ಕನ್ನಡ ಸುದ್ದಿ  /  ಜೀವನಶೈಲಿ  /  Car Modification: ಕಾರುಪ್ರಿಯರೇ ನಿಮ್ಮ ವಾಹನ ಮಾರ್ಪಾಡು ಮಾಡುವ ಮುನ್ನ ಎಚ್ಚರ: ಕಾನೂನು ಪ್ರಕಾರ ಏನೆಲ್ಲಾ ನಿಯಮಗಳಿವೆ ಗಮನಿಸಿ

Car Modification: ಕಾರುಪ್ರಿಯರೇ ನಿಮ್ಮ ವಾಹನ ಮಾರ್ಪಾಡು ಮಾಡುವ ಮುನ್ನ ಎಚ್ಚರ: ಕಾನೂನು ಪ್ರಕಾರ ಏನೆಲ್ಲಾ ನಿಯಮಗಳಿವೆ ಗಮನಿಸಿ

Car Modification: ತಾವು ಬಳಸುವ ವಾಹನಗಳು ಸುಂದರವಾಗಿ ಕಾಣಬೇಕೆಂದು ಕೆಲವರು ಕಾರಿನ ಬಣ್ಣ ಸೇರಿದಂತೆ ಇನ್ನಿತರ ಮಾರ್ಪಾಟುಗಳನ್ನು ಮಾಡಲು ಇಷ್ಟಪಡುತ್ತಾರೆ. ಆದರೆ ಕೆಲವೊಂದು ವಾಹನಗಳಿಗೆ ಮೊಡಿಫಿಕೇಶನ್‌ ಮಾಡುವುದು ಸುಲಭದ ಮಾತಲ್ಲ. ಇದಕ್ಕೆ ನೀವು ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಬೇಕಿರುತ್ತದೆ.

ವಾಹನ ಮಾರ್ಪಾಟು ಮಾಡುವ ಮುನ್ನ ಗಮನಿಸಬಹುದಾದ ವಿಚಾರಗಳು
ವಾಹನ ಮಾರ್ಪಾಟು ಮಾಡುವ ಮುನ್ನ ಗಮನಿಸಬಹುದಾದ ವಿಚಾರಗಳು (PC: Freepik)

Car Modification: ಕೆಲವರಿಗೆ ಕಾರು, ಬೈಕ್ ಅಂದ್ರೆ ತುಂಬಾ ಕ್ರೇಜ್ ಇರುತ್ತದೆ. ಅನೇಕ ಮಂದಿ ತಮ್ಮ ಕಾರಿನ ಜೊತೆ ಭಾವನಾತ್ಮಕವಾಗಿರುತ್ತಾರೆ. ಪತ್ನಿ/ಗೆಳತಿಗಿಂತಲೂ ತಮ್ಮ ವಾಹನವನ್ನು ಇಷ್ಟಪಡುವ ಟ್ರೋಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ತಮ್ಮ ವಾಹನವನ್ನು ವಿಭಿನ್ನವಾಗಿ ಕಾಣುವಂತೆ ಮಾಡುತ್ತಾರೆ. ಸಾಮಾನ್ಯ ಜನರಿಗೆ ಈ ಮಾರ್ಪಾಡು ನೋಡಿದಾಗ ಇದೇನಪ್ಪಾ ಅಂತಾ ಅನಿಸಬಹುದು. ಆದರೆ ವಾಹನ ಮಾಲೀಕರ ಪ್ರಕಾರ, ಮಾರ್ಪಾಡುಗಳು ಅವರ ವಾಹನಕ್ಕೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತವೆ.

