಯಾವುದೇ ರೀತಿಯ ಬರವಣಿಗೆ ಅಥವಾ ಹೇಳಿಕೆ ನೀಡಬಾರದು ಎಂದು ಬೆಳ್ತಂಗಡಿ ಸಿವಿಲ್ ನ್ಯಾಯಾಲಯವು ಸೋಮನಾಥ ನಾಯಕ್ ಮತ್ತು ಇತರ 5 ಮಂದಿಯ ವಿರುದ್ಧ ಪ್ರತಿಬಂಧಕಾಜ್ಞೆ ಹೇರಿತ್ತು.

ಆದರೂ ನಾಯಕ್ ಸುಳ್ಳು ಆರೋಪಗಳನ್ನು ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಲೇ ಇದ್ದರು. ಕ್ಷೇತ್ರದ ಪರ ವಕೀಲರು ಈ ವಿಚಾರವನ್ನು ನ್ಯಾಯಾಲಯದ ಮುಂದಿರಿಸಿದಾಗ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಸೋಮನಾಥ ನಾಯಕ್ ದೋಷಿ ಎಂದು ಪರಿಗಣಿಸಿತು. ಅಲ್ಲದೆ, ನ್ಯಾಯಾಲಯ ಅವರಿಗೆ 3 ತಿಂಗಳ ಸಜೆ ಮತ್ತು ಕ್ಷೇತ್ರಕ್ಕೆ 4.5 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ಮಾರ್ಚ್‌ 31ರಂದು ಆದೇಶಿಸಿತ್ತು. ನಾಯಕ್‌ ಬಂಧನಕ್ಕೆ ವಾರೆಂಟ್‌ ಕೂಡ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ನಾಯಕ್‌ ಮತ್ತು ಸಂಗಡಿಗರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನಲ್ಲೇನಾಯಿತು?

ಸೋಮನಾಥ ನಾಯಕ್‌ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಹೈಕೋರ್ಟ್‌ ಈ ವರ್ಷ ಮೇ 5ರಂದು ಬೆಳ್ತಂಗಡಿ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿಹಿಡಿಯಿತು. ನಾಯಕ್‌ ಬಂಧನಕ್ಕೆ ಹಸಿರು ನಿಶಾನೆಯನ್ನು ತೋರಿಸಿತು. ಇದನ್ನು ಪ್ರಶ್ನಿಸಿ ನಾಯಕ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು.

ಸುಪ್ರೀಂ ಕೋರ್ಟ್‌ ಏನು ಹೇಳಿತು?

ಶ್ರೀ ಕ್ಷೇತ್ರ ಧರ್ಮಸ್ಥಳ ಅಥವಾ ಸಂಸ್ಥೆಯ ಕುರಿತು ಹಾಗೂ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಗೌರವಕ್ಕೆ ಚ್ಯುತಿ ತರುವ ಹೇಳಿಕೆಯನ್ನು, ಬರವಣಿಗೆಯುನ್ನು ಮುಂದುವರಿಸಿದ ಸೋಮನಾಥ ನಾಯಕ್‌ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಎತ್ತಿಕೊಂಡಿತು.

ಕರ್ನಾಟಕ ಹೈಕೋರ್ಟ್‌ ಮತ್ತು ಬೆಳ್ತಂಗಡಿ ನ್ಯಾಯಾಲಯಗಳು ನೀಡಿದ ತೀರ್ಪುಗಳು ಸರಿಯಾಗೇ ಇವೆ. ಅದರಲ್ಲಿ ಮಧ್ಯಪ್ರವೇಶಿಸುವ ಯಾವುದೇ ಕಾರಣ ಕಾಣುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿತು.

ಇದಲ್ಲದೆ, ಸೋಮನಾಥ ನಾಯಕ್‌ ಅವರ ಕ್ಷಮಾಪಣೆ ಮನವಿಯನ್ನೂ ತಿರಸ್ಕರಿಸಿತು. ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಕಾರಣ ಸೋಮನಾಥ್‌ ನಾಯಕ್‌ ಅವರಿಗೆ ಛೀಮಾರಿ ಕೂಡ ಹಾಕಿತು.

ದಿಲ್ಲಿಯ ಹಿರಿಯ ನ್ಯಾಯವಾದಿ ಕೆ.ವಿ. ವಿಶ್ವನಾಥನ್‌, ವಿ.ಎನ್‌. ರಘುಪತಿ, ಕೆ. ಚಂದ್ರನಾಥ ಆರಿಗ, ಬೆಂಗಳೂರು, ಮತ್ತು ಬೆಳ್ತಂಗಡಿಯ ನ್ಯಾಯವಾದಿ ರತ್ನವರ್ಮ ಬುಣ್ಣು ಅವರ ತಂಡ ಶ್ರೀಕ್ಷೇತ್ರವನ್ನು ಪ್ರತಿನಿಧಿಸಿತ್ತು.

IPL_Entry_Point