ಕನ್ನಡ ಸುದ್ದಿ  /  ಕರ್ನಾಟಕ  /  Bangalore Traffic Violation: 270 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೆಂಗಳೂರು ದ್ವಿಚಕ್ರ ವಾಹನ, ರೂ. 1.36 ಲಕ್ಷ ದಂಡ

Bangalore Traffic Violation: 270 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೆಂಗಳೂರು ದ್ವಿಚಕ್ರ ವಾಹನ, ರೂ. 1.36 ಲಕ್ಷ ದಂಡ

ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸಿದ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಭಾರೀ ದಂಡವೇ ಬಿದ್ದಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರು ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನದ ವಿವರ.
ಬೆಂಗಳೂರು ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನದ ವಿವರ.

ಬೆಂಗಳೂರು: ಹೆಲ್ಮೆಟ್ ಧರಿಸದಿರುವುದೂ ಸೇರಿದಂತೆ ಸಂಚಾರ ನಿಯಮಗಳನ್ನು ಬರೋಬ್ಬರಿ 270 ಬಾರಿ ಉಲ್ಲಂಘಿಸಿದ್ದ ದ್ವಿಚಕ್ರ ವಾಹನವೊಂದಕ್ಕೆ 1.36 ಲಕ್ಷ ದಂಡ ವಿಧಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ದಂಡವನ್ನು ಪಾವತಿಸುವಂತೆ ಪೊಲೀಸರು ವಾಹನದ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. 'ಕೆಎ 03 ಜೆಇ 5705’ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಸಂಚಾರ ನಡೆಸುತ್ತಿದ್ದ ಓರ್ವ ಮಹಿಳೆ ಹಾಗೂ ಇತರರು 270 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಭಾವಚಿತ್ರಗಳ ಸಹಿತ ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ಪೊಲೀಸರು ದಂಡ ಪರಿಶೀಲನೆ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಬಾಣಸವಾಡಿಯ ಕಾಕ್ಸ್‌ಟೌನ್, ಸುಬ್ಬಯ್ಯನಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ದ್ವಿಚಕ್ರ ವಾಹನ ಸಂಚಾರ ನಡೆಸಿತ್ತು. ಈ ದ್ವಿಚಕ್ರ ವಾಹನದಲ್ಲಿ ಓಡಾಟ ನಡೆಸಿದ ಈ ಮಹಿಳೆ ಹಾಗೂ ಇತರರು ಬಹುತೇಕ ಸಂದರ್ಭಗಳಲ್ಲಿ ಹೆಲ್ಮೆಟ್ ಧರಿಸಿರಲಿಲ್ಲ. ಹಿಂಬದಿ ಸವಾರರೂ ಹೆಲ್ಮೆಟ್ ಹಾಕಿರಲಿಲ್ಲ. ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದ ರಸ್ತೆಗಳಲ್ಲಿಯೂ ಈ ವಾಹನದಲ್ಲಿ ಸಂಚಾರ ನಡೆಸಿದ್ದರು ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

ರೂಪಾಯಿ 50 ಸಾವಿರಕ್ಕಿಂತ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕೆಎ 03 ಜೆಇ 5705 ನೋಂದಣಿ ಸಂಖ್ಯೆ ವಾಹನದ ಮಾಲೀಕರ ಹೆಸರೂ ಇದೆ. ಶೀಘ್ರವೇ ಅವರ ಮನೆಗೆ ಹೋಗಿ ದಂಡ ವಸೂಲಿ ಮಾಡಲಾಗುವುದು ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ನಿರ್ದಿಷ್ಟ ಅವಧಿಯಲ್ಲಿ ದಂಡ ಪಾವತಿ ಮಾಡಬೇಕು. ಇಲ್ಲವಾದಲ್ಲಿ ವಾಹನ ಜಪ್ತಿ ಮಾಡಲಾಗುತ್ತದೆ. ತದನಂತರವೂ ದಂಡ ಪಾವತಿಸದಿದ್ದರೆ, ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಎಂಟಿಸಿ ಬಸ್‌ನ ಚಾಲಕನ ಮೇಲೆ ಹಲ್ಲೆ, ಆರೋಪಿ ಬಂಧನ

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ ನಿಲ್ದಾಣದಲ್ಲಿ ರಾತ್ರಿ ತಂಗಿದ್ದ ಬಿಎಂಟಿಸಿ ಬಸ್‌ನ ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ನಂದ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಚಾಲಕ ನಾಗೇಂದ್ರ ಕುಮಾರಸ್ವಾಮಿ ಲೇಔಟ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿ ನಂದನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಜಾನ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬಸ್ ಮಾರ್ಗ ಸಂಖ್ಯೆ 15ಇ/2ರ ಇ- ಬಸ್‌ನಲ್ಲಿ ಚಾಲಕ ನಾಗೇಂದ್ರ ಕರ್ತವ್ಯದಲ್ಲಿದ್ದರು. ಕರ್ತವ್ಯದ ಅವಧಿ ಮುಗಿದಿದ್ದರಿಂದ,ಚಾಲಕ ಹಾಗೂ ನಿರ್ವಾಹಕ ಕುಮಾರಸ್ವಾಮಿ ಲೇಔಟ್‌ ಬಸ್ ನಿಲ್ದಾಣದಲ್ಲಿ ಬಸ್‌ ನಲ್ಲಿಯೇ ಮಲಗಿದ್ದರು.

ಪಾನಮತ್ತರಾಗಿದ್ದ ನಂದ ಹಾಗೂ ಆತನ ಸ್ನೇಹಿತರು ಬಸ್ ನಿಲ್ದಾಣಕ್ಕೆ ತಡರಾತ್ರಿ ಆಗಮಿಸಿ ಕಿತ್ತಾಡುತ್ತಿದ್ದರು. ಇವರ ಗಲಾಟೆಗೆ ಎಚ್ಚೆತ್ತ ಚಾಲಕ ನಾಗೇಂದ್ರ, ನಿಲ್ದಾಣದಲ್ಲಿ ಗಲಾಟೆ ಮಾಡಬೇಡಿ. ಇಲ್ಲಿಂದ ಹೊರಟು ಹೋಗಿ ಎಂದು ಇವರಿಗೆ ತಾಕಿತು ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ನಂದ ಮತ್ತು ಆತನ ಸ್ನೆಹಿತರು ಬಸ್ ಚಾಲಕರ ವಿರುದ್ಧವೇ ತಿರುಗಿಬಿದ್ದಿದ್ದರು.

ಇದು ನಮ್ಮ ಏರಿಯಾ, ಅದನ್ನು ಕೇಳಲು ನೀನು ಯಾರು ಎಂದು ಕೆಟ್ಟ ಶಬ್ದಗಳಿಂದ ನಿಂದಿಸಿದ್ದರು.

ನಂತರ ಗಲಾಟೆ ನಡೆದಿತ್ತು. ಆರೋಪಿ ನಂದ, ಚಾಲಕ ನಾಗೇಂದ್ರ ಅವರ ಮುಖಕ್ಕೆ ಗುದ್ದಿದ್ದ. ಪಕ್ಕದಲ್ಲೇ ಇದ್ದ ಎಳನೀರು ಅಂಗಡಿಯಿಂದ ಮಚ್ಚು ತಂದು ನಾಗೇಂದ್ರ ಮೇಲೆ ಬೀಸಲು ಮುಂದಾಗಿದ್ದ. ನಾಗೇಂದ್ರ ಅವರ ಹೆಬ್ಬೆರಳಿಗೆ ಮಚ್ಚಿನೇಟು ಬಿದ್ದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ನಾಗೇಂದ್ರ ರಕ್ಷಣೆಗೆ ಹೋಗಿದ್ದ ನಿರ್ವಾಹಕನಿಗೂ ಮಚ್ಚು ತೋರಿಸಿ ಆರೋಪಿಗಳು ಬೆದರಿಕೆ ಹಾಕಿದ್ದರು. ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ತಪ್ಪಿಸಿಕೊಂಡು ಜೀವ ಉಳಿದಿಕೊಂಡಿದ್ದರು. ನಾಗೇಂದ್ರ ಅವರನ್ನು ಕಂಡಕ್ಟರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.

ಟಾಟಾ ಏಸ್ ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

ಬೆಂಗಳೂರಿನ ಮೈಲನಹಳ್ಳಿ–ಬಾಗಲೂರು ರಸ್ತೆಯಲ್ಲಿ ಟಾಟಾ ಏಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಎಲ್‌. ರಘು ಮೃತಪಟ್ಟಿದ್ದಾರೆ.

ಹೂವಿನನಾಯಕನಹಳ್ಳಿಯ 30 ವರ್ಷದ ಎಲ್. ರಘು, ಮಾನ್ಯತಾ ಟೆಕ್‌ ಪಾರ್ಕ್‌ನ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಬ್ಯಾಂಕ್‌ಗೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಈ ಅಪಘಾತ ಸಂಭವಿಸಿದೆ ಎಂದು ದೇವನಹಳ್ಳಿ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.

ರಘು ದ್ವಿಚಕ್ರ ವಾಹನದಲ್ಲಿ ಮೈಲನಹಳ್ಳಿಯಿಂದ ಮನೆಗೆ ಹೊರಟಿದ್ದರು. ಇದೇ ಮಾರ್ಗದಲ್ಲಿ ವೇಗವಾಗಿ ಬಂದ ಟಾಟಾ ಏಸ್ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ನೆಲಕ್ಕೆ ಬಿದ್ದಿದ್ದ ರಘು ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಟಾಟಾ ಏಸ್ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಚಾಲಕನನ್ನು ಬಂಧಿಸಲಾಗಿದೆ.

(ವರದಿ: ಎಚ್. ಮಾರುತಿ, ಬೆಂಗಳೂರು)

IPL_Entry_Point