Carrot Holige Recipe: ಹಬ್ಬಕ್ಕೆ ಸಿಹಿ ಪೊಂಗಲ್ ಒಂದೇ ಸಾಕಾ? ಜೊತೆಗೆ ಕ್ಯಾರೆಟ್ ಹೋಳಿಗೆ ಕೂಡಾ ತಯಾರಿಸಿ..ಇಲ್ಲಿದೆ ನೋಡಿ ರೆಸಿಪಿ
ಹಬ್ಬ ಎಂದರೆ ನೆನಪಾಗುವುದೇ ವಿಧ ವಿಧವಾದ ಅಡುಗೆ, ಅದರಲ್ಲೂ ಹಬ್ಬ ಎಂದರೆ ಅಲ್ಲಿ ಸಿಹಿ ಇರಲೇಬೇಕು. ಹಬ್ಬಗಳಲ್ಲಿ ಸಾಮಾನ್ಯವಾಗಿ ಹೋಳಿಗೆ ತಯಾರಿಸುತ್ತೇವೆ. ದೇಶಾದ್ಯಂತ ಸಂಕ್ರಾಂತಿ ಸಡಗರ ಶುರುವಾಗಿದೆ. ಬಹುತೇಕ ಎಲ್ಲರೂ ಸಂಕ್ರಾಂತಿಯಂದು ಸಿಹಿ ಹಾಗೂ ಖಾರ ಪೊಂಗಲ್ ತಯಾರಿಸುತ್ತಾರೆ. ಆದರೆ ಹೋಳಿಗೆ ಪ್ರಿಯರಿಗೆ ಮಾತ್ರ ಯಾವುದೇ ಹಬ್ಬವಾಗಲೀ ತಮ್ಮಿಷ್ಟದ ಸಿಹಿ ಇರಲೇಬೇಕು.
ಸಾಮಾನ್ಯವಾಗಿ ನಾವು ಬೇಳೆ ಅಥವಾ ಕಾಯಿ ಒಬ್ಬಟ್ಟು ಮಾಡುತ್ತೇವೆ. ಆದರೆ ಎಂದಾದ್ರೂ ಕ್ಯಾರೆಟ್ ಹೋಳಿಗೆ ತಯಾರಿಸಿದ್ದೀರಾ? ಅಥವಾ ಟೇಸ್ಟ್ ಮಾಡಿದ್ದೀರಾ? ಬಾಯಲ್ಲಿ ಇಟ್ಟರೆ ಮತ್ತಷ್ಟು ತಿನ್ನಬೇಕೆನಿಸುವ ರುಚಿ, ನಾಲಿಗೆ ತಾಕುತ್ತಿದ್ದಂತೆ ಕರಗಿಹೋಗುವಂತ ಅನುಭವ! ಈ ಬಾರಿ ಕ್ಯಾರೆಟ್ ಹೋಳಿಗೆ ತಯಾರಿಸಿ ನೋಡಿ. ಖಂಡಿತ ಈ ಹೊಸ ರುಚಿ ನಿಮಗೆ ಇಷ್ಟವಾಗುತ್ತದೆ. ಕ್ಯಾರೆಟ್ ಹೋಳಿಗೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
ಟ್ರೆಂಡಿಂಗ್ ಸುದ್ದಿ
ಕ್ಯಾರೆಟ್ ಹೋಳಿಗೆಗೆ ಬೇಕಾಗುವ ಸಾಮಗ್ರಿಗಳು
ಮೈದಾಹಿಟ್ಟು - 1 ಕಪ್
ಚಿರೋಟಿ ರವೆ - 1/2 ಕಪ್
ಅರಿಶಿನ - ಚಿಟಿಕೆ
ಕ್ಯಾರೆಟ್ - 1/2 ಕಿಲೋ
ಸಕ್ಕರೆ/ಬೆಲ್ಲ - 1/2 ಕಪ್
ಬಾದಾಮಿ ಪುಡಿ - 2 ಟೇಬಲ್ ಸ್ಪೂನ್
ಏಲಕ್ಕಿ ಪುಡಿ - 1/4 ಟೀ ಸ್ಪೂನ್
ಎಣ್ಣೆ - 1/2 ಕಪ್
ತುಪ್ಪ - ಹೋಳಿಗೆ ತಿನ್ನಲು
ಕ್ಯಾರೆಟ್ ಹೋಳಿಗೆ ತಯಾರಿಸುವ ವಿಧಾನ
ಮೊದಲು ಮೈದಾಹಿಟ್ಟಿಗೆ ಚಿರೋಟಿ ರವೆ (1/4 ಕಪ್), ಅರಿಶಿನ ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಮಿಕ್ಸ್ ಮಾಡಿ
ಮೈದಾಹಿಟ್ಟಿನ ಮೇಲೆ ಅರ್ಧ ಕಪ್ ಎಣ್ಣೆ ಸೇರಿಸಿ, ಮುಚ್ಚಳ ಮುಚ್ಚಿ ಬದಿಗೆ ಇಡಿ
ಕ್ಯಾರೆಟ್ ಸಿಪ್ಪೆ ತೆಗೆದು, ತೊಳೆದು, ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಂಡು ಮಿಕ್ಸಿಯಲ್ಲಿ (ನೀರು ಹಾಕಬೇಡಿ) ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ಉಳಿದ ಚಿರೋಟಿ ರವೆಯನ್ನು ಡ್ರೈ ರೋಸ್ಟ್ ಮಾಡಿ ಪ್ಲೇಟ್‌ಗೆ ತೆಗೆದಿಡಿ.