ಟ್ರೆಂಡಿಂಗ್​ ಸುದ್ದಿ

ಕಾರುಗಳು ಅಸ್ತಿತ್ವಕ್ಕೆ ಬಂದ ಸಮಯದಿಂದಲೂ ಕಾರು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಮಾಲೀಕರಿಗೆ ಕಾರಿನ ಕಾರ್ಯ ಕ್ಷಮತೆ, ಸುಂದರವಾಗಿ ಕಾಣಬೇಕು ಎಂದೆನಿಸುವುದು ಸಹಜ. ಅನೇಕರು ತಮ್ಮ ಕಾರು ನೋಡಲು ಚೆನ್ನಾಗಿ ಕಾಣಬೇಕು ಅಂತಾ ಕಸ್ಟಮೈಸ್ ಮಾಡುವುದು ಸಹಜ. ಆದರೆ, ನಮ್ಮ ದೇಶದಲ್ಲಿ ನಿಯಮಗಳು ಆಗಾಗ್ಗೆ ಬದಲಾಗುತ್ತವೆ. ಎಲ್ಲಾ ಕಾರು ಮಾರ್ಪಾಡುಗಳಿಗೆ ಕಾನೂನು ಅನುಮತಿಸುವುದಿಲ್ಲ. ನಿಮ್ಮ ಕಾರಿಗೆ ಕೆಲವು ವಿಲಕ್ಷಣ ಮಾರ್ಪಾಡುಗಳನ್ನು ಮಾಡಿದರೆ ನಿಮಗೆ ಕಾನೂನು ತೊಡಕು ಉಂಟಾಗಬಹುದು. ಒಂದು ವೇಳೆ ನೀವು ನಿಮ್ಮ ಕಾರನ್ನು ಮಾರ್ಪಾಡಿಸಲು ಯೋಜಿಸುತ್ತಿದ್ದರೆ, ಸುರಕ್ಷತೆಗೆ ಧಕ್ಕೆ ತರುವಂಥದ್ದನ್ನು ಏನೂ ಮಾಡಬೇಡಿ.

ಭಾರತದಲ್ಲಿ ಸಾಮಾನ್ಯವಾಗಿ ಮೂರು ರೀತಿಯ ಕಾರು ಮಾರ್ಪಾಡುಗಳಿವೆ. ಕಾರ್ಯಕ್ಷಮತೆ, ಕ್ರಿಯಾತ್ಮಕ ಮತ್ತು ಕಾರು ಸುಂದರವಾಗಿ ಕಾಣುವಂತಹ ಮಾರ್ಪಾಡುಗಳನ್ನು ಮಾಡಲಾಗುತ್ತದೆ. ನಿಮ್ಮ ಕಾರನ್ನು ಮಾರ್ಪಡಿಸಲು ನೀವು ಯೋಜಿಸುತ್ತಿದ್ದರೆ ಇಲ್ಲಿ ಕೆಲವೊಂದು ಮಾಹಿತಿಗಳಿವೆ, ಗಮನಿಸಿ.

ಕಾರು ಬಾಡಿ ಕಿಟ್‌: ಕಾರಿನ ಬಾಡಿ ಕಿಟ್ ಅಳವಡಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದು ವಾಹನದ ರಚನೆಗೆ ಅಡ್ಡಿಯಾಗುವುದಿಲ್ಲ. ಈ ಕಿಟ್‌ಗಳಾದ ಬಾಡಿ ಕ್ಲಾಡಿಂಗ್, ಸೈಡ್ ಪ್ಯಾನಲ್‌ಗಳು, ಫ್ರಂಟ್ ಸ್ಪ್ಲಿಟರ್ ಇಕ್ಟ್‌ಗಳನ್ನು ಸಾಮಾನ್ಯವಾಗಿ ವಾಹನಗಳ ನೋಟವನ್ನು ಹೆಚ್ಚಿಸಲು ಕಾರುಗಳಿಗೆ ಅಳವಡಿಸಲಾಗುತ್ತದೆ.

ಕಾರು ರ್ಯಾಪಿಂಗ್: ಕಾರಿಗೆ ಯಾವುದೇ ಗೀರು ಅಥವಾ ಹಾನಿಯನ್ನು ತಡೆಗಟ್ಟಲು ಕಾರಿಗೆ ರ್ಯಾಪಿಂಗ್ ಮಾಡಲಾಗುತ್ತದೆ. ಅಂದರೆ ಕಾರಿನ ಮೇಲ್ಮೆಗೆ ವಿನೈಲ್ ಅನ್ನು ಅನ್ವಯಿಸಲಾಗುತ್ತದೆ. ಮುಖ್ಯವಾಗಿ ಕಾರಿನ ಮೂಲ ಬಣ್ಣವನ್ನು ರಕ್ಷಿಸಲು ಕಾರಿನ ಮೇಲ್ಮೈಗೆ ವಿನೈಲ್ ಅನ್ನು ಅನ್ವಯಿಸಲಾಗುತ್ತದೆ. ಇದಕ್ಕೆ ಆರ್‌ಟಿಒ ಅನುಮೋದನೆಯ ಅಗತ್ಯವಿಲ್ಲ. ಕಾರಿನ ಬಣ್ಣ ಯಾವುದಿದೆಯೋ ಅದೇ ಬಣ್ಣದ ವಿನೈಲ್ ಅನ್ನು ಬಳಸಬಹುದು. ಆದರೆ, ಬಣ್ಣ ಬೇರೆಯದಾಗಿದ್ದರೆ ನೀವು ಆರ್‌ಟಿಒ ಅನುಮತಿ ಪಡೆಯತಕ್ಕದ್ದು.

ಕಾರಿನ ಬಣ್ಣ ಬದಲಾವಣೆ: ಕಾರಿನ ಮೇಲ್ಮೈಗೆ ವಿನೈಲ್ ರ್ಯಾಪಿಂಗ್ ಮಾಡುವಂತೆಯೇ, ಕಾರಿನ ಬಣ್ಣವನ್ನು ಬದಲಾಯಿಸಬಹುದು. ಇದು ಸಂಪೂರ್ಣ ಕಾನೂನುಬದ್ಧವಾಗಿದೆ. ಸೇನಾ ವಾಹನಗಳಿಗೆ ಮಾತ್ರ ಮೀಸಲಾಗಿರುವ ಆರ್ಮಿ ಗ್ರೀನ್ ಅನ್ನು ಮಾತ್ರ ಜನಸಾಮಾನ್ಯರು ಬಳಸುವಂತಿಲ್ಲ. ಉಳಿದಂತೆ ಆರ್‌ಟಿಒ ಅನುಮೋದನೆ ಪಡೆದು ಕಾರಿನ ಬಣ್ಣ ಬದಲಾಯಿಸಬಹುದು.

CNG (ಸಂಕುಚಿತ ನೈಸರ್ಗಿಕ ಅನಿಲ) ಕಿಟ್‌ಗಳ ಬಳಕೆ: ಭಾರತದಲ್ಲಿ ಕಾರಿನಲ್ಲಿ ಸಿಎರ್‌ಜಿ (compressed natural gas) ಕಿಟ್ ಬಳಸುವುದು ಕಾನೂನುಬದ್ಧವಾಗಿದೆ. ನಿಮ್ಮ ಸ್ಥಳೀಯ ಆರ್‌ಟಿಒ ನೊಂದಿಗೆ ನೀವು ಅದನ್ನು ನವೀಕರಿಸುತ್ತಿರಬೇಕು. ಹಾಗೂ ಅದನ್ನು ನಿಮ್ಮ ಕಾರಿನ ನೋಂದಣಿಯಲ್ಲಿ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ವಿಕಲಚೇತನರಿಗಾಗಿ ವ್ಯವಸ್ಥೆ: ವಿಕಲಚೇತನ ವ್ಯಕ್ತಿಯ ಅಗತ್ಯಗಳಿಗೆ ತಕ್ಕಂತೆ ಕಾರಿಗೆ ಬದಲಾವಣೆಗಳನ್ನು ಮಾಡುವುದು ಕಾನೂನುಬದ್ಧವಾಗಿದೆ. ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಶೇ. 40 ಅಥವಾ ಅದಕ್ಕಿಂತ ಹೆಚ್ಚಿನ ಶಾಶ್ವತ ಅಂಗವೈಕಲ್ಯ ಹೊಂದಿರುವ ಅಂಗವಿಕಲ ವ್ಯಕ್ತಿ ಕಾರನ್ನು ಓಡಿಸಬಹುದು. ಪೆಟ್ರೋಲ್ ಕಾರುಗಳಾದರೆ 1,200ಸಿಸಿ ಎಂಜಿನ್ ಸಾಮರ್ಥ್ಯ ಮತ್ತು ಡೀಸೆಲ್ ವಾಹನಗಳಾದರೆ 1,500 ಸಿಸಿ ಇದ್ದರೆ ಕಾರು ಚಲಾಯಿಸಬಹುದು. ಮೋಟಾರು ವಾಹನ ಕಾಯ್ದೆ 2019 ರ ಪ್ರಕಾರ, ಅಂತಹ ಕಾರುಗಳನ್ನು ಸ್ಥಳೀಯ ಆರ್‌ಟಿಒ ನೊಂದಿಗೆ ಅಡಾಪ್ಟೆಡ್ ವೆಹಿಕಲ್ಸ್ ಆಗಿ ನೋಂದಾಯಿಸಬೇಕು.

ವಾಹನದ ಸಸ್ಪೆನ್ಶನ್ ಬದಲಾವಣೆ: ಭಾರತದಲ್ಲಿ ವಾಹನದ ಸಸ್ಪೆನ್ಶನ್ ಬದಲಾಯಿಸುವುದು ಕಾನೂನುಬದ್ಧವಾಗಿದೆ. ಭಾರತೀಯ ರಸ್ತೆಗಳ ಸ್ಥಿತಿಯನ್ನು ಪರಿಗಣಿಸಿ, ಹೆಚ್ಚು ಆರಾಮದಾಯಕ ಸವಾರಿಗಾಗಿ ಸಸ್ಪೆನ್ಶನ್ ಅನ್ನು ಬದಲಾಯಿಸಬಹುದು.

ಭಾರತದಲ್ಲಿ ಅಕ್ರಮ (ಕಾನೂನು ಬಾಹಿರ) ಕಾರು ಮಾರ್ಪಾಡುಗಳು ಯಾವುವು? ಇಲ್ಲಿದೆ ಮಾಹಿತಿ

ಎಕ್ಸಾಸ್ಟ್ (ಇಂಧನ ದಕ್ಷತೆ): ಇದು ಭಾರತೀಯ ಕಾರು, ಬೈಕ್ ಮಾಲೀಕರು ಮಾಡುವ ಸಾಮಾನ್ಯ ಮಾರ್ಪಾಡು. ಮೋಟಾರು ವಾಹನ ಕಾಯಿದೆಯ ಇತ್ತೀಚಿನ ತಿದ್ದುಪಡಿಯ ಪ್ರಕಾರ, 80ಕ್ಕಿಂತ ಹೆಚ್ಚು ಜೋರಾದ ಯಾವುದೇ ಎಕ್ಸಾಸ್ಟ್ ಡೆಸಿಬೆಲ್ ಕಾನೂನುಬಾಹಿರವಾಗಿದೆ. ಎಕ್ಸಾಸ್ಟ್ ಅನ್ನು ಆರ್‌ಟಿಒ ಅನುಮೋದಿಸದ ಹೊರತು, ಇದನ್ನು ಮಾಡುವುದು ಕಾನೂನು ಬಾಹಿರವಾಗಿದೆ.

ಜೋರಾದ ಹಾರ್ನ್ ಧ್ವನಿ: ಬಹುತೇಕ ಜನರು ವಿಚಿತ್ರವಾದಂತಹ ಹಾರ್ನ್‌ಗಳನ್ನು ತಮ್ಮ ವಾಹನಗಳಿಗೆ ಬಳಸುತ್ತಾರೆ. ಇದು ಕಾನೂನುಬಾಹಿರವಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಅಥವಾ ಕಿರಿಕಿರಿ ಉಂಟಾಗುತ್ತದೆ. 100 ಡೆಸಿಬಲ್‌ಗಳಿಗಿಂತ ಹೆಚ್ಚಿನ ಶಬ್ಧಗಳನ್ನು ಉತ್ಪಾದಿಸುವ ಯಾವುದೇ ಹಾರ್ನ್ ಅನ್ನು ಕಾನೂನು ಪ್ರಕಾರ ನಿಷೇಧಿಸಲಾಗಿದೆ.

ಹೆಚ್ಚುವರಿ ದೀಪಗಳು (ಕಾರಿನ ಲೈಟ್ಸ್ ಹೆಚ್ಚಳ): ಭಾರತೀಯ ಮೋಟಾರು ವಾಹನ ಕಾಯಿದೆಯ ಪ್ರಕಾರ, ನೆಲದಿಂದ 1.5 ಮೀಟರ್‌ಗಿಂತ ಹೆಚ್ಚು ದೂರದವರೆಗೆ ಇರುವ ದೀಪವು (ಲೈಟ್ಸ್) ಕಾನೂನುಬಾಹಿರವಾಗಿದೆ. ಯಾವುದೇ ವಾಹನವು ನಾಲ್ಕಕ್ಕಿಂತ ಹೆಚ್ಚು ಹೆಡ್‌ಲೈಟ್‌ಗಳನ್ನು ಹೊಂದಲು ಅನುಮತಿಸಲಾಗುವುದಿಲ್ಲ.

