E vehicle booking: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನ ನೋಂದಣಿ ಹೆಚ್ಚಳ: ದಿನಕ್ಕೆ ಎಷ್ಟು ಇ ವಾಹನ ನೋಂದಣಿಯಾಗಬಹುದು
E vehicle in Karnataka ಈಗ ಎಲ್ಲೆಡೆ ಎಲೆಕ್ಟ್ರಿಕ್ ವಾಹನ ಬಳಕೆ ಅಧಿಕವಾಗಿದೆ.ಕರ್ನಾಟಕದಲ್ಲೂ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಈ ಕುರಿತು ವರದಿ ಇಲ್ಲಿದೆ.
ಬೆಂಗಳೂರು: ಇದು ಇ ವಾಹನದ ಜಮಾನ. ಭಾರತದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೂ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಏರಿಕೆಯಾಗುತ್ತಿದೆ.
ಪ್ರತಿ ದಿನವೂ ಈ ವಾಹನಗಳ ಬುಕ್ಕಿಂಗ್‌ಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬರುತ್ತಿದೆ. ಅಚ್ಚರಿಯ ಬೆಳವಣಿಗೆ ಎಂದರೆ 2023ರಲ್ಲಿ ಕರ್ನಾಟಕದಲ್ಲಿ ಪ್ರತಿದಿನ 422 ವಿದ್ಯುತ್ ವಾಹನಗಳ ನೋಂದಣಿಯಾಗಿವೆ.
2023ರ ಏಪ್ರಿಲ್ ನಿಂದ ನವಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 1 ಲಕ್ಷ ಇ ವಾಹನಗಳ ನೋಂದಣಿಯಾಗಿವೆ. 2022-23ರ ಆರ್ಥಿಕ ವರ್ಷದಲ್ಲಿ 1,10,492 ವಾಹನಗಳು ನೋಂದಣಿಯಾಗಿದ್ದು, ಪ್ರತಿದಿನ ಸರಾಸರಿ 302 ವಾಹನಗಳ ನೋಂದಣಿಯಾಗಿವೆ.
2017-18ರಿಂದ 2023ರ ನವಂಬರ್ ಅಂತ್ಯಕ್ಕೆ ರಾಜ್ಯದಲ್ಲಿ 2.8 ಲಕ್ಷ ಇ- ವಾಹನಗಳ ನೋಂದಣಿಯಾಗಿವೆ. ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಇ ವಾಹನಗಳೂ ಸೇರಿ ಪ್ರತಿದಿನ 4,800 ವಾಹನಗಳ ನೋಂದಣಿ ಆಗಿದೆ.
ಇ ವಾಹನ ಬಳಕೆ ಹೆಚ್ಚಳ ಏಕೆ
ಇ- ವಾಹನಗಳ ತಜ್ಞರ ಪ್ರಕಾರ ವರ್ಷದಿಂದ ವರ್ಷಕ್ಕೆ ಇ ವಾಹನಗಳ ಬಳಕೆ ಹೆಚ್ಚುತ್ತಿದೆ. ತೆರಿಗೆ ರಿಯಾಯಿತಿ ಮತ್ತು ಸಾರ್ವಜನಿಕರು ಪರಿಸರ ಸ್ನೇಹಿ ವಾಹನಗಳತ್ತ ಮುಖ ಮಾಡಿರುವುದು ಪ್ರಮುಖ ಕಾರಣ ಎಂದು ಅಭಿಪ್ರಾಯಪಡುತ್ತಾರೆ.
ಪೆಟ್ರೋಲ್ ಬೆಲೆ ಹೆಚ್ಚಳವೂ ಎಲೆಕ್ಟ್ರಿಕ್ ವಾಹನಗಳ ಆಯ್ಕೆಗೆ ಪ್ರಮುಖ ಕಾರಣವಾಗಿದೆ.ಅದರಲ್ಲೂ ದ್ವಿಚಕ್ರ ಇ ವಾಹನಗಳಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಶ್ಲಾಘನೀಯ ಎಂದು ಹೇಳುತ್ತಾರೆ.
ನೊಂದಣಿ ಲೆಕ್ಕ ಹೀಗಿದೆ
ಅಂಕಿ ಅಂಶಗಳ ಪ್ರಕಾರ 2017-2018ರ ಹಣಕಾಸಿನ ವರ್ಷದಲ್ಲಿ ಎಲ್ಲ ಮಾದರಿಯ ವಾಹನ ಸೇರಿ ಕೇವಲ 1,992 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದವು.
2020-21 ರಲ್ಲಿ 11,593 ಇ ವಾಹನಗಳು ನೋಂದಣಿ ಆಗುವ ಮೂಲಕ ದುಪ್ಪಟ್ಟಾಯಿತು. 2017-2018 ರಲ್ಲಿ ನೋಂದಣಿಯಾದ ದ್ವಿಚಕ್ರ ವಾಹನಗಳ ಸಂಖ್ಯೆ ಕೇವಲ 97 ಮಾತ್ರ. 2020-21 ರಲ್ಲಿ 10ಸಾವಿರ ಗಡಿ ದಾಟಿದ್ದರೆ 2023 ರ ಈ ಮಾಸಾಂತ್ಯಕ್ಕೆ 1 ಲಕ್ಷ ದ್ವಿಚಕ್ರ ವಾಹನಗಳು ರಸ್ತೆಗಿಳಿಯಲಿವೆ.
ಮೂರ್ನಾಲ್ಕು ವರ್ಷಗಳಿಗೆ ಹೋಲಿಸಿದರೆ ಕಳೆದ ಎರಡು ವರ್ಷಗಳಿಂದೀಚೆಗೆ ಗ್ರಾಹಕರಿಗೆ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಆಯ್ಕೆ ಲಭ್ಯವಾಗಿದೆ. ಮಾರುಕಟ್ಟೆಯಲ್ಲಿ ಇ ವಾಹನಗಳ ಕಂಪನಿಗಳು ಲಗ್ಗೆ ಇಟ್ಟಿವೆ. ಈ ಕಂಪನಿಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲೂ ಇ ವಾಹನಗಳ ಖರೀದಿ ಟ್ರೆಂಡ್ ಬೆಳೆಯುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ರಿಯಾಯಿತಿ ಘೋಷಣೆ
ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಜೀವಾವಧಿ ತೆರಿಗೆ ರಿಯಾಯಿತಿ ಘೋಷಿಸಿದೆ.
ದೇಶದಲ್ಲಿ ಇ ವಾಹನಗಳ ಬಳಕೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದ್ದು, ಒಟ್ಟು ಶೇ. 11 ರಷ್ಟು ಎಲೆಕ್ಟ್ರಿಕ್ ವಾಹನಗಳು ಇರುವ ರಾಜ್ಯವಾಗಿದೆ. ಮೊದಲ ಸ್ಥಾನದಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮೊದಲ ಬಾರಿಗೆ 20ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್ ಕಾರುಗಳಿಗೆ ಶೇ.10ರಷ್ಟು ಜೀವಿತಾವಧಿ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಸರ್ಕಾರ ಮಂಡಿಸಿತ್ತು. ಇದು ಇ ವಾಹನ ಗ್ರಾಹಕರಿಗೆ ಮತ್ತು ಇ ವಾಹನ ಕಂಪನಿಗಳಿಗೆ ಹೊಡೆತ ಬೀಳುತ್ತದೆ ಎಂದು ಶಾಸಕರು ಒತ್ತಾಯ ಹೇರಿದ ನಂತರ ಸರ್ಕಾರ ಹಿಂದೆ ಸರಿಯಿತು.
ಯಾವ ವರ್ಷ ಎಷ್ಟು ಇ ವಾಹನ?
- ರಾಜ್ಯದಲ್ಲಿ 2017-18 ರಿಂದ ಇದುವರೆಗೆ ಒಟ್ಟು ಎಲ್ಲ ಮಾದರಿಯ 2.83 ಲಕ್ಷ ಇ ವಾಹನಗಳು ನೋಂದಣಿಯಾಗಿವೆ.
- 2017-2018 ರಲ್ಲಿ ದ್ವಿಚಕ್ರ(97), ತ್ರಿ ಚಕ್ರ(1,589), ನಾಲ್ಕು ಚಕ್ರ(236)ದ ವಾಹನ ಸೇರಿ ಒಟ್ಟು 1,992 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದವು.
- 2018-19 ರಲ್ಲಿ ದ್ವಿಚಕ್ರ(2,771), ತ್ರಿ ಚಕ್ರ(2,753), ನಾಲ್ಕು ಚಕ್ರ(518)ದ ವಾಹನ ಸೇರಿ ಒಟ್ಟು 5,542 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದವು.
- 2019-20ರಲ್ಲಿ ದ್ವಿಚಕ್ರ(6,276), ತ್ರಿ ಚಕ್ರ (49), ನಾಲ್ಕು ಚಕ್ರ(449)ದ ವಾಹನ ಸೇರಿ ಒಟ್ಟು 6,774 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದವು.
- 2020-21ರಲ್ಲಿ ದ್ವಿಚಕ್ರ(10,388), ತ್ರಿ ಚಕ್ರ (403), ನಾಲ್ಕು ಚಕ್ರ(802)ದ ವಾಹನ ಸೇರಿ ಒಟ್ಟು 11,593 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದವು.
- 2021-22ರಲ್ಲಿ ದ್ವಿಚಕ್ರ(39,382), ತ್ರಿ ಚಕ್ರ (2,887), ನಾಲ್ಕು ಚಕ್ರ(1,948)ದ ವಾಹನ ಸೇರಿ ಒಟ್ಟು 44,217 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದವು.
- 2022-23ರಲ್ಲಿ ದ್ವಿಚಕ್ರ(99,465), ತ್ರಿ ಚಕ್ರ (5,131), ನಾಲ್ಕು ಚಕ್ರ(5,896)ದ ವಾಹನ ಸೇರಿ ಒಟ್ಟು 1,10,492 ವಾಹನಗಳು ನೋಂದಣಿಯಾದರೆ, 2023-24 ರಲ್ಲಿ ನವಂಬರ್ ವರೆಗೆ ದ್ವಿಚಕ್ರ(90,781), ತ್ರಿ ಚಕ್ರ (3,463), ನಾಲ್ಕು ಚಕ್ರ(8,765)ದ ವಾಹನ ಸೇರಿ ಒಟ್ಟು 1,03,009 ವಾಹನಗಳು ನೋಂದಣಿಯಾಗಿವೆ.
(ವಿಶೇಷ ವರದಿ: ಎಚ್. ಮಾರುತಿ, ಬೆಂಗಳೂರು)
ವಿಭಾಗ