ಕನ್ನಡ ಸುದ್ದಿ  /  ಜೀವನಶೈಲಿ  /  Instant Dosa And Sagu Recipe: ಬೆಳಗಿನ ಗಡಿಬಿಡಿ ಬಿಟ್ಟುಬಿಡಿ...ಇಪ್ಪತ್ತೇ ನಿಮಿಷದಲ್ಲಿ ರುಚಿಯಾದ ಮೈದಾ ದೋಸೆ, ಈರುಳ್ಳಿ ಸಾಗು ತಯಾರಿಸಿ

Instant Dosa and Sagu Recipe: ಬೆಳಗಿನ ಗಡಿಬಿಡಿ ಬಿಟ್ಟುಬಿಡಿ...ಇಪ್ಪತ್ತೇ ನಿಮಿಷದಲ್ಲಿ ರುಚಿಯಾದ ಮೈದಾ ದೋಸೆ, ಈರುಳ್ಳಿ ಸಾಗು ತಯಾರಿಸಿ

ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದಂತ ಎಷ್ಟೋ ರೆಸಿಪಿಗಳಿವೆ ಅದರಲ್ಲಿ ಮೈದಾ ದೋಸೆ ಹಾಗೂ ಈರುಳ್ಳಿ ಸಾಗು ಕೂಡಾ ಒಂದು. ಎಲ್ಲಾ ರೆಡಿ ಇದ್ದರೆ ಇದನ್ನು ಕೇವಲ ಹತ್ತು ನಿಮಿಷದಲ್ಲಿ ತಯಾರಿಸಬಹುದು. ಬನ್ನಿ ಈ ರೆಸಿಪಿ ಮಾಡೋದು ಹೇಗೆ ನೋಡೋಣ.

ಮೈದಾ ದೋಸೆ, ಈರುಳ್ಳಿ ಸಾಗು ರೆಸಿಪಿ
ಮೈದಾ ದೋಸೆ, ಈರುಳ್ಳಿ ಸಾಗು ರೆಸಿಪಿ (PC: Chaitra's AbhiRuchi)

ನಾಳೆ ಏನು ತಿಂಡಿ ಮಾಡೋದು ಅಂತ ಈ ದಿನ ರಾತ್ರಿಯಿಂದ್ಲೇ ಬಹುತೇಕ ಮಹಿಳೆಯರು ಯೋಚಿಸಲು ಆರಂಭಿಸುತ್ತಾರೆ. ಈ ರೀತಿ ಗೊಂದಲ ಬೇಡ ಎಂದೇ ಕೆಲವರು ಯಾವ ದಿನ ಏನು ತಿಂಡಿ ಮಾಡೋದು ಅಂತ ಟೈಮ್‌ ಟೇಬಲ್‌ ಕೂಡಾ ಹಾಕಿಟ್ಟಿರುತ್ತಾರೆ.

ಆದರೆ ಪ್ರತಿದಿನ ಟೈಮ್‌ ಟೇಬಲ್‌ ಪ್ರಕಾರ ನಡೆದುಕೊಳ್ಳುವುದು ಬಹಳ ಕಷ್ಟ. ಬೆಳಗ್ಗೆ ಮಕ್ಕಳ ಟಿಫನ್‌ ರೆಡಿ ಮಾಡಬೇಕು, ಪತಿ ಕೆಲಸಕ್ಕೆ ಹೋಗುವಷ್ಟರಲ್ಲಿ ಎಲ್ಲಾ ಸಿದ್ಧ ಇರಬೇಕು. ಒಂದು ವೇಳೆ ತಾವೂ ಹೊರಗೆ ಕೆಲಸಕ್ಕೆ ಹೋಗುವವರಾದರೆ ಗಡಿಬಿಡಿಯಲ್ಲಿ ತಲೆ ಓಡದಂತೆ ಆಗುತ್ತದೆ. ಆದರೆ ನಿಮಗಾಗೇ ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದಂತ ಎಷ್ಟೋ ರೆಸಿಪಿಗಳಿವೆ ಅದರಲ್ಲಿ ಮೈದಾ ದೋಸೆ ಹಾಗೂ ಈರುಳ್ಳಿ ಸಾಗು ಕೂಡಾ ಒಂದು. ಕೇವಲ ಇಪ್ಪತ್ತು ನಿಮಿಷದಲ್ಲಿ ಈ ರೆಸಿಪಿ ತಯಾರಿಸಬಹುದು. ಬನ್ನಿ ಈ ರೆಸಿಪಿ ಮಾಡೋದು ಹೇಗೆ ನೋಡೋಣ.