ಫ್ಯಾನ್ಸಿ ನಂಬರ್ ಪ್ಲೇಟ್‌ಗಳು: ಭಾರತೀಯ ಕಾನೂನಿನ ಪ್ರಕಾರ, ಎಲ್ಲಾ ಕಾರುಗಳು ಹೆಚ್ಚಿನ ಭದ್ರತೆಯ ನಂಬರ್ ಪ್ಲೇಟ್ ಅನ್ನು ಹೊಂದಿರಬೇಕು ಮತ್ತು ಅವುಗಳ ಮೇಲೆ 3D ಹಾಲ್‌ಮಾರ್ಕ್‌ IND ಅಕ್ಷರಗಳು ದಪ್ಪ ಸಂಖ್ಯೆಯಲ್ಲಿ ಕಾಣಬೇಕು. ನಿಮ್ಮಲ್ಲಿ ಹಳೆಯ ಕಾರಿದ್ದರೆ, ಕಾರಿನ ನಂಬರ್ ಪ್ಲೇಟ್ ಗಳು ದಪ್ಪ ಸಂಖ್ಯೆಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಕಾರಿನ ಹೊರಮೈ ಬದಲಾವಣೆ: ಸೆಡಾನ್ ಅನ್ನು ಲಿಮೋಸಿನ್ ಆಗಿ ಪರಿವರ್ತಿಸಲು ನೀವು ಯೋಚಿಸುತ್ತಿದ್ದರೆ ನಿಮ್ಮ ಮನಸ್ಸು ಬದಲಾಯಿಸಿ. ಯಾಕೆಂದರೆ ಇದು ಕಾನೂನುಬಾಹಿರ. ಮೇಲ್ಛಾವಣಿಯನ್ನು ಕತ್ತರಿಸಿ ಕಾರನ್ನು ಮಾರ್ಪಾಡು ಮಾಡುವುದು ಅಕ್ರಮವಾಗಿದೆ.

ಬಣ್ಣ-ಬಣ್ಣದ ಪರದೆಗಳು (ಟಿಂಟೆಡ್ ಗ್ಲಾಸ್‌): ತುಂಬಾ ಗಾಢವಾದ ಟಿಂಟೆಡ್ ಗ್ಲಾಸ್‌ಗಳನ್ನು ಬಳಕೆ ಮಾಡುವುದು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಇವು ಚಾಲಕನ ದೃಷ್ಟಿಗೆ ಅಡ್ಡಿಯಾಗುತ್ತವೆ. ಕಾರು ಕನಿಷ್ಠ ಶೇ.70ರಷ್ಟು ವಿಎಲ್ ಟಿ (ಗೋಚರ ಬೆಳಕಿನ ಪ್ರಸರಣ) ಹೊಂದಿರಬೇಕು. ಕಾರಿನೊಳಗೆ ಶೇ.50ರಷ್ಟು ಸೂರ್ಯನ ಬೆಳಕು ಬೀಳಬೇಕು.

ಎಂಜಿನ್ ವಿನಿಮಯ: ಲಕ್ಷಗಟ್ಟಲೆ ಹಣ ಖರ್ಚು ಮಾಡುವ ಮೂಲಕ ನಿಮ್ಮ ಎಸ್‌ಯುವಿಯಲ್ಲಿ V8 ಮೋಟರ್ ಬದಲಾಯಿಸುವುದು ಕಾನೂನುಬಾಹಿರವಾಗಿದೆ. ಕಾರಿನ ನೋಂದಣಿ ಪ್ರಮಾಣ ಪತ್ರವು ವಾಹನದ ಚಾಸಿಸ್ ಮತ್ತು ಎಂಜಿನ್ ಸಂಖ್ಯೆಯನ್ನು ಉಲ್ಲೇಖಿಸುತ್ತದೆ. ನಿಮ್ಮ ಕಾರಿನ ಇಂಜಿನ್ ಬದಲಾಯಿಸಲು ಮುಂದಾದರೆ, ಮೊದಲು ಸ್ಥಳೀಯ ಆರ್‌ಟಿಒ ಸಂಪರ್ಕಿಸಿ.

ಒಟ್ಟಿನಲ್ಲಿ ನಿಮ್ಮ ಕಾರಿಗೆ ಏನಾದರೂ ಬದಲಾವಣೆ ಮಾಡಬೇಕು ಎಂದಿದ್ದಲ್ಲಿ ಆರ್‌ಟಿಒ ಸಂಪರ್ಕಿಸಿ. ಮೇಲೆ ತಿಳಿಸಿರುವಂತೆ ಕಾನುನುಬದ್ಧ ಹಾಗೂ ಕಾನೂನು ಬಾಹಿರ ಯಾವುದು ಎಂಬುದನ್ನು ತಿಳಿದುಕೊಂಡು ನಿಮ್ಮ ಹಾಗೂ ಪಾದಚಾರಿಗಳು ಅಥವಾ ಇತರರ ಸುರಕ್ಷತೆಯನ್ನು ಗಮನದಲ್ಲಿಡಬೇಕಾದುದು ಮುಖ್ಯ.

 

 

ವಿಭಾಗ