ಅದೇ ಪಾತ್ರೆಗೆ ಒಂದೆರಡು ಸ್ಪೂನ್ ತುಪ್ಪ ಬಿಸಿ ಮಾಡಿ, ಕ್ಯಾರೆಟ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ
ಕ್ಯಾರೆಟ್ ಬಣ್ಣ ಬದಲಿಸುತ್ತಿದ್ದಂತೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಮಿಕ್ಸ್ ಮಾಡಿ.
ಬೆಲ್ಲ/ಸಕ್ಕರೆ ಕರಗಿ ನೀರು ಬಿಟ್ಟು , ಮತ್ತೆ ಮಿಶ್ರಣ ಡ್ರೈ ಆದಾಗ ಸ್ವಲ್ಪ ಏಲಕ್ಕಿ ಪುಡಿ, ಬಾದಾಮಿ ಪುಡಿ, ಹುರಿದ ರವೆ ಸೇರಿಸಿ ಮಿಕ್ಸ್ ಮಾಡಿ
ಹೂರಣವನ್ನು ಒಂದೆರಡು ನಿಮಿಷ ಹುರಿದು ಸ್ಟೋವ್ ಆಫ್ ಮಾಡಿ ತಣ್ಣಗಾಗಲು ಬಿಡಿ
ಮೊದಲೇ ತಯಾರಿಸಿಟ್ಟುಕೊಂಡ ಮೈದಾಹಿಟ್ಟಿನ ಮಿಶ್ರಣವನ್ನು ಒಮ್ಮೆ ನಾದಿಕೊಂಡು ಸ್ವಲ್ಪ ಭಾಗ ತೆಗೆದುಕೊಂಡು ಪೂರಿ ಆಕಾರಕ್ಕೆ ಲಟ್ಟಿಸಿಕೊಳ್ಳಿ
ಕ್ಯಾರೆಟ್ ಹೂರಣವನ್ನು ಸಣ್ಣ ಉಂಡೆ ಮಾಡಿ ಪೂರಿ ಒಳಗೆ ಸ್ಟಫಿಂಗ್ ಮಾಡಿ
ಹೂರಣ ಹೊರಗೆ ಬಾರದಂತೆ ಸುತ್ತಲೂ ಕವರ್ ಮಾಡಿ ನಂತರ ನಿಧಾನವಾಗಿ ಹೋಳಿಗೆ ಒತ್ತಿಕೊಳ್ಳಿ
ಬಿಸಿ ಕಾವಲಿಯಲ್ಲಿ ಎರಡೂ ಕಡೆ ಕಂದು ಬಣ್ಣ ಬರುವರೆಗೂ ಬೇಯಿಸಿದರೆ ರುಚಿಯಾದ ಕ್ಯಾರೆಟ್ ಒಬ್ಬಟ್ಟು ತಿನ್ನಲು ರೆಡಿ.
ಬಿಸಿ ಬಿಸಿ ಕ್ಯಾರೆಟ್ ಹೋಳಿಗೆಯನ್ನು ತುಪ್ಪದೊಂದಿಗೆ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು