ಕನ್ನಡ ಸುದ್ದಿ  /  ಜೀವನಶೈಲಿ  /  ಸಿಎನ್‌ಜಿ ಕಾರು ಖರೀದಿಸಬೇಕಾ, ಟಾಟಾ ಪಂಚ್‌ನಿಂದ ಮಾರುತಿ ಸುಜುಕಿ ಫ್ರಾಂಕ್ಸ್‌ವರೆಗೆ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳಿವು

ಸಿಎನ್‌ಜಿ ಕಾರು ಖರೀದಿಸಬೇಕಾ, ಟಾಟಾ ಪಂಚ್‌ನಿಂದ ಮಾರುತಿ ಸುಜುಕಿ ಫ್ರಾಂಕ್ಸ್‌ವರೆಗೆ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳಿವು

ಭಾರತ ಸರ್ಕಾರವು ಪೆಟ್ರೋಲ್‌, ಡೀಸೆಲ್‌ಗಳಂತಹ ಸಾಂಪ್ರದಾಯಿಕ ಇಂಧನಗಳ ಬಳಕೆಗೆ ಬದಲೀ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಹಾಗಾಗಿ ವಾಹನ ತಯಾರಕ ಕಂಪನಿಗಳು ಸಿಎನ್‌ಜಿ, ಇವಿ ವಾಹನಗಳನ್ನು ಹೆಚ್ಚು ಹೆಚ್ಚು ರಸ್ತೆಗಿಳಿಸಲು ನೋಡುತ್ತಿವೆ. ನೀವು ಸಿಎನ್‌ಜಿ ಕಾರು ಖರೀದಿಸಲು ಬಯಸಿದರೆ, 10 ಲಕ್ಷದ ಒಳಗಿನ ಸಿಎನ್‌ಜಿ ಕಾರುಗಳ ವಿವರ ಇಲ್ಲಿದೆ. (ಬರಹ: ಅರ್ಚನಾ ವಿ. ಭಟ್‌)

ಹುಂಡೈ ಎಕ್ಸಟರ್‌ (ಎಡಚಿತ್ರ) ಟಾಟಾ ಪಂಚ್‌ (ಬಲಚಿತ್ರ)
ಹುಂಡೈ ಎಕ್ಸಟರ್‌ (ಎಡಚಿತ್ರ) ಟಾಟಾ ಪಂಚ್‌ (ಬಲಚಿತ್ರ)

ಭಾರತದಲ್ಲಿ ಆಟೊಮೊಬೈಲ್‌ ಕ್ಷೇತ್ರ ದಿನೇ ದಿನೇ ಬೆಳೆಯುತ್ತಿದೆ. ಕಂಪನಿಗಳು ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್‌, ಡೀಸಲ್‌ ವಾಹನಗಳ ತಯಾರಿಕೆಯ ಬದಲಿಗೆ ಸಿಎನ್‌ಜಿ, ಇವಿ ವಾಹನಗಳನ್ನು ತಯಾರಿಸುತ್ತಿವೆ. ಭಾರತ ಸರ್ಕಾರವೂ ಸುಸ್ಥಿರ ಇಂಧನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಎಲೆಕ್ಟ್ರಿಕಲ್‌ ವಾಹನಗಳ ವಿಭಾಗವು ದಿನೇ ದಿನೇ ಬೆಳೆಯುತ್ತಿರುವುದನ್ನು ನಾವು ಕಾಣಬಹುದು. ಆದರೆ ಕಾರುಗಳಲ್ಲಿ ಸಿಎನ್‌ಜಿ ಆಧಾರಿತ ಎಂಜಿನ್‌ಗಳು ಬದಲೀ ವ್ಯವಸ್ಥೆಗೆ ಉತ್ತಮವಾಗಿದೆ. ಇದು ಪೆಟ್ರೋಲ್‌, ಡೀಸಲ್‌ನಷ್ಟೇ ಗುಣಮಟ್ಟದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಭಾರತದಲ್ಲಿ ಖರೀದಿಸಬಹುದಾದ ಉತ್ತಮ ಸಿಎನ್‌ಜಿ ಕಾರುಗಳ ಪರಿಚಯ ನೀಡಲಾಗಿದೆ. ಇವು ಎಲ್ಲಾ ವೈಶಿಷ್ಟ್ಯಗಳನ್ನು ಮತ್ತು ಉತ್ತಮ ಮೈಲೇಜ್‌ ನೀಡುವ 10 ಲಕ್ಷದ ಒಳಗೆ ಖರೀದಿಸಬಹುದಾದ ಬೆಸ್ಟ್‌ ಸಿಎನ್‌ಜಿ ಕಾರುಗಳಾಗಿವೆ.

ಟಾಟಾ ಪಂಚ್‌

ಸಬ್‌ ಕ್ಯಾಂಪ್ಯಾಕ್ಟ್‌ ಎಸ್‌ಯುವಿ ಕಾರಾದ ಟಾಟಾ ಪಂಚ್‌ನ ಸಿಎನ್‌ಜಿ 2 ರೂಪಾಂತರಗಳಲ್ಲಿ ಲಭ್ಯವಿದೆ. ಪಂಚ್‌ ಅಡ್ವೆಂಚರ್‌ iCNG ಮತ್ತು ಪಂಚ್‌ ಅಡ್ವೆಂಚರ್‌ ರಿದಮ್‌ iCNG. ಈ ಎರಡೂ ರೂಪಾಂತರಗಳು ಕ್ರಮವಾಗಿ 7.95 ಲಕ್ಷ ರೂ. ಮತ್ತು 8.30 ಲಕ್ಷ ರೂ. ಗಳಾಗಿವೆ. (ಎಕ್ಸ್‌ ಶೋರೂಂ ಬೆಲೆ). ಇದು 1.2 ಲೀಟರ್‌ ಪೆಟ್ರೋಲ್‌ ಇಂಜಿನ್‌ನಿಂದ ಚಾಲಿತವಾಗುತ್ತದೆ. 73.5 bhp ಗಳಷ್ಟು ಶಕ್ತಿಯನ್ನು ಹೊರಹಾಕುತ್ತದೆ ಮತ್ತು 103 Nmಗಳಷ್ಟು ಟಾರ್ಕ್‌ ಉತ್ಪತ್ತಿ ಮಾಡುತ್ತದೆ. ಟಾಟಾ ಪಂಚ್‌ ಸಿಎನ್‌ಜಿ ಕಾರು ಪ್ರತಿ ಕೆಜಿಗೆ 26.99 ಕಿಮೀ ಮೈಲೇಜ್‌ ನೀಡಲಿದೆ.

ಮಾರುತಿ ಸುಜುಕಿ ಫ್ರಾಂಕ್ಸ್‌

ಮಾರುತಿ ಸುಜುಕಿ ಫ್ರಾಂಕ್ಸ್‌ ಸಿಎನ್‌ಜಿಯನ್ನು 2 ರೂಪಾಂತರಗಳಲ್ಲಿ ಖರೀದಿಸಬಹುದಾಗಿದೆ. ಅವು ಫ್ರಾಂಕ್ಸ್‌ ಡೆಲ್ಟಾ 1.2 ಸಿಎನ್‌ಜಿ ಮತ್ತು ಫ್ರಾಂಕ್ಸ್‌ ಸಿಗ್ಮಾ 1.2 ಸಿಎನ್‌ಜಿ ರೂಪಾಂತರಗಳಾಗಿವೆ. ಈ ಎರಡೂ ಕಾರಿನ ಬೆಲೆಗಳು ಕ್ರಮವಾಗಿ 9.3 ಲಕ್ಷ ರೂ. ಮತ್ತು 8.46 ಲಕ್ಷ ರೂ. (ಎಕ್ಸ್‌ ಶೋರೂಂ ಬೆಲೆ) ಗಳಾಗಿವೆ. ಮಾರುತಿ ಸುಜುಕಿ ಫ್ರಾಂಕ್ಸ್‌ ಸಿಎನ್‌ಜಿ ಎಸ್‌ಯುವಿ ಕಾರು 1.2 ಲೀಟರ್‌ ಡ್ಯೂವಲ್‌ ಜೆಟ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಅದು 77.5 bhp ಶಕ್ತಿಯನ್ನು ಹೊರಹಾಕುತ್ತದೆ ಮತ್ತು 98.5 Nm ಟಾರ್ಕ್‌ ಅನ್ನು ಉತ್ಪತ್ತಿ ಮಾಡುತ್ತದೆ. ಫ್ರಾಂಕ್ಸ್‌ ಸಿಎನ್‌ಜಿ ಕಾರು ಪ್ರತಿ ಕೆಜಿಗೆ 28.51ಕಿಮೀ ಮೈಲೇಜ್‌ ನೀಡುತ್ತದೆ

ಹುಂಡೈ ಎಕ್ಸಟರ್‌

ಹುಂಡೈನ ಎಕ್ಸಟರ್‌ ಸಿಎನ್‌ಜಿ ಕಾರು 2 ರೂಪಾಂತರಗಳಲ್ಲಿ ದೊರೆಯುತ್ತದೆ. ಎಕ್ಸಟರ್‌ S 1.2 ಸಿಎನ್‌ಜಿ MT ಮತ್ತು ಎಕ್ಸಟರ್‌ SX 1.2 ಸಿಎನ್‌ಜಿ MT ಗಳಾಗಿವೆ. ಸಿಎನ್‌ಜಿ ರೂಪಾಂತರದ ಎರಡೂ ಕಾರುಗಳು ಕ್ರಮವಾಗಿ 8.43 ಲಕ್ಷ ರೂ. ಮತ್ತು 9.16 ಲಕ್ಷ ರೂ. (ಎಕ್ಸ್‌ ಶೋರೂಂ ಬೆಲೆ) ಬೆಲೆಯನ್ನು ಹೊಂದಿವೆ. ಹುಂಡೈ ಎಕ್ಸಟರ್‌ ಸಿಎನ್‌ಜಿ ರೂಪಾಂತರವು 1.2 ಲೀಟರ್‌ ನ್ಯಾಚುರಲ್‌ ಆಸ್ಪಿರೇಟೆಡ್‌ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು ಅದು 69 bhp ಶಕ್ತಿಯನ್ನು ಹೊರಹಾಕುತ್ತದೆ ಮತ್ತು 95 Nm ಟಾರ್ಕ್‌ ಅನ್ನು ಉತ್ಪತ್ತಿ ಮಾಡುತ್ತದೆ. ಎಕ್ಸ್‌ಟರ್‌ ಸಿಎನ್‌ಜಿ ರೂಪಾಂತರವು ಪ್ರತಿ ಕೆಜಿಗೆ 27.1 ಕಿಮೀ ಮೈಲೇಜ್‌ ನೀಡುತ್ತದೆ.

ಟಾಟಾ ಅಲ್ಟ್ರೂಜ್‌

ಟಾಟಾ ಅಲ್ಟ್ರೂಜ್‌ 6 ರೂಪಾಂತರಗಳಲ್ಲಿ ಖರೀದಿಸಬಹುದಾಗಿದೆ. ಅಲ್ಟ್ರೂಜ್‌ XE ಸಿಎನ್‌ಜಿ, ಅಲ್ಟ್ರೂಜ್‌ XZ ಪ್ಲಸ್‌ (O) (S) ಐಸಿಎನ್‌ಜಿ, ಅಲ್ಟ್ರೂಜ್‌ XZ ಪ್ಲಸ್‌ (S) ಐಸಿಎನ್‌ಜಿ, ಅಲ್ಟ್ರೂಜ್‌ XZ ಐಸಿಎನ್‌ಜಿ, ಅಲ್ಟ್ರೂಜ್‌ XM ಪ್ಲಸ್‌ (S) ಐಸಿಎನ್‌ಜಿ ಮತ್ತು ಅಲ್ಟ್ರೂಜ್‌ XM ಪ್ಲಸ್‌ ಐಸಿಎನ್‌ಜಿಗಳಾಗಿವೆ. ಈ ಸಿಎನ್‌ಜಿ ರೂಪಾಂತರದ ಕಾರುಗಳನ್ನು 7.60 ಲಕ್ಷ ರೂ. ನಿಂದ 10.65 ಲಕ್ಷ ರೂ. (ಎಕ್ಸ್‌ ಶೋರೂಂ) ಬೆಲೆಗಳಲ್ಲಿ ಖರೀದಿಸಬಹುದಾಗಿದೆ. ಟಾಟಾ ಅಲ್ಟ್ರೂಜ್‌ ಸಿಎನ್‌ಜಿ ರೂಪಾಂತರವು 1.2 ಲೀಟರ್ ನ್ಯಾಚುರಲ್‌ ಅಸ್ಪಿರೇಟೆಡ್‌ ಪೆಟ್ರೋಲ್‌ ಇಂಜಿನ್‌ ಹೊಂದಿದೆ. ಅದು 73.5 bhp ಶಕ್ತಿಯನ್ನು ಹೊರಹಾಕಿ, 103 Nm ಟಾರ್ಕ್‌ ಉತ್ಪತ್ತಿ ಮಾಡುತ್ತದೆ. ಪ್ರತಿ ಕೆಜಿಗೆ ಇದು 26.20 ಕಿಮೀ ಮೈಲೇಜ್‌ ನೀಡುತ್ತದೆ.

ವಿಭಾಗ