ಬೇಕಾಗುವ ಸಾಮಗ್ರಿಗಳು

ಮೈದಾ ದೋಸೆಗೆ

ಮೈದಾಹಿಟ್ಟು - 2 ಕಪ್‌

ಅಕ್ಕಿ ಹಿಟ್ಟು - 2 ಟೇಬಲ್‌ ಸ್ಪೂನ್‌

ಜೀರ್ಗೆ - 1 ಟೀ ಸ್ಪೂನ್‌

ಕೊತ್ತಂಬರಿ ಸೊಪ್ಪು - 1/2 ಕಟ್ಟು

ಉಪ್ಪು- ರುಚಿಗೆ ತಕ್ಕಷ್ಟು

ಈರುಳ್ಳಿ ಸಾಗು ತಯಾರಿಸಲು

ಈರುಳ್ಳಿ - 3‌

ಟೊಮ್ಯಾಟೋ - 1

ಹಸಿಮೆಣಸಿನಕಾಯಿ - 10

ಕಾಯಿ ತುರಿ - 1 ಕಪ್‌

ಹುರಿಕಡಲೆ - 1 ಹಿಡಿ

ಗಸಗಸೆ - 2 ಟೇಬಲ್‌ ಸ್ಪೂನ್

ಚೆಕ್ಕೆ - 1

ಲವಂಗ - 1

ಸಾಸಿವೆ - ಒಗ್ಗರಣೆಗೆ

ಕರಿಬೇವು - 1 ಎಸಳು

ಎಣ್ಣೆ - 2 ಟೇಬಲ್‌ ಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಒಂದು ಪಾತ್ರೆಗೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್‌ ಮಾಡಿಕೊಳ್ಳಿ.

ಇದರೊಂದಿಗೆ ಜೀರ್ಗೆ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್‌ ಮಾಡಿ 5 ನಿಮಿಷ ಬಿಡಿ.

ಸಾಗು ತಯಾರಿಸಲು ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಹಸಿಮೆಣಸಿನಕಾಯಿ ಸೇರಿಸಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ

ನಂತರ ಕಾಯಿ ತುರಿ ಸೇರಿಸಿ ಮತ್ತೆ ಫ್ರೈ ಮಾಡಿ, ಇದರೊಂದಿಗೆ ಒಂದು ಹಿಡಿ ಹುರಿಗಡಲೆ ಸೇರಿಸಿ ಅದನ್ನೂ ಒಮ್ಮೆ ಹುರಿಯಿರಿ

ಒಂದು ಮಿಕ್ಸಿ ಜಾರ್‌ಗೆ ಕತ್ತರಿಸಿದ ಟೊಮ್ಯಾಟೋ, ಒಂದು ಲವಂಗ, ಚೆಕ್ಕೆ, ಗಸಗಸೆ ಸೇರಿಸಿ, ಇದಕ್ಕೆ ಹುರಿದ ಪದಾರ್ಥಗಳನ್ನು ಸೇರಿಸಿ ಗ್ರೈಂಡ್‌ ಮಾಡಿಕೊಳ್ಳಿ

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಕರಿಬೇವು, ಕತ್ತರಿಸಿದ ಈರುಳ್ಳಿ, ಟೊಮ್ಯಾಟೋ ಸೇರಿಸಿ ಹುರಿಯಿರಿ

ನಂತರ ಗ್ರೈಂಡ್‌ ಮಾಡಿಕೊಂಡ ಮಸಾಲೆ ಸೇರಿಸಿ, ಸ್ವಲ್ಪ ನೀರು, ಉಪ್ಪು ಸೇರಿಸಿ ಕುದಿಯಲು ಬಿಡಿ ( ನೀರು ಹೆಚ್ಚು ಸೇರಿಸಬೇಡಿ)

ಸಾಗು ಕುದಿಯುವಷ್ಟರಲ್ಲಿ ದೋಸೆ ತಯಾರಿಸಿ, ತವಾ ಬಿಸಿ ಮಾಡಿಕೊಂಡು 2 ಸೌಟು ಹಿಟ್ಟು ಸೇರಿಸಿ ತವಾವನ್ನು ಸುತ್ತಲೂ ಆಡಿಸಿ, ಸೌಟಿನಿಂದ ದೋಸೆಯನ್ನು ತೀಡಬೇಡಿ.

ರುಚಿಯಾದ ಸಾಗುವಿನೊಂದಿಗೆ ಮೈದಾ ದೋಸೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಒಮ್ಮೆ ಟ್ರೈ ಮಾಡಿ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ವಿಭಾಗ