ಕನ್ನಡ ಸುದ್ದಿ  /  Lifestyle  /  Basil Seeds And Health Benefits: Kamakasturi Seed For Body And Health In Summer; It Has Many Health Benefits

basil seeds and health benefits: ಬೇಸಿಗೆಯಲ್ಲಿ ದೇಹಕ್ಕೂ, ಆರೋಗ್ಯಕ್ಕೂ ತಂಪು ಕಾಮಕಸ್ತೂರಿ ಬೀಜ; ಇದರಲ್ಲಿ ಹಲವು ಆರೋಗ್ಯಗುಣ

basil seeds and health benefits: ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ಹಲವರು ಇದನ್ನು ಬೇಸಿಗೆಯಲ್ಲಿ ಹೆಚ್ಚು ಬಳಸುತ್ತಾರೆ. ತೂಕ ನಿಯಂತ್ರಣ ಮಾಡುವ ಉದ್ದೇಶದಿಂದಲೂ ಇದನ್ನು ಸೇವಿಸುತ್ತಾರೆ.

ಕಾಮಕಸ್ತೂರಿ ಬೀಜ
ಕಾಮಕಸ್ತೂರಿ ಬೀಜ

ಮಾರ್ಚ್‌ ಅಂತ್ಯ, ಏಪ್ರಿಲ್‌ ತಿಂಗಳ ಆರಂಭದಲ್ಲಿ ಬಿಸಿಲು ಜೋರಾಗಿರುತ್ತದೆ, ಈ ಸಮಯದಲ್ಲಿ ಬಿಸಿಲಿನ ತಾಪ ನೀಗಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತೇವೆ. ಬೇಸಿಗೆಯಲ್ಲಿ ನೀರಿನೊಂದಿಗೆ ತಂಪಿನ ಬೀಜವನ್ನು ಬೆರೆಸಿ ಕುಡಿಯುವುದು ಹಲವರಿಗೆ ಅಭ್ಯಾಸ. ತಂಪಿನ ಬೀಜವನ್ನು ಬಾಸಿಲ್‌ ಸೀಡ್‌, ಕಾಮಕಸ್ತೂರಿ ಬೀಜ, ಸಬ್ಜಾ ಬೀಜ ಮುಂತಾದ ಹೆಸರಿನಿಂದಲೂ ಕರೆಯುತ್ತಾರೆ.

ಈ ಬೀಜವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ಹಲವರು ಇದನ್ನು ಬೇಸಿಗೆಯಲ್ಲಿ ಹೆಚ್ಚು ಬಳಸುತ್ತಾರೆ. ತೂಕ ನಿಯಂತ್ರಣ ಮಾಡುವ ಉದ್ದೇಶದಿಂದಲೂ ಇದನ್ನು ಸೇವಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಇದನ್ನು ಕುಡಿಯುವುದರಿಂದ ದೇಹಕ್ಕೆ ಯಾವ ರೀತಿ ಪ್ರಯೋಜನವಾಗುತ್ತದೆ ನೋಡಿ.

ನೈಸರ್ಗಿಕವಾಗಿ ದೇಹವನ್ನು ತಂಪು ಮಾಡುತ್ತದೆ

ಕಾಮಕಸ್ತೂರಿ ಬೀಜವನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದು ಅಥವಾ ಇದರಿಂದ ಪಾನೀಯಗಳನ್ನು ತಯಾರಿಸಿ ಕುಡಿಯುವುದರಿಂದ ಬೇಸಿಗೆಯ ಸುಡುವ ಶಾಖದಿಂದ ದೇಹವನ್ನು ರಕ್ಷಿಸುತ್ತದೆ. ಇದು ನೈಸರ್ಗಿಕವಾಗಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಹೊಟ್ಟೆಗೂ ಹಿತವನ್ನುಂಟು ಮಾಡುತ್ತದೆ. ಇದನ್ನು ನಿಂಬೆಪಾನಕ, ಎಳನೀರು, ಮಿಲ್ಕ್‌ಶೇಕ್‌, ಮೊಸರಿನ ಜೊತೆ ಮಿಶ್ರಣ ಮಾಡಿ ಕುಡಿಯುವುದು ಉತ್ತಮ.

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ಇದು ಡಯಾಬಿಟಿಕ್‌ ವಿರೋಧಿ ಗುಣವನ್ನು ಹೊಂದಿದೆ. ಇದರಲ್ಲಿ ನಾರಿನಾಂಶವು ಅಧಿಕವಾಗಿದೆ. ಮಧುಮೇಹ ಇರುವವರು ಊಟಕ್ಕೂ ಸ್ವಲ್ಪ ಮೊದಲು ನಿರಂತರವಾಗಿ ಈ ಬೀಜದ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಗ್ಲೋಕೋಸ್‌ ಮಟ್ಟವನ್ನು ನಿಯಂತ್ರಿಸಬಹುದು. ಟೈಪ್ 2 ಡಯಾಬಿಟಿಸ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಬ್ಜಾ ಬೀಜಗಳು ಉಪಯುಕ್ತವೆಂದು ಕಂಡುಬಂದಿದೆ.

ಮಲಬದ್ಧತೆ ತಡೆಯುತ್ತದೆ

ಈ ಬೀಜಗಳು ನೈಸರ್ಗಿಕವಾಗಿ ದೇಹವನ್ನು ನಿರ್ವಿಷಗೊಳಿಸುತ್ತವೆ. ಅಲ್ಲದೆ ಮಲಬದ್ಧತೆಯ ಸಮಸ್ಯೆ ನಿವಾರಣೆಗೂ ಇದು ಸಹಕಾರಿ. ಇದು ಬಾಷ್ಪತೈಲವನ್ನು ಹೊಂದಿದ್ದು, ಜರಠಗರುಳಿನ ಪ್ರದೇಶದಿಂದ ಅನಿಲವನ್ನು ಹೊರ ಹಾಕಿ ಹೊಟ್ಟೆಯ ಶುದ್ಧೀಕರಣ ಮಾಡುತ್ತದೆ.

ತೂಕ ಇಳಿಸಲು ಸಹಕಾರಿ

ಕಾಮಕಸ್ತೂರಿ ಬೀಜದಲ್ಲಿ ನಾರಿನಾಂಶ ಅಧಿಕವಾಗಿದೆ. ಇದರ ಸೇವನೆಯಿಂದ ಹೊಟ್ಟೆ ತುಂಬಿದಂತಿರುತ್ತದೆ. ಮಾತ್ರವಲ್ಲ ಪದೇ ಪದೇ ಹಸಿವಾಗುವುದನ್ನೂ ನಿಯಂತ್ರಿಸುತ್ತದೆ. ಇದು ಕ್ಯಾಲೊರಿ ಹಾಗೂ ಕೊಬ್ಬಿನಂಶ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.

ಎದೆಯುರಿ ಹಾಗೂ ಆಸಿಡಿಟಿ ನಿಯಂತ್ರಣ

ಇವು ದೇಹದಲ್ಲಿ ಹೈಡ್ರೊಕ್ಲೋರಿಕ್‌ ಆಮ್ಲದ ಪರಿಣಾಮವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಆಸಿಡಿಟಿ ಹಾಗೂ ಎದೆಯುರಿಯನ್ನು ನಿಯಂತ್ರಿಸುತ್ತದೆ. ಈ ಬೀಜವನ್ನು ನೆನೆಸಿ ಸೇವಿಸುವುದರಿಂದ ಇದರಲ್ಲಿನ ನೀರಿನ ಅಂಶವು ಹೊಟ್ಟೆಯ ಒಳಪದರವನ್ನು ಶಮನಗೊಳಿಸುತ್ತದೆ ಹಾಗೂ ಸುಡುವ ಸಂವೇದನೆಯನ್ನು ಕಡಿಮೆ ಮಾಡುತ್ತದೆ.

ಖನಿಜಾಂಶಗಳ ಅಗರ

ತಂಪಿನಬೀಜದಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಹಾಗೂ ಮೆಗ್ನೀಶಿಯಂ ಅಂಶಗಳ ಪ್ರಮಾಣ ಅಧಿಕವಾಗಿರುತ್ತದೆ. ಸ್ನಾಯುಗಳು ಮತ್ತು ಮೂಳೆಗಳ ಅತ್ಯುತ್ತಮ ಕಾರ್ಯನಿರ್ವಹಣೆಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅವಶ್ಯ. ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿಕೊಳ್ಳಲು ಕಬ್ಬಿಣಾಂಶದ ಅಗತ್ಯವಿದೆ, ಇದು ರಕ್ತದಲ್ಲಿನ ಆಮ್ಲಜನಕ್ಕೆ ಅಗತ್ಯವಾದ ಪ್ರೊಟೀನ್ ಆಗಿದೆ.

ಉರಿಯೂತವನ್ನು ನಿಯಂತ್ರಿಸುತ್ತದೆ

ಇದರಲ್ಲಿ ಫ್ಲೇವನಾಯ್ಡ್‌ ಹಾಗೂ ಪಾಲಿಫೆನಾಲ್‌ನಂತಹ ಸಸ್ಯ ರಾಸಾಯನಿಕ ಅಂಶಗಳು ಅಧಿಕವಾಗಿದೆ. ಇವು ಆಂಟಿ ಆಕ್ಸಿಡೆಂಟ್‌ ರೂಪದಲ್ಲಿ ಕೆಲಸ ಮಾಡುತ್ತವೆ. ದೇಹದ ಉರಿಯೂತ ನಿವಾರಣೆಗೆ ಇದರ ನಿರಂತರ ಸೇವನೆ ಅಗತ್ಯ.

ಬಾಯಿಯ ಆರೋಗ್ಯಕ್ಕೆ ಉತ್ತಮ

ಸಬ್ಜಾ ಬೀಜಗಳು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್‌ ಹಾಗೂ ಸೋಂಕು ನಿರೋಧಕವಾಗಿದೆ. ಬಾಯಿಯ ಹುಣ್ಣಿನ ನಿವಾರಣೆಗೆ ಇದು ಸಹಕಾರಿ. ಉಸಿರನ ದುರ್ನಾತ ನಿವಾರಣೆಗೂ ಇದನ್ನು ಬಳಸಬಹುದು. ಪ್ಲೇಕ್‌, ಹುಳುಕಿನಂತಹ ಸಮಸ್ಯೆಗಳಿಗೂ ಇದರಿಂದ ಪರಿಹಾರ ಕಂಡುಕೊಳ್ಳಬಹುದು.

ವಿಭಾಗ